ಇದೇ ರೀತಿ ಇತ್ತೀಚೆಗೆ ರಿಮೋಟ್ ಹಿಡಿದು ಚಾನೆಲ್ ಚೇಂಜ್ ಮಾಡುತ್ತಿರುವಾಗ ನೆಚ್ಚಿನ ಚಂದನ ವಾಹಿನಿಯಲ್ಲಿ “ಬೆಟ್ಟದ ಜೀವ”ಎಂಬ ಚಲನಚಿತ್ರ ಪ್ರಸಾರವಾಗುತ್ತಿತ್ತು . ಅದನ್ನ ಗಮನಿಸಿದ ನಾನು, ಆ ಚಿತ್ರವನ್ನ ಪೂರ್ತಿಯಾಗಿ ನೋಡಲೇಬೇಕೆಂಬ ಹಠ ಹಿಡಿದು ರಿಮೋಟನ್ನು ದೂರದಲ್ಲಿಟ್ಟೆ. ಅದಕ್ಕೆ ಕಾರಣವೂ ಇದೆ. ಆ ಚಿತ್ರವು ನೆಚ್ಚಿನ ಕಾರಂತಜ್ಜನ ಬೆಟ್ಟದ ಜೀವ ಕಾದಂಬರಿಯನ್ನಾಧರಿಸಿದ್ದು, ನಮ್ಮ ಸುಳ್ಯ ಸುಬ್ರಹ್ಮಣ್ಯದ ತಪ್ಪಲಿನಲ್ಲಿ ಶೂಟಿಂಗ್ ಮುಗಿಸಿತ್ತು ಎಂಬುದನ್ನು ಪತ್ರಿಕೆಯ ಮೂಲಕ ಓದಿಕೊಂಡಿದ್ದೆ. ಹಾಗಾಗಿ ಈ ಚಿತ್ರವನ್ನು ನೋಡಲೇಬೇಕು ಎಂದು ಹಠಕ್ಕೆ ಬಿದ್ದ ನಾನು ಚಿತ್ರವನ್ನು ನೋಡಿದ ನಂತರವೇ ಚಾನಲ್ ಚೇಂಜ್ ಮಾಡಿದ್ದು. ಇದು ಕೇಬಲ್ ಹಾಕಿಸಿದ ನಂತರ ಚಾನಲ್ ಚೇಂಜ್ ಮಾಡದೇ ಪೂರ್ತಿಯಾಗಿ ನೋಡಿದ ಮೊದಲ ಚಿತ್ರವಿರಬಹುದು . ಅದರೊಂದಿಗೆ ಚಂದನ ವಾಹಿನಿಯ ಬಗ್ಗೆ ಅಥವಾ ಡಿ .ಡಿ .1 ರ ಬಗ್ಗೆ ನಮ್ಮ ಹಿಂದಿನ ಸಂಬಂದಗಳು ನೆನಪಾದವು. ಅದನ್ನ ಇಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.
ಅದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ನಮ್ಮ ಬಾಲ್ಯದ ದಿನಗಳು ಅವಾಗ ನಮ್ಮ ಮನೆಯಲ್ಲಿ (ಬಹುಷಃ ಆಗ ಗ್ರಾಮೀಣ ನಿವಾಸಿಗಳೆಲ್ಲರ ಮನೆಯಲ್ಲಿಯೂ) ದೂರದರ್ಶನದ ಒಂದು ಚಾನಲ್ ಬಿಟ್ಟರೆ ಬೇರೆ ಯಾವುದೇ ಚಾನೆಲ್ಗಳು ಬರುತ್ತಿರಲಿಲ್ಲ ,ಆ ಚಾನಲ್ ಗೆ ಡಿ .ಡಿ .1 ಎಂಬ ನಾಮಧೇಯ. ಅದರಲ್ಲಿ ದಿನಕ್ಕೆ ಇಂತಿಷ್ಟು ಗಂಟೆ ಎಂದು ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳು ಪ್ರಸಾರ ವಾಗುತ್ತಿದ್ದವು. ಆ ಕಾರ್ಯಕ್ರಮಗಳಲ್ಲಿ ವಾರ್ತೆಗಳು ,ರೈತರ ಬಗ್ಗೆ ಕಾರ್ಯಕ್ರಮಗಳು ,ಕೆಲವು ಸಾಪ್ತಾಹಿಕ ಧಾರಾವಾಹಿಗಳು, ಪ್ರಮುಖವಾಗಿದ್ದವು. ಇವೆಲ್ಲವುದಕ್ಕಿಂತ ನಮಗೆ ಮುಖ್ಯವಾಗಿದ್ದುದು ಭಾನುವಾರ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಅವತ್ತು ಬೆಳಿಗ್ಗೆ, ಮದ್ಯಾಹ್ನ ಹಾಗೂ ಸಂಜೆ ಕೆಲವು ಗಂಟೆಗಳು ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ನನಗೆ ನೆನಪಿನಲ್ಲಿರುವಂತೆ ಭಾನುವಾರ ಬೆಳಿಗ್ಗೆ 8.30ಕ್ಕೆ ಪ್ರಸಾರವಾಗುತ್ತಿದ್ದ “ಸಬೀನ” ಎನ್ನುವ ಧಾರಾವಾಹಿ ನಮ್ಮಂತಹ ಮಕ್ಕಳಿಗೆ ಮನರಂಜನೆಯ ಕಾರ್ಯಕ್ರಮ….”ಸಬೀನ” ದಲ್ಲಿ ನಾಯಕಿಯು ಅತೀತವಾದ ಶಕ್ತಿಯನ್ನು ಹೊಂದಿರುವವಳು. ಅವಳು ಮಾಡುತ್ತಿದ್ದ ಕೆಲವು ಸಾಹಸಗಳಂತೂ ರೋಚಕವಾಗಿದ್ದವು. ನಾನಂತೂ ಕೆಲವು ಬಾರಿ ಅವಳ ಜಾಗದಲ್ಲಿ ನನ್ನನ್ನು ಕಲ್ಪಿಸಿ ನನ್ನ ಕಲ್ಪನೆಯಲ್ಲಿಯೇ ನಮಗೆ ಆಗದೆ ಇದ್ದ ಟೀಚರುಗಳನ್ನು ಹಾಗೂ ಗೆಳೆಯರನ್ನು ಮಟ್ಟ ಹಾಕುತ್ತಿದ್ದೆ . ನಂತರದ ಕಾರ್ಯಕ್ರಮ ವೆಂದರೆ ಭಾನುವಾರದ ಸಂಜೆಯ ಚಲನಚಿತ್ರ ಮೊದಲಿಗೆ ಸಂಜೆ 5.30 ಕ್ಕೆ ಪ್ರಾರಂಭವಾಗುತ್ತಿದ್ದ ಚಲನಚಿತ್ರವು ನಂತರ 4.30 ಕ್ಕೆ ಪ್ರಾರಂಭವಾಗಿ ಆ ನಂತರ 4 ಕ್ಕೆ ಶುರುವಾಗುತ್ತಿತ್ತು.
ನಮ್ಮ ಮನೆಯಲ್ಲಿ ಟಿ .ವಿ. ಇಲ್ಲದೆ ಇದ್ದ ಸಮಯದಲ್ಲಿ ನಾವು ನಮ್ಮ ಮನೆಯಿಂದ ಸುಮಾರು 3-4 ಕಿ.ಮೀ . ದೂರದಲ್ಲಿದ್ದ ಒಬ್ಬ ಮೇಷ್ಟ್ರ ಮನೆಗೆ ಟಿ .ವಿ . ನೋಡಲು ಹೋಗುತ್ತಿದ್ದೆವು, ಸಾಧಾರಣವಾಗಿ ನಮ್ಮ ಆ ಏರಿಯಾದಲ್ಲಿ ಟಿ .ವಿ. ಯಿದ್ದ ಪ್ರಥಮ ಮನೆಯಾಗಿರಬಹುದು ಅದು. ಅಲ್ಲಿ ಭಾನುವಾರ ಸಂಜೆ 5.30 ಕ್ಕೆ ಏನಿಲ್ಲದಿದ್ದರೂ ಮಕ್ಕಳು,ಹೆಂಗಸರು,ಗಂಡಸರು ಹಿರಿಯರೆನ್ನದೆ 40-50 ಮಂದಿ ಸೇರುತ್ತಿದ್ದೆವು ಪ್ರತಿ ಭಾನುವಾರ ಸಂಜೆ ಅವರ ಮನೆಯಲ್ಲಿ ಹಬ್ಬದ ವಾತಾವರಣ . ಸಂಜೆ 5 ಕ್ಕೆ ಪ್ರಾರಂಭವಾದ ಚಲನಚಿತ್ರ ಜಾಹೀರಾತಿನೊಂದಿಗೆ ಸೇರಿ (ಜಾಹೀರಾತಿನಲ್ಲಿ ಅಂದಿನ ಪ್ರಖ್ಯಾತ ಜಾಹೀರಾತುಗಳಾದ ಉಜಾಲ ಲೀಟರಿಗೆ 4 ತೊಟ್ಟು ಹಾಗೂ ವಾಶಿಂಗ್ ಪೌಡರ್ ನಿರ್ಮಾ ಇನ್ನು ನನ್ನ ಮಸ್ತಕದಲ್ಲಿ ಹಾಗೆ ಇದೆ)ಚಿತ್ರ ಮುಗಿಯಲು ಹೆಚ್ಚು ಕಡಿಮೆ ರಾತ್ರಿ 9 ಆಗುತ್ತಿತ್ತು ,8 ಗಂಟೆಗೆ ವಾರ್ತೆಗಳ ಪ್ರಾರಂಭದಲ್ಲಿ “ಚಲನಚಿತ್ರದ ಮುಂದಿನ ಭಾಗ ವಾರ್ತೆಗಳ ನಂತರ ಎಂಬ ಬೋರ್ಡು,ಕೆಲವರು ಅಲ್ಲಿಗೆ ಎದ್ದು ಹೋದರೆ ನಮ್ಮಂತಹವರು ಚಲನಚಿತ್ರದ ಕ್ಲೈ ಮ್ಯಾಕ್ಸ್ ನೋಡಲು ಅರ್ಥವಾಗದ ವಾರ್ತೆಗಳನ್ನು (ಆ ವಯಸ್ಸಿನಲ್ಲಿ ಅವೆಲ್ಲ ಅರ್ಥವಾಗುತ್ತಿರಲಿಲ್ಲ) ನೋಡಿ ಚಿತ್ರ ಮುಗಿದ ನಂತರ ಬರುತ್ತಿದ್ದೆವು.
ಆ ನಂತರದ ದಿನಗಳಲ್ಲಿ ದೂರದರ್ಶನವದವರು ಚಲನಚಿತ್ರದ ಸಮಯವನ್ನು 5.30ರ ಬದಲಿಗೆ ಸಂಜೆ 4ಕ್ಕೆ ನಿಗದಿಪಡಿಸಿದರು. ಈ ಸಮಯ ಬದಲಾವಣೆ ನಮಗೆ ಇನ್ನೊಂದು ಖುಷಿಯ ವಿಚಾರ. ಕಾರಣ ಚಲನಚಿತ್ರ ಸಂಜೆ 4 ಗಂಟೆಗೆ ಪ್ರಾರಂಭವಾಗುವುದರಿಂದ 1 ಗಂಟೆ ಬೇಗನೆ ಮುಗಿಯುತ್ತೆ. ಬೇಗನೆ ಮನೆ ತಲುಪಬಹುದು ಅನ್ನೋದು ನಮ್ಮ ಆಲೋಚನೆ. ಭಾನುವಾರದಂದು ನಮ್ಮೆಲ್ಲರ ಮನೆಗಳಲ್ಲಿ ಮನೆ ಕೆಲಸವೂ ಮಧ್ಯಾಹ್ನದ ಹೊತ್ತಿಗೆ ಮುಗಿದಿರುತ್ತಿತ್ತು. ಏಕೆಂದರೆ ಅದೇ ಸಂಜೆಯ ಚಲನಚಿತ್ರಕ್ಕಾಗಿ.
ಕಾಲಕ್ರಮೇಣ ನಮ್ಮ ಪಕ್ಕದ ಮನೆಗೆ ಟಿವಿಯ ಪ್ರವೇಶವಾಯಿತು. ಅಲ್ಲಿ ಒಂದಷ್ಟು ವರ್ಷ ನಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡಿದ್ದೆವು. ಅದಾದ ನಂತರ ನಮ್ಮ ಮನೆಗೂ ಟಿ .ವಿ.ಲಗ್ಗೆ ಇಟ್ಟಿತು.(ನಮ್ಮ ಮೊದಲ ಟಿ .ವಿ ಯು ಬಿ.ಪಿ.ಎಲ್. ಅಜಿತ್ ಕಂಪೆನಿಯದ್ದು 14 ಇಂಚಿನ ಬ್ಲ್ಯಾಕ್ ಅಂಡ್ ವೈಟ್ )ನಮ್ಮ ಏರಿಯಾದ ಜನ ಮೇಷ್ಟ್ರ ಮನೆಗೆ ತೆರಳುವುದನ್ನು ಬಿಟ್ಟು ನಮ್ಮ ಮನೆಗೆ ಬರಲಾರಂಭಿಸಿದರು. 14 ಇಂಚಿನ ಪರದೆಯೇ ನಮಗೆ ಬೆಳ್ಳಿ ತೆರೆಯಾಗಿತ್ತು. ನಮ್ಮ ಮನೆಯಲ್ಲಿ 25-30 ಮಂದಿ ಸೇರುತ್ತಿದ್ದರು[ಮನೆ ಅಷ್ಟು ದೊಡ್ಡದಲ್ಲದಿದ್ದರೂ ಕಿಟಕಿಯಿಂದ ಅಂಗಳದಲ್ಲಿ ನಿಂತು ನೋಡುತ್ತಿದ್ದರು] ಸಿನಿಮಾ ಮುಗಿಯುವ ಸಮಯದಲ್ಲಂತೂ ಕೆಲವರ ಕಣ್ಣಂಚಿನಲ್ಲಿ ನೇತ್ರಾವತಿ ಮಳೆಗಾಲದಲ್ಲಿ ಹರಿದಂತೆ ಉಕ್ಕಿ ಹರಿಯುತ್ತಿದ್ದು ಅದರಲ್ಲೂ ಶ್ರುತಿ ಯವರ ಸಿನೆಮ ಆದರಂತೂ ಕೇಳೋ ಹಾಗಿಲ್ಲ……!
ಚಲನಚಿತ್ರ ಮುಗಿದ ನಂತರ ನನ್ನ ಅಜ್ಜಿಗೆ ಒಂದು ಕೆಲಸ ಖಾಯಂ ಆಗಿತ್ತು. ಅದೇನೆಂದರೆ ನಮ್ಮೂರಲ್ಲಿ ಹೆಚ್ಹಿನ ಹೆಂಗಸರು ಬೀಡಿ ಕಟ್ಟಿ ಗಂಡಸರಿಗೆ ಸಂಸಾರ ಸಾಗರದ ದಡ ಮುಟ್ಟಿಸಲು ಸಹಾಯ ಮಾಡುತ್ತಿದ್ದರು. ನೂರರಲ್ಲಿ 90 ರಷ್ಟು ಮಂದಿ ಈಗಲೂ ಅದನ್ನೇ ನೆಚ್ಚಿನ ಉದ್ಯೋಗವನ್ನಾಗಿಸಿದ್ದಾರೆ . ಬೀಡಿಯೊಂದಿಗೆ ನಮ್ಮದು ಭಾವನಾತ್ಮಕವಾದ ಸಂಬಂಧ. ಹೀಗೆ ಬೀಡಿ ಕಟ್ಟುತ್ತಿದ್ದ ಹೆಂಗಸರು ಚಲನಚಿತ್ರ ನೋಡಲು ಬರುವಾಗ ಅವರೊಂದಿಗೆ ಬೀಡಿಯ ಎಲೆಗಳನ್ನು ಹೊಗೆಸೊಪ್ಪನ್ನು ತಮ್ಮೊಂದಿಗೆ ತಂದು ಚಿತ್ರ ನೋಡುತ್ತಿರುವಾಗಲೇ ತಮ್ಮ ಕಾಯಕವನ್ನು ಮುಂದುವರೆಸುತ್ತಿದ್ದರು. ಹಾಗೆ ಬೀಡಿ ಕಟ್ಟುವಾಗ ಹರಿದ ಎಲೆ, ಎಲೆಯ ನಾರು ಚೆಲ್ಲಿದ ಹೊಗೆಸೊಪ್ಪು ತೆಗೆದು ನೆಲದ ಮೇಲೆ ಬಿಸಾಕಿ, ಹೋಗುವಾಗ ಅದನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದರು. ಅದನ್ನೆಲ್ಲ ಶುಚಿಗೊಳಿಸುವುದು ನನ್ನ ಅಜ್ಜಿಯ ಕೆಲಸ, ಚಿತ್ರದ ಬಗ್ಗೆ ಅಷ್ಟು ಆಸಕ್ತಿಯಿಲ್ಲದ ಅವರು ಏನೋ ಗೊಣಗಿಕೊಂಡು ಇವೆಲ್ಲವನ್ನೂ ಸ್ವಚ್ಚಗೊಳಿಸುತ್ತಿದ್ದರು [ನಾವು ಮೇಷ್ಟ್ರ ಮನೆಗೆ ಹೋಗೋವಾಗ ಅವರು ಎಷ್ಟು ಬಯ್ಯುತ್ತಿದ್ದರೋ ಯಾರಿಗ್ಗೊತ್ತು]. ಅಂತೂ ಇಂತೂ ಭಾನುವಾರದ ಮದ್ಯಾಹ್ನದ ನಂತರದ ಸಮಯವೆಂದರೆ ನಮಗೆ ಬಹಳ ಉಲ್ಲಸಮಯವಾದ ಸಮಯ, ಮನೆಯಲ್ಲಿ ಏನೇ ಕಷ್ಟಗಳಿದ್ದರೂ ಕೂಡ ಅದು ಯಾರಿಗೂ ಅ ಸಮಯಕ್ಕೆ ಲೆಕ್ಕಕ್ಕಿಲ್ಲ ಡಿ .ಡಿ .1 ರಲ್ಲಿ [ಕನ್ನಡದ ಕಾರ್ಯಕ್ರಮಗಳನ್ನು ಡಿ ಡಿ9 ಎಂದು ಪ್ರಸಾರ ಮಾಡುತ್ತಿದ್ದರು. ಮುಂದೆ ಅದು ‘ಚಂದನ’ ವಾಹಿನಿ ಎಂದು ಬದಲಾಯಿತು] ಬರುವ ಚಲನಚಿತ್ರಗಳೇ ನಮ್ಮ ಮನರಂಜನಾ ಸಾಧನವಾಗಿತ್ತು.
ಇಂದು ಇರುವ ನೂರಾರು ಚಾನಲ್ ಗಳಲ್ಲಿ ಯಾವುದನ್ನು ನೋಡಬೇಕು ಎಂಬ ಗೊಂದಲ ಬಿಡಿ. ಟಿವಿಯೆಂಬ ಸಾಧನ ಸುಮ್ಮನೆ ಟೈಮ್ ಪಾಸ್ ಸಾಧನವಾಗಿ ಬದಲಾಗಿದೆ. ಮೊಬೈಲ್ ಇಂಟರ್ನೆಟ್ ಎಂದು ಬೋರಾದಾಗ ನಮಗೆ ಟೈಮ್ ಪಾಸ್ ಗಾಗಿ ಟಿವಿ ನೆನಪಾದರೆ. ಕೆಲವರಿಗೆ ಕೆಲವು ಚಾನಲ್ ಗಳಲ್ಲಿ ಬರುವಂತಹ ಧಾರಾವಾಹಿಗಳಿಗಾಗಿ ಮಾತ್ರ ಟಿವಿ ಸೀಮಿತವಾಗಿದೆ. ಆದರೆ ಹಿಂದೆ ಹೀಗಿರಲಿಲ್ಲ. ನಮಗೆ ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿಯನ್ನು ಹೊತ್ತು ತರುತ್ತಿದ್ದದು ಇದೇ ದೂರದರ್ಶನ ಎಂಬ ಚಾನಲ್ ಮಾತ್ರ. ರಾತ್ರಿ ಏಳರ ವೇಳೆಗೆ ಹಿರಿಯರಿಗೆ ವಾರ್ತೆ ನೋಡುವ ಸಮಯವಾದರೆ ನಮ್ಮಂತಹ ಕಿರಿಯರಿಗೆ ಮನರಂಜನೆಗಾಗಿ ಇರುತ್ತಿದ್ದುದು ಈ ದೂರದರ್ಶನ ಮಾತ್ರ.
ರಾಕೇಶ್ ಕೊಣಾಜೆ, ಮಂಗಳೂರು