ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಆಧುನಿಕತೆಯ ಜಗತ್ತು ಇಂದು ಕಣ್ಣು ಕೋರೈಸುವ ಆಡಂಬರ, ಅಬ್ಬರಗಳ ನಡುವೆ ಮುನ್ನುಗ್ಗುತ್ತಿದೆ. ಗಗನಚುಂಬಿ ಕಟ್ಟಡಗಳು, ತಂತ್ರಜ್ಞಾನದ ಆವಿಷ್ಕಾರಗಳು ನಮ್ಮ ಪ್ರಗತಿಯನ್ನು ಸಾರುತ್ತಿವೆಯಾದರೂ, ಇದೇ ಸಮಾಜದ ಕತ್ತಲ ಮೂಲೆಯಲ್ಲಿ ಕಣ್ಣಿಗೆ ಕಾಣದ ಎಷ್ಟೋ ಬಡ ಕುಟುಂಬಗಳು ಕಣ್ಣೀರಿನ ಮಹಾಸಾಗರದಲ್ಲಿ ಮುಳುಗೇಳೂತ್ತಿವೆ. ಇತ್ತೀಚಿನ ದಿನಗಳಲ್ಲಿ, ಕುಲಾಲ ಸಮುದಾಯದ ಅದೆಷ್ಟೋ ನೊಂದ ಜೀವಿಗಳು, ಮಾರಕ ರೋಗಗಳ ಕಪಿಮುಷ್ಟಿಗೆ ಸಿಲುಕಿ, ಸೂಕ್ತ ಚಿಕಿತ್ಸೆಗೆ ನಯಾಪೈಸೆ ಹಣವಿಲ್ಲದೇ ದಾನಿಗಳ ನೆರವಿಗಾಗಿ ಕೈಚಾಚುತ್ತಿರುವ ಹೃದಯವಿದ್ರಾವಕ ದೃಶ್ಯಗಳು ನಮ್ಮ ಕಣ್ಣೆದುರಿಗೇ ಜರುಗುತ್ತಿವೆ. ಮನೆಯಲ್ಲಿ ಕಷ್ಟಪಟ್ಟು ದುಡಿದು ನಾಲ್ಕು ಕಾಸು ತರುತ್ತಿದ್ದ ಆಧಾರಸ್ತಂಭವೇ ರೋಗಶಯ್ಯೆಯಲ್ಲಿ ಮಲಗಿದಾಗ ಇಡೀ ಸಂಸಾರವೇ ಬೀದಿಗೆ ಬೀಳುತ್ತಿದೆ. ಒಂದೆಡೆ ಮುಗ್ಧ ಮಕ್ಕಳ ಶಿಕ್ಷಣದ ಕನಸುಗಳು ಕಮರಿಹೋಗುತ್ತಿದ್ದರೆ, ಇನ್ನೊಂದೆಡೆ ಪ್ರೀತಿಪಾತ್ರರ ಜೀವ ಉಳಿಸಿಕೊಳ್ಳಲು ಹಣ ಹೊಂದಿಸಲಾಗದ ಅಸಹಾಯಕತೆ ಅವರನ್ನು ಜೀವಂತವಾಗಿ ಕೊಲ್ಲುತ್ತಿದೆ. ಇಂತಹ ಕರುಣಾಜನಕ ಕಥೆಗಳು ದಿನಂಪ್ರತಿ ಪತ್ರಿಕೆಗಳ ಪುಟಗಳಲ್ಲಿ, ಸಾಮಾಜಿಕ ಜಾಲತಾಣಗಳ ಗೋಡೆಗಳ ಮೇಲೆ ರಕ್ತಸಿಕ್ತ ಅಕ್ಷರಗಳಂತೆ ಮೂಡಿಬರುತ್ತಿದ್ದರೂ, ಶ್ರೀಮಂತ ಜಗತ್ತು ಇದನ್ನು ಕಂಡೂ ಕಾಣದಂತೆ ಮುನ್ನಡೆಯುತ್ತಿರುವುದು ಇಂದಿನ ಕ್ರೂರ ವಾಸ್ತವ. “ದಿನಾ ಸಾಯುವವರಿಗೆ ಅಳುವವರು ಯಾರು?” ಎಂಬಂತೆ, ದಾನಿಗಳೂ ಕೂಡ ಸಾಲು ಸಾಲಾಗಿ ಬರುವ ಇಂತಹ ಸಾವು-ಬದುಕಿನ ಹೋರಾಟದ ಕರ ಕರೆಗಳಿಗೆ ಸ್ಪಂದಿಸಿ ಸ್ಪಂದಿಸಿ ಬೇಸತ್ತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಭಾರತದ ಇತ್ತೀಚಿನ ಅಧಿಕೃತ ಆರೋಗ್ಯ ಸಮೀಕ್ಷೆಯು ದೇಶದ ನಾಗರಿಕರಲ್ಲಿ ಕಾಯಿಲೆಗಳ ಪ್ರಮಾಣ ತೀವ್ರವಾಗಿ ಏರಿಕೆ ಕಂಡಿರುವುದನ್ನು ಅತ್ಯಂತ ಆತಂಕಕಾರಿಯಾಗಿ ಬಿಚ್ಚಿಟ್ಟಿದೆ. ಆದರೆ, ಈ ರೋಗಗಳಿಗಿಂತಲೂ ಮಿಗಿಲಾಗಿ ಸಮಾಜವನ್ನು ಪೀಡಿಸುತ್ತಿರುವುದು ಗಗನಕ್ಕೇರಿರುವ ವೈದ್ಯಕೀಯ ವೆಚ್ಚಗಳು. ಸಾಮಾನ್ಯ ಜನರಿಗೆ ಕನಿಷ್ಠ ಚಿಕಿತ್ಸೆಯೂ ಎಟಕದಷ್ಟು ದುಬಾರಿಯಾಗಿರುವುದು ಇಡೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ದೇಹವನ್ನು ಹಿಂಡಿ ಹಿಪ್ಪೆ ಮಾಡುವ ರೋಗದ ನೋವಿನೊಂದಿಗೆ, ಹೊಟ್ಟೆಯ ಹಸಿವು ಮತ್ತು ಬಡತನದ ಬೇಗೆಯೂ ಸೇರಿದಾಗ ಬದುಕು ಕೇವಲ ಯಾತನೆಯ ಮೂಟೆಯಾಗುತ್ತದೆ. ಆ ನೋವು ಎಂದಿಗೂ ವಾಸಿಯಾಗದ, ಒಣಗದ ಹಸಿ ಗಾಯವಾಗಿ ಬಡವರ ಎದೆಯನ್ನು ಸೀಳುತ್ತಲೇ ಇರುತ್ತದೆ. ಹಣವಿಲ್ಲದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಔಷಧ ಸಿಗದೇ, ಕಣ್ಣೆದುರೇ ಕೊನೆಯುಸಿರೆಳೆಯುವ ಹೆತ್ತವರನ್ನು, ಮಕ್ಕಳನ್ನು ನೋಡುವ ದುಸ್ಥಿತಿ ಯಾರಿಗೂ ಬರಬಾರದು.
ತುರ್ತು ಸಂದರ್ಭಗಳಲ್ಲಿ ಇಂತಹ ದೀನರಿಗೆ ನೆರವಾಗಲು ಸರ್ಕಾರಿ ಆಸ್ಪತ್ರೆಗಳು ಮತ್ತು ವಿವಿಧ ಸಹಾಯಧನದ ಯೋಜನೆಗಳು ಇವೆ ಎನ್ನುವುದು ನಿಜವಾದರೂ, ಅವು ಕೇವಲ ಕಾಗದದ ಮೇಲಿನ ಅರಮನೆಗಳಾಗಿವೆ. ಜಟಿಲವಾದ ತಾಂತ್ರಿಕ ಕಾರಣಗಳು, ಕಚೇರಿಗಳ ಅಲೆದಾಟ ಮತ್ತು ಸರಿಯಾದ ಮಾಹಿತಿ ಇಲ್ಲದ ಕಾರಣ ಅರ್ಹ ಫಲಾನುಭವಿಗಳ ಕೈಗೆ ಈ ಸೌಲಭ್ಯಗಳು ತಲುಪುತ್ತಲೇ ಇಲ್ಲ. ಮಾರುದ್ದದ ಬೋರ್ಡ್ಗಳನ್ನು ನೇತುಹಾಕಿಕೊಂಡಿರುವ ದೊಡ್ಡ ದೊಡ್ಡ ಆಸ್ಪತ್ರೆಗಳು ಹೊರಗಿನಿಂದ ಆಕರ್ಷಕವಾಗಿ ಕಂಡರೂ, ಒಳಗಿನ ಸಮುದಾಯ ಆರೋಗ್ಯ ಕೇಂದ್ರಗಳು ಅಗತ್ಯ ವೈದ್ಯರು ಮತ್ತು ಕನಿಷ್ಠ ಸೌಕರ್ಯಗಳಿಲ್ಲದೆ ತಾವೇ ರೋಗಗ್ರಸ್ತವಾಗಿ ಸೊರಗುತ್ತಿವೆ. ಸರ್ಕಾರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಗಳು ಭ್ರಷ್ಟಾಚಾರದ ಮತ್ತು ಉದಾಸೀನತೆಯ ಸುಳಿಗೆ ಸಿಲುಕಿ ಹಳಿ ತಪ್ಪುತ್ತಿರುವುದು ಅತ್ಯಂತ ದುರದೃಷ್ಟಕರ.

ಆರೋಗ್ಯ ಎನ್ನುವುದು ಪ್ರತಿಯೊಬ್ಬ ನಾಗರಿಕನ ಜನ್ಮಸಿದ್ಧ ಹಕ್ಕು ಮತ್ತು ಮೂಲಭೂತ ಹಕ್ಕಾಗಬೇಕು. ಆದರೆ ಇಂದಿನ ಕಲಿಯುಗದಲ್ಲಿ “ಹಣವಿದ್ದವನಿಗೆ ಮಾತ್ರ ಆಯಸ್ಸು, ಇಲ್ಲದವನಿಗೆ ಸಾವು” ಎಂಬ ಕಹಿ ಸತ್ಯ ತಾಂಡವವಾಡುತ್ತಿದೆ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳು ಒಂದು ಕಡೆ ಜೀವ ಹಿಂಡುವ ರೋಗದ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಆ ರೋಗ ತರುವ ಸಾಲದ ಸುಳಿಗೆ ಹೆದರಿ ಪ್ರತಿ ಕ್ಷಣವೂ ಸತ್ತು ಬದುಕುತ್ತಿದ್ದಾರೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕುಲಾಲ ಸಮುದಾಯದ ಹಲವಾರು ಪ್ರಗತಿಪರ ಸಂಘ-ಸಂಸ್ಥೆಗಳು ತಮ್ಮ ಮಿತಿಯಲ್ಲೇ ಧಾವಿಸಿ ಬಂದು ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಸಮಾಧಾನದ ಸಂಗತಿಯಾದರೂ, ಇದು ತಾತ್ಕಾಲಿಕ ಮುಲಾಮಷ್ಟೇ. ನಮಗೆ ಬೇಕಿರುವುದು ರೋಗವನ್ನು ಬುಡ ಸಮೇತ ಕಿತ್ತೆಸೆಯುವ ಶಾಶ್ವತ ಪರಿಹಾರ.
ಸರ್ಕಾರದ ನೆರವಿನ ಯೋಜನೆಗಳನ್ನು ಪಡೆಯಲು ಇರುವ ಕಠಿಣ ಮತ್ತು ಅವೈಜ್ಞಾನಿಕ ನಿಯಮಗಳು ಬದಲಾಗಬೇಕಿದೆ. ನಿರ್ದಿಷ್ಟ ಕಾಯಿಲೆಗಳಿಗೆ ಮಾತ್ರ ಉಚಿತ ಚಿಕಿತ್ಸೆ ಅಥವಾ ಕೇವಲ ಬಿಪಿಎಲ್ ಕಾರ್ಡ್ ಇದ್ದವರಿಗಷ್ಟೇ ಸವಲತ್ತು ಎನ್ನುವ ಕಾನೂನುಗಳು, ಎಲ್ಲೂ ಸಲ್ಲದ ಮಧ್ಯಮ ವರ್ಗದ ಕುಟುಂಬಗಳನ್ನು ಜೀವಂತವಾಗಿ ಹೂತುಹಾಕುತ್ತಿವೆ. ಇಂದು ಸರ್ಕಾರಗಳು ಉಚಿತ ಅಕ್ಕಿ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣದಂತಹ ಹತ್ತಾರು ‘ಭಾಗ್ಯ’ಗಳನ್ನು ಘೋಷಿಸುತ್ತಿವೆ. ಬಡವರ ಹೊಟ್ಟೆ ತುಂಬಿಸುವುದು ಎಷ್ಟು ಮುಖ್ಯವೋ, ಅವರ ಜೀವ ಉಳಿಸುವುದೂ ಅಷ್ಟೇ ಮುಖ್ಯವಲ್ಲವೇ? ಆದ್ದರಿಂದ, ಮಾರಕ ರೋಗಗಳು ಬಂದಾಗ ಬಡವ-ಬಲ್ಲಿದನೆಂಬ ತಾರತಮ್ಯವಿಲ್ಲದೆ, ಉನ್ನತ ದರ್ಜೆಯ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗುವಂತಾಗಬೇಕು. “ಉಚಿತವಾಗಿ ನೀಡಿದರೆ ಜನರು ಸೋಮಾರಿಗಳಾಗುತ್ತಾರೆ” ಎಂಬ ಕ್ರೂರ ಮತ್ತು ಮೊಂಡು ವಾದವನ್ನು ಬದಿಗಿಟ್ಟು, ಜೀವದ ಉಸಿರಾಗಿರುವ ಆರೋಗ್ಯ ಸೌಲಭ್ಯವನ್ನು ಎಲ್ಲರಿಗೂ ತಲುಪಿಸಲು ಸರ್ಕಾರಗಳು ಕಟಿಬದ್ಧವಾಗಬೇಕಿದೆ.
ಕೊನೆಯದಾಗಿ, ನಾವು ಕೇವಲ ಸರ್ಕಾರಗಳನ್ನೇ ನಂಬಿ, ವ್ಯವಸ್ಥೆಯನ್ನು ಶಪಿಸುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಹೃದಯವಂತ ದಾನಿಗಳು, ಪ್ರತಿಯೊಂದು ಸಂಘ-ಸಂಸ್ಥೆಗಳು ಮತ್ತು ಕರುಣೆಯುಳ್ಳ ಪ್ರತಿಯೊಬ್ಬ ನಾಗರಿಕನೂ ಇಂತಹ ಅಸಹಾಯಕ ಜೀವಗಳ ಬೆನ್ನಿಗೆ ಬಂಡೆಯಾಗಿ ನಿಲ್ಲಬೇಕಿದೆ. ನಾವು ನೀಡುವ ಸಣ್ಣ ಸಹಾಯವೂ ಒಂದು ಜೀವವನ್ನು ಉಳಿಸಬಹುದು, ಒಂದು ಇಡೀ ಸಂಸಾರಕ್ಕೆ ಹೊಸ ಬದುಕನ್ನು ನೀಡಬಹುದು. ಮಾನವೀಯತೆಯ ದೃಷ್ಟಿಯಿಂದ ನಾವೆಲ್ಲರೂ ಪರಸ್ಪರ ಕೈಜೋಡಿಸಿ ನಡೆದಾಗ ಮಾತ್ರ, ಚಿಕಿತ್ಸೆಗೆ ಹಣವಿಲ್ಲದೆ ತತ್ತರಿಸುತ್ತಿರುವ ಆ ಬಡ ರೋಗಿಗಳ ಮತ್ತು ಅವರ ಕುಟುಂಬದ ಮುಖದಲ್ಲಿ ಮತ್ತೆ ಭರವಸೆಯ ನಿರಂತರ ನಗು ಮೂಡಲು ಸಾಧ್ಯ. ನಗು ಮೂಡಿಸುವ ಆ ಪುಣ್ಯದ ಕೆಲಸ ಇಂದೇ ನಮ್ಮಿಂದಲೇ ಆರಂಭವಾಗಲಿ.


