ಬೆಂಗಳೂರು : ಪ್ರಾಣಿಗಳು, ಜೀವ ವೈವಿದ್ಯದೊಂದಿಗೆ ಸಸ್ಯ ಸಂಕುಲಗಳನ್ನು ತನ್ನೊಡಲ ತುಂಬೆಲ್ಲ ಕಲೆಯಲ್ಲಿ ಅನಾವರಣಗೊಂಡು, ಮೈದಳೆದು ನಿಂತಿರುವ ಈ ಮಡಿಕೆ ವಿಶ್ವದಲ್ಲೇ ಅತಿ ಎತ್ತರದ ಅರ್ಥನ್ ಪಾಟ್ (ಮಣ್ಣಿನ ಮಡಿಕೆ). ಪರಿಸರ ಪ್ರಜ್ನೆ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಸ್ಯಕಾಶಿಯಲ್ಲಿ ದಾಖಲೆಯ ಗರಿಯೊಂದಿಗೆ ಎದ್ದು ನಿಂತಿದೆ.
ಸಸ್ಯಕಾಶಿ ಲಾಲ್ ಬಾಗ್ ಅಂದರೆ ಹೂಗಳ ರಾಶಿ, ಹಸಿರು ಮರಗಳು ಕಣ್ಮುಂದೆ ಬರುತ್ತೆವೆ.. ಆದರೀಗ ಇವುಗಳ ಮಧ್ಯದಲ್ಲೇ ವಿಶ್ವದಲ್ಲೇ ಅತಿ ಎತ್ತರದ ಅರ್ಥನ್ ಪಾಟ್ ನಿರ್ಮಾಣವಾಗಿ ಪ್ರವಾಸಿಗರನ್ನು ನಿಬ್ಬೆರಗಾಗುವಂತೆ ಮಾಡಿದೆ.
ಒಂದೆಡೆ ಮಣ್ಣಿನಲ್ಲಿ ಮೂಡಿಬಂದ ಪ್ರಾಣಿಗಳು.. ಇನ್ನೊಂದೆಡೆ ಮರೆಯಾದ ಪಕ್ಷಿಗಳು.. ಮತ್ತೊಂದೆಡೆ ಎಲೆಗಳ ಸಂಕೇತ.. ಹೀಗೆ ಹತ್ತು ಹಲವು ವೈವಿಧ್ಯಮಯ ಕಲೆಗಳನ್ನ ಹೊತ್ತು ನಿಂತ ಮಣ್ಣಿನ ಮಡಿಕೆಯಿದು.. ಪ್ರಕೃತಿಯ ವೈಶಿಷ್ಟ್ಯದ ಜೊತೆಗೆ ಲಾಲ್ ಬಾಗ್ ನಲ್ಲಿರುವ ಬಹುತೇಕ ಎಲ್ಲ ಮರಗಳ ಎಲೆಗಳನ್ನು ಈ ಕುಂಡದಲ್ಲಿ ಮೂಡಿಸಲಾಗಿದೆ.. ನಮ್ಮ ಕಲೆ, ಸಂಸ್ಕೃತಿಯೊಂದಿಗೆ ಪ್ರಕೃತಿಯನ್ನು ಉಳಿಸಲು ಜನಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಈ ಅಧ್ಬುತ ಅರ್ಥನ್ ಪಾಟ್ ಕಲಾಕೃತಿ ಬರೋಬ್ಬರಿ 26 ಅಡಿ ಎತ್ತರವಿದೆ. ವಿಶ್ವದಲ್ಲೇ ಅತಿ ಎತ್ತರದ ಮಣ್ಣಿನ ಕುಂಡವೆಂದು ದಾಖಲೆಯ ಪುಟ ಸೇರಿದೆ. ಸಸ್ಯಕಾಶಿ ಲಾಲ್ ಬಾಗ್ ನ ಬೊನ್ಸಾಯಿ ಪಾರ್ಕ್ ನಲ್ಲಿ ಸಿದ್ಧಗೊಂಡಿರುವ ಈ ಮೆಲ್ಟಿಂಗ್ ಪಾಟ್ ಆಫ್ ಕಲ್ಚರ್ ಕುತೂಹಲಕ್ಕೊಂದು ಕನ್ನಡಿಯಂತಿದೆ.
ಜಾನ್ ದೇವರಾಜ್ ವಿನ್ಯಾಸದಲ್ಲಿ ಮೂಡಿಬಂದ ಈ ಪಾಟ್ ಗೆ ಬಾರ್ನ್ ಫ್ರೀ ಆರ್ಟ್ ಶಾಲೆಯ ಮಕ್ಕಳೇ ಪ್ರಮುಖ ನಿರ್ಮಾತೃಗಳು. ಸುಮಾರು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸತತ ಆರು ತಿಂಗಳ ಪರಿಶ್ರಮದ ಫಲವಾಗಿ ಈ ಮಡಿಕೆ ಹೊರಹೊಮ್ಮಿದೆ. ರಾಜ್ಯದ ಹಲವು ಕಲಾಕಾರರ ಜೊತೆಗೆ ಇಂಗ್ಲೆಂಡ್, ಮಲೇಷಿಯಾ, ಫ್ರಾನ್ಸ್, ಸ್ವೀಡನ್, ಬಾಂಗ್ಲಾದೇಶ್ ಸೇರಿದಂತೆ 30 ಕ್ಕೂ ಹೆಚ್ಚು ವಿದೇಶಿಯರೂ ಈ ಕಲೆಯ ಕುಂಡಕ್ಕೆ ಕೈ ಜೋಡಿಸಿದ್ದಾರೆ. ಇಲ್ಲಿ ವಿದೇಶಿಗರು ತಮ್ಮ ದೇಶದ ಎಲೆಯೊಂದನ್ನು ಕುಂಡದ ಮೇಲೆ ನಿರ್ಮಿಸಿರುವುದು ಇನ್ನೊಂದು ವಿಶೇಷ.
‘ಬಹು ಎಲೆಗಳಿಂದ ಕೂಡಿದರೆ ಒಂದು ಮರ; ಬಹು ಮಣ್ಣಿನ ಮಕ್ಕಳು ಒಂದೇ ಮಾತೃಭೂಮಿ ಮಕ್ಕಳು’ ಎಂಬ ಪರಿಸರ ಜಾಗೃತಿಯೊಂದಿಗಿನ ಧ್ಯೇಯೋದ್ದೇಶದೊಂದಿಗೆ ಈ ಪಾಟ್ ನಿರ್ಮಿಸಲಾಗಿದೆ. ಅಳಿವಿನಂಚಿನಲ್ಲಿರುವ ಪರಿಸರವನ್ನು ಯಾವರೀತಿ ಕಾಪಾಡಿಕೊಳ್ಳುವ ಅಗತ್ಯತೆಯಿದೆ ಎಂಬುದನ್ನು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಮಡಿಕೆಯನ್ನು ಅನಾವರಣಗೊಳಿಸಲಾಗಿದೆ ಎಂದು ಜಾನ್ ದೇವರಾಜ್ ಹೇಳುತ್ತಾರೆ.
ಈಗಾಗಲೇ ಕೊರಿಯಾದಲ್ಲಿ 15 ಅಡಿ ಎತ್ತರದ ಪಾಟ್ ಇದೆ. ಆದರೆ ಈ ಪಾಟ್ ಅದನ್ನೂ ಮೀರಿಸುವಂತೆ ಲಾಲ್ ಬಾಗ್ ನಲ್ಲಿ ಎದ್ದು ನಿಂತಿದೆ… ಜೇಡಿ ಮಣ್ಣಿನಿಂದ ನಿರ್ಮಾಣಗೊಂಡ ಪಾಟನ್ನ ಬೆಂಕಿಯ ಕುಲುಮೆಯಲ್ಲಿ ಸುಟ್ಟು ಗಟ್ಟಿಗೊಳಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಅದ್ಭುತ ಕಲಾಕೃತಿ ಜನತೆಯಲ್ಲಿ ಕೌತುಕ ಮೂಡಿಸಿದೆ.
ಮಾನವ ಮತ್ತು ಪ್ರಕೃತಿ ನಡುವಿನ ಸಾಮರಸ್ಯವನ್ನು ಬೆಸೆಯುವ ಪರಿಸರ ಸಂಸ್ಕೃತಿಯ ಕೊಂಡಿಯಂತಿದೆ ಈ ಮಡಿಕೆ. ವಿಶ್ವದ ಅತಿ ಎತ್ತರದ ಮಣ್ಣಿನ ಮಡಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕಲಾಕೃತಿ, ಮಣ್ಣು ಮತ್ತು ಮಾನವನ ನಡುವಿನ ಪರಿಸರದ ನಂಟನ್ನು ಬಿಂಬಿಸುವಂತಿದೆ. ಇದೊಂದು ಮಣ್ಣಿನ ಸಂಸ್ಕೃತಿಯ ಸಮ್ಮಿಳನದಂತಿದೆ ಎಂದರೆ ತಪ್ಪಾಗಲಾರದು.
ಬರಹ : ಚಂದ್ರಲೇಖಾ ರಾಕೇಶ್