ಕುಲಾಲ ಸಂಘಟನೆಯ ಮತ್ತೊಂದು ಹಿರಿಯ ಕೊಂಡಿ ಕಳಚಿಬಿದ್ದಿದೆ. ಪಿ. ಕೆ. ಸಾಲ್ಯಾನ್ ಎಂದು ಜನ ಜನಿತವಾಗಿರುವ ಮಂಗಳೂರು ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಜನಿಸಿದ ಪದ್ಮನಾಭ ಕೃಷ್ಣಪ್ಪ ಸಾಲ್ಯಾನ್ ನಮ್ಮನ್ನಗಲಿದ್ದಾರೆ.
ಬದುಕು ಕಟ್ಟಿಕೊಳ್ಳಲು ದೂರದ ಮುಂಬೈಯತ್ತ ಮುಖ ಮಾಡಿ ಹೊರಟ ಇವರು ಹೋರಾಟದ ಬದುಕಲ್ಲಿ ಹಿಂದೇಟು ಹಾಕಿದವರಲ್ಲ. ಸುಮಾರು ಐದು ದಶಕಗಳಲ್ಲಿ ಆರತಿ ಪ್ರಿಂಟಿಂಗ್ ಪ್ರೆಸ್ ಮೂಲಕ ಮುಂಬೈ ನೆಲದಲ್ಲಿ ಕನ್ನಡದ ಅಕ್ಷರ ಕ್ರಾಂತಿ ಮಾಡಿದವರು. ಬಂಟ, ಬಿಲ್ಲವ, ದೇವಾಡಿಗ ಸೇರಿದಂತೆ ಹಲವು ಸಮುದಾಯದ ಮುಖವಾಣಿಗಳನ್ನ ಅಂದವಾಗಿ ಕನ್ನಡದಲ್ಲಿ ಮುದ್ರಿಸಿಕೊಟ್ಟು ಕನ್ನಡವು ಮುಂಬೈಯಲ್ಲಿ ತನ್ನ ಅಚ್ಚನ್ನ ಉಳಿಸಿಕೊಳ್ಳುವಲ್ಲಿ ತನ್ನ ಸೇವೆ ಸಲ್ಲಿಸಿದವರು. ಈಗಲೂ ಕುಲಾಲರ ಮುಖವಾಣಿ `ಅಮೂಲ್ಯ’ದ ಮುದ್ದಾದ ಬರವಣಿಗೆಯ ಹಿಂದಿರುವುದು ಅವರ ಪ್ರಿಂಟಿಂಗ್ ಪ್ರೆಸ್.

ಹಿಂದೊಮ್ಮೆ ಸಾವು-ನೋವು, ಕಷ್ಟ-ಕಾರ್ಪಣ್ಯ, ಓದು-ಬರಹ, ಮದುವೆ-ಮುಂಜಿ ಎಂದಾಕ್ಷಣ ಕರಾವಳಿಯ ಕುಲಾಲ-ಕುಂಬಾರರಿಗೆ ನೆನಪಿಗೆ ಬರುವಂತದ್ದೇ ಮುಂಬೈಯ ಕುಲಾಲ ಸಂಘ. ಡಿ.ಎಂ. ಕೊಡ್ಮನ್ಕರ, ಜಿ.ಜೆ. ಸಾಲ್ಯಾನ್ , ಏ. ಏ. ಬಂಗೇರ, ಡಾ. ಸುಬ್ಬಯ್ಯ, ಬಾಬು ಸಾಲ್ಯಾನ್ , ಪಿ.ಕೆ. ಸಾಲ್ಯಾನ್, ಆರ್. ಎಂ. ಮಡ್ವಾ, ಡಾ. ಸುಂದರ ರಾಮಣ್ಣ , ಸುಂದರ ಕರ್ಮರನ್ ಹಾಗು ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ದುಡಿದ ದುಡಿಯುತ್ತಿರುವ ಸಾವಿರಾರು ಯುವಕರು ಮಹಿಳೆಯರಿಂದಾಗಿ ಮುಂಬೈ ಕುಲಾಲ ಸಂಘ ಬೆಳೆದು ನಿಂತಿದೆ.

ಮುಂಬೈ ಸಂಘದ ನಂತರ ಹುಟ್ಟಿಕೊಂಡ ಹಲವು ಸಂಘ ಸಂಸ್ಥೆ ಗಳು ಹಾಗು ಅವರ ಅಧೀನ ಸಂಘಗಳು, ಬ್ಯಾಂಕ್ ಗಳು ಮೂಲ ಸಂಸ್ಥೆಯಿಂದ ಬೇರೆ ಬೇರೆ ಆಗಿದ್ದಾವೆ. ಆದರೆ ಮುಂಬೈ ಸಂಘದ ಸಹ ಶಾಖೆಗಳು, ಬ್ಯಾಂಕ್ ಗಳು ಇಂದಿಗೂ ಮೂಲ ಸಂಘದ ನೇರ ಆಡಳಿತದಲ್ಲಿ ಇರುವುದು ನಿಜಕ್ಕೂ ಬೇರೆಲ್ಲಾ ಸಂಘ-ಸಂಸ್ಥೆ ಗಳಿಗೆ ಮಾದರಿ. ಇದಕ್ಕೆಲ್ಲಾ ಕಾರಣ ಈ ಮೇಲಿನ ನಾಯಕರುಗಳು ಹಾಗು ಅವರ ಕಠಿಣ ದುಡಿಮೆ, ಮಾರ್ಗದರ್ಶನ ಎಂದರೆ ತಪ್ಪಾಗಲಿಕ್ಕಿಲ್ಲ.

1993 ರಿಂದ 2013 ರವರೆಗೆ ಸುಮಾರು 20 ವರ್ಷ ಮುಂಬೈ ಕುಲಾಲ ಸಂಘವನ್ನ ಮುನ್ನೆಡೆಸಿದ ಸಾಲ್ಯಾನ್ ರವರ ಸೇವೆ ಅನನ್ಯವಾದದ್ದು. ಅವರ ಕುಟುಂಬದ ತ್ಯಾಗ ಶ್ರೇಷ್ಠ ವಾದದ್ದು. ಜಾತಿ ಸಂಘಟನೆಯ ಹಿರಿಯ ಕೊಂಡಿಗಳು ಕಳಚಿಕೊಳ್ಳುತ್ತಿವೆ.

ಸಂಘಗಳಲ್ಲಿ ದುಡಿಯುವವರ ಸರಾಸರಿ ವಯಸ್ಸು 45ರ ಮೇಲಿದೆ. ಅದರ ಅರ್ಥ ಯುವಕರು ಜಾತಿ ಸಂಘಟನೆಯತ್ತ ಬರುವುದು ಕಡಿಮೆಯಾಗುತ್ತಿದೆ. ಹೀಗಾಗಿ ಸಂಘಟನೆಯ ಸಂಪರ್ಕ ಕೊಂಡಿಗಳು ಸಡಿಲವಾಗುತ್ತಿವೆ ಸಂಘಟನೆಗೆ ದುಡಿದವರ ಹಾಗು ಸಂಘದ ಚರಿತ್ರೆ ಯುವಕರಿಗೆ ಸಿಗುತ್ತಲೇ ಇಲ್ಲ. ಇದನ್ನು ಸರಿ ಮಾಡುವ ಹಾಗು ಯುವಕರನ್ನು ಸಂಘಟನೆಯತ್ತ ಸೆಳೆಯುವ ಕೆಲಸವನ್ನ ಎಲ್ಲಾ ಸಂಘಗಳು ಮಾಡಲೇ ಬೇಕಾಗಿದೆ. ಅದಾಗದಿದ್ದರೆ ಜಾತಿ ಸಂಘಟನೆಗಳು ಸೊರಗುವುದರಲ್ಲಿ ಸಂಶಯವಿಲ್ಲ.

ಕರಾವಳಿಯಲ್ಲಿ ಕುಲಾಲ-ಕುಂಬಾರ ಯುವ ವೇದಿಕೆಯ ಮುಖಾಂತರ ಎರಡನೇ ಹಾಗು ಮೂರನೇ ಹಂತದ ನಾಯಕರನ್ನು ತಯಾರು ಮಾಡುತ್ತಿರುವಂತೆ ಎಲ್ಲಾ ಸಂಘಗಳು ಮುಂದಡಿ ಇಡಬೇಕು. ಆ ಮೂಲಕ ಅಗಲಿದ ಹಿರಿಯ ನಾಯಕರಿಗೆ ನೀವು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ನಡೆದು ನೀವು ಕಟ್ಟಿದ ಸಂಸ್ಥೆಯನ್ನು ಉಳಿಸುತ್ತೇವೆ-ಬೆಳೆಸುತ್ತೇವೆ ಎಂಬ ಛಲದೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿದೆ. ಇದು ಇಂದಿನ ಅನಿವಾರ್ಯ.
ಡಾ. ಎಂ. ಅಣ್ಣಯ್ಯ ಕುಲಾಲ್, ಉಳ್ತೂರು
ಪ್ರಧಾನ ಸಂಪಾದಕ



