‘ಏಯ್ ಇದು ನೋಡು ಹೇಗಿದೆ? ಬರೀ ಬಾಯ್ಮಾತಿನಲ್ಲಿ ಪರಿಸರ ಅಂದ್ರೆ ಆಗಲ್ಲ. ಮಣ್ಣಿನ ಬಾಟಲಿ ಬಳಸಿ, ಪರಿಸರ ಕಾಳಜಿ ತೋರಿಸಿ…’ ಈ ಮಾತು ನುಡಿದ ಗೆಳತಿ ಹೆಮ್ಮೆಯಿಂದ ಮಣ್ಣಿನ ಬಾಟಲಿಯಲ್ಲಿ ನೀರು ತೆಗೆದು ಕುಡಿದಳು. ನನಗೂ ಕುಡಿಯಲು ಕೊಟ್ಟಳು. ನೀರಂತೂ ತಂಪು ತಂಪು ಕೂಲ್ಕೂಲ್.
ಮಣ್ಣಿನ ಮಡಕೆ ಯಾರಿಗೆ ಗೊತ್ತಿಲ್ಲ. ಇಂದಿಗೂ ಸಂಪ್ರದಾಯದ ಹೆಸರಿನಲ್ಲಿ ತನ್ನ ಪಾರಂಪರಿಕ ಮಹತ್ವವನ್ನು ಉಳಿಸಿಕೊಂಡಿದೆ. ಆದರೆ ಬದಲಾವಣೆಯ ಕಾಲಘಟ್ಟದಲ್ಲಿ ಅದು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಸಂಶೋಧನೆಗಳು ಹೊಸಹೊಸ ವರದಿಗಳನ್ನು ಬೆಳಕಿಗೆ ತರುತ್ತಲೇ ಇವೆ.
ಈ ಎರಡೂ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬೆಂಗಳೂರಿನ ‘ರೇವಾ’(ರೈಸ್ ಎಂಪವರ್ ವಿಮೆನ್ ಅರೌಂಡ್– RIWA) ಸಂಸ್ಥೆಯು ಮಣ್ಣಿನ ಬಾಟಲಿಯನ್ನು ಜನರಿಗೆ ಪರಿಚಯಿಸುವ ಸಾಹಸಕ್ಕೆ ಮುಂದಾಯಿತು. ಸಂಸ್ಥೆಯ ನಿರ್ದೇಶಕ ಅಭಿಷೇಕ್ ಸರನ್ ಅವರ ಚಿಂತನೆಯು ‘ನೀರ್ ಪಾತ್ರೆ’ ಬ್ರಾಂಡ್ನೊಂದಿಗೆ ಅಂಗಳಕ್ಕೆ ಇಳಿದಿದೆ. ಫ್ಲಾಸ್ಕ್ಗಳಂತೆ ಕಾಣುವ ಈ ಮಣ್ಣಿನ ಬಾಟಲಿಗಳು ನಮ್ಮ ಕುಂಬಾರರ ಪಾರಂಪರಿಕ ಜ್ಞಾನ ವಿಸ್ತರಣೆಯಂತೆ ಭಾಸವಾಗುತ್ತದೆ.
ವಿಶೇಷ ವಿನ್ಯಾಸದ ಈ ಮಣ್ಣಿನ ಬಾಟಲಿಯನ್ನು ಬ್ಯಾಗ್ನಲ್ಲಿ ಇರಿಸಿಕೊಳ್ಳುವುದು ಪರಿಸರ ಕಾಳಜಿಯ ದ್ಯೋತಕ ಎಂದು ಅನೇಕರು ಭಾವಿಸುತ್ತಿದ್ದಾರೆ. ಉತ್ತರ ಪ್ರದೇಶದ ಕುಂಬಾರರಿಂದ ಬಾಟಲಿಗಳನ್ನು ನಗರಕ್ಕೆ ತರಿಸಲಾಗುತ್ತಿದೆ. ಬಡತನದಿಂದ ಕಂಗಾಲಾಗಿರುವ ಕುಶಲಕರ್ಮಿಗಳಿಗೆ ಇದರಿಂದ ಆರ್ಥಿಕ ಬಲವೂ ಸಿಕ್ಕಂತೆ ಆಗಿದೆ.
ಪ್ಲಾಸ್ಟಿಕ್ ಬಳಕೆಯ ಸಮಸ್ಯೆಗಳು
ಪ್ಲಾಸ್ಟಿಕ್ ಬಾಟಲಿಗಳನ್ನು ನೀರು ಕುಡಿಯಲು ಬಳಸುವುದರಿಂದ ಅಪಾಯಕಾರಿ ಲೀಚಿಂಗ್ ಪ್ರಕ್ರಿಯೆಯ ಹಾನಿಯನ್ನು ಜನರು ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಾಟಲಿಯಲ್ಲಿರುವ ರಾಸಾಯನಿಕಗಳು ನೀರಿಗೆ ಬಿಡುಗಡೆಯಾಗುವ ಪ್ರಕ್ರಿಯೆಯನ್ನು ಲೀಚಿಂಗ್ ಎನ್ನುತ್ತಾರೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಇರಿಸಿದಾಗ ಹಸಿರು ಪಾಚಿ ಬೆಳೆಯುವುದನ್ನು ಗಮನಿಸಿರಬಹುದು.
ಮಣ್ಣಿನ ಬಾಟಲಿಗಳು ಈ ಅಂಶವನ್ನು ತಡೆಯುತ್ತವೆ. ಬಾಟಲಿಗಳ ನಿರ್ವಹಣೆಯೂ ಸುಲಭ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಅಭಿಷೇಕ್ ಸರಣ್. ಮಣ್ಣಿನ ಬಾಟಲಿಗಳಿಗೆ ಮುಚ್ಚಳವೂ ಲಭ್ಯ. ಬಾಟಲಿ ಒಳಗೆ ದೂಳು ಪ್ರವೇಶಿಸದಂತೆ ತಡೆಯಲು ಇದು ಸಹಕಾರಿ. ಮಣ್ಣಿನ ಬಾಟಲಿಗಳಲ್ಲಿ ಇರಿಸುವ ನೀರು ಬಹುಕಾಲ ನೈಸರ್ಗಿಕವಾಗಿಯೇ ತಣ್ಣಗಿರುತ್ತದೆ.
ಪರಿಸರ ಸ್ನೇಹಿ
ಮಣ್ಣಿನ ಬಾಟಲಿಗಳು ಪ್ಲಾಸ್ಟಿಕ್ ಬಾಟಲಿಗಳಂತೆ ಪರಿಸರಕ್ಕೆ ಮಾರಕವಲ್ಲ. ಒಡೆದ ಅಥವಾ ಹಳೆಯದಾದ ಬಾಟಲಿಗಳು ಸುಲಭವಾಗಿ ಭೂಮಿಯಲ್ಲಿ ಕರಗುತ್ತವೆ. ಆದರೆ ಪ್ಲಾಸ್ಟಿಕ್ ಬಾಟಲಿಗಳು ಹಾಗಲ್ಲ. ಅದರಿಂದ ಎಲ್ಲ ಬಗೆಯ ಜೀವಿಗಳಿಗೂ ಕುತ್ತು.
ಮಹಿಳೆಯರಿಗೆ ಬಲ
ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ರೇವಾ ಮಣ್ಣಿನ ಬಾಟಲಿಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಜೀವನೋಪಾಯಕ್ಕೂ ಸಹಕರಿಸುತ್ತಿದೆ. ಅನೇಕ ಮಹಿಳೆಯರಿಗೆ ಮಣ್ಣಿನ ಬಾಟಲಿಗಳು ಜೀವನಾಧಾರವೂ ಆಗಿದೆ. ಒಂದು ಲೀಟರ್ ನೀರು ಹಿಡಿಸುವ ಮಣ್ಣಿನ ಬಾಟಲಿಯ (ನೀರ್ಪಾತ್ರಾ) ಬೆಲೆ ₹250. ಸಿಗುವ ಸ್ಥಳ– ನಂ 16, 5ನೇ ಮುಖ್ಯರಸ್ತೆ, 7ನೇ ಹಂತ, ಜೆ.ಪಿ.ನಗರ. ಮೊ– 9535046900.
ಕವಿತಾ ಕೆ. ಆರ್