ಹಾಲು ಮತ್ತು ಆಲ್ಕೋಹಾಲು ಯಾರಿಗೆ ತಾನೇ ಗೊತ್ತಿಲ್ಲ. ಈ ಹೆಸರು ಕೇಳಿದರೆ ಫಟ್ ಫಟಾರ್ ಅಂತ ಉತ್ತರ ಸಿಡಿದು ಬಿಡುತ್ತದೆ. ಯಾಕೆಂದರೆ, ಈ ಎರಡೂ ದ್ರವ ಜಾತಿಗೆ ಸೇರಿದವು. ಒಂದರಲ್ಲಿ ಕೊಬ್ಬು , ಇನ್ನೊಂದರಲ್ಲಿ ಅಮಲು. ಅತಿಯಾದರೆ ಅಮೃತವೂ ವಿಷವಂತೆ. ಅತಿಯಾಗಿ ಹಾಲು ಕುಡಿದರೆ ಆರೋಗ್ಯಕ್ಕೆ ಕೆಟ್ಟದು. ಆಲ್ಕೋಹಾಲು ಕುಡಿಯದವರು, “ಆ ಅಭ್ಯಾಸ ಕೆಟ್ಟದು’ ಎಂದರೆ ಕುಡಿಯುವವರು, “ಮಿತಿಯಲ್ಲಿದ್ದರೆ ಔಷಧಿ’ ಎಂದು ಸಬೂಬು ಹೇಳುತ್ತಾರೆ.
ಹಾಲು ಸಾಮಾನ್ಯವಾಗಿ ಎಲ್ಲರೂ ಕುಡಿಯಬಹುದಾದ ಮತ್ತು ಕುಡಿಯಲೇಬೇಕಾದ ಪಾನೀಯ. ಪರಿಶುದ್ಧತೆ ಅಳೆಯುವ ಮಾನದಂಡವೂ ಹೌದು. ಅದೆಷ್ಟು ಬಿಳುಪು ಅಂದರೆ ಹಾಲಿನಷ್ಟು ಎನ್ನುವ ಮಾತಿದೆ. ಬೆಳ್ಳಗಿರುವುದೆಲ್ಲ ಹಾಲಲ್ಲ . ಕೆಟ್ಟವರ ಗುಣನಡತೆಗಳು ಕಣ್ಣಿಗೆ ಕಾಣುವುದಿಲ್ಲ, ಅನುಭವ ಆದರೆ ಮಾತ್ರ ಗೊತ್ತಾಗುತ್ತದೆ.
ಈ ದೇಶದಲ್ಲಿ ಯಾಕೆ, ಜಗತ್ತಿನಲ್ಲಿಯೇ ಹಾಲಿಗಿಂತಲೂ ಹೆಚ್ಚು ಬಳಕೆಯಾಗುವುದು ಆಲ್ಕೋಹಾಲು ಎನ್ನುವುದನ್ನು ಒಪ್ಪಲೇ ಬೇಕು. ದಿನದಲ್ಲಿ ಅಲ್ಲ ವರ್ಷದಲ್ಲಿ ಒಂದೇ ಒಂದು ಗುಟುಕು ಹಾಲು ಕುಡಿಯದವರಿದ್ದಾರೆ. ಕೊನೆಯುಸಿರು ಇರುವ ತನಕ ಆಲ್ಕೋಹಾಲನ್ನು ಕುಡಿದೇ ಪ್ರಾಣಬಿಟ್ಟವರಿದ್ದಾರೆ. ಕುಡಿಯುವ ಚಟವಿದ್ದವರಿಗೆ ಸತ್ತಮೇಲೂ ಸಂತೃಪ್ತಿಯಾಗಲೆಂದು ಆಲ್ಕೋಹಾಲು ತರಿಸಿ “ಸತ್ತವರ ಊಟ’ದ ಜೊತೆಗೆ ಬಡಿಸಿಡುವ ಕ್ರಮವಿದೆ.
ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿರುವ ಪೋಷಕಾಂಶಗಳು ದೈಹಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಹಾಲನ್ನು ಸಾತ್ವಿಕ ಆಹಾರವೆಂದೇ ಕರೆಯಲಾಗುತ್ತದೆ. ಇದು ಪ್ಯೂರ್ ವೆಜ್ ಅರ್ಥಾತ್ ಸಸ್ಯಾಹಾರ. ಹಾಗೆಂದು ಆಲ್ಕೋಹಾಲ್ ಕೂಡಾ ಮೂಲದಲ್ಲಿ ಸಸ್ಯಾಹಾರ, ಆದರೆ ಯಾರೂ ಈ ವಾದವನ್ನು ಒಪ್ಪುವುದಿಲ್ಲ. ಅಕ್ಕಿ, ಗೋಧಿ, ಬಾರ್ಲಿ, ಬೆಲ್ಲ, ಹಣ್ಣು, ತರಕಾರಿ ಮುಂತಾದವುಗಳಿಂದ ತಯಾರಿಸುವ ಆಲ್ಕೋಹಾಲನ್ನು ಪ್ಯೂರ್ ನಾನ್ವೆಜ್ ಅಂತಲೇ ಕರೆಯುತ್ತಾರೆ ಕುಡಿಯದವರು. ಸಸ್ಯಾಹಾರಿಯಾಗಿದ್ದು ಕುಡಿತದ ಚಟವಿದ್ದವರು ಆಲ್ಕೋಹಾಲ್ ಸಸ್ಯಾಹಾರ ಎಂದು ವಾದಿಸಿ ಹಾಯಾಗಿ ಕುಡಿದು ತರಕಾರಿ ಊಟ ಮಾಡಿ ನೆಮ್ಮದಿಯಾಗುತ್ತಾರೆ. ಇನ್ನೊಬ್ಬರ ನೆಮ್ಮದಿ ಕೆಡಿಸುತ್ತಾರೆ.
ಅಯ್ಯೋ ಕುಡಿಯಲಿ ಬಿಡಿ, ಅವನ ದುಡ್ಡು ಅವನ ಸುಖ ಅಂದುಕೊಳ್ಳಬಹುದು. ಆದರೆ, ಸಮಾಜ ಇದನ್ನು ಒಪ್ಪುವುದಿಲ್ಲವಲ್ಲ. ಹಾಲು ಕುಡಿದು ಹೊಟ್ಟೆ ಕೆಟ್ಟರೆ ಆಲ್ಕೋಹಾಲು ಕುಡಿದು ಗುಣಪಡಿಸಿಕೊಳ್ಳುವ ಧನ್ವಂತರಿಗಳೂ ಇ¨ªಾರೆ. ಹೈಫೈ ಸಮಾಜದಲ್ಲಿ ಆಲ್ಕೋಹಾಲು ಕೂಡಾ ಹೈಫೈ ಆಗಿರುತ್ತದೆ. ಚೀಪರ್ ಕ್ಲಾಸ್ ಆಲ್ಕೋಹಾಲು ದುಡ್ಡಿಲ್ಲದೆ ಪಾಪರ್ ಆದವರ ಪೇಯ. ಭಾರೀ ರೇಟಿನ ಫಾರಿನ್ ವಿಸ್ಕಿ ಕುಡಿಯುವವರ ಗತ್ತೇ ಬೇರೆ, ಅದು ಅವರ ಘನಸ್ತಿಕೆಯ ಸಂಕೇತ. ಶ್ರೀಮಂತರು ಮನೆಯೊಳಗೆ ದಿನಪೂರ್ತಿ ಕುಡಿದರೂ ಕುಡುಕ ಅನ್ನಿಸಿಕೊಳ್ಳುವುದಿಲ್ಲ. ಬಡವ ಒಂದು ಹೊತ್ತು ಕುಡಿದರೂ ಕುಡುಕ ಅನ್ನಿಸಿಕೊಳ್ಳುತ್ತಾನೆ. ರಾಜಕೀಯ ಪಕ್ಷಗಳಲ್ಲಿ ಮಾತ್ರ ಭಿನ್ನಮತ ಅಥವಾ ಅಭಿಪ್ರಾಯ ಭೇದವಲ್ಲ ಆಲ್ಕೋಹಾಲು ಕುಡಿಯುವವರಲ್ಲೂ ಇದೆ. ಶ್ರೀಮಂತ ಕುಳಗಳು ಕುಡಿಯುವುದು ಜಸ್ಟ್ ಫಾರ್ ರಿಲ್ಯಾಕ್ಸ್ಗಾಗಿ.
ದಿನಪೂರ್ತಿ ಮೈಬಗ್ಗಿಸಿ ದುಡಿದವನು ಕುಡಿಯುವುದು ಮೈಕೈ ನೋವಿಗೆ. ದೊಡ್ಡವರ ಪಾರ್ಟಿಗಳಲ್ಲಿ ಕುಡಿತ ಸೋಷಿಯಲ್. ಬಡವರ ಕೂಟದಲ್ಲಿ ಕುಡಿತ ವ್ಯಸನ.
ಕುಡಿತ ಒಳ್ಳೆಯದೋ, ಕೆಟ್ಟದ್ದೋ , ಆದರೆ, ಗೆಳೆತನ ಹುಟ್ಟು ಹಾಕುವುದರಲ್ಲಿ ನಂಬರ್ ಒನ್. ಹಾಗೆಯೇ ಗೆಳೆತನ ಕಡಿದು ಹಾಕುವಲ್ಲೂ ನಂಬರ್ ಒನ್. ಕುಡಿದ ಮೇಲೆ ಅವನು ಮನುಷ್ಯನೇ ಅಲ್ಲ. ಕುಡಿಯದಿದ್ದರೆ ಅವನಷ್ಟು ಒಳ್ಳೆಯವನು ಯಾರೂ ಇಲ್ಲ. “ಕುಡುಕನಾದರೂ ಕೆಡುಕನಲ್ಲ’ ಎನ್ನುವ ಮಾತು ಇದ್ದೇ ಇದೆಯಲ್ಲ.
ಕುಡಿಯುವವರನ್ನು ಕೇಳಿದರೆ ಅವರು ಕೊಡುವ ಉತ್ತರವೇ ಒಂಥರಾ ಮಜಾ. “ತುಂಬಾ ಬೇಸರ ಆಯ್ತು ಅದಕ್ಕಾಗಿ ಕುಡಿದೆ’, “ಮನೆಯಲ್ಲಿ ಜಗಳ ಆಯ್ತು ಕುಡಿದೆ’, “ಈ ದಿನ ಅದೆಷ್ಟು ಖುಷಿ ಅಂದ್ರೆ ಕುಡಿದೇ ಖುಷಿ ಪಡಬೇಕೆಂದೇ ಕುಡಿದೆ’, “ರಾತ್ರಿಯೆಲ್ಲ ನಿದ್ದೆ ಬೀಳುವುದಿಲ್ಲ, ನಿದ್ದೆ ಗಾಗಿ ಕುಡಿಯುತ್ತೇನೆ’ “ಕೆಲಸ ಸಕ್ಸೆಸ್ ಆಯ್ತು ಕುಡಿದು ಸೆಲೆಬ್ರೇಟ್ ಮಾಡಿದೆ’, “ಅವನು ಭಾರೀ ಪೊಗರು ತೋರಿಸ್ತಿರ್ತಾನೆ, ಅವನನ್ನು ಎತ್ತಬೇಕು ಅದಕ್ಕೇ ಕುಡಿದೆ’, “ನನ್ನ ಹುಡುಗಿ ಕೈಕೊಟ್ಟಳು, ಅವಳ ನೆನಪೂ ಬರಬಾರದು ಅದಕ್ಕೇ ಕುಡಿದೆ’, “ಅವಳ ಜೊತೆ ಮದುವೆ ಫಿಕ್ಸ್ ಆಯ್ತು ಗುರು, ಆ ಖುಷಿಯಲ್ಲಿ ಕುಡಿದೆ’, “ಎಷ್ಟೋ ಅಲೆದಾಡಿದರೂ ಕೆಲಸನೇ ಸಿಗುತ್ತಿಲ್ಲ, ಆ ನೋವಿಗೆ ಕುಡಿದರೆ ಸ್ವಲ್ಪ ಆರಾಮ ಆಗುತ್ತೆ. ಹಳೇ ಸ್ನೇಹಿತರೆಲ್ಲ ಸೇರಿ ಗೆಟ್ಟುಗೆದರ್ ಪಾರ್ಟಿ ಇತ್ತು. ಮನೆಯಲ್ಲಿ ಯಾರೂ ಇಲ್ಲ, ಬೇಜಾರಾಯ್ತು, ಅದಕ್ಕೇ ಕುಡಿದೆ’- ಹೀಗೆ ಕುಡಿಯಲು ಎಷ್ಟೊಂದು ಕಾರಣಗಳು!
“ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಮಾಲಾಶ್ರೀ ಬಹಳ ವರ್ಷಗಳ ಹಿಂದೆ ಸಿನೆಮಾದಲ್ಲಿ ಹಾಡಿ ಕುಣಿದ ದೃಶ್ಯ ನೆನಪಿರಬೇಕಲ್ಲವೆ? ಹುಡುಗಿಯೇ ಗುಂಡು ಹಾಕಿದರೆ ಗಂಡಾಗುವುದಾದರೆ, ಇನ್ನು ಗಂಡಾದವನು ಗುಂಡು ಹಾಕಿದರೆ ಹೇಗಿರಬಹುದು ಊಹಿಸಿ. ಗುಂಡು ಹಾಕಿದರೆ ಹೊಟ್ಟೆಯಲ್ಲಿದ್ದ¨ªೆಲ್ಲ ಹೊರಗೆ ಬರುತ್ತದೆ, ವಾಂತಿಯಾಗಿ ಎನ್ನುವುದೇನೋ ಸರಿ. ಆದರೆ ಗುಂಡು ಹಾಕಿದ ಮೇಲೆ ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡಿದ್ದ ಸತ್ಯವನ್ನೆಲ್ಲ ಹೇಳಿಬಿಡುತ್ತಾರಂತೆ!
ಇಲ್ಲೊಂದು ಘಟನೆ ನೆನಪಿಗೆ ಬಂತು. ಮನೆಮಂದಿಯನ್ನು ಕೊಲೆಮಾಡಿದವನನ್ನು ಪೊಲೀಸರು ಬಂಧಿಸಿದರು. ಆದರೆ, ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಯಾಕೆಂದರೆ, ಮಧ್ಯರಾತ್ರಿ ಈ ಕೊಲೆಯಾಗಿತ್ತು, ಇದ್ದವರೆಲ್ಲ ಸತ್ತಿದ್ದರು. ಸಾಂದರ್ಭಿಕ ಸಾಕ್ಷ್ಯಗಳನ್ನಾದರೂ ಕಲೆ ಹಾಕಬೇಕಲ್ಲ. ಕೊಲೆಯಾದ ಸ್ಥಳದಲ್ಲಿ ಕುಡಿದು ಖಾಲಿ ಮಾಡಿದ್ದ ಕ್ವಾರ್ಟರ್ ಬಾಟ್ಲಿ ಸಿಕ್ಕಿತ್ತು. ಅದನ್ನು ಅವನೇ ಕುಡಿದನೆಂದು ಪ್ರಮಾಣಿಸಿಕೊಳ್ಳಲು ಪೊಲೀಸರು ಮುಂದಾದರು. ಆರೋಪಿಯನ್ನು ಕರೆದುಕೊಂಡು ನಗರವನ್ನೆಲ್ಲ ಸುತ್ತಾಡಿಸಿ ಮಧ್ಯಾಹ್ನದ ಹೊತ್ತಿಗೆ ಊಟಮಾಡಲು ಬಾರ್ ಹೊಕ್ಕರು. ಇವರೊಂದಿಗೆ ಆರೋಪಿಯೂ ಇದ್ದ. ಮೊದಲು ತಂಡದಲ್ಲಿದ್ದವರು ತಮಗೆ ಬೇಕೆನಿಸಿದ ವಿಸ್ಕಿ ತರಲು ಹೇಳಿದರು. ಕೊನೆಗೆ, “ನಿನಗೆ ಏನು ಬೇಕು ಹೇಳು’ ಎಂದರು. ಆತ ಬೇಡಬೇಡವೆಂದ. ಒತ್ತಾಯ ಮಾಡಿದ ಮೇಲೆ ತನ್ನ ಅಸಲಿ ಬ್ರ್ಯಾಂಡ್ ವಿಸ್ಕಿ ತರಲು ಹೇಳಿದ, ಕುಡಿದು ಊಟ ಮಾಡಿದ ಮೇಲೆ ತಾನು ಕೊಲೆ ಮಾಡುವ ಮುನ್ನ ಕುಡಿದ ಬಾರ್ ತೋರಿಸಲು ಹೇಳಿದರು. ಅವನು ಕುಡಿದ ವಿಸ್ಕಿಗೂ ಸ್ಥಳದಲ್ಲಿ ಸಿಕ್ಕಿದ ಖಾಲಿ ಬಾಟ್ಲಿಗೂ ಟ್ಯಾಲಿ ಆಯ್ತು. ಕುಡಿದು ಬಂದಿದ್ದ ಬಾರ್ಗೆ ಕರೆದೊಯ್ದು ಸಾಕ್ಷ್ಯ ಪಡೆದುಕೊಂಡರು.
“ಹೆಣ್ಣು ಹೆಂಡ ನನ್ನ ವೀಕ್ನೆಸ್’ ಎಂದು ಮುಲಾಜಿಲ್ಲದೆ ಹೇಳಿಕೊಂಡಿದ್ದ ಜೆ.ಎಚ್. ಪಟೇಲ್ ನೆನಪಿಗೆ ಬರುತ್ತಾರೆ. ತುಂಬ ಜನ ಕುಡಿಯುತ್ತಾರೆ, ಆದರೆ ಹೇಳಿಕೊಳ್ಳುವುದಿಲ್ಲ ಅಷ್ಟೇ. ಹಾಲು ಕುಡಿದವರೂ ಸಾಯುತ್ತಾರೆ, ಆಲ್ಕೋಹಾಲು ಕುಡಿದವರೂ ಸಾಯುತ್ತಾರೆ. ಮದುವೆಯಾದ, ಆಲ್ಕೋಹಾಲಿನ ಹವ್ಯಾಸ ಅಥವಾ ಚಟವಿದ್ದ ಪತಿಯ ಬಗ್ಗೆ ಪತ್ನಿ ಹೇಳುವ ಮಾತೆಂದರೆ “ದೇವರ ತಲೆ ಮೇಲೆ ಹೂವು ತಪ್ಪಿದರೂ ಇವರ ಕುಡಿತ ಮಾತ್ರ ತಪ್ಪುವುದಿಲ್ಲವೆಂದು. ವರ ಒಪ್ಪಿಗೆಯಾದರೆ ಸಾಂದರ್ಭಿಕವಾಗಿ ಕೇಳುವ ಮಾತು “ಹುಡುಗನಿಗೆ ಕುಡಿತಗಿಡಿತ ಅಭ್ಯಾಸ ಏನಾದರೂ?’ ಎನ್ನುವಷ್ಟರಲ್ಲಿ “ಛೇ..ಛೇ ಉಂಟೇ’ ಎನ್ನುತ್ತಿದ್ದರು. ಈಗ ಹಾಗೆಲ್ಲಾ ಕೇಳಬಾರದು. ಅವರು ಕೇಳುವ ಮೊದಲೇ ಹೇಳಿಬಿಡಬೇಕು “ಮನಸಾದಾಗ ಒಂದು ಸಲಕ್ಕೆ ಒಂದು ಪೆಗ್ ಕುಡಿತಾನೆ, ಹೆಂಡತಿ ಕುಡಿದರೂ ಕುಡಿಸ್ತಾನೆ. ಎಷ್ಟೇ ಆದರೂ ಓದಿಕೊಂಡವನಲ್ಲವೆ?’
ಮುಗಿಸುವ ಮುನ್ನ, ಕುಡಿದರೂ ಮನುಷ್ಯರಾಗಿರಿ, ಕುಡಿಯದಿದ್ದರೂ.
– ಚಿದಂಬರ ಬೈಕಂಪಾಡಿ
(ಕೃಪೆ : ಉದಯವಾಣಿ)