ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ನಾವೆಲ್ಲರೂ ನಮ್ಮ ಕುಲಾಲ ಸಂಘವನ್ನು ಕೇವಲ ಒಂದು ಸಂಸ್ಥೆಯಾಗಿ ನೋಡದೆ, ಹೆಮ್ಮೆಯ ಅಸ್ಮಿತೆಯಾಗಿ, ಅತ್ಯಂತ ಗೌರವದಿಂದ ಕಾಣುತ್ತಿದ್ದೇವೆ. ಆದರೆ ಇಂದು ಬಹುತೇಕ ಕಾರ್ಯಕ್ರಮಗಳಲ್ಲಿ ಹಿರಿಯರ ಬಿಳಿ ಕೂದಲಿನ ಅನುಭವಗಳೇ ತುಂಬಿರುತ್ತವೆಯೇ ಹೊರತು, ಕಣ್ಣುಗಳಲ್ಲಿ ನಾಳಿನ ಕನಸು ಹೊತ್ತ ಯುವ ಸಮುದಾಯದ ಹೆಜ್ಜೆಗಳು ಕಾಣುತ್ತಿಲ್ಲ. ಒಂದು ವೇಳೆ ಇಂದಿನ ಯುವ ಜನಾಂಗ ಸಂಘದ ಕಡೆಗೆ ಬಂದರೂ, ಅದು ಸಂಘದ ಮೇಲಿನ ಅಪಾರ ಅಭಿಮಾನದಿಂದಾಗಲಿ ಅಥವಾ ಜಾತಿಯ ಮೇಲಿನ ಗಾಢವಾದ ಪ್ರೀತಿಯಿಂದಾಗಲಿ ಅಲ್ಲ; ಬದಲಿಗೆ ಜಾತ್ರೆಗೆ ಹೋಗಿ ಬರುವ ಶೋಕಿಗಾಗಿ ಮಾತ್ರ. ಹಾಗಾದರೆ, ನಮ್ಮದೇ ರಕ್ತದ ಒರತೆಯಾದ ಈ ಯುವ ಜನಾಂಗ ಇಂದು ಸಂಘದಿಂದ ಇಷ್ಟೊಂದು ದೂರ ಸರಿಯುತ್ತಿರುವುದಕ್ಕೆ ನಿಜವಾದ ಕಾರಣವಾದರೂ ಏನು? ನಾವು ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಬೇಕಾಗಿದೆ.
ಇಂದಿನ ಮಕ್ಕಳು ಹೆತ್ತವರ ಕಣ್ಣೀರನ್ನು ಕಂಡು, ತಮ್ಮ ಸ್ವಪ್ರಯತ್ನದಿಂದಲೇ ಸ್ವಾವಲಂಬನೆಯ ಹಾದಿ ಹಿಡಿಯುತ್ತಿದ್ದಾರೆ. ಹಗಲಿರುಳು ಕಷ್ಟಪಟ್ಟು ಓದಿ, ಇಂದಿನ ಕಠಿಣ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಸಣ್ಣ ಉದ್ಯೋಗ ಗಿಟ್ಟಿಸಿಕೊಳ್ಳಲು ಅವರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆದರೆ, ರೆಕ್ಕೆ ಬಿಚ್ಚಿ ಹಾರಲು ಹೆಣಗಾಡುತ್ತಿರುವ ಈ ಹಕ್ಕಿಗಳಿಗೆ ನಮ್ಮ ಸಂಘಗಳು ನೀಡುತ್ತಿರುವ ಕೊಡುಗೆ ಏನೇನೂ ಇಲ್ಲ ಎನ್ನುವುದೇ ಕಹಿ ಸತ್ಯ. ಕೇವಲ ಅಲ್ಪಸ್ವಲ್ಪ ವಿದ್ಯಾರ್ಥಿವೇತನ ನೀಡಿ ಕೈತೊಳೆದುಕೊಳ್ಳುವುದನ್ನು ಬಿಟ್ಟರೆ, ಅವರ ಬದುಕಿಗೆ ಭದ್ರ ಬುನಾದಿ ಹಾಕುವ, ಉದ್ಯೋಗದ ಹಾದಿ ತೋರುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ನಮ್ಮ ಸಂಘಟನೆಗಳಿಂದ ನಡೆಯುತ್ತಿಲ್ಲ.
ನಮ್ಮ ಹಿರಿಯರು ಸಂಘವನ್ನು ಕಟ್ಟಿದಾಗ ಅವರ ಕಣ್ಣುಗಳಲ್ಲಿ ಒಂದು ಪವಿತ್ರವಾದ ಕನಸಿತ್ತು. ತಮ್ಮ ಮಕ್ಕಳಿಗೆ ಒಳಿತಾಗಲಿ, ಸಮಾಜದ ಕೊನೆಯ ಬಡ ಮಗುವಿಗೂ ಅಕ್ಷರ ದಾಸೋಹ ಸಿಗಲಿ ಎಂದು ಅವರು ಶಿಕ್ಷಣ ಸಂಸ್ಥೆಗಳನ್ನು, ಹಾಸ್ಟೆಲ್ಗಳನ್ನು ಕಟ್ಟಲು ಬಯಸಿದ್ದರು. ಬಡವರ ಮನೆ ಹೆಣ್ಣುಮಕ್ಕಳ ಮದುವೆಗೆ ಆಸರೆಯಾಗುವುದು, ರೋಗಿಗಳ ಕಣ್ಣೀರು ಒರೆಸುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಆದರೆ ಕಾಲ ಉರುಳಿದಂತೆ, ಆ ಮಾನವೀಯ ಮೌಲ್ಯಗಳು ಕರಗಿ ಹೋಗುತ್ತಿವೆಯೇ ಎಂಬ ಆತಂಕ ಮೂಡುತ್ತಿದೆ. ಇಂದು ಸಂಘವು ಕೇವಲ ಉಳ್ಳವರ ಪ್ರತಿಷ್ಠೆಯನ್ನು ಪ್ರದರ್ಶಿಸುವ, ಅಧಿಕಾರದ ಕುರ್ಚಿಗಾಗಿ ಮೇಲಾಟ ನಡೆಸುವ ತಾಣವಾಗಿ ಮಾರ್ಪಡುತ್ತಿದೆ. ಹಿರಿಯರು ಬೆವರು ಸುರಿಸಿ ಖರೀದಿಸಿದ ಪವಿತ್ರ ಜಾಗದಲ್ಲಿ ಇಂದು ವಾಣಿಜ್ಯ ಉದ್ದೇಶದ, ಕೇವಲ ವ್ಯಾವಹಾರಿಕ ಲಾಭ ತರುವ ಭವ್ಯ ಮಹಲುಗಳು ತಲೆ ಎತ್ತಿ ನಿಂತಿವೆ. ಆದರೆ, ಬಡ ಕಡುಬಡವರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ವಿದ್ಯೆ ನೀಡುವ ಒಂದೇ ಒಂದು ಶಿಕ್ಷಣ ಸಂಸ್ಥೆ ನಮ್ಮದಾಗಿ ಉಳಿದಿಲ್ಲ. ಜಾತಿ ಬಾಂಧವರು ತಮ್ಮ ಕಷ್ಟದ ಹಣದಿಂದ ನೀಡಿದ ಲಕ್ಷಾಂತರ ರೂಪಾಯಿಗಳ ದೇಣಿಗೆಯಿಂದ ನಿರ್ಮಾಣವಾದ ಜಗಮಗಿಸುವ ಸಭಾಭವನಗಳು ಇಂದು ಬಡವರ ಕೈಗೆಟುಕದ ನಕ್ಷತ್ರಗಳಾಗಿವೆ. ಕೇವಲ ವಾಣಿಜ್ಯ ಉದ್ದೇಶಕ್ಕೇ ಬಳಕೆಯಾಗುತ್ತಿರುವ ಈ ಕಟ್ಟಡಗಳಿಂದ ಬರುವ ಆದಾಯ ಯಾರ ಹಿತಕ್ಕಾಗಿ ಬಳಕೆಯಾಗುತ್ತಿದೆ ಎಂಬ ಪ್ರಶ್ನೆ ಇಂದು ಯುವಮನಸ್ಸುಗಳನ್ನು ಕಾಡುತ್ತಿದೆ.
ವರ್ಷವಿಡೀ ನಮ್ಮ ಸಂಘಗಳು ಹತ್ತಾರು ಕಾರ್ಯಕ್ರಮಗಳನ್ನು ಸಡಗರದಿಂದ ನಡೆಸುತ್ತವೆ. ಆದರೆ, ಅದೆಲ್ಲವೂ ಕೇವಲ ಕಾಲಹರಣದ ಅಥವಾ ಕ್ಷಣಿಕ ಮನರಂಜನೆಯ ವೇದಿಕೆಗಳಾಗುತ್ತಿವೆಯೇ ಹೊರತು, ಯುವಮನಸ್ಸುಗಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಯಾವುದೇ ಆಲೋಚನೆಗಳು ಅಲ್ಲಿರುವುದಿಲ್ಲ. ಪ್ರತಿ ವರ್ಷವೂ ಸತ್ಯನಾರಾಯಣ ಪೂಜೆ, ಆಟಿಡೊಂಜಿ ದಿನ, ಕೆಸರ್ದಗೊಬ್ಬುಗಳಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳೇ ಪುನರಾವರ್ತನೆಯಾಗುತ್ತಿವೆ. ಸಂಸ್ಕೃತಿಯನ್ನು ಉಳಿಸುವುದು ತಪ್ಪಲ್ಲ, ಆದರೆ ಅದರೊಂದಿಗೆ ಇಂದಿನ ಕಠಿಣ ಬದುಕನ್ನು ಎದುರಿಸಲು ಬೇಕಾದ ಕೌಶಲ್ಯಾಭಿವೃದ್ಧಿ (Skill Development) ಮತ್ತು ಭವಿಷ್ಯದ ಬದುಕಿಗೆ ದಾರಿದೀಪವಾಗುವ ತರಬೇತಿಗಳನ್ನು ನೀಡಲು ನಾವು ಸೋಲುತ್ತಿದ್ದೇವೆ. ನಮ್ಮ ಮಕ್ಕಳಿಗೆ ಕನಿಷ್ಠ ಪಕ್ಷ ಸಂಘದ ವತಿಯಿಂದ ಉಚಿತ ಕೋಚಿಂಗ್ ನೀಡುವುದು, ವೃತ್ತಿಪರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಇಡೀ ರಾಜ್ಯದಲ್ಲಿ ಹೆಮ್ಮೆಯಿಂದ ಹೆಸರಿಸುವಂಥ ಒಂದೇ ಒಂದು ಸಂಘ ನಮ್ಮ ಕಣ್ಣಮುಂದಿದೆಯೇ? ಬದುಕಿನ ಹೋರಾಟದಲ್ಲಿ ಇಷ್ಟೆಲ್ಲಾ ಏಕಾಂಗಿಯಾಗಿರುವ ಯುವ ಜನಾಂಗ, ಸಂಘದ ಕಡೆಗೆ ಏಕೆ ತಾನೇ ಮುಖ ಮಾಡಬೇಕು?
ನೆನಪಿರಲಿ, ಹಳೆ ಬೇರು ಹೊಸ ಚಿಗುರಿನೊಂದಿಗೆ ಸಮರಸವಾಗಿ ಬೆಳೆದಾಗ ಮಾತ್ರ ಆಲದ ಮರ ಸದಾ ಹಸಿರಾಗಿರಲು ಸಾಧ್ಯ. ಇಂದಿನ ಮಕ್ಕಳ ಯೋಚನಾ ಶೈಲಿಯೇ ಬೇರೆ. ಹಳೇಕಾಲದ ಸಾಂಪ್ರದಾಯಿಕ ಚಿಂತನೆಗಳಿಗಿಂತ ಹೆಚ್ಚಾಗಿ, ಅವರಿಗೆ ಇಂದಿನ ತಂತ್ರಜ್ಞಾನ ಯುಗದ ಪ್ರಾಯೋಗಿಕ ನೆರವು ಬೇಕಾಗಿದೆ. ಯುವಜನತೆಯ ಈ ಪ್ರಗತಿಪರ ಆಲೋಚನೆಗಳಿಗೆ ಸಂಘದಲ್ಲಿ ಮುಕ್ತ ಅವಕಾಶವಿರಬೇಕು. ನಮ್ಮ ಯುವ ಸಮುದಾಯ ಇಂದು ಸಕ್ರಿಯವಾಗದಿದ್ದರೆ, ನಾಳೆ ನಮ್ಮ ಹೆಮ್ಮೆಯ ಸಂಘಗಳು ಕೇವಲ ಬಣಗುಡುವ ವಾಣಿಜ್ಯ ಕ್ಲಬ್ಗಳಾಗಿ ಪರಿವರ್ತಿತವಾಗುವ ಅಪಾಯವಿದೆ.
ಕುಲಾಲ ಸಂಘ ಸೇರಿದಂತೆ ಎಲ್ಲಾ ಸಮಾಜದ ಪ್ರಮುಖರು ಈ ಕಹಿ ಸತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಕುಲಾಲ ಯುವ ಜನಾಂಗವನ್ನು ಸಂಘಗಳ ಮೂಲಕ ಸೆಳೆಯಲು ಏನು ಮಾಡಬೇಕೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಶಿಕ್ಷಣಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ನಮ್ಮ ಮಕ್ಕಳು ದೇಶದ ಉನ್ನತ ಹುದ್ದೆಗಳಿಗೆ ಏರುವಂತೆ ಮಾಡಬೇಕಿದೆ. ಕಣ್ಣೀರು ಒರೆಸಿ, ಬದುಕಿಗೆ ದಾರಿ ತೋರುವ ಈ ಕೆಲಸಕ್ಕಿಂತ ಮಿಗಿಲಾದ ಸಮಾಜಸೇವೆ ಮತ್ತೊಂದಿಲ್ಲ. ಉದ್ಯೋಗ ಪಡೆಯಲು ಸಹಾಯ ಮಾಡುವುದು ಮತ್ತು ಯುವಮನಸ್ಸುಗಳಿಗೆ ಆತ್ಮವಿಶ್ವಾಸ ತುಂಬುವುದು ಇಂದಿನ ಎಲ್ಲಾ ಸಂಘ-ಸಂಸ್ಥೆಗಳ ಪರಮ ಕರ್ತವ್ಯವಾಗಲಿ. ಆ ಮೂಲಕ ನಮ್ಮ ಸಮಾಜದ ನಾಳೆಗಳು ಮತ್ತಷ್ಟು ಪ್ರಕಾಶಮಾನವಾಗಲಿ.

ದಿನೇಶ್ ಬಂಗೇರ ಇರ್ವತ್ತೂರು, ಸಂಪಾದಕರು

