ಮೊಳಕಾಲ್ಮೂರು: ‘ಮಣ್ಣಿಗೆ ಸ್ಪಷ್ಟ ರೂಪ ಕೊಡುವ ಕೈಚಳಕ ಹೊಂದಿರುವ ಕುಂಬಾರರು ತಮ್ಮ ಜೀವನಕ್ಕೆ ಸ್ಪಷ್ಟ ಚಿತ್ರಣ ಕೊಟ್ಟುಕೊಳ್ಳುಲು ಇನ್ನೂ ಸಾಧ್ಯವಾಗದೇ ಹೆಣಗುತ್ತಿದ್ದಾರೆ’ ಎಂಬುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಇದಕ್ಕೆ ತಾಲ್ಲೂಕಿನ ಕುಂಬಾರ ಕುಟುಂಬಗಳ ಪ್ರಸ್ತುತ ಚಿತ್ರಣವೇ ಸಾಕ್ಷಿ.
ಒಂದು ಕಾಲದಲ್ಲಿ ಅಡುಗೆ ಮನೆಯಲ್ಲಿ ದಿನಸಿಯಷ್ಟೇ ಪ್ರಾಮುಖ್ಯತೆ ಮಣ್ಣಿನ ಮಡಿಕೆಗಳಿಗೆ ಇತ್ತು. ಆಗ ತುಸು ನೆಮ್ಮದಿಯ ಜೀವನ ನಡೆಸಿ ಇದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದ ಕುಂಬಾರ ಕುಟುಂಬಗಳು ಈಗ ಆಧುನಿಕತೆ ಸುಳಿಗೆ ಸಿಲುಕಿವೆ. ಬೇಸಿಗೆಯಲ್ಲಿ ಮಾತ್ರ ಎರಡು ತಿಂಗಳು ಮಡಿಕೆ ಗಳಿಗೆ ಬೇಡಿಕೆಯಿದ್ದು, ಬೇರೆ ದಿನಗಳಲ್ಲಿ ಕುಂಬಾರರು ವೃತ್ತಿ ಮುಂದುವರಿಸಿಕೊಂಡು ಹೋಗಲು ಪರದಾಡಬೇಕಿದೆ.
ತಾಲ್ಲೂಕಿನ ದೇವಸಮುದ್ರ, ನಾಗಸಮುದ್ರ, ಮೊಳಕಾಲ್ಮುರು, ಕೋನಸಾಗರ, ಬಿ.ಜಿ.ಕೆರೆ. ಬೈರಾಪುರ ಹಾಗೂ ಗಡಿಭಾಗದ ಬೆಲ್ಲದಾರ ಹಟ್ಟಿಯಲ್ಲಿ ಮಾತ್ರ ಕುಂಬಾರಿಕೆ ನಡೆಯುತ್ತಿದೆ. ಅಂದಾಜು 23–25 ಕುಟುಂಬಗಳು ಈ ವೃತ್ತಿ ಮುಂದುವರಿಸಿ ಕೊಂಡು ಹೋಗುತ್ತಿವೆ. ಶ್ರಮಕ್ಕೆ ತಕ್ಕ ಆದಾಯವಿಲ್ಲ ಹಾಗೂ ಬೇಡಿಕೆಯೂ ಇಲ್ಲದಿರುವುದು ವೃತ್ತಿಯಿಂದ ವಿಮುಖರಾಗಲು ಮುಖ್ಯ ಕಾರಣವಾಗಿದೆ ಎಂದು ಹೇಳುತ್ತಾರೆ ದೇವಸಮುದ್ರದ ನಾಗರಾಜ.
ಮಣ್ಣಿನ ಪರಿಕರ ತಯಾರಿಕೆಗೆ ಕೆರೆಯಲ್ಲಿನ ಕಪ್ಪುಮಣ್ಣು, ನಂತರ ಜಿಗಿತನ ಹೊಂದಿದ ಕೆಂಪುಮಣ್ಣು, ಹರಳು ಮಣ್ಣು ಸೇರಿದಂತೆ ಮೂರು ವಿಧಗಳ ಮಣ್ಣು ಬೇಕಾಗುತ್ತದೆ. ಮೊದಲು ಮಣ್ಣನ್ನು ಗುಂಡಿಗೆ ಹಾಕಿ ರುಬ್ಬಬೇಕು ನಂತರ ಜರಡಿಯಿಂದ ಹಸನು ಮಾಡಿಕೊಳ್ಳಲಾಗುವುದು.
ನಂತರ ಮಿಶ್ರಣ ಮಾಡಿ ಗಾಲಿಗೆ ಹಾಕಿ ಆಕಾರ ತೆಗೆದು ಸಮತಟ್ಟು ಮಾಡಲಾಗುವುದು. ಈ ಕಾರ್ಯಗಳಿಗೆ 5–6 ಕಾರ್ಮಿಕರು ಬೇಕಾಗುತ್ತಾರೆ. ಮನೆ ಮಂದಿ ಎಲ್ಲಾ ಸೇರಿ ಕೆಲಸ ಮಾಡಿದರೂ ಹೊಟ್ಟೆಪಾಡು ಕಷ್ಟಸಾಧ್ಯ ಎಂದು ಬಿ.ಜಿ.ಕೆರೆಯಲ್ಲಿ ವೃತ್ತಿ ಮಾಡುತ್ತಿರುವ ಶಿವಮೂರ್ತಿ ಹೇಳುತ್ತಾರೆ.
‘ಮಡಿಕೆಗೆ ರೂಪ ಕೊಡುವುದು ಒಂದು ಕಷ್ಟವಾದರೆ ಅವುಗಳನ್ನು ಭಟ್ಟಿಯಲ್ಲಿ ಸುಡುವುದು ಮತ್ತೊಂದು ಕಷ್ಟ. 100 ಮಡಿಕೆಗಳನ್ನು ಭಟ್ಟಿಯಲ್ಲಿ ಹಾಕಿ ಸುಟ್ಟಲ್ಲಿ ಕೈಗೆ ದೊರೆಯುವುದು 60 ಮಾತ್ರ. ಉಳಿದವು ನಾನಾ ಕಾರಣಗಳಿಂದ ರಂಧ್ರ ಬೀಳುತ್ತವೆ, ಕೆಲವು ಒಡೆದು ಹೋಗುತ್ತವೆ. ಇದಕ್ಕೆ ನಿಖರ ಕಾರಣ ತಿಳಿಯುವುದು ಕಷ್ಟ. ಆದ್ದರಿಂದ ಭಟ್ಟಿ ಸುಡುವ ಮುನ್ನ ದೇವರ ಮೇಲೆ ಭಾರ ಹಾಕಿ ಸುಡುತ್ತೇವೆ’ ಎಂದು ಅವರು ಹೇಳಿದರು.
ಪ್ರಸ್ತುತ ಸ್ಟೀಲ್, ಅಲ್ಯುಮಿನಿಯಂ, ಪ್ಲಾಸ್ಟಿಕ್ ಪಾತ್ರೆಗಳಿಂದಾಗಿ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಕ್ಷೀಣಿಸಿದೆ. ಸಾಗಣೆ ಸಮಸ್ಯೆಯಿಂದಾಗಿ ಸುತ್ತಲಿನ ವಾರದ ಸಂತೆಗಳೇ ಮಾರುಕಟ್ಟೆಗಳಾಗಿವೆ ಎಂಬುದು ಕುಂಬಾರರ ಬೇಸರವಾಗಿದೆ.
– ಕೊಂಡ್ಲಹಳ್ಳಿ ಜಯಪ್ರಕಾಶ