ಮಂಗಳೂರು : ಮಕ್ಕಳಿಗೆ ಎಳವೆಯಲ್ಲಿಯೇ ಸೂಕ್ತ ಪ್ರೋತ್ಸಾಹ ಸಿಕ್ಕಿದರೆ ಅವರು ಮುಂದೆ ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ಸೂಕ್ತ ಉದಾಹರಣೆ ಮಂಗಳೂರು ಕುಳಾಯಿ ಹೊಸಬೆಟ್ಟಿನ ನಿಧಿ .ಜೆ. ಬಂಗೇರ. ಈಕೆಗೆ ಗೊತ್ತಿರದ ಕಲಾ ಪ್ರಕಾರಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರತಿಭಾವಂತೆಯಾದ ಈಕೆ ಪ್ರತಿಭೆಯ ಆಗರ. ನೃತ್ಯ, ಚಿತ್ರಕಲೆ, ಅಭಿನಯಗೀತೆ, ಛದ್ಮವೇಷ ಹೀಗೆ ಎಲ್ಲದರಲ್ಲೂ ಎತ್ತಿದ ಕೈ.
ಮಂಗಳೂರು ಕುಳಾಯಿ ಹೊಸಬೆಟ್ಟಿನ ಜನಾರ್ಧನ ಸಾಲ್ಯಾನ್ -ಕವಿತಾ ಜನಾರ್ಧನ ದಂಪತಿಯ ಪುತ್ರಿಯಾದ ನಿಧಿಯ ಪ್ರತಿಭೆಯನ್ನು ಗುರುತಿಸಿ `ಪ್ರಾಪ್ತಿ ಕಲಾವಿದೆರ್ ಕುಡ್ಲ’ ಎಂಬ ಸಾಂಸ್ಕೃತಿಕ ಸಂಘಟನೆ ಇತ್ತೀಚೆಗೆ `ಕಲಾ ಮಯೂರಿ’ ಬಿರುದು ನೀಡಿ ಸನ್ಮಾನಿಸಿದೆ. ನಿಧಿ ಈಗ ಸುರತ್ಕಲ್ ನ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಎಳೆ ವಯಸ್ಸಿನಲ್ಲೇ ನೃತ್ಯವನ್ನು ಕಲಿಯಲು ಆರಂಭಿಸಿದ ಈಕೆ ಕುಳಾಯಿಯ ಸ್ಟಿಂಗರ್ಸ್ ಡಾನ್ಸ್ ಟ್ರೂಫಿನ ಸದಸ್ಯೆ. ಈ ಟ್ರೂಫಿನ ಸುಹಾನ್ ಅವರು ನೃತ್ಯಾಭ್ಯಾಸದ ಟೀಚರ್.
ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಮುಂಬಯಿ, ಕೇರಳ ಹೀಗೆ ಹಲವಾರು ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿ ಭೇಷ್ ಎನಿಸಿಕೊಂಡಿದ್ದಾಳೆ ನಿಧಿ. ನೃತ್ಯವಲ್ಲದೆ ಚಿತ್ರಕಲೆ, ಅಭಿನಯಗೀತೆ, ಶ್ರೀಕೃಷ್ಣ ವೇಷ ಸ್ಪರ್ಧೆ, ಹಾಗೂ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿ ಹಲವು ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿರುವ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಕಿಶೋರ ಕೃಷ್ಣ ವಿಭಾಗದಲ್ಲಿ ಪ್ರಥಮ ಬಹುಮಾನ ಈಕೆಗೆ ಸಂದಿದೆ. ಕರ್ನಾಟಕ ಸೇವಾ ವೃಂದ ಸುರತ್ಕಲ್ ಇವರು ಶ್ರೀಕೃಷ್ಣ ವೇಷಾಲಂಕಾರ ಸ್ಪರ್ಧೆಯಲ್ಲಿ ಸತತ ಐದು ವರ್ಷಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. ಅಲ್ಲದೆ ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ ಹೊಸಬೆಟ್ಟು ಹಾಗು ಹೊಸಬೆಟ್ಟು ರಾಘವೇಂದ್ರ ಮಠದವರು ನಡೆಸುವ ಕೃಷ್ಣ ವೇಷ ಸ್ಪರ್ಧೆಯಲ್ಲೂ ಪ್ರಶಸ್ತಿ ಗೆದ್ದಿದ್ದಾಳೆ ನಿಧಿ.
ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ವತಿಯಿಂದ ನಡೆಸಿದ ಚಿತ್ರ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿದ್ದ ನಿಧಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ರಜತ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನಿಧಿ ದ್ವಿತೀಯ ಪ್ರಶಸ್ತಿ ಪಡೆದಿದ್ದಾಳೆ. ಎಳೆ ವಯಸ್ಸಿನಲ್ಲಿ ಕಲಾ ಕೌಶಲ್ಯವನ್ನು ರೂಢಿಸಿಕೊಂಡು `ಕಲಾ ನಿಧಿ’ಯಾಗಿರುವ ಈಕೆಗೆ ನಮ್ಮ ಕಡೆಯಿಂದ ಹ್ಯಾಟ್ಸಾಫ್ !
ಬಹುಮುಖ ಪ್ರತಿಭೆಯ ಬಾಲೆ ನಿಧಿಗೆ `ಕಲಾ ಮಯೂರಿ’ ಪ್ರಶಸ್ತಿ
Students corner
2 Mins Read











