ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಜಿ ಅಧ್ಯಕ್ಷರು , ಭೂಸುಧಾರಣಾ ಚಳವಳಿಯ ನೇತೃತ್ವ ವಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕಿನ ನಾಯಕರಾಗಿ ಕಮ್ಯೂನಿಸ್ಟ್ ಪಕ್ಷದ ಬೆಳವಣಿಗೆಗೆ ಕಾರಣಕರ್ತರಾದವರು ಬಳೆಂಜ ನಿವಾಸಿ ವಾಸುದೇವ ಪೆರಾಜೆಯವರು.
ಕುದನೆ ಕೊರಗಪ್ಪ ಮೂಲ್ಯ-ರಾಮಕ್ಕ ದಂಪತಿಯ ೭ನೇ ಮಗನಾಗಿ ಫೆ. ೨, ೧೯೪೬ರಂದು ಜನಿಸಿದ ವಾಸುದೇವ ಅವರು ಶಿಕ್ಷಣ ಪಡೆದಿದ್ದು ಅಲ್ಪವಾದರೂ ಜೀವನ ಶಿಕ್ಷಣವನ್ನು ಅರಗಿಸಿಕೊಂಡು ಪ್ರಬುದ್ಧರಾಗಿದ್ದರು. ತಮ್ಮ ಧರ್ಮಪತ್ನಿಯಾಗಿ ಮಂಗಳೂರು ಆದ್ಯಪಾಡಿಯ ಚಿನ್ನಯ್ಯ ಮೂಲ್ಯ-ದೇಜಮ್ಮ ದಂಪತಿಯ ಪುತ್ರಿ ಮೀರಾ ಅವರನ್ನು ಏಪ್ರಿಲ್ ೪, ೧೯೭೩ರಂದು ಸ್ವೀಕರಿಸಿ ಗ್ರಹಸ್ಥಾಶ್ರಮ ಪ್ರವೇಶಿಸಿದರು. ಅದರ ಫಲವಾಗಿ ಅವರಿಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಜೀವನವನ್ನೇ ಒಂದು ಹೋರಾಟವನ್ನಾಗಿ ಪರಿವರ್ತಿಸಿಕೊಂಡ ಅವರು ದೇಶದಲ್ಲಿ ಭೂಸುಧಾರಣಾ ಕಾನೂನು ಜಾರಿಯಾದಾಗ ಅದರ ಪ್ರಯೋಜನವನ್ನು ಸಮಾಜದ ಕಟ್ಟಕಡೆಯ ಬಡವನಿಗೂ ಒದಗಿಸಿಕೊಡುವಲ್ಲಿ ವಾಸುದೇವ ಪೆರಾಜೆ ಅವರು ಮಾಡಿದ ಹೋರಾಟ ಅನುಕರಣೀಯ. ಅದಕ್ಕಾಗಿ ರೈತ ಚಳುವಳಿ, ಪ್ರತಿಭಟನೆ, ಮುಷ್ಕರ, ಹಳ್ಳಿಯಿಂದ ರಾಜ್ಯದ ರಾಜಧಾನಿಗೆ ಕಾಲ್ನಡಿಗೆ ಜಾಥಾ, ಸಂಘಟನೆ, ವಿಧಾನಸೌಧ ಮುತ್ತಿಗೆ, ಸೆರೆಮನೆವಾಸ, ಎಲ್ಲವನ್ನೂ ಸ್ವತಹ ಹೋರಾಟದ ಮೂಲಕ ಅನುಭವಿಸಿಕೊಂಡು ಉತ್ತಮ ನಾಯಕನಾಗಿ ರೂಪುಗೊಂಡವರು.
ದುಡಿದುಣ್ಣುವ ಬೀದಿ ಕಾರ್ಮಿಕರ ಪರವಾಗಿ ವಾಸುದೇವ ಅವರು ಮಾಡಿದ ಹೋರಾಟ ಎಲ್ಲರಿಗೂ ಆದರ್ಶ. ಬಡ ಕಾರ್ಮಿಕರ ಅಭಿವೃದ್ಧಿಗಾಗಿ ಅವರು ಮಾಡಿದ ಹೋರಾಟ ಹಲವು. ಬಳಂಜದ ದೇರಾಜೆ ವಾಸಣ್ಣ ಎಂದರೆ `ಬಡವರ ಪರ ಹೋರಾಟಗಾರ’ ಎಂದೇ ಜನಜನಿತರು. ಬೆಳ್ತಂಗಡಿ ತಾಲೂಕಿನ ರೈತ ಹೋರಾಟಗಾರ ಯಳಚಿತ್ತಾಯರ ಜೊತೆ ಸರಿ ಸಮಾನವಾಗಿ ನಿಂತು ಹೋರಾಡಿದ ಅವರು ರೈತರ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತವರು. ಕೇವಲ ರಾಜಕೀಯ ಹೋರಾಟಗಳಲ್ಲಿ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದ್ದಾರೆ.
ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಕ್ರಿಯವಾಗಿ ಆಡಳಿತ ಮಂಡಳಿಯೊಂದಿಗೆ ದುಡಿದ ವಾಸಣ್ಣ, ಊರಿನ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ವಾಸುದೇವ ಅವರು ಬಳಂಜ ಗ್ರಾಮ ಪಂಚಾಯ್ತ್ ಚುನಾವಣೆಗೆ ಸ್ಪರ್ಧಿಸಿ, ಜಯಗಳಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜವನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಕ್ಷರಕ್ರಾಂತಿ ಮಾಡಿದ ಅವರು ಬಳಂಜದ ಸುಂದ್ರ ನದಿ ತಾಣದಲ್ಲಿ ವಯಸ್ಕರ ಶಿಕ್ಷಣ ಕೇಂದ್ರವನ್ನು ಸ್ಥಾಪನೆ ಮಾಡಿ ಅದರ ಪ್ರಯೋಜನವನ್ನು ನಿರಕ್ಷರ ಕುಕ್ಷಿ ಜನತೆ ಪಡೆಯುವಂತೆ ಯತ್ನಿಸಿ ಸಫಲರಾಗಿದ್ದರು.
ಗ್ರಾಮೀಣ ಸೊಗಡಿನ ಕಂಬಳ ಕ್ರೀಡೆಗೆ ಪ್ರೋತ್ಸಾಹ ನೀಡಿ, ಸ್ವತಃ ಓಟದ ಕೋಣಗಳನ್ನು ಸಾಕಿ, ಕಂಬಳದಲ್ಲಿ ಓಡಿಸಿ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಧರ್ಮಸ್ಥಳ ಕೃಷಿಮೇಳದಲ್ಲಿ ಭಾಗವಹಿಸಿ ಉತ್ತಮ ಜಾನುವಾರು ಸಾಕಣಿಕೆದಾರ, ಉತ್ತಮ ಕೃಷಿಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅಳದಂಗಡಿ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಸಮಿತ್ಯ ಅಧ್ಯಕ್ಷರಾಗಿ ಅನೇಕ ಪ್ರಗತಿಪರ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನಿಸಿದ್ದಾರೆ.
ತನ್ನ ಜೊತೆ ಸಮಾಜವೂ ಅಭಿವೃದ್ಧಿ ಹೊಂದಬೇಕೆಂದು ಕನಸು ಕಂಡ ಅವರು, ಅದರ ಸಾಕಾರತೆಗಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಲಾಲರ ಸಂಘವನ್ನು ಸ್ಥಾಪಿಸುವಲ್ಲಿ ಅಹರ್ನಿಶಿ ದುಡಿದು ಯಶಸ್ವಿಯಾಗಿದ್ದಾರೆ. ಅದರ ಸಾಧನೆಯ ಮೆರುಗನ್ನು ಇಂದು ಭವ್ಯ ಕುಲಾಲ ಮಂದಿರ ಎತ್ತಿ ತೋರಿಸುತ್ತಿದೆ.
ನಿರಂತರ ಸಾಧನೆಯ ಮೂಲಕ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬ ಉಕ್ತಿಗೆ ನಿದರ್ಶಕರಾಗಿ, ಸಮಾಜ ಪರಿವರ್ತನೆಯ ಹರಿಕಾರರಾಗಿ ಇಂದಿನ ಯುವ ಪೀಳಿಗೆಗೆ ವಾಸುದೇವ ಮೂಲ್ಯ ಪೆರಾಜೆಯವರು ಆದರ್ಶಪ್ರಾಯರು.
ಶ್ರೀಯುತರು ೨೦೧೬, ಜುಲೈ ೨೬, ಮಂಗಳವಾರದಂದು ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.