‘ಯಾರಲ್ಲಿ..ಬೊಮ್ಮರೊಟ್ಟು ಕೊನೆ ಸ್ಟಾಪ್..ಇಳಿಯುವವರಿದ್ರೆ ಬೇಗ ಇಳ್ಕೊಳ್ಳಿ!’
ರಸ್ತೆಯ ಉದ್ದಕ್ಕೂ ತುಂಬಿಕ್ಕೊಂಡಿದ್ದ ಕಪ್ಪು ಕತ್ತಲೆಯನ್ನು ತನ್ನ ಪ್ರಖರ ಬೆಳಕಿನಿಂದ ಸೀಳಿ ಬರ್ರೆಂದು ಮುಂದಕ್ಕೋಡುತಿದ್ದ ಆ ಬಸ್ಸಿನೊಳಗೆ ಆರಾಮವಾಗಿ ಕಣ್ಣುಮುಚ್ಚಿ ಆಸೀನನಾಗಿದ್ದ ರಾಘವನನ್ನು ಕಂಡಕ್ಟರ್ನ ಕಿರುಚುದನಿ ಒಮ್ಮೆಗೆ ಎಬ್ಬಿಸಿತು.. ಲಗುಬಗೆಯಿಂದ ಎದ್ದು ಬಾಗಿಲಿನತ್ತ ಓಡಿ ಬಂದ ಅವನನ್ನು ಬಸ್ಸಿನಿಂದಿಳಿಸಿದ ಕಂಡಕ್ಟರ್ ‘ರೇ..ರೈಟ್’ ಎಂದು ಮತ್ತೊಮ್ಮೆ ಕೂಗಿದ. ತನ್ನ ಕೊನೆ ಗಮ್ಯವನ್ನು ಸೇರುವ ಆತುರದಿಂದ ಬಸ್ ಮತ್ತೆ ಮುಂದಕ್ಕೆ ಚಲಿಸಿ ಕಣ್ಮರೆಯಾಯಿತು.
ಆವತ್ತು ಶನಿವಾರ. ವಾರದ ಕೊನೆಯ ದಿನ. ಆಪೀಸಿನಲ್ಲಿ ಬೆಳಗ್ಗಿನಿಂದ ಸಂಜೆಯತನಕ ಬಿಡುವಿಲ್ಲದ ಕೆಲಸಗಳು ರಾಘವನ ತಲೆಗಂಟಿದ್ದವು. ಅವೆಲ್ಲವನ್ನು ಪೂರ್ಣವಾಗಿ ಮುಗಿಸಿ ಬಾಸ್ನಿಂದ ಶಹಬ್ಬಾಸ್ಗಿರಿ ಪಡೆದು ಮನೆ ಕಡೆ ಸೇರುವ ಕೊನೆಯ ಬಸ್ಸನ್ನು ಹುಡುಕಿ ಹತ್ತುವುದರೊಳಗೆ ಸೂರ್ಯ ಪಡುವಣದಲ್ಲಿ ಪೂರ್ಣವಾಗಿ ಕಂತಿದ್ದ. ನಾಳೆ ಭಾನುವಾರ, ವಾರದ ರಜೆ ಅನ್ನುವುದೇ ಅವನಿಗೆ ಒಂದು ದೊಡ್ಡ ಸಮಾಧಾನ. ‘ನಾಳೆ ಪೂರ್ತಿ ಹೆಂಡತಿಯನ್ನು ಪಟ್ಟಣ ಸುತ್ತಿಸಬೇಕು. ಶಾಪಿಂಗ್ ಮಾಡಬೇಕು’ ಎಂಬ ಯೋಚನೆಯಲ್ಲೆ ಅವನು ಬಸ್ಸಿನಲ್ಲಿ ಸಾಗಿ ಬಂದಿದ್ದ.
‘ಅಬ್ಬಾ..ಯಾವತ್ತು ಇಷ್ಟು ಲೇಟಾಗಿದಿಲ್ಲ.ಪಾಪ.. ಮನೇಲಿ ಇವಳೊಬ್ಬಳೆ ಕಾಯ್ತ ಇರ್ತಾಳೆ’ ಬಸ್ಸಿನಿಂದಿಳಿದ ರಾಘವ ಯೋಚಿಸುತ್ತಲೇ ಸುತ್ತೆಲ್ಲ ನೋಡಿದ. ಆಗಸದಲ್ಲಿ ಕರಿ ಮೋಡಗಳು ಚಂದಮನನ್ನು ಮರೆ ಮಾಡಿದ್ದರಿಂದ ‘ಗಂವ್’ ಎನ್ನುವ ಕಗ್ಗತ್ತಲು ಸುತ್ತೆಲ್ಲ ವ್ಯಾಪಿಸಿತ್ತು. ವಾಚಿನತ್ತ ಕಣ್ಣಾಯಿಸಿದರೆ ಸಮಯ ಅದಾಗಲೇ ರಾತ್ರಿ ಒಂಬತ್ತು ನಲವತೈದರ ಸಮೀಪವಾಗಿರುವುದು ಕಾಣಿಸಿತು. ಪ್ಯಾಂಟ್ ಜೇಬಿನ ಮೂಲೆಯಲ್ಲಿ ಸೇರಿದ್ದ ಮೊಬೈಲನ್ನು ತೆಗೆದು ಅದರಲ್ಲಿದ್ದ ಮೊಬೈಲ್ ಟಾರ್ಚ್ನ್ನು ಹತ್ತಿಸಲು ಯತ್ನಿಸಿದ. ಆದರೆ ‘ಬ್ಯಾಟರಿ ಲೋ’ ಎಂಬ ಸಂದೇಶ ಗಳಿಗೆಗೊಂದು ತೋರಿಸುತ್ತಿದ್ದ ಅವನ ಮೊಬೈಲ್ ಆಗಲೋ ಈಗಲೋ ಸ್ವಿಚ್ ಆಫ್ ಆಗುವ ಹಂತದಲ್ಲಿತ್ತು. ‘ಇದೊಂದು ದರಿದ್ರ ಮೊಬೈಲ್..ಚಾರ್ಜ್ ನಿಲ್ಲುವುದೇ ಇಲ್ಲ. ಮುಂದಿನ ಸಾರಿ ಸಂಬಂಳದಲ್ಲಾದರೂ ಹೊಸ ಮೊಬೈಲ್ ತಗೋಬೇಕು’ ಎಂದು ಗೊಣಗುತ್ತಲೆ ಮೊಬೈಲನ್ನು ಮತ್ತೆ ಪ್ಯಾಂಟ್ ಜೇಬಿಗೆ ಸೇರಿಸಿದ. ಬೇರೆ ದಾರಿ ಕಾಣದೆ ಕತ್ತಲಲ್ಲೆ ಮನೆಯ ದಾರಿ ಹಿಡಿದು ಹೊರಟ.
ದಿನ ನಿತ್ಯವೂ ಸಾಗುವ ಪರಿಚಿತ ದಾರಿ ಅದದ್ದಾರಿಂದ ಬೆಳಕಿನ ಅವಶ್ಯಕತೆಯೇನು ರಾಘವನಿಗೆ ತೀರಾ ಅಗತ್ಯವಾಗಿ ಕಂಡಿರಲಿಲ್ಲ. ಮುಖ್ಯ ರಸ್ತೆಯಿಂದ ಒಂದು ಹದಿನೈದು ನಿಮಿಷದ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಅವನ ಮನೆ ಸಿಗುತಿತ್ತು. ಹಾಗಾಗಿ ಜಾಸ್ತಿ ‘ಮಂಡೆಬಿಸಿ’ ಮಾಡದೇ ಆರಾಮಾಗಿಯೇ ಕತ್ತಲಲ್ಲಿ ಹೆಜ್ಜೆಯನ್ನಿಟ್ಟು ಮನೆಯ ದಾರಿ ಹಿಡಿದು ರಾಘವ ಹೊರಟ.
ತಣ್ಣಗಿನ ಗಾಳಿ ಸುತ್ತೆಲ್ಲ ಮಂದವಾಗಿ ಬೀಸುತ್ತಿತ್ತು! ಆ ಮಣ್ಣಿನ ರಸ್ತೆಯ ಅಕ್ಕ ಪಕ್ಕ ಬೆಳೆದಿದ್ದ ಮರ ಗಿಡಗಳ ಕೊಂಬೆಗಳು ಗಾಳಿಗೆ ಹಿತವಾಗಿ ತೊನರಾಡುತ್ತಿದ್ದವು. ಆಗಸದ ಚಂದಮನನ್ನು ಒದ್ದೊಡಿಸಿದ್ದ ಮೋಡಗಳು ಅದಾಗಲೇ ಆಗಸದ ತುಂಬೆಲ್ಲ ತಮ್ಮ ಕಪ್ಪು ಸಾಮ್ರಾಜ್ಯವನ್ನು ಸ್ಥಾಪಿಸಿದ್ದವು.. ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿರುವುದು ಆಗೊಮ್ಮೆ ಈಗೊಮ್ಮೆ ಕೇಳಿ ಬರುತಿತ್ತು. ರಾತ್ರಿ ಜೀರುಂಡೆಗಳ ‘ಝುಯ್’ ಎನ್ನುವ ಝೇಂಕಾರದ ನಾದ ಬಿಟ್ಟರೆ ಸುತ್ತೆಲ್ಲ ಗಾಢ ಮೌನ ಆವರಿಸಿತ್ತು.
ರಾಘವ ಯಾವತ್ತೂ ಭೂತ ಪ್ರೇತ ಪಿಶಾಚಗಳನ್ನು ನಂಬಿದವನೇ ಅಲ್ಲ; ನೋಡಿದವನು ಅಲ್ಲ. ಅವೆಲ್ಲ ಮನುಷ್ಯನ ಬರೀಯ ಭ್ರಮೆ ಎಂದೇ ಗಟ್ಟಿಯಾಗಿ ವಾದಿಸುತ್ತಿದ್ದವನು. ಹಾಗಾಗಿ ಕತ್ತಲ ಕಾಡ ದಾರಿಯಲ್ಲಿ ರಾಘವ ಒಬ್ಬನೇ ಸಾಗುತ್ತಿದ್ದರೂ ಇನಿತೂ ಭಯ ಅವನೊಳಗೆ ಇರಲಿಲ್ಲ. ಬೇಗನೆ ಮನೆ ಸೇರುವ, ಹೆಂಡತಿಯ ಮುಖ ನೋಡುವ ಕಾತುರದ ಭಾವ ಮಾತ್ರ ಗಟ್ಟಿಯಾಗಿ ಇದ್ದಿತ್ತು.
ರಾಘವ ಭಾಗಶಃ ಅರ್ಧದಾರಿ ಕ್ರಮಿಸಿದ್ದರಬಹುದು. ಬರಾಕಿನಿಂದ ನಡೆದರೆ ಇನ್ನೈದು ನಿಮಿಷದೊಳಗೆ ಅವನು ಮನೆ ಸೇರಬಹುದಿತ್ತು. ಆದರೆ ಆ ಐದು ನಿಮಿಷದೊಳಗಡೆ ರಾಘವ ಕನಸ್ಸು ಮನಸ್ಸಿನಲ್ಲೂ ಯೋಚಿಸಿದ ಆ ಘಟನೆ ನೆಡೆದು ಹೋಯ್ತು!
ಜೋರು ನಡಿಗೆಯೊಂದಿಗೆ ಸಾಗುತ್ತಿದ್ದ ರಾಘವನ ಅಂಗಿಯನ್ನು ಯಾರೋ ಹಿಂದಿನಿಂದ ಒಮ್ಮೆಗೆ ಗಕ್ಕನೆ ಎಳೆದಂತಾಯಿತು. ಕ್ಷಣ ಗಲಿಬಿಲಿಕೊಂಡ ರಾಘವ. ಆದರೂ ಇದೆಲ್ಲೋ ಭ್ರಮೆ ಇರಬೇಕು ಎಂಬ ಯೋಚನೆಯಲ್ಲಿ ಮತ್ತೆ ಮುಂದಕ್ಕೆ ಸಾಗಲು ಪ್ರಯತ್ನಿಸಿದ. ಆದರೆ ಅಂಗಿಯ ಮೇಲಿದ್ದ ಹಿಂದಿನ ಹಿಡಿತ ಇನ್ನೂ ಬಿಗಿಯಾಗಿರುವುದು ಅವನಿಗೆ ಮನದಟ್ಟಾಯಿತು. ಒಮ್ಮೆಗೆ ಅವನೆದೆ ಧಸಕ್ ಎಂದಿತು! ಆದರೂ ಮುಖದಲ್ಲಿ ಅದನ್ನು ತೋರ್ಪಡಿಸಿಕೊಳ್ಳದೆ ಇದ್ದ ಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಮುಂದುವರೆಯಲು ಪ್ರಯತ್ನಿಸಿದ. ಆದರೆ ಈಗ ಅವನ ಅಂಗಿನ ಮೇಲಿನ ಹಿಡಿತ ಇನ್ನೂ ಬಿಗಿಯಗಿ ಒಮ್ಮೆಗೆ ರಬಕ್ಕನೆ ಅವನನ್ನು ಹಿಂದಕ್ಕೆ ಎಳೆದಂತಾಯಿತು.
ಇದುವರೆಗೆ ಇದ್ದ ಮೊಂಡು ಧೈರ್ಯವೂ ರಾಘವನಿಂದ ಆ ಕ್ಷಣಕ್ಕೆ ದೂರವಾಯ್ತು. ಭಯಂಕರ ಭಯವೊಂದು ಅವನ ಎದೆಯೊಳಗೆ ಹೊಕ್ಕಿ ಕೂತಿತು.. ಕಾಲುಗಳು ಥರಥರನೆ ನಡುಗಿದವು. ಗಂಟಲ ಪಸೆ ಆರಿತು! ಮೈ ನಿಮಿಷದಲ್ಲಿ ಬೆವರಿನಿಂದ ತೊಯ್ದು ತೊಪ್ಪೆಯಾಯಿತು. ‘ಇದೇನು ಬಂತು ದೇವರೇ’ ಎಂದು ಥರಥರನೆ ನಡುಗಿದ ರಾಘವ. ಅವನಿಗೆ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿದ್ದ ಎದೆಯ ಮೇಲೆ ಕೈಯಿಟ್ಟು ಮೆಲ್ಲಗೆ ಹಿಂದೆ ತಿರುಗಿ ನೋಡಿದ. ಅಷ್ಟೆ! ಎಡಬದಿ ರಸ್ತೆಯ ಕಡೆಯಿಂದ ಬಾಗಿನಿಂತಿದ್ದ ಕಪ್ಪು ಮೈ ಬಣ್ಣದ ವಿಚಿತ್ರ ಆಕೃತಿಯ ಭೂತವೊಂದು ಅವನ ಅಂಗಿಯನ್ನು ಗಟ್ಟಿಯಾಗಿ ಹಿಡಿದು ಎಳೆಯುತ್ತಿರುವುದು ರಾಘವನಿಗೆ ಆ ಕಪ್ಪು ಕತ್ತಲಲ್ಲೂ ಗೋಚರಿಸಿತು. ಬಾಗು ಬೆನ್ನಿನ ಭಯಂಕರ ರೂಪದ ಆ ಭೂತ ಅವನನ್ನೆ ಕೆಕ್ಕರಿಸಿ ನೋಡಿ ನಕ್ಕಂತಾಯಿತು. ಆ ಕ್ಷಣ ಬೆನ್ನು ಮೂಳೆಯೊಳಗೆ ಯಾರೋ ಇಕ್ಕಳದಿಂದ ತಿವಿದಂತಹ ಭಾವದಿಂದ ತತ್ತರಿಸಿ ಹೋದ ರಾಘವ. ಅತೀ ಭಯಂಕರ ಭಯ ಅವನ ಮೈ ಮನಸ್ಸುಗಳನ್ನು ಆವರಿಸಿ ನಿಂತಿತು. ಅವನ ಮೈಯ ನವರಂದ್ರಗಳಿಂದಲೂ ಬೆವರು ಬಸಿದು ಹೋಯ್ತು. ರೋಮಗಳು ಭಯದಿಂದ ಸೆಟೆದು ನಿಂತವು.!
ಇವತ್ತಿಗೆ ನನ್ನ ಕಥೆ ಮುಗಿಯುತು. ಬದುಕಿ ಉಳಿದರೆ ಸಿಗಂಧೂರು ದೇವಿಗೆ ನೂರು ಕಾಯಿ ಒಡೆಸಿಯೇನು..ಅಮ್ಮಾ ನೀನೆ ಕಾಪಾಡು’ ಎಂದು ಭಯವಿಹಲ್ವತೆಯಿಂದ ಒಮ್ಮೆಗೆ ಆಕಾಶದೆಡೆಗೆ ಮುಖಮಾಡಿ ಪ್ರಾರ್ಥಿಸಿಕೊಂಡವನೇ ಮತ್ತೇನೂ ಯೋಚಿಸದೆ ಮುಂದಕ್ಕೆ ಹೆಜ್ಜೆಯನ್ನು ವೇಗದಿಂದ ಎತ್ತಿಟ್ಟ. ಬಾಗು ಬೆನ್ನಿನ ಪಿಶಾಚಿ ಹಿಡಿದಿರುವ ಅವನ ಶರ್ಟ್ ಪರ್ರೆಂದು.. ಹರಿದು ಹೋಯ್ತು. ಶರ್ಟಿನ ಗುಂಡಿಗಳು ಕಿತ್ತು ಹಾರಿದ್ದವು. ಆ ಬಾಗು ಬೆನ್ನಿನ ಪಿಶಾಚಿ ಹಿಡಿದ ಶರ್ಟಿನ ಭಾಗ ಹರಿದು ಅದರ ಚೂಪು ಉಗುರುಗಳು ಅವನ ಬೆನ್ನಿನ ಮೇಲೆ ಗೀರಿ ಗಾಯ ಮಾಡಿದ್ದವು. ರಕ್ತ ಜಿನುಗಿತ್ತು.
ಅಂತೂ ಜೀವವನ್ನು ಕೈಯಲ್ಲಿ ಹಿಡಿದು ರಾಘವ ಮನೆ ಸೇರಿದ. ಹರಿದ ಶರ್ಟನ್ನು ಕಿತ್ತೆಸೆದವನೇ ಬಚ್ಚಲು ಸೇರಿದವನು ಬಕೇಟುಗಟ್ಟಲೇ ತಣ್ಣಿರನ್ನು ತಲೆಮೇಲೆ ಸುರಿದುಕೊಂಡ. ಊಟದ ಶಾಸ್ತ್ರ ಮುಗಿಸಿ ಮಂಚಕ್ಕೊರಗಿದ. ಕಣ್ಣು ಮುಚ್ಚಿದರೂ ತೆರದರೂ ಆ ದೆವ್ವದ ಭಯಂಕರ ರೂಪ ಮತ್ತೆ ಮತ್ತೆ ಅವನನ್ನು ಕಾಡಿತು. ರಾಘವ ನೋಡಿದ ಎಲ್ಲ ತಮಿಳು, ತೆಲುಗು ಇಂಗ್ಲಿಷ್ ಸಿನಿಮಾದ ಭೂತಗಳಿಗಿಂತ ನಿನ್ನೆ ನೋಡಿದ ಬಾಗು ಬೆನ್ನಿನ ಪಿಶಾಚವೇ ಅವೆಲ್ಲಕಿಂತಲೂ ಭೀಕರ ರೂಪದ್ದು ಎನಿಸಿ ರಾಘವ ಹೊದ್ದ ಕಂಬಳಿಯೊಳಗೆ ಬೆವತು ಹೋದ. ಹೆಚ್ಚು ಕಡಿಮೆ ಕುಳಿತೆ ಬೆಳಗು ಮಾಡಿದ.
ಬೆಳಗಾಯಿತು!! ಇನ್ನೂ ಢವ ಢವ ಎನ್ನುತ್ತಿದ್ದ ಎದೆಯ ಮೇಲೆ ಕೈಯಿರಿಸಿ ಇದ್ದ ಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ನಿನ್ನೆ ಭೂತ ಸಿಕ್ಕ ಸ್ಥಳಕ್ಕೆ ಹೆದರುತ್ತಾ ಬೆದರುತ್ತಾ ಸಾಗಿ ಬಂದ. ನಾನು ಯಾವತ್ತೂ ಭೂತ ಪ್ರೇತ ಪಿಶಾಚನ್ನು ನಂಬಿದವನೇ ಅಲ್ಲ; ಅಂತಹ ನನ್ನನ್ನೇ ನಿನ್ನೆಯ ಘಟನೆ ಭೂತ ಇರುವುದನ್ನು ನಂಬಿಸಿ ಥರಥರನೆ ನಡುಗುವಂತೆ ಮಾಡಿತ್ತಲ್ಲ.. ಛೇ..’ ಎಂದು ಹಲುಬುತ್ತಲೇ ರಾಘವ ನಿನ್ನೆ ಭೂತ ಬೆದರಿಸಿದ ಜಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಹಾಗೇ ನೋಡುತ್ತಾ ನೋಡುತ್ತಾ ಮುನ್ನೆಡೆದ ಅವನಿಗೆ ತಟಕ್ಕನೆ ಬ್ರಹ್ಮ ರಹಸ್ಯವೊಂದು ಗೋಚರಿಸಿದ್ದಂತೆನಿಸಿ ಹತ್ತಿರಹೋಗಿ ಸೂಕ್ಷ್ಮವಾಗಿ ಗಮನಿಸಿದ. ನೋಡುತ್ತಾ ನೋಡುತ್ತಾ ರಾಘವನ ಮನದೊಳಗೆ ಇದುವರೆಗೆ ಅಡಗಿ ಕೂತಿದ್ದ ಭಯಂಕರ ಭಯ ನಿಮಿಷದಲ್ಲಿ ದೂರವಾಯಿತು. ಮಹಾನ್ ರಹಸ್ಯವೊಂದನ್ನು ತಾನು ಬೇದಿಸಿದ ಖುಷಿ ಅವನೊಳಗೆ ತುಂಬಿತು. ಎದೆ ಮೇಲೆ ಕೈಯಿಟ್ಟು ಪ್ರಪುಲ್ಲಿತನಾಗಿ ನಕ್ಕ ರಾಘವ.
ಹಾಗಾದರೆ ರಾಘವ ಕಂಡುಕೊಂಡ ಸತ್ಯ ಎನು ಗೊತ್ತೆ? ರಾಘವನ ಮನೆಯ ದಾರಿ ಬದಿಯಲ್ಲಿ ಬೆಳೆದು ನಿಂತಿದ್ದ ಚೂಪು ಮುಳ್ಳು ಗಿಡವೊಂದು ನಿನ್ನೆ ಮದ್ಯಾಹ್ನ ಸುರಿದ ಗಾಳಿ ಮಳೆಯ ಭಾರವನ್ನು ತಾಳಲಾರದೆ ರಸ್ತೆಗೆ ಮುಖ ಮಾಡಿ ಬಾಗಿ ನಿಂತಿತ್ತು. ಅದರ ಅರಿವಿರದೆ ಕತ್ತಲಲ್ಲಿ ಆ ದಾರಿಯಲ್ಲಿ ಸಾಗಿ ಬಂದ ರಾಘವನ ಅಂಗಿಗೆ ಅದರ ಚೂಪು ಮುಳ್ಳುಗಳು ಚುಚ್ಚಿ ಮುಂದಕ್ಕೆ ಚಲಿಸದಂತೆ ಮಾಡಿದ್ದವು. ಅವನು ಮುಂದೆ ಮುಂದೆ ಹೆಜ್ಜೆಯಿಡಲು ಪ್ರಯತ್ನಿಸಿದ ಹಾಗೆಯೇ ಅವನ ಅಂಗಿಗೆ ಸಿಕ್ಕಿದ್ದ ಮೊನಚು ಮುಳ್ಳುಗಳು ಅವನನ್ನು ಹಿಂದೆ ಹಿಂದೆ ಎಳೆಯುತ್ತಿದ್ದವು. ಕತ್ತಲಲ್ಲಿ ಎನೇನೂ ಗೋಚರಿಸಿದ ರಾಘವನಿಗೆ ಇದು ನಿಜವಾದ ಭೂತ ಚೇಷ್ಟೆ ಎಂದೇ ಭಾಸವಾಗಿ ಪಜೀತಿಗೆ ಒಳಗಾಗಿದ್ದ. ಕತ್ತಲಲ್ಲಿ ಹಿಂದೆ ತಿರುಗಿ ನೋಡಿದಾಗ ರಾಘವನಿಗೆ ಅದೇ ಮುಳ್ಳಿನ ಗಿಡ ಭೀಕರಾಕೃತಿಯ ದೆವ್ವವಾಗಿ ಗೋಚರಿಸಿತ್ತು. ಮೊದಲೇ ಅಲ್ಪ ಸ್ವಲ್ಪ ಹೆದರಿದ್ದ ರಾಘವ ಮತ್ತಷ್ಟು ಹೆದರಿ ನಡುಗಿ ಹೋಗಿದ್ದ. ‘ಛೇ.. ಈ ಚಿಕ್ಕ ಮುಳ್ಳಿನ ಗಿಡ ದೆವ್ವವಾಗಿ ನನ್ನನ್ನೆಷ್ಟು ಹೆದರಿಸಿ-ಬೆದರಿಸಿ ಬಿಟ್ಟಿತಲ್ಲ’ ಎನಿಸಿ ಹಸಿ ನಾಚಿಕೆಯಾಯಿತು. ಈವಾಗ್ಲಾದರೂ ಸತ್ಯ ಏನು ಅಂತ ತಿಳಿತಲ್ಲ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡ್ಬೇಕು ಅನ್ನುವ ಹಿರಿಯರ ಮಾತು ಎಂದಿಗೂ ಸತ್ಯ ಅನ್ನಿಸಿತು ರಾಘವನಿಗೆ.
‘ಭೂತ ಎಂದರೇ ಅದು ಮನುಷ್ಯನೊಳಗೆ ಹುಟ್ಟುವ ಭಯ ಅಷ್ಟೆ. ಆ ಭಯ ಪರಾಕಾಷ್ಠೆಯ ಹಂತ ತಲುಪಿದಾಗ ಅಲ್ಲಿ ಭೂತ, ಪ್ರೇತ ಪಿಶಾಚ, ಬ್ರಹ್ಮರಾಕ್ಷಸರೆಲ್ಲ ಹುಟ್ಟುತ್ತಾರೆ!’ ಎನ್ನುವ ಸತ್ಯ ಸಂದೇಶದ ಅರಿವಾಗಿ ಮುಗುಳ್ನಕ್ಕ ರಾಘವ. ಇದುವರೆಗೆ ಎದೆಯೊಳಗೆ ತುಂಬಿದ್ದ ಮೂಟೆಯಷ್ಟು ಭಾರದ ಭಯವನ್ನು ಕೆಳಗಿಳಿಸಿ ಹಗುರವಾದ. ಬ್ರಹ್ಮಾಂಡವನ್ನು ಜಯಿಸಿದ ಖುಷಿಯಿಂದ ವಿಸ್ಹಿಲ್ ಹೊಡೆಯುತ್ತಾ ಮನೆ ಕಡೆಗೆ ಸಾಗಿದ.
ಮಂಜುನಾಥ್ ಹಿಲಿಯಾಣ
ಸ್ಕೂಲ್ ಆಫ್ ಕಮ್ಯೂನಿಕೇಶನ್(ಎಸ್ ಓಸಿ)
ಮಣಿಪಾಲ ವಿಶ್ವವಿದ್ಯಾನಿಲಯ
ಉದಯವಾಣಿ ಕಟ್ಟಡದ ಸಮೀಪ, ಮಣಿಪಾಲ-576104
ಮೊಬೈಲ್ ಪೋನ್-8722579119