ಎಂ.ಆರ್. ನಾರಾಯಣ ಅವರು ಕುಲಾಲ ಸಮಾಜದ ಮುಖಂಡರು ಹಾಗೂ ಸಾಮಾಜಿಕ ಕಳಕಳಿಯ ನಾಯಕರು. ಸ್ವರ್ಣ ಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ ಸ್ಥಾಪಕರು ಹಾಗೂ ಅಧ್ಯಕ್ಷರಾಗಿದ್ದರು. ಎಂ ಆರ್ ನಾರಾಯಣ ಅವರು ಮೂಲತಃ ಬಂಟ್ವಾಳ ತಾಲೂಕಿನ ವೀರಕಂಭ ಕುಡ್ತಮೊಗೇರು ಗ್ರಾಮದ ಮುಂಡಾಜೆಯ ಬಾರೆಬೆಟ್ಟಿನವರು. ಊರ ಉಗ್ರಾಣಿಯಾಗಿದ್ದ ದೂಮಪ್ಪ ಅವರ ಪುತ್ರರು. ನಾರಾಯಣ ಅವರು ನಿಷ್ಠೂರವಾದಿ ಹಾಗೂ ನ್ಯಾಯ ಪರ ಹೋರಾಟಗಾರರಾಗಿದ್ದರು.
ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕಿನ ಅಧೀಕ್ಷಕರಾಗಿ ಉಚ್ಛ ಮಟ್ಟದ ಸೇವೆ ಮಾಡಿ ಪ್ರಶಸ್ತಿ ಪಡೆದಿದ್ದರು. ಅಮ್ಮೆಂಬಳ ಬಾಳಪ್ಪನವರ ಒಡನಾಡಿ ಹಾಗೂ ಆಪ್ತ ಅಭಿಮಾನಿಯಾಗಿದ್ದ ಅವರು ಬಾಳಪ್ಪ ನವರ ಜೊತೆ ಸೇರಿ ಬಂಟ್ವಾಳ ಸಮಾಜಸೇವಾ ಸಹಕಾರಿ ಬ್ಯಾಂಕನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಡಿಕೆ ಮಾಡುವ ವೃತ್ತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಪ್ರಯತ್ನಿಸಿದ್ದರು.
ನಾರಾಯಣ ಅವರು ಕರಾವಳಿ ಕುಲಾಲ-ಕುಂಬಾರ ವೇದಿಕೆಯ ಗೌರವ ಸಲಹೆಗಾರರಾಗಿ, ರಾಜ್ಯ ಕುಂಬಾರ ಸಂಘದ ಕರಾವಳಿ ವಿಭಾಗದ ಅಧ್ಯಕ್ಷರೂ ಆಗಿದ್ದರು. ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿಯಾಗಿ, ಸುರತ್ಕಲ್ ಕುಲಾಲ ಸಂಘದ ಮತ್ತು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ , ಬಂಟ್ವಾಳ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್ ಮತ್ತು ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ನಿರ್ದೇಶಕರಾಗಿ, ಕುಲಶೇಖರ ವೀರನಾರಾಯಣ ದೇವಸ್ಥಾನದ ಟ್ರಸ್ಟಿಯಾಗಿ, ಕುಳಾಯಿ ಬರ್ಕೆ ಉಪ್ಯಾನ್ ಮೂಲಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ದಿಟ್ಟ ವ್ಯಕ್ತಿತ್ವವನ್ನು ಹೊಂದಿದ್ದ , ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಮೊದಲಿಗರಾದ ನಾರಾಯಣ ಅವರು ೨೦೧೫ರ ಜನವರಿ ೨ರಂದು ಹೃದಯಾಘಾತಕ್ಕೆ ಬಲಿಯಾದರು.