ಕಣ್ಣಿಲ್ಲದ ಬರಿ ಮಣ್ಣ
ಸಣ್ಣ ಹಣತೆ ನಿನಗೆ,
ಬತ್ತಿ ಹೊಸೆದು, ಎಣ್ಣೆ ಸುರಿದು
ಜೀವ ಕೊಡುವೆ ಜೊತೆಗೆ.
ಅಜ್ಞಾನದಂಧಕಾರ
ತೊಳೆದು ಹೋಗಲಿ ಹೊರಗೆ.
ಕತ್ತಲಿನ ಕರಿನೆರಳ
ತಳ್ಳಿಬಿಡು ಕರೆಗೆ.
ತಗ್ಗಿನವರ ನೋವನೆಲ್ಲ
ಬಸಿದು ಕೊಳ್ಳು ಎದೆಗೆ.
ಅರಳುವಂತೆ ಮಾಡು ಅವರ
ಮನವು ಬೆಳಕ ಕುಡಿಗೆ!
ಹಿಗ್ಗಿನವರ ಮಗ್ಗುಲಿಗೆ
ಕಿಡಿಯಾಗಲಿ ನಾಲಿಗೆ!
ಅಗ್ಗದ ನಡೆನುಡಿಯೆಲ್ಲ
ತಗ್ಗಿ ಹೋಗಲಿ ನಾಳೆಗೆ.
ದೀನರ ಬಾಳಿನಲ್ಲಿ
ಆಗು ನೀನು ದೀವಿಗೆ.
ಜೋಪಡಿಯ ಬಡವನಿಗೆ
ದಕ್ಕಿದಂತೆ ಮಾಳಿಗೆ!
ಭಕ್ತಿಯಲಿ ಬಾಗಿ ನಿಂತು
ಬೇಡುವೆನು ತಣ್ಣಗೆ.
ನಮ್ಮೆಲ್ಲ ವ್ಯಥೆಗಳನು
ಕಳೆದು ಬಿಡು ಕೊನೆಗೆ!
ಸಂಭ್ರಮದ ಹಬ್ಬವಾಗಿ
ಹುರುಪಿರಲಿ ನಾಳೆಗೆ!
ದಿವ್ಯ ಜ್ಯೋತಿಯಾಗಿ ಸದಾ
ಬೆಳಕಾಗು ಬಾಳಿಗೆ!
- ವಿಶ್ವನಾಥ್ ಕುಲಾಲ್ ಮಿತ್ತೂರು
ಹಣತೆಯಲಿ ಹಚ್ಚಿಟ್ಟರು
ಕುಲಾಲರು ಕವನದ ಸಾಲುದೀಪ
ಅಕ್ಷರದ ಬೆಳಕಿನಲಿ
ಅವತರಿಸಲಿ ಅರಿವಿನ ಪ್ರತಿರೂಪ.
ತಮ್ಮ ಕವನದ ತೇರಿಗೀಗ
ಸಂಭ್ರಮದ ದೀಪಾವಳಿ…
ಅರಿವಿನ ಹರಿವಿನಿಂದ
ಮರೆಯಾಗಲಿ ತಮದ ಹಾವಳಿ
- ಸಂಗೀತಾ ಕುಲಾಲ್, ಕಾರ್ಕಳ