ಧಾರವಾಡ : ಜೀವನದಲ್ಲಿ ಬಡತನ, ಹಸಿವಿನಿಂದಲೇ ಹೆಚ್ಚಾಗಿ ಸಾಧನೆ ಹೊರಹೊಮ್ಮುತ್ತ್ತದೆ. ಬಡ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ ಅದನ್ನು ಸರ್ಕಾರಗಳು ಗುರುತಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಪಡೆಯುವುದು ಧ್ಯೇಯವಾಗಬೇಕು, ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕು ಎಂದು ಸಾಹಿತಿ ಬಾಳಣ್ಣ ಶೀಗೀಹಳ್ಳಿ ಹೇಳಿದರು.
ಕಲ್ಯಾಣ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋತ್ತರ ಬಾಲಕರ ವಸತಿ ನಿಲಯದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ಗಿರೀಶ ಕುಂಬಾರ ರಚಿಸಿದ ‘ಹಣತೆಗೊಂದು ಬತ್ತಿ ನೀಡಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದಾಗಿದ್ದು ಮಾನವ ಜೀವನದಲ್ಲಿ ವಿದ್ಯಾರ್ಥಿ ಜೀವನವು ಬಹುಮುಖ್ಯ ಘಟ್ಟವಾಗಿದೆ. ಅದರಲ್ಲಿ ಉನ್ನತ ಶಿಕ್ಷಣದ ಹಂತವು ಸಾಧನೆ ಮಾಡುವ ವಿದ್ಯಾರ್ಥಿ, ಯುವ ಪ್ರತಿಭೆಗಳಿಗೆ ದಾರಿದೀಪವಾಗಿದೆ ಎಂದರು.
ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಸರ್ಕಾರಿ ನೌಕರಿ ಪಡೆಯುವುದು ಸಾಮಾನ್ಯವಲ್ಲ, ಅದು ಇಂದಿನ ಕಾಲದಲ್ಲಿ ಕಷ್ಟಕರವಾಗಿದೆ. ಆದರೆ ಈ ವಸತಿನಿಲಯದಲ್ಲಿ ವಿದ್ಯಾರ್ಥಿ ಇದ್ದಾಗಲೇ ಸರ್ಕಾರಿ ನೌಕರಿ ಪಡೆದವರು ನಮ್ಮ ಕಣ್ಮುಂದೆ ಇದ್ದಾರೆ ಇದು ಸಂತಸದ ವಿಷಯ. ಅದರೊಂದಿಗೆ ವಿದ್ಯಾರ್ಥಿಗಳು ಉತ್ತಮವಾದ ಜ್ಞಾನವನ್ನು ಸಂಪಾದಿಸಿ. ಗ್ರಾಮೀಣ ಪ್ರದೇಶದ ಕೃಷಿ ಕುಟುಂಬ ಮತ್ತು ಕಡುಬಡತನದಿಂದ ಬಂದಂತಹ ವಿದ್ಯಾರ್ಥಿಗಳೇ ಸಾಧನೆ ಮಾಡುತ್ತಾರೆ. ಹಾಗೆಯೇ ತಮ್ಮ ಕುಟುಂಬ ಸಮಾಜವನ್ನು ಯಾವತ್ತು ಮರೆಯದೇ ಕಾರ್ಯ ಮಾಡಬೇಕೆಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾಧಿಕಾರಿ ಮುನಿರಾಜು ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಯುವಜನತೆಗೆ ಪ್ರಚಲಿತ ಘಟನೆಗಳ ತಿಳುವಳಿಕೆ ಅಗತ್ಯವಾಗಿದ್ದು, ನೈಸರ್ಗಿಕ ಸಂಪನ್ಮೂಲದ ಕುರಿತು ಕಾಳಜಿ ಇರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಮಾಜಿಕ ಕಳಕಳಿ ಇರಬೇಕು ಜೊತೆಗೆ ಉತ್ತಮವಾದ ಬರವಣಿಗೆಯನ್ನು ರೂಢಿಸಿಕೊಂಡಿರಬೇಕು ಎಂದರು.
ನಿಲಯ ಪಾಲಕರಾದ ಎನ್.ಎಸ್.ಮುಧೋಳ, ಪತ್ರಕರ್ತ ವೆಂಕನಗೌಡ ಪಾಟೀಲ, ಆದಿತ್ಯ ಆಲ್ಕೋಡ್, ಗಿರೀಶ ಕುಂಬಾರ ಉಪಸ್ಥಿತರಿದ್ದರು.ಶೇಖರ ಲಮಾಣಿ ಪ್ರಾರ್ಥಿಸಿದರು. ಪರಮೇಶ ದೊಡ್ಮನಿ ಸ್ವಾಗತಿಸಿದರು, ಮಹೆಬೂಬ ತಹಶಿಲ್ದಾರ ವಂದಿಸಿದರು, ಶಿವರಾಜ ಹಿರೇಮಠ ನಿರೂಪಿದರು.
ವಿದ್ಯಾರ್ಥಿ ಗಿರೀಶ್ ಕುಂಬಾರ ರಚಿತ ‘ಹಣತೆಗೊಂದು ಬತ್ತಿ ನೀಡಿ’ ಪುಸ್ತಕ ಬಿಡುಗಡೆ
Students corner
1 Min Read


