ಉಡುಪಿ : ಜನವರಿ ನಂತರ ಬೇಸಿಗೆ ತುಸು ಹೆಚ್ಚಾಗುತ್ತದೆ. ಇದರಿಂದ ಮನುಷ್ಯನಿಗೆ ದಾಹ ಹೆಚ್ಚಾಗುತ್ತದೆ. ಬಿಸಿಲು ಹೆಚ್ಚಿರುವುದರಿಂದ ತಣ್ಣಗೆ ಇಲ್ಲದ ನೀರು ಕುಡಿದರೆ ದಾಹ ಇಂಗುವುದಿಲ್ಲ. ಇದರಿಂದ ತಣ್ಣಿನ ನೀರಿನ ಸೇವಿಸುವುದು ಹೆಚ್ಚು. ನೀರನ್ನು ತಂಪಾಗಿಡಲು ಕುಂಬಾರರ ಮಡಿಕೆಗಳನ್ನು ಬಳಸುತ್ತಿದ್ದರು. ಆದರೆ ಆಧುನಿಕತೆ ಹಾಗೂ ಜನರ ಮನೋಭಾವದಲ್ಲಾದ ಬದಲಾವಣೆಗಳಿಂದ ಕುಂಬಾರರ ಕುಲಕಸುಬಾದ ಕುಂಬಾರಿಕೆ ಇಂದು ನಶಿಸುವ ಹಂತ ತಲುಪಿದೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ತಂಪಿನ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಹಾಗೆಯೇ ಬೇಸಿಗೆ ಕಾಲದಲ್ಲಿ ತಣ್ಣಿನ ನೀರಿಗೆ ಭಾರೀ ಬೇಡಿಕೆ. ನೀರನ್ನು ತಣ್ಣಿಗೆ ಇಡಲು ಮಡಿಕೆಗಳ ಮೊರೆ ಹೋಗಲಾಗುತ್ತಿತ್ತು. ಇದರಿಂದ ಕುಂಬಾರರು ಮಡಿಕೆಗಳನ್ನು ಬೇಸಿಗೆಯಲ್ಲಿ ಹೆಚ್ಚು ತಯಾರಿಸುತ್ತಿದ್ದರು. ಜೊತೆಯಲ್ಲಿ ಹಾಗೂ ಕುಂಬಾರರು ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಸ್ಟೀಲ್, ಸಿಲ್ವರ್ ಪಾತ್ರಗಳು ಇರದ ಸಮಯದಲ್ಲಿ ಜನರು ಕುಂಬಾರರು ಮಾಡಿದ ಮಡಿಕೆ ಹಾಗೂ ಇತರೆ ವಸ್ತುಗಳನ್ನು ಕೊಳ್ಳುತ್ತಿದ್ದರು. ಇದರಿಂದ ಅವರ ಜೀವನವು ನಡೆಯುತ್ತಿತ್ತು.
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಆಧುನಿಕ ಕಾಲದಲ್ಲಿ ಉಳ್ಳವರು ಪ್ರಿಜ್ಗಳ ಮೊರೆ ಹೋದರು. ಮಡಿಕೆ ಇರುವ ಜಾಗದಲ್ಲಿ ಪ್ರಿಜ್, ಪ್ಲಾಸ್ಟಿಕ್ ಆವರಿಸಿದವು. ಇವುಗಳ ಬಳಕೆಯಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದರೂ ನಮ್ಮ ಜನರು ಬಳಸುತ್ತಾರೆ.
ಆರೋಗ್ಯಕ್ಕಿಲ್ಲ ಹಾನಿ: ಮಡಿಕೆಯಲ್ಲಿರುವ ನೀರು ಕುಡಿದರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಪ್ರಿಜ್ನಲ್ಲಿರುವ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಕಡಿಮೆ ದರದಲ್ಲಿ ದೊರೆಯುವ ಗಡಿಗೆಳನ್ನು ಬಳಸಲು ಮುಂದಾದರೆ ಕುಂಬಾರರ ಕುಲಕಸುಬಾದ ಕುಂಬಾರಿಕೆ ಉಳಿಯಲು ಸಾಧ್ಯವಿದೆ.
ವಂಶಪಾರಂಪರ್ಯವಾಗಿ ಕುಲಕಸುಬಾಗಿ ಕುಂಬಾರಿಕೆ ಮುಂದುವರಿಸುವವರಿಗೆ ಬೆಂಬಲವಾಗಿ ಪೆರ್ಡೂರು ‘ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ’ ಕಾರ್ಯ ನಿರ್ವಹಿಸುತ್ತಿದೆ. ಮಣ್ಣಿನ ಪಾತ್ರೆ, ನಾನಾ ವಿನ್ಯಾಸದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ, ಮಾರಾಟ ಮಾಡುವ ಮೂಲಕ ಕುಂಬಾರರ ಕೌಶಲ್ಯ ಹೆಚ್ಚಿಸಿ ಜೀವನ ಭದ್ರತೆಗಾಗಿ ಆದಾಯ ಗಳಿಕೆಗೆ ಪ್ರೇರಣೆ ನೀಡುತ್ತಿದೆ. ಪೆರ್ಡೂರು ದೇವಸ್ಥಾನದ ಮುಂಭಾಗದಲ್ಲಿ ಮಾರಾಟ ವಿಭಾಗ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ನವನವೀನ ರೀತಿಯಲ್ಲಿ ತಯಾರಿಸಿದ ಮಣ್ಣಿನ ಪಾತ್ರೆಗಳು ಲಭ್ಯವಿದೆ.