ಪ್ರೀತಿ ಪ್ರೇಮದ ವಿಷಯದಲ್ಲಿ ಭಾರತೀಯರ ಔದಾರ್ಯ ಜಗತ್ತಿಗೇ ತಿಳಿದಿರುವ ಸಂಗತಿ. ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಅಮರ ಪ್ರೇಮ ಕಥೆಗಳಲ್ಲಿ ಮಹಿವಾಲ್ ಮತ್ತು ಸೊಹ್ನಿ ಅವರ ದುರಂತ ಪ್ರೇಮ ಕಥೆ ಪಂಜಾಬಿನಲ್ಲಿ ಬಹು ಜನಪ್ರಿಯ. ಇಲ್ಲಿನ ಕೆಲ ಬುಡಕಟ್ಟು ಜನರು ಇವರನ್ನು ಭಕ್ತಿಯಿಂದ ಆರಾಧನೆ ಮಾಡುವ ಪದ್ಧತಿ ಈಗಲೂ ಇದೆ. ಮಹಿವಾಲ್ ಮತ್ತು ಸೊಹ್ನಿ ನೆಲೆಸಿದ್ದರು ಎಂಬುದಕ್ಕೆ ಪಂಜಾಬಿನ ಇತಿಹಾಸದಲ್ಲಿ ಪುರಾವೆಗಳು ಸಿಕ್ಕಿವೆ. ಇಲ್ಲಿನ ಜನಪದ ಕಥೆಗಳಲ್ಲಿ ಇವರು ನಂಗಲ್ ನದಿಯ ತಟದಲ್ಲಿ ವಾಸವಾಗಿದ್ದರು ಎಂಬ ಉಲ್ಲೇಖಗಳಿವೆ.
ಅದು ಹದಿನಾರನೇ ಶತಮಾನದ ಕಾಲಘಟ್ಟ. ಪಂಜಾಬಿನ ನಂಗಲ್ ನದಿಯ ತಟದಲ್ಲಿ ಸುರ್ರೆ ಎಂಬ ಒಂದು ಪುಟ್ಟ ಹಳ್ಳಿ. ಅಲ್ಲಿ ಸೊಹ್ನಿ ಕುಂಬಾರನ ಮಗಳಾಗಿರುತ್ತಾಳೆ. ಇತ್ತ ನದಿಯ ಮತ್ತೊಂದು ತಟದಲ್ಲಿರುವ ಊರಿನಲ್ಲಿ ಮಹಿವಾಲ್ ವಾಸವಾಗಿರುತ್ತಾನೆ. ಮಹಿವಾಲ್ ಎಮ್ಮೆಗಳನ್ನು ಕಾಯುತ್ತಿರುತ್ತಾನೆ. ಒಮ್ಮೆ ನದಿ ತಟದಲ್ಲಿ ಎಮ್ಮೆಗಳಿಗೆ ನೀರು ಕುಡಿಸುವಾಗ ಮಹಿವಾಲ್ ಸೌಂದರ್ಯದ ಖನಿಯಾಗಿದ್ದ ಸೊಹ್ನಿಯನ್ನು ನೋಡುತ್ತಾನೆ. ಮೊದಲ ನೋಟದಲ್ಲೇ ಸೊಹ್ನಿಯ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಸೊಹ್ನಿಯನ್ನು ನೋಡುವ ಸಲುವಾಗಿಯೇ ಪದೇ ಪದೇ ನದಿ ತೀರಕ್ಕೆ ಬರುತ್ತಿರುತ್ತಾನೆ. ಕಷ್ಟಪಟ್ಟು ಅವಳ ಜೊತೆ ಗೆಳೆತನ ಬೆಳೆಸಿಕೊಳ್ಳುತ್ತಾನೆ. ಮುಂದೆ ಈ ಗೆಳೆತನ ಪ್ರೀತಿಗೆ ತಿರುಗಿ ಇಬ್ಬರು ಉತ್ಕಟವಾಗಿ ಪ್ರೀತಿಸುತ್ತಾರೆ.
ಈ ವಿಷಯವು ಸೊಹ್ನಿ ಮನೆಯವರಿಗೆ ತಿಳಿಯುತ್ತದೆ. ಎಮ್ಮೆ ಕಾಯುವವನಿಗೆ ಮಗಳ ಕೊಟ್ಟು ಮದುವೆ ಮಾಡಲು ಸೊಹ್ನಿ ತಂದೆ ಒಪ್ಪುವುದಿಲ್ಲ. ನಂತರದ ದಿನಗಳಲ್ಲಿ ಕುಂಬಾರಿಕೆ ಮಾಡುತ್ತಿದ್ದ ಯುವಕನೊಬ್ಬನೊಂದಿಗೆ ಸೊಹ್ನಿ ಮದುವೆ ನಿಶ್ಚಯವಾಗುತ್ತದೆ. ದುರಾದೃಷ್ಟಕ್ಕೆ ಮದುವೆ ನಿಶ್ಚಯವಾದ ಕೆಲ ದಿನಗಳು ಮಹಿಪಾಲ್ ಇತ್ತ ಕಡೆ ಸುಳಿದಿರುವುದಿಲ್ಲ. ಹಾಗಾಗಿ ನದಿಯಲ್ಲಿ ಈಜಿಕೊಂಡು ಹೋಗಿ ಮಹಿವಾಲ್ಗೆ ಸುದ್ದಿ ತಿಳಿಸಲು ಸೊಹ್ನಿ ಮುಂದಾಗುತ್ತಾಳೆ.
ಸೊಹ್ನಿ ನದಿಯಲ್ಲಿ ಈಜುವಾಗ ಮಡಕೆಯ ಈಜು ಬುರುಡೆಯನ್ನು ಉಪಯೋಗಿಸುತ್ತಿರುತ್ತಾಳೆ! ಈ ಸಲ ಅವಸರದಲ್ಲಿ ಸುಟ್ಟಿರುವ ಈಜು ಬುರುಡೆಯನ್ನು ಕಟ್ಟಿಕೊಳ್ಳದೆ ಹಸಿ ಮಣ್ಣಿನಿಂದ ತಯಾರಿಸಿದ ಈಜು ಬುರಡೆಯನ್ನು ಕಟ್ಟಿಕೊಂಡು ನದಿಗೆ ಹಾರುತ್ತಾಳೆ. ಸ್ವಲ್ಪ ದೂರ ಈಜುವಷ್ಟರಲ್ಲಿ ಈಜು ಬುರುಡೆಯ ಮಣ್ಣು ಕರಗಿ ಸೊಹ್ನಿ ನೀರಲ್ಲಿ ಮುಳುಗುತ್ತಾಳೆ. ಈ ವಿಷಯ ತಿಳಿದ ಮಹಿವಾಲ್ ಕೂಡ ಅದೇ ನದಿಗೆ ಹಾರಿ ಪ್ರಾಣ ಬಿಡುತ್ತಾನೆ.