ಅಮ್ಮನ ತೊಡೆಯ ಮೇಲೆ ಮಲಗಿ
ಜೋಗುಳದ ಹಾಡು ಕೇಳುವಂತೆ;
ಅಪ್ಪನ ಹೆಗಲ ಮೇಲೆ ಕುಳಿತು
ಸಂತೆ ಬೀದಿ ಸುತ್ತುವಂತೆ;
ಸಂಜೆಯ ವೇಳೆಗೆ ಅಜ್ಜ ತರೋ
ಚಕ್ಕುಲಿಗೆ ಕಾಯೋ ಚಾತಕ ಪಕ್ಷಿಯಂತೆ;
ರಾತ್ರಿಯ ಸಮಯದಲಿ ಅಜ್ಜಿಯ ಕಥೆಗೆ
ಮಲಗಿ ನಿದ್ರಿಸುವಂತೆ….
ಓ ದೇವರೇ…. ಮತ್ತೆ ಮಗುವಾಗಿಸು….!!!
ಅಣ್ಣನ ಜೊತೆ ಜಗಳವಾಡಿ ಅಮ್ಮನ
ಬಳಿ ದೂರು ಕೊಡುವಂತೆ;
ಅಪ್ಪನ ಕೈಲಿ ‘ಪುಲಿತ ಅಡರ್’ ಕಂಡಾಗ
ಮುದುಡಿ ಮೂಲೆ ಸೇರಿದಂತೆ;
ಬಿದ್ದಾಗ ಓಡೋಡಿ ಬಂದು ಅಮ್ಮ
ಒಂದೇಟು ಕೊಟ್ಟು ಎಬ್ಬಿಸುವಂತೆ;
ವೀಳ್ಯದೆಲೆ ತಿಂದ ಅಜ್ಜನಿಗೆ
ಉಗಿಯೋಕೆ ‘ಪಡ್ಯ’ ಕೊಡುವಂತೆ…
ಓ ದೇವರೇ…. ಮತ್ತೆ ಮಗುವಾಗಿಸು…!!!!
ಮೇಲಿನ್ಮನೆ ಗೀತಕ್ಕ ನೀರಿನಲಿ ನಿಂತು
ಮೀನು ತೋರಿಸಿ ತುತ್ತೂಟ ತಿನ್ನಿಸುವಂತೆ;
ಎಲ್ಲ ಕೂಡಿ ಆಡಿ ಕೊನೆಗೆ ಜಗಳವಾಡಿ
ಮನೆಗೆ ಬಂದು ದೂರು ಕೊಡುವಂತೆ;
ಮರುದಿನ ‘ಟೂ’ ಬಿಟ್ಟು
ಮತ್ತೆ ಒಂದಾಗಿ ಆಡುವಂತೆ;
ಹುಣಸೆ ಮರದಡಿಯಲ್ಲಿ ಸಿಕ್ಕ ಕೋಲು-
ತೆಂಗಿನಗರಿಯಲಿ ಮನೆ ಕಟ್ಟುವಂತೆ;
ಓ ದೇವರೇ…. ಮತ್ತೆ ಮಗುವಾಗಿಸು….!!!
ಶಾಲೆಗೆ ಹೊರಟಾಗ ಅಮ್ಮ ತಲೆ ಬಾಚಿ
ಪೌಡರ್ ಹಚ್ಚಿ ತಿಲಕವಿಡುವಂತೆ;
ದಾರಿ ಮಧ್ಯದಲಿ ಸಿಗುವ ತೋಡಿನಲಿ
ನೀರಾಟ ಆಡಿ ಶಾಲೆಗೆ ಹೋಗುವಂತೆ;
ಶಾಲೆಯ ಪರಿಸರದಲಿ ಬಿದ್ದಿರೋ
ಕಸ ಕಡ್ಡಿಗಳನು ಹೆಕ್ಕಿ ಸ್ವಚ್ಛ ಮಾಡುವಂತೆ;
ಶಾಲಾ ಪ್ರಾರ್ಥನೆಗೆ ಹಿಂದೆ ಕೈ ಕಟ್ಟಿ
ಶಿಸ್ತಿನಲಿ ಸಾಲಾಗಿ ಹೋಗುವಂತೆ;
ಓ ದೇವರೇ…. ಮತ್ತೆ ಮಗುವಾಗಿಸು…!!!!
ಶಾಲೆಯಿಂದ ಮರಳುವಾಗ ನೀಲಿ-ಬಿಳಿ
ಬಟ್ಟೆ ಹಳದಿ ಬಣ್ಣವಾಗುವಂತೆ;
ಕುಸುಮ ಟೀಚರ್ ಹೇಳೋ ತೆನಾಲಿರಾಮನ
ಕಥೆಗಳನು ಆನೆ ಕಿವಿ ಮಾಡಿ ಕೇಳುವಂತೆ;
ನೆಲ್ಲಿಮರಕೆ ಕಲ್ಲು ಹೊಡೆದು ಶಾಲಾ
ಅಸೆಂಬ್ಲಿಯಲಿ ಪೆಚ್ಚುಮೋರೆ ಹಾಕಿ ನಿಲ್ಲುವಂತೆ;
ಶನಿವಾರ ಮಧ್ಯಾಹ್ನ ಓಡೋಡಿ ಬಂದು
ಜೂನಿಯರ್ -ಜಿ ಗೆ ಟಿವಿ ಮುಂದೆ ಕೂರುವಂತೆ…
ಓ ದೇವರೇ…. ಮತ್ತೆ ಮಗುವಾಗಿಸು…!!!!
ಕಳೆದುಕೊಂಡ ಅಜ್ಜನ ಪ್ರೀತಿ ಕೊಡು…
ಅಜ್ಜಿ ಹೇಳೋ ಕಥೆಯ ಮತ್ತೆ ಹೇಳಿಸು…
ಅಪ್ಪನ ಪ್ರೀತಿಯ ಅಮ್ಮನ ಮಮತೆಯ
ಅಣ್ಣನ ಹುಸಿಕೋಪವ ಮತ್ತೆ ಕೊಡು…
ಓ ದೇವರೇ…. ಮತ್ತೆ ಮಗುವಾಗಿಸು…!!!!
-ರಾಜೇಶ್ ನರಿಂಗಾನ