ಕಾರ್ತೆಲ್(ಕಾರ್ತಿಂಗಳಿನ) ತಿಂಗಳಿನ ಆರಂಭದಲ್ಲೇ ಸಾಕಷ್ಟು ಸುರಿದು ಕೃಷಿ ಭಿತ್ತನೆ ಕೆಲಸಗಳಿಗೆ ‘ನೀರು’ ಉಣಿಸಬೇಕಿದ್ದ ‘ಮೃಗಶಿರ ಮಳೆ’ ವರ್ಷದ ಖಾಯಂ ಗೋಳು ಎಂಬಂತೆ ಕುಂದನಾಡಿಗೆ ಈ ವರ್ಷವೂ ಬರಲೇ ಇಲ್ಲ. ‘ಬ್ಯಾಸಿ’ ತಿಂಗಳಿನ ಕೊನೆ ದಿನಗಳ ರಣ-ರಣ ಬಿಸಿಲಿನ ‘ಝಳ’ಕ್ಕೆ ಹಿಡಿಶಾಪ ಹಾಕುತ್ತಾ ಬೆವರೊಡೆದ ಹೆಣೆಯ ಮೇಲೆ ಕೈಇಟ್ಟು ತಂಪೆರೆಯುವ ಮೃಗಶಿರ ವರ್ಷಧಾರೆಯ ಬರುವಿಕೆಗೆ ಕುಂದನಾಡಿನ ಜನತೆ ದಿನಾಲು ಬಾನಿನೆಡೆಗೆ ನೋಡಿ ನೋಡಿ ಹನಿಮಳೆಯೂ ಇಲ್ಲದೆ ಮರುಗಿದ್ದೂ ಆಯ್ತು. ‘ಕಾರ್ ತಿಂಗಳು ಹತ್ತು ಹೊದ್ರು ಒಂದ್ಹನಿ ಮಳೆ ಇಲ್ಲಲ ದೇವ್ರೇ..ಹೀಗೆ ಆದ್ರೆ ಈ ವರ್ಷ ಸಾಗುವಳಿ ಮಾಡುವುದು ಹ್ಯಾಂಗೇ ?’ ಎಂದು ಒರಲುತ್ತಾ ಆನೆಗುಡ್ಡೆ ಗಣಪಯ್ಯನಿಗೆ ‘ಮೂಡೆ’ ಹರಕೆಯನ್ನು ಒಪ್ಪಿಸಿ ಬೇಗ ಮಳೆ ಬರುವಂತೆ ಬೇಡಿದ್ದೂ ಆಯ್ತು. ಎಲ್ಲೊ ಇದ್ದ ಕರಿ ಮೋಡಗಳು ಆಗಸದಲ್ಲಿ ತೇಲಿಕೊಂಡು ಬಂದು ಬಿಸಿಲಿನೊಂದಿಗೆ ಕಣ್ಣ ಮುಚ್ಚಾಲೆ ಆಡಿದ್ದೂ ಆಯ್ತು. ‘ಈಗ ನಾಲ್ಕು ಹನಿ ಬಾನಿನಿಂದ ಉದುರಿತು; ಇನ್ನೊಂದು ಘಳಿಗೆಯಲ್ಲಿ ಮಳೆ ಬಂದಿತು’ ಎಂದು ಆಸೆ ಕಂಗಳಲಿ ಕಾದ ಕುಂದನಾಡಿನ ಜನತೆಗೆ ಮೃಗಶಿರ ಋತು ಹನಿಯೂ ಉದುರಿಸದೇ ಬಂದಷ್ಟೆ ವೇಗದಿಂದ ತನ್ನ ಅವಧಿಯನ್ನು ಮುಗಿಸಿದ್ದೂ ಆಯ್ತು. ಆದರೆ ನಿನ್ನೆಯಿಂದ ಆರಂಭಗೊಂಡ ಕಾರ್ತೇಲ್ ತಿಂಗಳಿನ ಎರಡನೇ ವರ್ಷಋತು ‘ಆದ್ರ್ರಾ’ ಮಾತ್ರ ಹಿಡಿದ ದಿನವೇ ಏಕ್ದಂ ‘ಧೋ’ ಎಂದು ‘ಸಂದು’ ಕಡಿಯದಂತೆ ಸುರಿಯಲು ಆರಂಭಿಸಿದ್ದೂ ಆಯ್ತು!
ಇಷ್ಟು ದಿನ ರಣ ಬಿಸಿಲಿಗೆ ಒಣಗಿ ಬರಿದೇ ಕಲ್ಲು ಮಣ್ಣುಗಳಿಂದ ತುಂಬಿ ಸತ್ತ ಹೆಣದಂತೆ ಬಿದ್ದು ಕೊಂಡಿದ್ದ ಕೆರೆ ತೋಡು ದಿನ್ನೆಗಳೆಲ್ಲ ನಿನ್ನೆ ಸುರಿದ ವರ್ಷಧಾರೆಯಿಂದ ಮೈದುಂಬಿ ಯೌವನಕ್ಕೆ ಕಾಲಿಟ್ಟ ಹೆಣ್ಣಿನ ಹಾಗೇ ತಳುಕು ಬಳುಕಿನೊಡನೆ ದಿಮಾಕಿನಿಂದ ಹರಿಯತೊಡಗಿದವು. ಇಷ್ಟು ದಿನ ಬಿಸಿಲಿನ ರಭಸಕ್ಕೆ ಕಾದು ಕಾದೂ ‘ಸೊಡ್ಲ ಗುಡ್ಡಿ’ಯಂತೆ ರಣ ಹೊಡೆಯುತ್ತಾ ಬಿದಿದ್ದ ಬೋಳು ಗುಡ್ಡೆಗಳೆಲ್ಲ ಹಸಿರನ್ನು ಹೊದ್ದು ನಸು ನಾಚುತ್ತ ನಿಲ್ಲಲಾರಂಭಿಸಿದವು. ಅವುಗಳ ಒಡಲ ಗರ್ಭದಿಂದ ಹೊರ ಚಿಮ್ಮಿದ ಮಳೆಗಾಲದ ಮೊದಲ ‘ಉಜರು’ ಬಳುಕುತ್ತ-ಮಂದಹಾಸ ಬೀರುತ್ತ ಗುಡ್ಡದಿಂದ ಕೆಳಮುಖವಾಗಿ ಹರಿಯಲಾರಂಭಿಸಿದವು. ಆ ನೀರಿನ ಒರತೆಯ ಮೂಲವನ್ನರಸುತ್ತಾ ಹೊಳೆಗಳಿಂದ ‘ಚಂಗೆದ್ದು’ ಹೊರಟ ಮುಯಿಡು(ಮುಗುಡು) ಬಾಳೆ, ಕರ್ಶಿ ಮೀನುಗಳು ಮೀನು ಷಿಕಾರಿಗೆ ಕುಳಿತವರ ಪಾಲಾಗುತಿದ್ದವು. ಗೆದ್ದೆ ಬಯಲಿನ ತೋಡು ದಿನ್ನೆಗಳಲ್ಲಿ ನೆಲವನ್ನು ಕೊರೆದು ಆಳದ ‘ತೂತು’ಗಳಲ್ಲಿ ಮನೆ ಮಾಡಿದ್ದ ಕಪ್ಪು ಏಡಿಗಳು ಮೊದಲ ಮಳೆಯ ತಂಪು-ಹನಿಗೆ ಪುಳಕಿತಗೊಂಡು ತಮ್ಮ ಕೊಂಡಿಯನ್ನುರುತ್ತಾ ಹೊರಬಂದದ್ದೆ ತಡ ಪಾಶ ಹಿಡಿದು ಕಾದುನಿಂತ ಯಮ ಕಿಂಕರರ ಹಾಗೆ ಹಿಡಿ ಕತ್ತಿ ಹಿಡಿದು ಕಾಯುತಿದ್ದ ರೈತಾಪಿ ಮಕ್ಕಳು ಗಬಕ್ಕನೆ ಅವುಗಳನ್ನು ಒತ್ತಿಡಿದು ‘ಕುಂ-ಕಾಲು’ಗಳನ್ನು ಲಟಕ್ಕೆಂದು ಮುರಿದು ಕೈಚೀಲದೊಳಗೆ ತುಂಬತೊಡಗಿದವು. ಮೊದಲ ವರ್ಷಧಾರೆಯಿಂದ ಸೊಕ್ಕೆದ್ದ ಕೇರೆ, ಒಳ್ಳೆ, ಕಡಂಬಾಳ ಹಾವುಗಳು ನೀರಲ್ಲಿ ತೇಲುತ್ತಾ ಎದುರಿಗೆ ಸಿಕ್ಕ ಮರಿ ಕಪ್ಪೆಗಳನ್ನು ಗುಳುಂ ಮಾಡುತ್ತಿದ್ದವು..
ಅಂತೂ ‘ಆದ್ರ್ರಾ’ ಮಹಾ ಮಳೆಯ ಮೂಲಕ ಕುಂದ ನಾಡಿಗೆ ವರುಣದೇವ ಗತ್ತು-ಗೈರತ್ತಿನಲ್ಲೆ ಪಾದಾರ್ಪಣೆ ಮಾಡಿದ.
ಮುಂಗೋಳಿಯ ಮೊದಲ ಕೂಗಿಗೆ ಕಣ್ಣುಜ್ಜುತ್ತಾ ಎದ್ದು ಕುಳಿತರು ಮಹಾಬಲ ಪಾತ್ರಿಗಳು. ರಾತ್ರಿಯಿಡೀ ‘ಧೋ’ ಎಂದು ಬಾನಿನಿಂದ ಸುರಿಯುತಿದ್ದ ಮಳೆರಾಯನ ‘ಒಡ್ಡರು’ ಬೆಳಗಾದರೂ ಇನಿತೂ ಕಡಿಮೆಯಾದಂತಿಲ್ಲ. ಕಡುಚಳಿ ಮೈಯನ್ನು ಆವರಿಸಿದ್ದರಿಂದ ಕಪ್ಪು ಕಂಬಳಿಯನ್ನು ಬಿಗಿಯಾಗಿ ಹೊದ್ದೇ ಪಾತ್ರಿಗಳು ಮಂಚದಿಂದ ಕುಂಡೆಯನ್ನು ಜಾರಿಸಿ ಎದ್ದು ನಿಂತರು. ರಾತ್ರಿ ಅದೆಷ್ಟೊತ್ತಿಗೂ ಸೊಂಟದ ಕಪ್ಪು ನೂಲಿನಿಂದ ಬೇರೆಯಾಗಿ ಮಂಚದ ಮೂಲೆ ಸೇರಿದ್ದ ‘ಕೆಂಪು ಕಚ್ಚೆ’ಯನ್ನು ಹುಡುಕಿ ಒಮ್ಮೆ ಕೊಡ್ಕಿ-ಮಡಚಿ ಮತ್ತೆ ತೊಡೆನೂಲಿಗೆ (ಉಡಿದಾರ) ಸಿಕ್ಕಿಸಿ ತಮ್ಮದನ್ನು ಮರೆಮಾಡಿದರು. ರಾತ್ರಿ ಎಷ್ಟೊತ್ತಿಗೊ ಬಿಚ್ಚಿ ಚದುರಿ ಹೋಗಿದ್ದ ಮುಷ್ಟಿಯಷ್ಟೂ ಇಲ್ಲದ ತಮ್ಮ ಬಿಳಿ ತುರುಬನ್ನು ಒಮ್ಮೆ ಎರಡು ಕೈಯಿಂದ ಜೋಡಿಸಿ ‘ಅಂಬಡೆ’ ಬಿಗಿದರು. ಹುಟ್ಟು ಚಾಳಿಯಂತೆ ಕಿವಿಯಲ್ಲಿ ನೇತಾಡುತಿದ್ದ ಚಿನ್ನದ ‘ಒಂಟಿ’ಯನ್ನು ಹಾಗೇ ನೇವಿಕೊಂಡರು. ರಾತ್ರಿ ಮಲಗುವಾಗ ಬಿಚ್ಚಿ ಅಲ್ಲೆ ‘ನ್ಯಾಲಿ’ಗೆ ಸಿಕ್ಕಿಸಿದ್ದ ಪಾಣಿ ಪಂಚೆಯನ್ನು ಸೊಂಟಕ್ಕೆ ಬಿಗಿದು “ಹೇ ಕಲ್ಕುಡ್ಕ ನೀನೆ ಕಾಪಾಡಪ್ಪ” ಎನ್ನುತ್ತಾ ಅಡಿಗೆ ಮನೆ ಕಡೆಗೆ ಹೆಜ್ಜೆಯನಿಟ್ಟರು.
ಮಹಾಬಲ ಪಾತ್ರಿಗಳದ್ದು ಮಕ್ಕಳಿಲ್ಲದ ಒಬ್ಬಂಟಿ ಬದುಕು. ಹೆಂಡತಿ ಪಾರೋತಿಯೂ ತೀರಿ ಹೋಗಿ ವರ್ಷ ಸಂದಿತ್ತು. ಸತ್ತ ಮೇಲೆ ತಮ್ಮ ದೇಹಕ್ಕೆ ಕೊಳ್ಳಿ ಇಡುವುದಕ್ಕಾದರೂ ಒಂದು ಸಂತತಿ ಬೇಕಿತ್ತು ಎಂಬ ಪಾತ್ರಿ ದಂಪತಿಗಳ ಆಸೆಯನ್ನು ಧರ್ಮಸ್ಥಳದ ಅಣ್ಣಪ್ಪ ದೇವ್ರು ಕೊನೆಗೂ ನೆರವೇರಿಸಲೇ ಇಲ್ಲ. ‘ಇವಳು ಬರೀಯ ಗೊಡ್ಡು ಹೆಂಗಸು’ ಎಂಬ ಊರವರ ಚುಚ್ಚುಮಾತಿಗೆ ಕೊರಗಿ ಮರುಗಿ ಪಾರೋತಿ ಮುಪ್ಪಡರುವ ಮೊದಲೆ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಳು. ‘ಪಾತ್ರಿಗಳೆ..ದೇವರಿಗೆ ತಲೆ ಬಿಟ್ಟ ಮೇಲೆ ನಿಮಗೆ ಮಕ್ಕಳಾಗುವುದುಂಟಾ..ಅದಕ್ಕೆ ಬೇಜಾರು ಮಾಡ್ಕಂಬುಕೆ ಆಗ??’ ಎಂದು ಜನ ಆಗಾಗ್ಗೆ ವ್ಯಂಗ್ಯ ಮಾಡುತ್ತಾರೋ, ಸಮಧಾನ ಪಡಿಸುತ್ತಾರೋ ಪಾತ್ರಿಗಳಿಗೆ ಇನ್ನೂ ಸಮ ತಿಳಿಯ.! ಆದರೂ ಕೇಳಿದವರಿಗೆಲ್ಲ‘ನಾನು ಪಡ್ಕೊಂಡು ಬಂದದ್ದಿಷ್ಟೆ..ಆ ಅಣ್ಣಪ್ಪ ಹೇಗೆ ನೆಡೆಸ್ತಾನೋ ಹಾಗೇ ಬದುಕು ನೆಡೀಲಿ’ಎಂದು ಮಂದಿ ಮುಂದೆ ನಿಟ್ಟುಸಿರು ಬಿಡುವುದುಂಟು.
ಕಪ್ಪು ಕಂಬಳಿಯನ್ನು ಬಿಗಿಯಾಗಿ ಹೊದ್ದೆ ಅಡಿಗೆ ಮನೆಗೆ ಹೆಜ್ಜೆಯನ್ನಿಟ್ಟ ಪಾತ್ರಿಗಳು ಅಲ್ಲೆ ಒಲೆ ಬೂದಿಯಲ್ಲಿ ಹುದುಗಿದ್ದ ಮಸಿಯ ತುಂಡನ್ನು ತೆಗೆದು ವೀಳ್ಯದ ಕೆಂಪು ಕಟ್ಟಿ ಹುಳು ಹಿಡಿದಿರುವ ತಮ್ಮ ಹಲ್ಲುಗಳಿಗೆ ತಾಗಿಸಿ ಗಸ ಗಸನೇ ಉಜ್ಜಿದರು. ಮಡಿಕೆಯಲ್ಲಿದ್ದ ನೀರನ್ನು ಬಾಯಿತುಂಬ ತುಂಬಿಕೊಂಡು ಗುಜು ಗುಜು ಮಾಡಿ ಊಪ್ ಎಂದು ಹೊರಕ್ಕೆ ಉಗಿದರು. ಅಲ್ಲೆ ಬಾಲ್ದಿಯಲ್ಲಿ ತುಂಬಿದ್ದ ಮಳೆ ನೀರನ್ನು ಮುಖಕ್ಕೆ ಚಿಮ್ಮಿಕೊಂಡು ಒಳಬಂದರು. ಒಲೆಯ ಬಲ ಮೂಲೆಯಲ್ಲಿ ತಂದಿಟ್ಟ ತೆಂಗಿನ ಒಣ ಓಲೆ, ಸೌದೆ ಸಧೆಗಳನು ಮುರಿದು ಒಲೆಯೊಳಗೆ ದೂಡಿ ಚಿಮಣಿ ಬಿರಡೆಯನ್ನು ತಿರುಗಿಸಿ ಸೀಮೆಎಣ್ಣೆಯನ್ನು ಚೆಲ್ಲಿದರು. ಕಡ್ಡಿಯನ್ನು ಗೀರಿ ಒಲೆಯೊಳಗೆ ಎಸೆದಾಕ್ಷಣ ಭಗ್ ಎಂದು ಬೆಂಕಿ ಹೊತ್ತಿತು. ಅಲ್ಲೆ ಒಲೆ ದಂಡೆಯಲಿಟ್ಟಿದ್ದ ಚಹ ಹುಡಿಯ ಕಪ್ಪು ಹಿಡಿದಿದ್ದ ಕೈ ಪಾತ್ರೆಯನ್ನು ಹತ್ತಿರಕ್ಕೆಳೆದು ಎರಡು ಲೋಟ ನೀರೆರೆದು ಒಲೆಯ ಮೇಲಿಟ್ಟರು. ಅಲ್ಲೆ ಹತ್ತಿರದಲ್ಲಿದ್ದ ಚಹಪುಡಿಯ ಡಬ್ಬ ತೆರದು ತಳ ಸೇರಿದ್ದ ಪುಡಿಯನ್ನು ಚಮಚದಿಂದ ಕೆರೆದು ಒಟ್ಟು ಸೇರಿಸಿ ಎರಡು ಚಮಚ ಮಾಡಿ ನೀರಿಗೆಸೆದರು. ಸೌದೆ ಮೂಲೆಯಲ್ಲಿದ್ದ ಮತ್ತಷ್ಟು ಸೌದೆಗಳನ್ನು ಮುರಿದು ಒಲೆಯೊಳಗೆ ನೂಕಿದರು. ಹಲ್ಲೆ ಹತ್ತಿರದಲ್ಲಿದ್ದ ‘ಬಿದಿರಿನ ಓಂಟೆ’ಯನ್ನು ಒಲೆಯೊಳಗೆ ಹಿಡಿದು ಊಪ್..ಊಪ್ ಎಂದು ಊದಿದರು. ಅದೇ ಬಿದಿರಿನ ಓಂಟೆಯನ್ನು ಮುಕುಳಿಯಡಿ ಜಾರಿಸಿ ಕುಕ್ಕುರುಗಾಲಿನಲ್ಲಿ ಕುಳಿತು ಚಳಿ ಕಾಯಿಸಹತ್ತಿದರು.
ಕಿಚ್ಚು ದಗ ದಗನೆ ಉರಿಯಿತು; ಪಾತ್ರಿಗಳ ಬಡ ಒಡಲೊಳಗೆ ಹೊತ್ತಿ ಉರಿಯುತಿದ್ದ ಚಿಂತೆಯೆಂಬ ಕಿಚ್ಚಿನ ಹಾಗೇ.!!
ಸತ್ಯವಾಗಿ ಹೇಳುವುದಾದರೆ ಪಾತ್ರಿಗಳಿಗೆ ಈಗ ದಿನದ ಹೊಟ್ಟೆ ಬಟ್ಟೆ ತುಂಬಿಸಿಕೊಳ್ಳುವುದೇ ಕಷ್ಟ ಎನ್ನವ ಸ್ಥಿತಿ. ಸೌಟು ಗಂಜಿಗೆ, ಚೂರು ಉಪ್ಪಿಗೆ, ನಾಲ್ಕು ಮೆಣಸಿಗೂ ಹರಹರ ಎನ್ನುವ ಬಡತನದ ಬೇಗುದಿಯಲ್ಲಿ ಅವರ ಮುದಿ ಬದುಕು ಒಂಟಿಯಾಗಿ ಸಾಗುತ್ತಿದೆ.
ಮಹಾಬಲ ಪಾತ್ರಿಗಳು ಕಲ್ಲುಕುಟಿಕ ದೈವಕ್ಕೆ ತಲೆ ಬಿಟ್ಟ ಜನ. ದೈವ ದರ್ಶನ ಮಾಡುವುದನ್ನೆ ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡವರು. ಪಾತ್ರಿಗಳು ಅಂತ ಕರೆಸಿಕೊಂಡ ಅದಕ್ಕೊಂದಿಷ್ಟು ನೇಮ-ನಿಷ್ಟ, ಆಚಾರ-ವಿಚಾರ ಎಂಬುದುಂಟು, ತಲೆಯ ಮೇಲೆ ಹೊರೆ ಹೊರುವುದಾಗಲಿ, ಹೊಲಸು ಮಾತನಾಡುವುದಾಗಲಿ ಯಾ ಕೇಳಿಸಿಕೊಳ್ಳುವುದಾಗಲಿ ಹಿಂಸೆ ರಹಿತ ವೃತ್ತಿಯಾಗಲಿ ಪಾತ್ರಿಗಳಿಗೆ ನಿಷಿದ್ಧ. ಹಾಗಾಗಿ ದರ್ಶನದ ಆದಾಯವೊಂದೆ ಬದುಕಿಗೆ ಆಧಾರ ಎಂಬಂತೆ ಪಾತ್ರಿಗಳು ಗಟ್ಟಿಯಾಗಿ ನಂಬಿ ಕೂತವರು.
ಒಂದ್ಹತ್ತು ವರ್ಷಗಳ ಹಿಂದಿನ ಮಾತು ಹೇಳುವುದಾದರೆ ಮಹಾಬಲ ಪಾತ್ರಿಗಳು ದರ್ಶನದ ಆದಾಯದಲ್ಲೆ ಗಂಡ ಹೆಂಡತಿಯ ಊಟ ಉಪ್ಪಿನಕಾಯಿಗಾಗುವಷ್ಟು ‘ಸುಧಾರಿಸುವಿಕೆ’ಯ ಆದಾಯವನ್ನು ಮಾಡಿಕೊಳ್ಳುತ್ತಿದ್ದವರು. ತಿಂಗಳಿಗೆ ಏನಿಲ್ಲವೆಂದರೂ ಹತ್ತನ್ನೆರಡು ಕಡೆ ದರ್ಶನದ ವೀಳ್ಯ ಬರುತ್ತಿತ್ತು. ಸಾಕಷ್ಟು ಆದಾಯವೂ ಅದರಿಂದ ಲಭ್ಯವಾಗುತ್ತಿತ್ತು. ಹೆಂಡತಿ ಪಾರೋತಿಯು ಬದುಕಿದ್ದಷ್ಟೂ ದಿನ ಊರ ಒಡೇರು ಅಪ್ಪಣ್ಣ ಹೆಗ್ಗಡೇರ ಮನೆಯ ‘ಹಟ್ಟಿ’ ಗೆ ಸೊಪ್ಪು ಕೊಯ್ದು ಹಾಕುವ ಹೆಣ್ಣಾಳುವಾಗಿ ದುಡಿದವಳು. ಅದರಲ್ಲೆ ವರ್ಷಯಿಡಿ ಉಣ್ಣುವಷ್ಟು ‘ಪಡಿಅಕ್ಕಿ’ಯನ್ನು ಒಟ್ಟು ಮಾಡಿ ಕೂಡಿಡುತ್ತಿದ್ದವಳು.
ಅದೂ ಅಲ್ಲದೆ ಕಲ್ಲುಕುಟಿಕ ದೈವದ ದರ್ಶನಕ್ಕೆ ಮಹಾಬಲ ಪಾತ್ರಿಗಳನ್ನು ಮೀರಿಸುವ ಜನ ಆ ಊರಿನಲ್ಲಿ ಯಾರು ಇರಲಿಲ್ಲ. ಪಾತ್ರಿಗಳು ಕೆಂಪು ಕಚ್ಚೆ ಹಾಕಿ, ಕುಂಕುಮ ತಿಕ್ಕಿ, ಕಾಲ್ಗಡಗ ಧರಿಸಿ, ಬೆಳ್ಳಿಯ ಕಟ್ಟು ಕಟ್ಟಿಸಿದ ಬಿದರು ಬೆತ್ತವನ್ನು ಹಿಡಿದು ಕಲ್ಲುಕುಟಿಕ ದರ್ಶನಕ್ಕೆ ನಿಂತರೆಂದರೆ ಇಡೀ ಊರಿಗೆ ಊರೇ ಕರ ಜೋಡಿಸಿ ಭಯ-ಭಕ್ತಿಯಿಂದ ವೀನಿತವಾಗಿ ನಿಲ್ಲುತಿತ್ತು. ಹಾಗಗಿಯೇ ‘ಕಲ್ಕುಡ್ಕನ ದರ್ಶನ ಮಾಡ್ಬೇಕು ಎಂದರೆ ಅದಕ್ಕೆ ಮಹಾಬಲ ಪಾತ್ರಿಗಳೇ ಸಮಾ ಜನ’ ಎಂಬ ಮಾತು ಊರಿನಲ್ಲಿ ಪ್ರಚಲಿತದಲ್ಲಿತ್ತು. ಪಾತ್ರಿಗಳ ನುಡಿಯು ಅಷ್ಟೆ ಖಡಕ್.! ಹತ್ತು ತಲೆಮಾರಿನ ಹಿಂದೆ ಹಾಕಿದ್ದ ‘ಆಣೆ’ ಭಾಷೆಯನ್ನೊ, ನಾಗನ ಕಾಲಡಿ ಸಿಕ್ಕ ಜಕ್ಣಿಯನ್ನೊ, ಅನ್ನಿರಲ್ಲದೆ (ಅನ್ನ-ನೀರಿಲ್ಲದೆ) ಅಲೆಯುತಿದ್ದ ಪಿಶಾಚವನ್ನೊ, ಹೀನ ಗಣಗಳ ಕಾಲಡಿ ಸಿಕ್ಕ ಕುಟುಂಬದ ಶಿಶು ಮಗನನ್ನೊ, ಮಾಟ ಮಂತ್ರಗಳಿಗೆ ಒಳಗಾಗಿ ಭಾಧೆ ಪಡುತ್ತಿದ್ದ ಕುಟುಂಬದ ಕರುಳ ಬಳ್ಳಿಯನ್ನೊ ತೊರಿಸಿಕೊಟ್ಟು ಅದಕ್ಕೆ ತಕ್ಕ ಪರಿಹಾರವನ್ನು ದೈವ ನುಡಿಯಲ್ಲಿ ಖಡಕ್ಕಾಗಿ ಅರುಹಿ ಕುಟುಂಬದ ಎಲ್ಲರು ‘ಅಹುದಹುದು’ ಎಂದು ತಲೆದೂಗುವಂತೆ ಮಾಡುತ್ತಿದ್ದರು, ಪರಊರಿನಲ್ಲಿ, ಪರದೇಶದಲ್ಲಿ ಬೀಡುಬಿಟ್ಟಿದ್ದ ಕುಟುಂಬ ಮೂಲದ ಎಲ್ಲ ಶಿಶುಗಳನ್ನು ಕಾಪಾಡುವ ಭರವಸೆ ನೀಡಿ ಕುಟುಂಬದ ಎಲ್ಲರು ‘ಸಂಪ್ರೀತ’ರಾಗುವಂತೆ ಮಾಡಿಯೇ ದರ್ಶನದಿಂದ ಹಿರಿಯುತಿದ್ದರು. ಅದಕ್ಕೆ ತಕ್ಕುದಾದ ಆದಾಯವನ್ನು ವೀಳ್ಯದೆಲೆಯಲ್ಲಿ ಗೌರವದಿಂದ ಸ್ವೀಕರಿಸಿ ಕುಟುಂಬದ ಯಜಮಾನನ್ನು ಹರಸಿ ಬಿಚ್ಚಿದ ಮುಡಿಯನ್ನು ಬಿಗಿದು ಕಟ್ಟುತ್ತಾ ಬಗಲಿಗೆ ದರ್ಶನದ ಚೀಲ ಏರಿಸಿ ನೆಮ್ಮದಿಯಿಂದ ಮನೆ ಸೇರುತಿದ್ದರು.
ಆದರೆ ‘ಮೊದಲಿನ ಕಾಲವಲ್ಲ;ವಂಡಾರು ಕಂಬಳವಲ್ಲ’ ಎಂಬ ಕುಂದ ಗಾದೆಯ ಹಾಗೇ ಮಹಾಬಲ ಪಾತ್ರಿಗಳ ಕಣ್ಣೆದುರೆ ಕಾಲ ಬದಲಾಗಿ ಹೋಗಿದೆ. ಕುಂದನಾಡಿನ ಈಗಿನ ಜನ ಶಾಲಾ-ಕಾಲೇಜು ಮೆಟ್ಟಿಲನ್ನ ಹತ್ತಿ ವಿದ್ಯಾವಂತರಾದ ಹಾಗೇಯೇ ಈ ದೈವ, ದರ್ಶನ, ಭೂತಗಳ ಮೇಲಿನ ನಂಬುಗೆಯನ್ನು ಕಡಿಮೆಗೊಳಿಸುತ್ತಾ ಬಂದಿದ್ದಾರೆ. ಕೆಲವರೂ ತಮ್ಮ ಭಕ್ತಿಯನ್ನು ರೂಪಾಂತರಗೊಳಿಸಿದ್ದಾರೆ. ಹಿಂದೆಲ್ಲ ಕುಟುಂಬದ ಯಾವ ಮಗುವಿಗೆ ಏನೇ ಭಾದಕ ಬಂದರೂ ಮೊದಲು ಪಾತ್ರಿಗಳ ಮನೆಗೆ ಓಡಿ ಬಂದು ‘ನಿಮಿತ್ಯ’ ಕೇಳಿ ದರ್ಶನಕ್ಕೆ ವೀಳ್ಯ ನೀಡುತ್ತಿದ್ದವರು ಈಗ ಸೀದಾ ಆಸ್ಪತ್ರೆಯ ದಾರಿ ಹಿಡಿದಿದ್ದಾರೆ. ಅಪರೂಪಕ್ಕೊಮ್ಮೆ ಪಾತ್ರಿಗಳನ್ನ ಹುಡುಕಿ ಬರುತಿದ್ದ ಮೀಸೆ ಹಣ್ಣಾದ ಮಂದಿಗೂ ಸಹ ‘ನಿಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲವಾ? ಮಗನಿಗೆ ಭೂತ ಮೆಟ್ಟಿದೆ ಅಂತ ಪಾತ್ರಿಳ ಮನೆಗೆ ಓಡ್ತೀರಾ? ಇದು ಭೂತದ ಉಪದ್ರವೂ ಅಲ್ಲ, ಗಾಳಿ ಚೇಷ್ಟೆಯೂ ಅಲ್ಲ. ಮೊದಲು ಕುಂದಾಪುರದಲ್ಲೊ ಉಡುಪಿಯಲ್ಲೊ ಇರುವ ಮಾನಸಿಕ ವೈದ್ಯರನ್ನು ಕಾಣಿ. ಎಲ್ಲ ಸಮಾ ಆಗುತ್ತೆ’ ಅನ್ನುವ ಸಲಹೆಯನ್ನು ಈಗಿನ ಯುವಕರು ಕೊಡುತ್ತಾರೆ. ಅವರ ಆ ಸಲಹೆ ಎಷ್ಟೂ ಸಲ ಸರಿಯಾಗಿಯೂ ಇರುತ್ತದೆ ಅನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಇನ್ನೆಲ್ಲಿ ಪಾತ್ರಿಗಳ ಅಗತ್ಯ ಈ ಜನಕ್ಕೆ ಬಂದಿತು.? ಮುಂಚೆಲ್ಲ ‘ಸಮಾ ಮೀಸೆ ಬರದ ಮಕ್ಕಳ ಮಾತುಗಳನ್ನ ಕೇಳಿ ಹಿರಿಯರಾದ ನೀವೇ ಈ ಭೂತ ದೈವಗಳಿಗೆ ಕಾಲ ಕಾಲಕ್ಕೆ ನೀಡಬೇಕಿದ್ದ ನ್ಯಾಮ, ಪೂಜೆ-ಪುನಸ್ಕಾರಗಳನ್ನು ಮುಕುಳಿಯಡಿ ಹಾಕ್ಕೊಂಡು ಕೂತೀರಿ..ನಿಮ್ಮ ಇಡೀ ಸಂಸಾರ ನಿರ್ನಾಮ ಆಗದೆ ಇದ್ರೆ ಮತ್ತೆ ಹೇಳಿ’ಎಂದು ಗರಂ ಆಗಿ ಉರಿಯುತಿದ್ದ ಪಾತ್ರಿಗಳು ಹಾಗೇನೂ ಆಗದೆ ಎಲ್ಲ ಕುಟುಂಬಗಳು ಐಷರಾಮಿ ಬದುಕು ನೆಡೆಸುವುದನ್ನ ನೋಡಿ ತಮ್ಮೊಳಗೆ ಹಲುಬಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಆಧುನಿಕತೆಯ ಗಾಳಿ ಕುಂದನಾಡಿನ ಹಳ್ಳಿ ಹಳ್ಳಿಯನ್ನು ಇವತ್ತು ಪ್ರವೇಶಿಸಿದ ಪರಿಣಾಮವಾಗಿ ದೈವ-ದರ್ಶನ ಸೇವೆಗಳು ತನ್ನ ಮೌಲ್ಯವನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತಿವೆ. ಕೆಲ ಜನರು ಜಾಸ್ತಿ ಖರ್ಚು ವೆಚ್ಚ ಮಾಡಿಕೇರಳದಿಂದ ನಂಬೂದರಿಗಳನ್ನು ಕರೆತಂದು ಆರೂಡವೂ, ಅಷ್ಟಮಂಗಲವೂ ಇಟ್ಟು ತಮ್ಮ ಧಾರ್ಮಿಕ ನಂಬುಗೆಯನ್ನು ‘ಪ್ರದರ್ಶನಕ್ಕೆ’(!) ಇಡುತ್ತಿದ್ದಾರೆ. ಕಲ್ಕುಡ್ಕ, ಹಾಯಿಗುಳಿ, ಅಮ್ನರು ಎಂಬೆಲ್ಲ ಕುಂದ ನಾಡಿನ ದೈವಗಳ ದರ್ಶನ ಮಾಡುವುದನ್ನೆ ಬದುಕಿನ ಕಾಯಕವನ್ನಾಗಿ ಸ್ವೀಕರಿಸಿದ ಮಹಾಬಲ ಪಾತ್ರಿಗಳಂತಹ ‘ದೈವ ಕೊರಡುಗಳು’ ಬೀದಿಗೆ ಬಿದ್ದವೆ. ಇದು ಆಧುನಿಕ ಜಗತ್ತಿನ ತಲವಾರಿಗೆ ಸಿಕ್ಕಿ ಕೊಲೆಯಾಗುತ್ತಿರುವ ಹಲವು ಗ್ರಾಮ್ಯ ನಂಬುಗೆ ಆಚರಣೆಗಳಲ್ಲಿ ಒಂದಷ್ಟೆ!
ಬದಲಾದ ಈಗಿನ ಆಧುನಿಕ ಬದುಕು ತಮ್ಮ ಊಟದ ಬಟ್ಟಲನ್ನೆ ಕಸಿದಿದೆ ಎನ್ನುವುದನ್ನು ವಿಮರ್ಶಿಸುವಷ್ಟು ಪ್ರೌಢಿಮತೆ ಇರದ ಪಾತ್ರಿಗಳು ‘ಹಾಗಾದ್ರೆ ನಾನಿಷ್ಟು ದಿನ ನಂಬ್ಕೊಂಡು ಬಂದ ದೈವ ಸುಳ್ಳಾ, ದೇವರು ಸುಳ್ಳಾ’ ಎಂದು ನೋವಿನಿಂದ ಪ್ರಶ್ನಿಸಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ಬೀಡಿ ಸೇದುವ ಆಸೆಯಾಗಿ ಹಾಡಿಮನೆ ರಘುರಾಮನ ಅಂಗಡಿಗೆ ಹೋದರೆ ಅವರಷ್ಟೆ ಪ್ರಾಯದ ಅಜ್ಜಂದಿರು ಯಾರಾದರೂ ಸಿಕ್ಕರೆ ‘ಇದು ಕಲಿಯುಗದ ಅಂತ್ಯಕಾಲ. ಈಗಿನ ಮಕ್ಕಳಿಗೆ ದೇವರು-ದಿಂಡಿರು, ಹಿರಿಯರು ಹೆಂಗಸರ ಮೇಲೆ ಚೂರು ಭಯವೇ ಇಲ್ಲ ಮಹರಾಯ್ರೆ..ನಾ ಖಂಡಿತಾ ಹೇಳ್ತೆ..ಪ್ರಳಯಕ್ಕಿನ್ನೂ ಜಾಸ್ತಿ ದಿನ ಇಲ್ಲ’ ಎಂದು ತಮ್ಮ ಹೃದಯೊದಳಗೆ ಮಡುಗಟ್ಟಿರುವ ಸಾತ್ವಿಕ ಸಿಟ್ಟನ್ನು ಅಭಿವ್ಯಕ್ತಿಸುತ್ತಾರೆ. ಇನ್ಯಾವುದಾದರೂ ಹೊಸ ಉದ್ಯೋಗವನ್ನು ಹಿಡಿದು ಬದುಕು ಕಟ್ಟಿಕೊಳ್ಳುವುದಕ್ಕೂ ಸಾಧ್ಯವಾಗದೆ; ಸಾಧ್ಯವಾದರೂ ದೇಹದಲ್ಲಿ ಕುಸುವಿಲ್ಲದೆ ಮುಪ್ಪಡರಿದ ಮಹಾಬಲ ಪಾತ್ರಿಗಳು ಸೌಟು ಗಂಜಿಗೂ ತತ್ವಾರ ಪಡುವ ಸ್ಥಿತಿಗೆ ಬಂದು ಮುಟ್ಟಿದ್ದಾರೆ.
ದಗ ದಗನೇ ಉರಿಯುತಿದ್ದ ಕಿಚ್ಚಿಗೆ ತಮ್ಮ ಮುಪ್ಪಿನ ಕಾಯನ್ನೊಡ್ಡಿ ಚಳಿಕಾಯಿಸುತ್ತಾ ಕುಕ್ಕುರುಗಾಲಿನಲ್ಲಿ ಕುಳಿತು ಯೋಚನಾ ಮಗ್ನರಾದ ಪಾತ್ರಿಗಳ ಕಣ್ಣಿನಿಂದ ಅದ್ಯಾಕೋ ಕಂಬನಿಯ ಬಿಂದುವೊಂದು ಮೆಲ್ಲಗೆ ಕೆಳಜಾರಿತು. ಉರಿದು ಹಿಂದೆ ಬಂದಿದ್ದ ಸೌಧೆ-ಸಧೆ-ಚೆಪ್ಪುಗಳನ್ನು ಮುಂದಕ್ಕೆ ದೂಡಿ ಅಲ್ಲೆ ಹತ್ತಿರದಲ್ಲಿ ಬಿದ್ದಿದ್ದ ಮಸಿಅರಿವೆಯನ್ನು ಎಳೆದು ಒಲೆಯ ಮೇಲೆ ಕುದಿಯುತಿದ್ದ ಚಹವನ್ನು ಕೆಳಗೆ ಇಳಿಸಿದರು. ಸಕ್ಕರೆಯ ನೆನಪಾಗಿ ಡಬ್ಬ ತೆಗೆದು ನೋಡಿದರೆ ಸಕ್ಕರೆ ಖಾಲಿಯಾಗಿ ಮೂರುದಿನ ಆಗಿದ್ದರ ನೆನಪಾಗಿ ಮತ್ತಲ್ಲಿಗೆ ಆ ಡಬ್ಬವನ್ನು ದೂಡಿ ‘ಕಣ್ಣು-ಚಹ’ ವನ್ನು ಲೋಟಕ್ಕೆ ಬಗ್ಗಿಸಿದರು. ‘ನನ್ನ ಬದುಕಿಗಿಷ್ಟು ಬೆಂಕಿ ಹಾಕ. ಅತ್ಲಾಗೆ ಬೇಗ ಸಾವೂ ಬರುವುದಿಲ್ಲ. ಎಲ್ಲ ನನ್ನ ಬದುಕಿನ ಕರ್ಮ..ಅನುಭವಿಸ್ಬೇಕು’ ಅನ್ನುತ್ತಾ ಬಾಯಿಗಿಷ್ಟು ಎರೆದುಕೊಂಡು ಪಾತ್ರೆಯನ್ನು ಅಲ್ಲೆ ದೂಡಿ ಮೇಲೆದ್ದು ಅಡಿಗೆ ಕೋಣೆಯಿಂದ ಹೊರಗೆ ಬಂದರು.
ದೇವರ ಕೋಣೆಯ ಬಲ ಬದಿಯ ಗೋಡೆಗೆ ಹೊಡೆದು ನಿಲ್ಲಿಸಿದ್ದ ಕಪ್ಪಗಿನ ಮರದ ಕಪಾಟಿನಲ್ಲಿಟ್ಟಿದ್ದ ದೇವರ ಗಂಟನ್ನು ಮೆಲ್ಲಗೆ ಕೆಳಗಿಳಿಸಿದರು. ದರ್ಶನ ಸೇವೆ ಇಲ್ಲದೆ ದೂಳು ಹಿಡಿದಿದ್ದ ತಮ್ಮ ‘ಕೆಂಪು ಪಟ್ಟೆ’ಯನ್ನು ಒಮ್ಮೆ ಅರಳಿಸಿ, ಮೂರ್ನಾಲ್ಕು ಬಾರಿ ಕೊಡ್ಕಿ ಬಗಲಿಗೆ ಹಾಕೋ ಚೀಲಕ್ಕೆ ತುಂಬಿದರು. ದೇವರ ಗಂಟಿನ ಅಡಿಯಲ್ಲಿ ಜಾಗ್ರತೆಯಲ್ಲಿ ಕಟ್ಟಿಟ್ಟಿದ್ದ ಸೊಂಟ ಪಟ್ಟಿ, ಕಾಲ್ಕಡಗ, ‘ಚಲ್ಹಣ ಗೆಜ್ಜೆ’ಯ ಗಂಟನ್ನು ನಾಜೂಕಾಗಿ ತೆಗೆದು ಚೀಲದೊಳಗೆ ಸೇರಿಸಿದರು. ಅಲ್ಲೆ ಗೋಡೆಯ ಸಂಧಿಯಲ್ಲಿ ಸಿಕ್ಕಿಸಿದ್ದ ‘ಶೇಡಿಉಂಡೆ’ಯನ್ನು ಕಾಗದದಲ್ಲಿ ಸುತ್ತಿ ಚೀಲದೊಳಗೆ ನೂಕಿದರು. ತಮ್ಮ ಮುಡಿಯನ್ನು ಒಮ್ಮೆ ಬಿಚ್ಚಿ ಮತ್ತೆ ಬಿಗಿದು ಕಟ್ಟಿದರು. ಅಲ್ಲೆ ನ್ಯಾಲಿಗೆ ಸಿಕ್ಕಿಸಿದ್ದ ಲುಂಗಿಯನ್ನೆಳೆದು ಸುತ್ತಿಕೊಂಡು ಬಿಳಿ ಅಂಗಿಯನ್ನು ತೊಟ್ಟು ದರ್ಶನ ಚೀಲವನ್ನು ಹೊಗಲಿಗೆ ಏರಿಸಿ ಮನೆಯ ಬಾಗಿಲ ಅಲುಗನ್ನೆಳೆದು ಹೊರ ಬಂದರು.
ಸುಮಾರು ಆರು ತಿಂಗಳ ನಂತರ ಬೈಲ ಮನೆ ಶೀನ ಹಾಂಡರ ಮನೆಯಲ್ಲಿ ಇವತ್ತೊಂದು ಕಲ್ಲುಕುಟಿಕ ದರ್ಶನ ಮಾಡಿಕೊಡುವಂತೆ ಪಾತ್ರಿಗಳಿಗೆ ವೀಳ್ಯ ಬಂದಿತ್ತು. ಅದು ಕಾರ್ತೇಲ್ ತಿಂಗಳಿನ ಆರಂಭದಲ್ಲಿ ಕುಂದನಾಡಿನ ಎಲ್ಲರ ಮನೆಗಳಲ್ಲಿ ನೆಡೆಯುವ ‘ಜಕ್ಣಿ’ ಸಂಪ್ರದಾಯದಿಂದ ಮಾತ್ರ. ಜಕ್ಣಿ ಅಂತ ಮಾಡಿದ ಮೇಲೆ ಕಲ್ಲುಕುಟಿಕನ ದರ್ಶನ ಮಾಡುವುದು ಕೆಲವು ಹಿರಿ ಮನೆಗಳಲ್ಲಿ ಇವತ್ತಿಗೂ ಉಂಟು. ಹಾಗಾಗಿ ಇವತ್ತೊಂದು ದರ್ಶನ ಮಾಡುವ ಭಾಗ್ಯ ಪಾತ್ರಿಗಳಿಗೆ ಬಂದಿತ್ತಷ್ಟೆ. ಮೆಟ್ಟಿಲ್ಲದ ತಮ್ಮ ಮುಪ್ಪಿನ ಕಾಲುಗಳನ್ನು ನೆಲಕ್ಕೆ ಒತ್ತುತ್ತ ‘ಚೆಂಗು ಬಂದ ಕರು’ವಿನ ಹಾಗೆ ಪಾತ್ರಿಗಳ ಸವಾರಿ ‘ಬರಾಕಿನಿಂದ’ ಬೈಲ ಮನೆ ಶೀನ ಹಾಂಡರ ಮನೆ ಕಡೆಗೆ ಸಾಗಿತು.
——————————————————————————————————–
ಕಾರ್ತೇಲ್ ತಿಂಗಳಿನ ಮೊದಲ ಮಳೆ ನೆಲವನ್ನು ತಾಕಿದ ಕೂಡಲೇ ‘ಜಕ್ಣಿ’ ಎಂಬ ‘ವಾಮ ಸಂಪ್ರದಾಯದ ಆಚರಣೆ’ಯೊಂದು ಕುಂದನಾಡಿನ ಎಲ್ಲ ಶೂದ್ರ ಮನೆತನಗಳ ಮೂಲ ಮನೆಗಳಲ್ಲಿ ನೆಡೆಯುವುದು ಸರ್ವಸಾಮಾನ್ಯ. ಸತ್ತ ಪಿತೃಗಳಿಗೆ, ಕುಟುಂಬದ ‘ರಾಯಿ-ಕಲ್ಲು’ಗಳಿಗೆ ‘ಚೆರು’ವನ್ನು ಇಕ್ಕಿ, ನಾರಿನ ಕೋಲಿಗೆ ಎಣ್ಣೆಯಲ್ಲಿ ಅದ್ದಿದ್ದ ಬಟ್ಟೆಯ ತುಂಡನ್ನು ಸುತ್ತಿ ತಯಾರಿಸಿದ್ದ ‘ನೆಣೆ ಕೋಲಿ’ಗೆ ಬೆಂಕಿ ಸ್ಪರ್ಶಗೈದಿಟ್ಟು ಅರಶಿನ ಮತ್ತು ಸುಣ್ಣವನ್ನು ನೀರಿನಲ್ಲಿ ಕರಡಿ ಕಟ್ಟಿಟ್ಟ ಅಡಿಕೆ ಹಾಳೆಗೆ ಎರೆದು ತಯಾರಿಸಿದ ‘ಹಾನದ ಕೊಟ್ಟೆ’ಯನ್ನಿಟ್ಟು, ಕಾಯಿಯನ್ನು ಒಡೆಸಿ ಸತ್ತ ಪಿತೃಗಳನ್ನು ನೆನಪಿಸಿಕೊಂಡು ಊರ ಕೋಳಿಗಳನ್ನು ಹಾಡಿಯಲ್ಲಿ ಕೊಯ್ದು ತರಲಾಗುತ್ತದೆ. ನಂತರ ಕಲ್ಲುಕುಟಿಕ ಯಾ ತಾವು ನಂಬಿದ ಇನ್ಯಾವುದಾದರೂ ದೈವದ ದರ್ಶನವನ್ನು ಮಾಡಿಸಿ ಹಲಸಿನ ಹಣ್ಣಿನ ಕಡುಬು, ಇಡ್ಲಿ, ಕೋಳಿ ತುಂಡನ್ನು ಸೇರಿಸಿ ಕೊಡಿ ಬಾಳೆ ಎಲೆಯ ಮೇಲೆ ಉಣಬಡಿಸಿದ ‘ಮೀಸಲು’ ಎಡೆಯನ್ನು ಸತ್ತ ಪಿತೃಗಳಿಗೆ ಇಡಲಾಗುತ್ತದೆ. ಮುಂದಿನ ಕಾರ್ತೇಲ್ ತಿಂಗಳವರೆಗೆ ಕುಟುಂಬಕ್ಕೇನೂ ಉಪದ್ರ, ಅನಾಚಾರ, ತೊಂದರೆಗಳು ನೀಡದಂತೆ ಕೇಳಿಕೊಳ್ಳಲಾಗುತ್ತದೆ. ನಂತರ ಕುಟುಂಬದವರೆಲ್ಲ ಸೇರಿ ಸಹಪಂಕ್ತಿಯಲ್ಲಿ ಉಣ್ಣುವ “ಜಕ್ಣಿ” ಎಂಬ ಹೆಸರಿನ ಸಂಪ್ರದಾಯ ಕುಂದನಾಡಿನ ಎಲ್ಲ ಶೂದ್ರ ಮನೆತನಗಳಲ್ಲಿ ಇತ್ತು. ಇವತ್ತಿಗೂ ಉಂಟು. ಹಿಂದೆಲ್ಲ ದೈವಗಳಿಗೆ ಹೆದರಿ ತೀರಾ ಭಯ ಭಕ್ತಿಯಿಂದ ಆಚರಿಸುತ್ತಿದ್ದ ಈ ಪ್ರಾದೇಶಿಕ ವಾಮ ಆಚರಣೆ ಹಲವು ಬದಲಾವಣೆಗಳೊಂದಿಗೆ ಇಂದು ತನ್ನ ಮೌಲ್ಯವನ್ನು ಕಳೆದುಕೊಂಡು ಬರಿದೇ ‘ಹರಕೆ ಬಲಿ’ಯಾಗಿ ಕೋಳಿ ತಿನ್ನುವ ಆಚರಣೆಯಾಗಿ ಉಳಿದಿದೆ ಅಷ್ಟೆ. ‘ಅಯ್ಯೊ..ಹಿಂದಿನವರಿಗೆ ಮಾಡ್ಲಿಕ್ಕೆ ಬೇರೆ ಕೆಲಸ ಇರಲಿಲ್ಲ, ದೈವ ಅಂತೆ, ದರ್ಶನ ಅಂತೆ, ಜಕ್ಣಿ ಅಂತೆ.. ಏನೇನೊ ಮಾಡಿಕೊಂಡು ಬಂದ್ರು, ಈಗ ನಮಕೈಲಿ ಇದ್ನೇಲ್ಲಾ ಮಾಡೋಕಾಗಲ್ಲ ಮರ್ರೆ’ ಎಂದು ಹಲುಬುತ್ತಲೆ ಎಲ್ಲರ ಮನೆಯಲ್ಲೂ ಜಕ್ಣಿಯನ್ನು ಮಾಡುತ್ತಾರೆ. ಪ್ರತಿ ಕುಟುಂಬದ ಮೂಲ ಮನೆಯಲ್ಲಿ ನಡೆಯುವ ಈ ಭಿನ್ನ ವಾಮ-ನ್ಯಾಮ ಸಂಸ್ಕೃತಿಗೆ ಕಲ್ಲುಕುಟಿಕನ ಬೋಗ, ಕೊಲೆಭೂತ ಎಂಬಿತ್ಯಾದಿ ಅನೇಕ ಆಡು ನಾಮಧೇಯಗಳು ಕುಂದನಾಡಿನಲ್ಲಿ ಉಂಟು. ತೌಳವ ನಾಡಿನಲ್ಲಿ ಭೂತ ಕಟ್ಟುವುದು, ತಂಬಿಲ ಎಂಬ ಇದಕ್ಕೆ ಸಮೀಪವಾದ ಆಚರಣೆಗಳಿರುವುದನ್ನು ಗಮನಿಸಬಹುದು.
ಗಂಟೆ ರಾತ್ರಿ ಎಂಟರ ಸಮೀಪವಾಗಿರಬಹುದು. ಬೈಲ ಮನೆ ಶೀನ ಹಾಂಡರ ಮನೆಯಲ್ಲಿ ಜಕ್ಣಿಯ ಗೌಜಿ ಸುಮರಾಗಿ ನಡೆದಿತ್ತು. ಒಂದು ಹತ್ತು ವರ್ಷದ ಹಿಂದೆ ಒಂದೈವತ್ತು ಜನ ಸೇರುತ್ತಿದ್ದ ಅವನ ಮೂಲ ಮನೆಯಲ್ಲಿ ಮೀಸೆ ಹಣ್ಣಾದ ಕೂದಲು ಬಿಳಿಯಾದ ಒಂದೈದು ಹಿರಿ ತಲೆಗಳು ಬೀಡಿ ಸೇದುತ್ತಾ ಒಳಗು ಹೊರಗು ತಿರುಗುತ್ತಿದ್ದವು. ಪಿರಿ ಪಿರಿ ಮಳೆಗೆ ಹಿಡಿ ಶಾಪ ಹಾಕುತ್ತಾ ಹಾಡಿಯ ಮೂಲೆಯಲ್ಲಿ ನಾಗಸಂಪಿಗೆ ಮರದಡಿ ನೆಲೆ ನೀಡಿದ್ದ ರಾಯಿ ಕಲ್ಲುಗಳಿಗೆ ಚೆರು ಇಕ್ಕಿ ಹಾನದ ಕೊಟ್ಟೆಯಿಟ್ಟು ಕೊಯ್ದು ತಂದಿದ್ದ ನಾಟಿ ಕೋಳಿಗಳ ಚಿಪ್ಪಡ ಹರಿಯುವ ಕೆಲಸದಲ್ಲಿ ಬಿಝಿಯಾಗಿದ್ದರು. ಶೀನ ಹಾಂಡರ ಇಬ್ಬರು ಗಂಡು ಮಕ್ಕಳು. ಅವರ ಹೆಂಡಿರು ವಯಸ್ಸಾದ ಅತ್ತೆಯ ಜೊತೆಗೂಡಿ ಅಡಿಗೆ ಮನೆಯಲ್ಲಿ ಪಾತ್ರೆಗಳನ್ನು ಎತ್ತಿ ಕುಟ್ಟುತ್ತಾ ಗುಸು ಗುಸು ಮಾತನಾಡುತ್ತಾ ಜಕ್ಣಿ ಅಡಿಗೆಯ ತಯಾರಿಯಲ್ಲಿದ್ದರು. ಹಲಸಿನ ತೊಳೆ ಬಿಡಿಸಿ ಅರೆಯುವ ಕಲ್ಲುಗಳಿಗೆ ದೂಡಿ ಹಲಸಿನ ಕಡುಬು ಮಾಡುವುದರಲ್ಲಿ, ಇಡ್ಲಿಗೆ ಬಂದವನ್ನು ರುಬ್ಬುವಲ್ಲಿ, ಕೊಚ್ಚಿಗೆ ಅಕ್ಕಿಯ ಕೂಳನ್ನು ಬೇಯಿಸುವುದರಲ್ಲಿ, ಕೋಳಿ ಗಸಿಗೆ ಮಸಾಲೆ ರೆಡಿ ಮಾಡುವ ಕಾಯಕದಲ್ಲಿ ಮಸಿ ಅರಿವೆ ಹಿಡಿದ ಆ ಹೆಂಗಸರು ಬಿಝಿಯಾಗಿದ್ದರು.
ಮನೆಯ ಯಜಮಾನ ಕುಟುಂಬದ ಹಿರಿ ತಲೆ ಶೀನ ಹಾಂಡ ಮಾತ್ರ ನಡುಮನೆಯಲ್ಲಿ ಮಣೆಯ ಮೇಲೆ ಶೇಡಿಯ ಗೆರೆಗಳನ್ನೆಳೆದು ಪ್ರತಿಷ್ಠಾಪಿಸಿದ್ದ ಕಂಚಿನ ‘ದೈವ-ಕಳಶ’ದ ಮೇಲೆ ಹೂವನ್ನಿಟ್ಟು ಕಲ್ಲುಕುಟಿಕ ದೈವದ ಅವಹಾನೆ ಮಾಡಿ ದರ್ಶನಕ್ಕೆ ಸಕಲ ತಯಾರಿ ಮಾಡುತಿದ್ದ. ತಮಗೆಲ್ಲ ತಿಳಿದಿದೆ ಎಂಬ ಹಿರಿತನದ ಅಹಂನಿಂದಲೇ ಮಹಾಬಲ ಪಾತ್ರಿಗಳು ನಿಮಿಷಕ್ಕೊಂದು ಬಾರಿ ತಮ್ಮ ಮುಡಿಯನ್ನು ಸವರುತ್ತಾ ‘ಅದು ಹಾಗಲ್ಲ ಶೀನ ಹಾಂಡರೇ..ಹೀಗೆ’ ಎಂದು ಜಕ್ಣಿಯ ನೇಮ ನಿಷ್ಟದ ಬಗ್ಗೆ ಬಿಗಿಯಾಗಿ ತಿಳಿಸುತ್ತಾ ಗಂಭೀರ ಮುಖಮುದ್ರೆಯಲ್ಲಿ ಆಚೀಚೆ ತಿರುಗುತ್ತಿದ್ದರು.
‘ಗಂಟೆ ಒಂಬತ್ತರ ಮೇಲಾಯ್ತು.ಇನ್ನೂ ದರ್ಶಿನ ಸುರುಮಾಡಬಹುದು ಅನ್ಸುತ್ತಪ್ಪ.. ಬಪ್ಪರೆಲ್ಲ ಬಂದಾಯ್ತು. ಏನಂತಿರಿ ಪಾತ್ರಿಗಳೆ’ ಭಯ ಭಕ್ತಿಯಿಂದ ಶೀನ ಹಾಂಡ ಪ್ರಶ್ನಿಸಿದ. ‘ಹಾಗದ್ರೆ ಸರಿ ನಾನು ತಯಾರಾಗ್ತೆ’ ಎನ್ನುತ್ತಾ ಮಹಾಬಲ ಪಾತ್ರಿಗಳು ತಾವು ಉಟ್ಟಿದ್ದ ಬಿಳಿ ದೋತರವನ್ನು ಕಳಚಿ ಕೆಂಪು ಪಟ್ಟೆಯನ್ನು ಬಿಗಿಯಾಗಿ ಉಟ್ಟರು. ಶೇಡಿ ಉಂಡೆಯನ್ನು ಕೈಯ ಮದ್ಯ ಭಾಗದಲ್ಲಿಟ್ಟು ಚೂರು ನೀರು ಸಿಂಪಡಿಸಿ ತಿಕ್ಕಿ ನಾಮಗಳನ್ನು ಬಳಿದುಕೊಂಡರು. ಸೊಂಟಕ್ಕೆ ಸೊಂಟ ಪಟ್ಟಿ ಬಿಗಿದರು, ಕಾಲಿಗೆ ಕಾಲ್ಕಡ್ಗ ಧರಿಸಿದರು. ಕೊರಳಿಗೆ ಕುತ್ತುಂಬರಿ ಸರ ಹಾಕಿಕೊಂಡರು. ಬೆಳ್ಳಿಯ ಕಟ್ಟು ಕಟ್ಟಿಸಿದ ಬೆತ್ತದ ಕೋಲಿಗೆ, ಕಂಚಿನ ಕಳಶಕ್ಕೆ, ಚಲ್ಹಣ ಗೆಜ್ಜೆ ಪೆಟ್ಟಿಗೆಗೆ, ದೈವ ಗಂಟಿಗೆ ಬಾಗಿ ನಮಸ್ಕರಿಸಿ ಎದ್ದು ನಿಂತರು.
ಕಂಚಿನ ಚೊಂಬಿನಲ್ಲಿದ್ದ ಜಲವನ್ನು ತುಳಸಿದಳದಿಂದ ತೆಗೆದು ಪಾತ್ರಿಗಳ ಕೈ ಮೇಲೆ ಸಿಂಪಡಿಸಿದ ಶೀನ ಹಾಂಡ. ಕೈಯನ್ನು ಮುಂದಕ್ಕೊಡ್ಡಿ ತಲೆಬಾಗಿ ನಿಂತರು ಪಾತ್ರಿಗಳು. ಅಡಿಕೆ ಎಳೆ ಹಾಳೆಯೊಳಗೆ ಬಂಧಿತವಾದ ಪಿಂಗಾರವನ್ನು ಅಡಿಕೆ ಹಾಳೆಯಿಂದ ನಾಜೂಕಾಗಿ ಬೇರ್ಪಡಿಸಿ ಪಾತ್ರಿಗಳ ಕೈ ಮೇಲೆ ಇಟ್ಟು ತುಳಸಿದಳದಿಂದ ಮತ್ತೊಮ್ಮೆ ಜಲವನ್ನು ಸಿಂಪಡಿಸಿದ ಶೀನ ಹಾಂಡ. ‘ಹೋ’ ಎಂಬ ದೈವ ಠೇಂಕಾರದೊಡನೆ ಮಹಾಬಲ ಪಾತ್ರಿಗಳು ತಮ್ಮ ಮೇಲೆ ಕಲ್ಲುಕುಟಿಕ ದೈವ ಅವಹಾನೆಗೊಂಡಿರುವುದನ್ನು ಜಾಹಿರುಗೊಳಿಸಿದರು!
ಅಡಿಗೆ ಮನೆಯಲ್ಲಿ ಮಾಡುತಿದ್ದ ಎಲ್ಲ ಅಡಿಗೆ ಕೆಲಸಗಳಿಗೆ ತಾತ್ಕಾಲಿಕ ವಿರಾಮವನ್ನಿತ್ತು ಸೀರೆಯ ಸೆರಗಿಗೆ ಕೈ ಉದ್ದುತ್ತಾ ಓಡಿ ಬಂದು ಭಯ ಭಕ್ತಿಯಿಂದ ವಿನೀತರಾಗಿ ನಿಂತರು ಹೆಂಗಸರು. ಕೋಳಿ ಚಿಪ್ಪಡ ಹರಿಯುತಿದ್ದ ಗಂಡು ಹುಡುಗರು ಕೈ ತೊಳೆದು ನಡುಮನೆಗೆ ಬಂದು ನಿಂತರು. ಕಲ್ಲುಕುಟಿಕ ದೈವದ ದರ್ಶನ ಆರಂಭಗೊಂಡಿತು.!
‘ಏನು ಕುಟುಂಬ..ಹಲವು ಸಂವತ್ಸರದ ನಂತರ ನನ್ನನ್ನು ಉಂಟು ಮಾಡಿಕೊಂಡೆಯಲ್ಲಾ.. ಎಂದು ಆರಂಭಗೊಂಡ ದೈವದ ನುಡಿಯಲ್ಲಿ ತನ್ನ ಕಾರಣಿಕತೆ, ಶ್ರೇಷ್ಟತೆ, ಸಂಸಾರವನ್ನು ತಾನು ಪೊರೆದ ರೀತಿ ಚಂದವಾಗಿ ಅಭಿವ್ಯಕ್ತಗೊಂಡಿತು.. ‘ಇನ್ನು ಮುಂದೆಯೂ ಇದೇ ತರಹ ಈ ಕುಟುಂಬದ ಶಿಶುಗಳನ್ನು ಕಾಪಾಡೋ ಜವಬ್ದಾರಿ ನಿಂದು’ ಎಂದು ಶೀನ ಹಾಂಡ ದೈವದ ಕಾಲಿಗುರುಳಿದ. ‘ನನ್ನೆ ನಂಬ್ಕೊಂಡು ಬದುಕಿರೋ ಈ ಕುಟುಂಬದ ಕೈನ ನಾನು ಯಾವತ್ತು ಬಿಡುವುದಿಲ್ಲ, ಬೆಳೆ ಬಿತ್ತೀಲಾಗಲಿ, ಮಾಡೋ ಕಾಯಕದಲ್ಲಾಗಲಿ, ನೆಡೆವ ಹೆಜ್ಜೆಯಲ್ಲಾಗಲಿ ಕುಟುಂಬದ ಶಿಶು ಮಕ್ಕಳನ್ನ ಕಾಪಾಡೋ ಜವಬ್ದಾರಿ ನಂದು’ ಎಂದು ಕಲ್ಲುಕುಟಿಕ ದೈವ ಅಭಯಗಳನ್ನು ಇಟ್ಟಿತು.. ಶೀನ ಹಾಂಡ ಭಕ್ತಿಯಿಂದ ತಲೆ ಬಾಗಿ ವಂದಿಸಿದ. ಅವನ ಮುಡಿಗೆ ತುಳಸಿ ದಳದ ನೀರನ್ನು ಚಿಮುಕಿಸಿ ಶೃಂಗಾರದ ಎಸಳನ್ನು ಪ್ರಸಾದ ರೂಪದಲ್ಲಿ ನೀಡಿತು. ಶೀನ ಹಾಂಡನನ್ನೆ ಅನುಸರಿಸಿ ಬಂದ ಅವನ ಕುಟುಂಬದ ಎಲ್ಲ ಸದಸ್ಯರಿಗೂ ಕಲ್ಕುಡ್ಕ ದೈವ ಪ್ರಸಾದವನ್ನು ನೀಡಿ ಹರಸಿ ತಾನೂ ತನ್ನ ಮೂಲ ನೆಲೆಯನ್ನು ಸೇರುವ ಮುನ್ಸೂಚನೆ ನೀಡಿತು. ಅದಕ್ಕೆ ಎಲ್ಲರು ಅಸ್ತು ಎಂದರು. ಶೀನ ಹಾಂಡ ಮತ್ತೂಮ್ಮೆ ತುಳಸಿ ದಳದ ನೀರನ್ನು ಕಲ್ಕುಡ್ಕ ದೈವದ ಕೈಗೆರೆದು ಪಿಂಗಾರದ ಕೊನೆಯನ್ನು ಇಟ್ಟು ತುಳಸಿ ದಳದ ನೀರನ್ನೆರೆದ. ಕಲ್ಕುಡ್ಕ ದೈವ ‘ಹಿರಿಯುವ’ ದರ್ಶನ ಜೋರಾಗಿ ಆರಂಭಗೊಂಡಿತು.
ಮಣೆಯ ಮೇಲೆ ಶೃಂಗರಿಸಿ ಇಟ್ಟಿದ್ದ ಕಂಚಿನ ಕಳಶದ ಮುಂದೆ ಪಾತ್ರಿಗಳು ದೇಹ ಬಾಗಿಸಿ ಸಾಷ್ಟಾಂಗ ನಮಸ್ಕಾರ ಮಾಡಿದೊಡನೆ ಕಲ್ಲುಕುಟಿಕ ದೈವ ‘ಹಿರಿಯುವುದು’ ದರ್ಶನದ ವಾಡಿಕೆ. ಆ ಇರಾದೆಯೊಡನೇಯೇ ಮಹಾಬಲ ಪಾತ್ರಿಗಳು ದೈವ ಅವಾಹನೆಗೊಂಡು ನಡುಗುತಿದ್ದ ತಮ್ಮ ಮುಪ್ಪು ದೇಹವನ್ನು ಕಳಶದ ಮುಂದೆ ಬಾಗಿಸಿದರು. ಆ ಕ್ಷಣಕ್ಕೆ ಅದೇನಾಯ್ತೋ ಅವರಿಗೆ ತಿಳಿಯ. ಎಡಬದಿ ಎದೆಯೊಳಗೆ ಯಾರೋ ‘ಚೂಪು ದಬ್ಬಣ’ವನ್ನು ಒಮ್ಮೆಗೆ ಬಿರುಸಿನಿಂದ ಇರಿದಂತಾಯ್ತು. ಮೈಯ ನರನಾಡಿಗಳಲ್ಲೂ ಬೆವರು ಟಿಸಿಲೊಡೆದು ಜಿನುಗಿತು. ಪಿಂಗಾರದ ಎಸಳು ಪಾತ್ರಿಗಳ ಕೈಯಿಂದ ಜಾರಿತು. ‘ಹಾ..ಅಮ್ಮಾ’ ಎಂಬ ಉದ್ಘಾರದೊಂದಿಗೆ ಪಾತ್ರಿಗಳು ಎದೆಯ ಮೇಲೆ ಕೈ ಊರುತ್ತಾ ಒಮ್ಮುಖವಾಗಿ ಧಭಾಲನೆ ವಾಲಿದರು..ಬಿದ್ದೇ ಬಿಟ್ಟರು.
‘ಅಯ್ಯಯ್ಯೋ ದೇವನೆ..ಇದೆಂತಾಯ್ತು ಪಾತ್ರಿಗಳೆ..’ ಎಂದು ಕೈಯಲಿದ್ದ ಕಂಚಿನ ಚೊಂಬನ್ನು ಕೆಳಗೆಸದು ಒರಲುತ್ತಾ ಧಾವಿಸಿ ಬಂದ ಶೀನ ಹಾಂಡ. ಪಾತ್ರಿಗಳ ಬಡ ಕಾಯವನ್ನು ಎತ್ತಿ ಹಿಡಿದು ‘ಎ ಗಡೇ..ಆ ಮರದ ಕುರ್ಚಿ ತಕ್ಕೊಂಡು ಬಾ..ಎ ಇವಳೇ ಒಂದು ಚೊಂಬು ನೀರು ತಾ ಮಹರಾಯ್ತಿ’ ಎಂದು ನಡುಗುವ ದನಿಯೊಡನೆ ಕೂಗಿದ.
ಗಂಡು ಕುರ್ಚಿ ತಂದಿತು. ಎಲ್ಲರು ಸೇರಿ ಪಾತ್ರಿಗಳನ್ನು ಅದರಲ್ಲಿ ಕುಳ್ಳಿರಿಸಿ ಚೊಂಬಿನಲ್ಲಿದ್ದ ನೀರನ್ನು ಬಾಯಿಗೆ ಎರೆಯಲು ಪ್ರಯತ್ನಿಸಿದರು. ಆದರೆ ಅದು ಗಂಟಲೊಳಗೆ ಇಳಿಯದೇ ಪಾತ್ರಿಗಳ ದವಡೆ ಸಂದಿನಿಂದ ಲೋಳೆ ಮಿಶ್ರಿತವಾಗಿ ಹೊರ ಬಂದಿತು. ಶೀನ ಹಾಂಡ ತಲೆ ಮೇಲೆ ಕೈ ಹೊತ್ತು ಕುಳಿತ. ಮಹಾಬಲ ಪಾತ್ರಿಗಳ ಸಾವಿನ ಕಟು ವಾಸನೆ ಮೆಲ್ಲಗೆ ಶೀನ ಹಾಂಡರ ಮನೆಯೊಳಗಿನಿಂದ ಇಂಚಿಂಚೆ ಪಸರಿಸತೊಡಗಿತು.
—
ಬರೆದವರು : ಮಂಜುನಾಥ್ ಹಿಲಿಯಾಣ
ಮಣಿಪಾಲ್ ಸ್ಕೂಲ್ ಆಫ್ ಕಮ್ಯೂನಿಕೇಶನ್(ಎಸ್’ಓಸಿ)
ಮಣಿಪಾಲ ವಿಶ್ವವಿದ್ಯಾನಿಲಯ