ಓದುವ ಮುನ್ನ..
ಈ ‘’ಅಣ್ಣು’’ ಕಥೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಪುಟ್ಟಣ್ಣ ಕುಲಾಲ್ ಯುವ ಕಥೆಗಾರ” ಪ್ರಶಸ್ತಿ ಸಿಕ್ಕಿದೆ. ಅಲ್ಲದೆ ಈ ಕಥೆ ಸನ್ಮಾರ್ಗ ವಾರ ಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಈ ಕಥೆಯಲ್ಲಿ ಬರುವ ಸಂಭಾಷಣೆಗಳಿಗೆ ನಾನು ಕುಂದಾಪುರ ಕನ್ನಡದ ಸೊಗಡನ್ನು ನೀಡಿದ್ದೇನೆ. ಆದರೆ ನಮ್ಮ ಕುಂದಾಪುರ ಕನ್ನಡವನ್ನು ಬಹಳ ಚಂದವಾಗಿ ಮಾತನಾಡಬಹುದು. ಆದರೆ ಅದನ್ನು ಬರೆಹದ ರೂಪಕ್ಕಿಳಿಸುವುದು ಕಷ್ಟ. ಅಂದರೆ ಕುಂದ ಗನ್ನಡ ಅದೊಂದು ಮೌಖಿಕ ಅಭಿವ್ಯಕ್ತಿಯ ಸಾಧನವೇ ವಿನಃ ಬರೆಹದ ಬಾಷೆ ಅಲ್ಲ. ಹಾಗಾಗಿ ಕುಂದಗನ್ನಡಕ್ಕೆ ಹತ್ತಿರವಾದ ಭಾಷೆಯನ್ನು ಇಲ್ಲಿ ಬಳಸಿದ್ದೇನೆ.
ಈ ಕಥೆಯ ಕುರಿತು..
ಈ ಕಥೆಯಲ್ಲಿ ಬರುವ ಅಣ್ಣು ಅನ್ನವ ಪಾತ್ರದ ವ್ಯಕ್ತಿತ್ವ ಇರುವ ಕೆಲವರನ್ನು ನಾನು ನನ್ನ ಹಳ್ಳಿಯ ಪರಿಸರದಲ್ಲಿ ಇವತ್ತೂ ನೋಡುತಿದ್ದೇನೆ. ಆಧುನಿಕತೆಯ ಗಾಳಿಯಾಗಲಿ, ಇವತ್ತಿನ ಬದಲಾದ ನಾಗರಿಕ ಪ್ರಜ್ಞೆಯಾಗಲಿ ಇವರಿಗಿನ್ನು ಬಂದಿಲ್ಲ; ಕುಗ್ಗಿ-ತಗ್ಗಿ-ಬಗ್ಗಿ ನೆಡೆಯುವ ಶ್ವಾನ ಪ್ರಜ್ಞೆಯಿಂದ ಅವರಿನ್ನು ಹೊರಗೆ ಬಂದಿಲ್ಲ..
ಅದೇ ತರಹ ಒಂದು ಕಾಲದಲ್ಲಿ ಇಡೀ ಹಳ್ಳಿಯೊಂದರ ಕೇಂದ್ರ ಮನೆಯಾಗಿದ್ದ ಗುತ್ತಿನ ಮನೆಗಳು ಬದಲಾದ ಆಧುನಿಕ ಕಾಲಘಟ್ಟದಲ್ಲಿ ಕೃಷಿ ಕೆಲಸಗಾರರ ಕೊರತೆಯಿಂದ ತಾವು ನಂಬಿರುವ ಕೃಷಿ ಬದುಕನ್ನು ನೆಡೆಸಿ ಮುಂದುವರಿಸಲು ಪಡುತ್ತಿರುವ ಯಾತನೆಯನ್ನು ನಾನು ಕಣ್ಣಾರೆ ಕಂಡು ಇಲ್ಲಿ ಅದಕ್ಕೆ ಬರಹದ ರೂಪವನ್ನು ಕೊಟ್ಟಿದ್ದೇನೆ. ಹಾಗಾಗಿ ಇದು ಬರೀ ಕಲ್ಪನೆಯ ಅಭಿವ್ಯಕ್ತಿ ಅಲ್ಲ.. ಕಥಾ ರೂಪಕ್ಕಿಳಿಸಿರುವ ನಿಜ ವ್ಯಕ್ತಿತ್ವ.
——————
ಅಧ್ಯಾಯ 1
——————-
ನಿನ್ನೆ ಸಂಜೆ ಗೂಡು ಸೇರದೆ ತನ್ನ ಸ್ವತಂತ್ರ ಬುದ್ದಿಯಿಂದ ಹಟ್ಟಿ ಮಾಳಿಗೆಯನ್ನೇರಿ ಕುಳಿತು ತೂಕಡಿಸುತಿದ್ದ ಶಿವಪುರ ದೊಡ್ಮನೆಗೆ ಸೇರಿದ ‘ಪೈಟರ್ ಹುಂಜ’ನಿಗೆ ಬೆಳಗಾಗುವುದರ ಮುನ್ಸೂಚನೆ ಅದೇಗೂ ಸಿಕ್ಕಿ ಬಿಟ್ಟಿತು. ಚಂದದ ನವಿಲು ಬಣ್ಣ ಹೊದ್ದ ತನ್ನ ರೆಕ್ಕೆಯ ಗರಿಯೊಳಗೆ ಚೂಪು ಕೊಕ್ಕುಗಳನ್ನು ಒಮ್ಮೆ ತೂರಿಸಿಕೊಂಡು ಕೆದರಿಕೊಂಡಿತು. ಅದರ ಮುಕುಳಿಯಿಂದ ಪಿಚಕ್ಕನೆ ಕಂದು ಹೇಲು ಕೆಳ ಜಾರಿತು. ಹಟ್ಟಿ ಮಾಳಿಗೆಗೆ ಹಾಸಿದ್ದ ಸಾಲು ‘ಅಡಿಕೆ ದಬ್ಬೆ’ಗಳಲ್ಲಿ ಒಂದನ್ನು ಆರಿಸಿ ಕೂತಿದ್ದ ಹುಂಜ ತನ್ನ ‘ಜಾಡಿ’(ಉಗುರು) ಬೆಳೆದ ಬಲಿಷ್ಟ ಕಾಲುಗಳಿಂದ ಅದನ್ನು ಅಮುಕಿ ಹಿಡಿದು ಗರಿಗಳನ್ನು ಕೊಡವಿ ರಾಜ ಗಾಂಭಿರ್ಯದಿಂದ ಮೇಲೆದ್ದು ನಿಂತಿತು. ಚಂದದ ಕೆಂಪು ಜುಟ್ಟು ಬೆಳೆದಿದ್ದ ತನ್ನ ನೀಳ ಕುತ್ತಿಗೆಯನ್ನು ಮುಂದಕ್ಕೆ ಚಾಚಿ ಕೊಕ್ಕೊ..ಕ್ಕೊ. ಎಂಬ ಗಂಡು ಕೂಗನ್ನು ಹೊರಡಿಸಿತು. ಆ ಮೂಲಕ ಕಪ್ಪಗಿನ ಕಂಬಳಿಯನ್ನು ಹೊದ್ದು ಜಡವಾಗಿ ಮಲಗಿದ್ದ ಇಳೆಗೆ ಬೆಳಗಿನ ಮೊದಲ ಶುಭಕಾಮನೆಯನ್ನು ಕೋರಿತು. ತನ್ನ ಸಂಗಾತಿಗಳ್ಯಾರಾದರೂ ತನ್ನ ಕೂಗಿಗೆ ದನಿ ಸೇರಿಸುವರೇನೂ ಅನ್ನುವಂತೆ ಕಾತುರದಿಂದ ಕಾಯ ಹತ್ತಿತು..
ಆ ಕೋಳಿ ಹುಂಜದ ಬೆಳಗಿನ ಜಾವದ ಮೊದಲ ಕೂಗು ಯಾರನ್ನ ತಲುಪಿತೊ-ಬಿಟ್ಟಿತೋ ನಾ ಕಾಣೆ.! ಆದರೆ ಕಪ್ಪು ಕತ್ತಲೆ ಹೊದ್ದ ದೊಡ್ಮನೆಯ ಒಳ ಕೋಣೆಯಲ್ಲಿ ಮಲಗಿದ್ದ ಯಜಮಾಂತಿ ಸುಬ್ಬಮ್ಮ ಹೆಗ್ಗಡಿತಿಯನ್ನು ಮಾತ್ರ ಮುಟ್ಟಿ-ತಟ್ಟಿ ಎಬ್ಬಿಸಿತು.
ಹಿಂದಿನ ದಿನ ರಾತ್ರಿ ಅಡುಗೆ ಮನೆಯ ರಾಶಿ ಕೆಲಸವನ್ನು ಮುಗಿಸಿ ತೊಳೆದ ಪಾತ್ರೆ ಪಗಡೆಗಳನ್ನು ಒರೆಸಿ ಒಪ್ಪ ಓರಣವಾಗಿ ಜೋಡಿಸಿಟ್ಟು ಹಟ್ಟಿಯಲ್ಲಿದ್ದ ದನ ಕರುಗಳಿಗೆ ಬೈ ಹುಲ್ಲನ್ನೆಳೆದು ಹಾಕಿ ಮಲಗುವಾಗಲೇ ರಾತ್ರಿ ಹತ್ತರ ಮೇಲಾಗಿತ್ತು. ದಿನೇ ದಿನೇ ದಿಕ್ಕು ತಪ್ಪುತ್ತಿರುವ ದೊಡ್ಮನೆಯ ನೂರಾರು ತಾಪತ್ರಗಳು ಅವಳ ಮನಪಟಲದಲ್ಲಿ ದಿನಕ್ಕೊಮ್ಮೆಯಾದರೂ ಹಾದು ಹೋಗಿ ಹೆಗ್ಗಡಿತಿಯ ನಿದ್ದೆಗೆ ಭಂಗ ಬರುವುದಿತ್ತು. ಆದರೂ ಅದ್ಯಾವುದನ್ನೂ ಜಾಸ್ತಿ ಹೊತ್ತು ತಲೆಯಲ್ಲಿ ತುಂಬಿಕೊಳ್ಳದೆ ಸುಸ್ತಾದ ದೇಹವನ್ನು ಮಂಚಕ್ಕೊರಗಿಸಿ ನಿದ್ರಾದೇವಿಯ ತೆಕ್ಕೆಗೆ ಸೇರಿಬಿಡುವುದು ಅವಳ ನಿತ್ಯದ ರಿವಾಜು. ಆದರೆ ನಿನ್ನೆಯ ರಾತ್ರಿ ಮಾತ್ರ ನಿದ್ರೆ ಅವಳ ಬಳಿಗೆ ಸುಳಿಯಲೇ ಇಲ್ಲ. ಮಗ್ಗಲು ಬದಲಿಸಿ ಸೋತಳೆ ವಿನಃ ನಿದ್ರಾದೇವಿ ಅವಳನ್ನಪ್ಪಲಿಲ್ಲ.
ಹಗ್ಗಡಿತಿಯ ನಿದ್ದೆಗೆ ಭಂಗ ಬಂದಿದ್ದಕ್ಕೆ ಬಲವಾದ ಕಾರಣವಿತ್ತು. ಹಿಂದಿನ ದಿನದ ಬೆಳ್ಳಂಬೆಳಗ್ಗೆಯೇ ದಿನದ ಪದ್ದತಿಯಂತೆ ಕೆಲಸಕ್ಕೆ ಬಂದಿದ್ದ ದೊಡ್ಮನೆಯ ಖಾಯಂ ಆಳು, ಪ್ರಾಮಾಣಿ ಕ ದುಡಿತಗಾರ ಅಣ್ಣುವಿನ ಮೇಲೆ ಅವಳ ಪತಿ ಅಪ್ಪಣ್ಣ ಹೆಗ್ಗಡೇರು ಕೈ ಮಾಡಿದ್ದರು. ಹೆಗ್ಗಡೇರ ಸಿಟ್ಟಿನ ಪೆಟ್ಟಿಗೆ ಬಲಿಯಾಗಿ ದೊಡ್ಮನೆಗೆ ಬೆನ್ನು ತಿರುಗಿಸಿ ಹೋದ ಅವನು ಬಾನು ಪಡುವಣದಲ್ಲಿ ‘ಕಂತಿ’ ಹೋದರೂ ವಾಪಸ್ಸಾಗಲಿಲ್ಲ. ರಾತ್ರಿ ಹತ್ತಾದರೂ ಅಣ್ಣುವಿನ ಸುದ್ದಿಯೇ ಇಲ್ಲವಾದ್ದರಿಂದ ಅವನಿಗೆ ತೆಗೆದಿಟ್ಟ ಬೆಳಗಿನ ತಿಂಡಿ, ಮಧ್ಯಾಹ್ನದ ಗಂಜಿಯನ್ನು ದನದ ‘ಕಲಗಚ್ಚಿಗೆ’ ಎಸೆದು ಬಂದು ಮಲಗಿದ್ದಳು ಹೆಗ್ಗಡಿತಿ. ಅಪ್ಪಣ್ಣ ಹೆಗ್ಗಡೆಯಿಂದ ಪೆಟ್ಟು ತಿಂದು ತಗ್ಗಿಸಿದ ತಲೆಯನ್ನು ಮೇಲೆತ್ತದೆ ಮಂಡೆಯಲ್ಲಿದ್ದ ‘ಮಂಡಾಳೆ’ಯನ್ನು ಕೈಯಲ್ಲಿಡಿದು ದೊಡ್ಮನೆಗೆ ಬೆನ್ನು ತಿರುಗಿಸಿ ಸೋತ ಹೆಜ್ಜೆಯನ್ನಿಡುತ್ತಾ ಹೋದ ಅಣ್ಣುವಿನ ಚಿತ್ರಣ ಮತ್ತೆ-ಮತ್ತೆ ಅವಳೆದುರು ಬಂದು ನಿಲ್ಲುತಿತ್ತು. ಬದಲಾದ ಈ ವರ್ತಮಾನ ಜಗತ್ತಿನಲ್ಲಿ ತನ್ನೆಲ್ಲ ಘನ ಪರಂಪರೆಯನ್ನು ಕಳೆದುಕೊಂಡು ಬರಡಾಗಿರುವ ದೊಡ್ಮನೆಯ ಕೊನೆಯ ಒಕ್ಕಲು ಮಗ ಎಂಬ ರೀತಿಯಲ್ಲಿ ಈ ಅಣ್ಣು ಇಂದಿಗೂ ದೊಡ್ಮನೆಯಲ್ಲಿ ಗೇಯುತ್ತಿದ್ದವನು. ಇಂತವನ ಮೇಲೆಯೇ ಹೆಗ್ಗಡೇರು ಕೈ ಎತ್ತಿದ್ದು ಅವನು ಭಾರವಾದ ಹೆಜ್ಜೆಯಿಂದ ದೊಡ್ಮನೆಗೆ ಬೆನ್ನು ತಿರುಗಿಸಿ ಹೋದದ್ದು ರಾತ್ರಿಯಿಡೀ ಹೆಗ್ಗಡಿತಿಯನ್ನು ಚುಚ್ಚಿ ಚುಚ್ಚಿ ಸಾಯಿಸುತಿತ್ತು. ಅದ್ಯಾವ ಮಾಯಕದಲ್ಲೊ ಬೆಳಗಿನ ಜಾವದಲೆಲ್ಲೊ ಜೊಂಪು ನಿದ್ರೆ ಅವಳನ್ನು ಆವರಿಸಿದಂತಿತ್ತು. ಹುಂಜದ ಕೂಗಿಗೆ ಅದು ದೂರಾಗಿ ಅಣ್ಣು ಮತ್ತೆ ನೆನಪಾದ.
ಅಣ್ಣುವಿಗೂ-ದೊಡ್ಮನೆಗೂ ಇರುವ ಸಬಂಧದ ಆಳ ಅಗಲವನ್ನು ಅರಿಯಬೇಕಾದರೇ ಮೊದಲು ದೊಡ್ಮನೆಯ ಇತಿಹಾಸವನ್ನು ಅಭ್ಯಸಿಸಬೇಕು. ಒಂದು ಕಾಲದಲ್ಲಿ ದೊಡ್ಡ ಗುತ್ತಿನ ಮನೆಯಾಗಿ ನೂರಾರು ಒಕ್ಕಲುಗಳನ್ನು, ಗೇಣಿದಾರರನ್ನು ಹೊಂದಿದ್ದ ಶಿವಪುರ ದೊಡ್ಮನೆಯ ಘನ ವೈಭವ ಇವತ್ತು ಬರೀಯ ನೆನಪಷ್ಟೆ. ಅಪ್ಪಣ್ಣ ಹೆಗ್ಗಡೆಯ ಯೌವನದ ಕಾಲದವರೆಗೂ ಹಿಂದಿನಂತೆ ಸುಸೂತ್ರವಾಗಿ ನಡೆಯುತಿದ್ದ ದೊಡ್ಮನೆಯ ‘ದೊಡ್ಡಸ್ತಿಕೆ’ಯ ದರ್ಬಾರಿಗೆ ಅಂದಿನ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಹೊರಡಿಸಿದ ಕಾನೂನು ಅಕ್ಷರಶಃ ಮರಣ ಶಾಸನವಾಯ್ತು. ಉಳುವವನೆ ಹೊಲದೊಡೆಯ ಅನ್ನುವ ಭೂ ಸುಧಾರಣೆಯನ್ನು ದೇಶದಲ್ಲಿ ತಂದ ಸರಕಾರ ತಲೆ-ತಲಾಂತರದಿಂದ ದೊಡ್ಮನೆಯಂತಹ ಜಮಿನ್ದಾರಿ ಕುಟುಂಬಗಳ ಅಪಾರ ಭೂಮಿಯನ್ನು ಗೇಣಿಗಾಗಿ ಪಡೆದು ಗೇಯುತಿದ್ದ ಬಡ ಗೇಣಿದಾರರಿಗೆ ಹಂಚಿ ಅವರನ್ನು ಸ್ವತಂತ್ರರನ್ನಾಗಿಸಿತು. ಇಷ್ಟು ದಿನ ದೊಡ್ಮನೆಯಂತಹ ಜಮಿನ್ದಾರಿ ಕುಟುಂಬಗಳ ಒಕ್ಕಲುಗಳಾಗಿ ಅವರ ಹುಕುಂ, ದರ್ಪ,ದೌರ್ಜನ್ಯಗಳಿಂದ ನೊಂದು-ಬೆಂದು ಹೋಗಿದ್ದ ನೆಗಿಲ ಯೋಗಿಗೆಳೆಲ್ಲ ಗೇಣಿಗಾಗಿ ಗೇಯುತಿದ್ದ ಭೂಮಿಗಳನ್ನು ಸ್ವಂತದ್ದನ್ನಾಗಿಸಿಕೊಂಡು ದೊಡ್ಮನೆಯ ಹಂಗನ್ನು ಮೆಲ್ಲಗೆ ಕಳಚಿಕೊಳ್ಳಲಾರಂಭಿಸಿದರು. ಇತ್ತೀಚಿನ ವರ್ಷಗಳಲ್ಲಂತೂ ದೊಡ್ಮನೆಯಂತಹ ಜಮಿನ್ದಾರಿ ಕುಟುಂಬಗಳ ಕಡೆಗೆ ಮೂಸಿ ನೋಡುವವರು ಇಲ್ಲವಾಗಿದ್ದಾರೆ. ಸದಾ ಹೆಗ್ಗಡೇರು, ಶೇರಿಗಾರು, ಒಕ್ಕಲುಗಳು, ಮೂಲದಾಳುಗಳಂತಹ ವಿವಿದ ಸ್ತರದ ನೂರಾರು ಜನರಿಂದ ಕೂಡಿ ಕೃಷಿ ಚಟುವಟಿಕೆಯ ತಾಣಗಳಾಗಿ ಗೌಜಿ-ಗದ್ದಲಗಳಿಂದ ಕೂಡಿ ಜೀವಂತಿಕೆಯಲ್ಲಿದ್ದ ಮಲೆನಾಡು-ತುಳುನಾಡಿನ ಅನೇಕ ‘ಗುತ್ತಿನ ಮನೆಗಳು’, ಕುಂದ ನಾಡಿನ ‘ಒಡೇರ ಮನೆಗಳು’ ಇವತ್ತು ಮಸಿ ಹಿಡಿದ ಕತ್ತಲ ಸದನಗಳಾಗಿದೆ. ಗೆದ್ದಲು ತಿನ್ನುತಿರುವ ಇತಿಹಾಸದ ಪಳೆಯುಳಿಗಳಾಗಿದೆ.
ಇಲ್ಲಿ ಅಣ್ಣುವಿನ ಬಗ್ಗೆ ಪ್ರಸ್ತಾವಿಸಬೇಕು. ಬದಲಾದ ಈ ವರ್ತಮಾನ ಜಗತ್ತಿನಲ್ಲಿ ತನ್ನೆಲ್ಲ ಘನ ವೈಭವವನ್ನು ಕಳೆದುಕೊಂಡು ಹೆಸರಿಗಷ್ಟೆ ಶಿವಪುರ ದೊಡ್ಮನೆ ಎಂದು ಕರೆಸಿಕೊಳ್ಳುತ್ತಿರುವ ಈ ಮನೆಯ ಖಾಯಂ ಮೂಲದಾಳು ಅಣ್ಣು. ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ಇವನಂತೆ ದೊಡ್ಮನೆಯ ಮೂಲದಾಳುಗಳಾಗಿದ್ದ ಬೈಲ ಮನೆ ಈರ, ಹಾಡಿ ಮನೆ ಚೋಮ ಎಲ್ಲರು ಭೂ ಸುಧಾರಣೆಯ ಕಾನೂನಿಡಿಯಲ್ಲಿ ಸರ್ಕಾರಕ್ಕೆ ಅರ್ಜಿ ಬರೆಸಿ ಸ್ವಂತ ಭೂಮಿಯನ್ನು ಗಿಟ್ಟಿಸಿಕೊಂಡು ದೊಡ್ಮನೆಗೆ ಬೈ ಹೇಳಿದವರು. ಮೊದ-ಮೊದಲು ಅಪ್ಪಣ್ಣ ಹೆಗ್ಗಡೆ ಎದುರಿಕೆ ಸಿಕ್ಕಾಗ ಗೊಡ್ಡು ಸಲಾಂ ಅನ್ನಾದರೂ ಹಾಕುತಿದ್ದರು. ಇತ್ತೀಚೆಗೆ ‘ನಾವೇನು ಅವರಿಗೆ ಕಡಿಮೆ’ ಅನ್ನುವಂತೆ ಎದೆಯುಬ್ಬಿಸಿ ನೆಡೆಯುತ್ತಾರೆ.
ಆದರೆ ಅಣ್ಣು ಹಾಗಲ್ಲ. ಅಜ್ಜ ನೆಟ್ಟ ಆಲದ ಮರಕ್ಕೆ ಅಕ್ಷರಶಃ ನೇತು ಹಾಕಿಕೊಂಡಿರುವವನು. ತಾನು ಹುಟ್ಟಿರುವುದೇ ದೊಡ್ಮನೆಯ ಬಿಟ್ಟಿ ಕೆಲಸ ಮಾಡುವುದಕ್ಕೆ ಎಂದು ನಂಬಿರುವ ಮನುಷ್ಯ. ಅದರಲ್ಲೆ ಪರಮ ಸುಖವನ್ನು ಕಾಣುವವನು. ಸುಬ್ಬಮ್ಮ ಹೆಗ್ಗಡಿತಿ ಬೆಳಿಗ್ಗೆ ನೀಡುವ ನಾಲ್ಕು ಇಡ್ಲಿ, ಮಧ್ಯಾಹ್ನದ ಸೌಟು ಗಂಜಿ, ಉಪ್ಪಿನ ಕಾಯಿ ರಸ, ಕೋಳಿ ತುಂಡು, ದಿನಕ್ಕೆ ನಾಲ್ಕು ಸಾರಿ ವೀಳ್ಯ, ಸಂಜೆ ಕಂಠಪೂರ್ತಿ ಕುಡಿತ-ಇವತ್ತಿಗೂ ಇದಿಷ್ಟೆ ಜೀವನ ಅಂದುಕೊಂಡವನು. ಸರಕಾರದ ಯಾವುದೇ ಯೋಜನೆಗಳಾಗಲಿ-ಯೋಚನೆಗಳಾಗಲಿ ಅವನನ್ನು ಇದುವರೆಗೂ ಮುಟ್ಟಿಲ್ಲ,ಅವನು ಎಚ್ಚರಗೊಂಡೂ ಇಲ್ಲ.
ದಿನಕೊಬ್ಬರಾದರೂ ಅವನಿಗೆ ‘ಅಣ್ಣು.. ಇದು ಮೊದಲಿನ ಕಾಲವೂ ಅಲ್ಲ;ವಂಡಾರು ಕಂಬಳವೂ ಅಲ್ಲ.(ಇದೊಂದು ಕುಂದಗನ್ನಡದ ಅಪೂರ್ವ ಗಾದೆ ಮಾತು) ಈಗ್ಲೂ ಒಡೇರ ಕಾಲು ಒತ್ತುತ್ತಾ ಕೂರುವುದು, ಅವರ ಮನೆಯ ಬಿಟ್ಟಿ ಕೆಲಸ ಮಾಡ್ಕೊಂಡು ಬಿದ್ದಿರುವುದು ಇಷ್ಟೆ ಜೀವನ ಅಲ್ಲಾ ಮರಾಯ..ಸರಕಾರ ಎಷ್ಟೂಂದು ಸವಲತ್ತನ್ನು ನಿಮಗಾಗಿ ನೀಡ್ತಾ ಇದೆ ಗೊತ್ತುಂಟಾ? ಇನ್ನಾದ್ರೂ ನಿನ್ನ ಜೀವನಕ್ಕೆ ಸ್ವಂತದ್ದು ಅಂತೇನಾದ್ರೂ ಮಾಡ್ಕೊ’ಅಂತ ಬುದ್ದಿ ಹೇಳ್ತಾರೆ. ಅಣ್ಣು ಅದಕ್ಕೆ ‘ನನ್ನ ಜೀವನಕ್ಕೆ ಈಗೇನಾಗಿದೆ. ನಾ ಸುಖದಾಗೇ ಇದ್ನಲ್ಲ. ನೀನು ಒಡೇರ ಮನೆಗೆ ದ್ರೋಹ ಮಾಡು ಅಂತ ಚಾಡಿ ಹೇಳುವುದಾ ನನ್ನತ್ರ? ಆ ಹಡಬಿ ಕೆಲ್ಸನ ನಾ ಮಾಡಲ್ಲಪ್ಪೊ. ನಮ್ಮ ದೈಯಾ ಪಂಜುರ್ಲಿ ಮೆಚ್ಕೊಳ್ಳಲ್ಲ ಬಿಡೀ..ಹೆಹೆ.. ’ ಅಂತ ಹುಳು ಹಿಡಿದಿರುವ ತನ್ನ ಹಲ್ಲುಗಳನ್ನು ತೋರಿಸುತ್ತಾನೆ. ಬಹುಶಃ ಗತವೈಭವವನ್ನು ಕಳೆದುಕೊಂಡು ಗೆದ್ದಲು ಹಿಡಿಯುತ್ತಿರುವ ಗುತ್ತಿನ ಮನೆಗಳಲ್ಲಿ ಇವತ್ತಿಗೂ ಅಣ್ಣುವಿನಂತಹ ಒಂದೊಂದು ಮುಗ್ದ ಮನಸುಗಳು ಕೆಲಸಕ್ಕಿವೆ. ಸೂಕ್ಷ್ಮವಾಗಿ ಕಂಡರೆ ಇಂತಹವರು ಕಾಣುತ್ತಾರೆ.
ಆದರೆ ಬದಲಾದ ಈ ದಿನದಲ್ಲಿ ಅಣ್ಣುವಿನಂತಹ ಒಬ್ಬಂಟಿ ಕೆಲಸಗಾರನಿಂದ ದೊಡ್ಮನೆಯ ಎಷ್ಟು ಕೆಲಸ ಮಾಡಲು ಸಾಧ್ಯ.? ಅಣ್ಣು ದಿನವೂ ತನ್ನಿಂದಾಗುವ ಪ್ರಾಮಾಣಿಕ ದುಡಿತವನ್ನು ಮಾಡಿ ಅಪ್ಪಣ್ಣ ಹೆಗ್ಗಡೇರ ಶಹಬಾಸ್ಗಿರಿಗಾಗಿ ನೀರಿಕ್ಷಿಸುತ್ತಾನೆ. ಆದರೆ ಹೆಗ್ಗಡೇರ ಮುಖದಲ್ಲಿ ಈಗೀಗ ಪ್ರಸನ್ನತೆಯೇ ಮಾಯವಾಗಿ ದಿನ-ದಿನವೂ ಚಿಂತೆ-ಕೋಪ ಮಡುಗಟ್ಟಲು ಆರಂಭವಾಗಿದೆ. ಮೊದ-ಮೊದಲು ದೊಡ್ಮನೆಯ ತೀರಾ ಖಾಸ ಭೂಮಿಯ ವಾರ್ಷಿಕ ಸಾಗುವಳಿ ಕೆಲಸಗಳಿಗೆ ಕೂಲಿಯಾಳುಗಳಾಗಿ ಬರುತಿದ್ದವರೂ ಇತ್ತೀಚಿನ ದಿನಗಳಲ್ಲಿ ವರ್ಷಪೂರ್ತಿ ದುಡಿತ ಆಕರ್ಷಕ ವೇತನ ಸಿಗುವ ನಿರಂತರ ಉದ್ಯೋಗವನ್ನು ಹಿಡಿದಿದ್ದಾರೆ. ಕೃಷಿ ಕೆಲಸಗಳ ಬಗ್ಗೆ ಆಸಕ್ತಿಯನ್ನೆ ಕಳೆದುಕೊಂಡು ಅವರ ಸ್ವಂತ ಚೂರು-ಪಾರು ಕೃಷಿ ಭೂಮಿಯನ್ನೆ ಉತ್ತದೆ-ಬಿತ್ತದೆ ‘ಹಡಿಲು’ ಬಿಡುತ್ತಿದ್ದಾರೆ. ಇನ್ನು ದೊಡ್ಮನೆಯ ಕೆಲಸಗಳಿಗೆ ಜನ ಎಲ್ಲಿಂದ ಬಂದಾರು?
ಮೊನ್ನೆಯೂ ಹಾಗೇ ಆಗಿತ್ತು. ಚಿನ್ನದ ಉತ್ಪತ್ತಿ ತಂದು ಕೊಡುತ್ತಿದ್ದ ದೊಡ್ಮನೆಯ ಅಡಿಕೆ-ತೆಂಗಿನ ತೋಟಗಳು ಕಾಲ-ಕಾಲಕ್ಕೆ ಗೊಬ್ಬರ-ನೀರು ಸಿಗದೆ ಸೊರಗಿ ಹೋಗಲಾರಂಭಿಸಿದವು. ಇದನ್ನ ನೋಡಿ ತಾಳಲಾರದ ಅಪ್ಪಣ್ಣ ಹೆಗ್ಗಡೆ ತಮ್ಮ ದೊಡ್ಡಸ್ತಿಕೆಯನ್ನು ಬದಿಗೊತ್ತಿ ಮೆಟ್ಟನ್ನು ಮೆಟ್ಟಿ ನಿಂತರು. ಒಂದು ಕಾಲದಲ್ಲಿ ತಮ್ಮ ‘ಹುಕುಂ’ನಿಂದಲೇ ಕೆಲಸ ಮಾಡಿ ಕೊಡುತಿದ್ದ ಒಕ್ಕಲುಗಳ ಮನೆ ಮುಂದೆ ನಿಂತು ಆದಷ್ಟು ತಗ್ಗಿದ ಸ್ವರದಲ್ಲಿ ‘ಏ..ಚೀಂಕ್ರ ಒಂದಿನ ಅಡಿಕೆ ಬುಡ ಬಿಡಿಸಿಕೊಡೊ..ಧರ್ಮಕ್ಕೇನು ಮಾಡ್ಬೇಡ. ಕೂಲಿ ತಗೊ’ ಅಂತ ಅರಿಕೆ ಮಾಡಿಕೊಂಡರೂ ‘ಅಯ್ಯೊ ಹೆಗ್ಗಡೇರೇ ನಾನೀಗ ಕೃಷಿ ಕೆಲಸವೇ ಮಾಡೋದಿಲ್ವೆ. ರಟ್ಟೇಲಿ ಬಲವೂ ಇಲ್ಲ; ವಯಸ್ಸೂ ಆಯ್ತು..ಇರೋ ಒಬ್ಬ ಮಗ ಬೆಂಗಳೂರಂಗೆ ಬಿಜಿಸೆಸ್ ಮಾಡ್ತ..ಕಳೆದ ನವರಾತ್ರಿಗೆ ಊರಿಗೆ ಬಂದವ ಅಪ್ಪ..ನೀ ಕೂಲಿ ಕೆಲಸ ಮಾಡುವುದ್ನ ಬಿಟ್ಟು ಅಬ್ಬಿ ಜೊತೆ ಬೆಂಗಳೂರಿಗೆ ಬಂದು ಇರ್ರಿ ಅಂತೇಳ್ತಾ.. ನೀವು ಬೇರೆಯವರ ಹತ್ರ ಕೇಳಿ ಮರ್ರೆ. ನನ್ನಿಂದಾಗ..ಹೆಹೆಹೆ…’ಅಂತೇಳಿ ಸಾಗ ಹಾಕಿದ್ದ.. ಹತ್ತು ಮನೆ ತಿರುಗಿದ್ರು ಹೆಗ್ಗಡೇರೆಗೆ ಒಬ್ಬ ಆಳು ಸಿಗಲಿಲ್ಲ. ಅದೇ ತಲೆ ಬಿಸಿಲಿ ‘ಈ ಹಡಬೆ ಒಕ್ಕಲು ಮಕ್ಕಳಿಗೆ ದಿಮಾಕೆ!’ ಅಂತ ಕೂಗುತ್ತಲೇ ಮನೆಗೆ ಧಾವಿಸಿ ಬಂದು ಬೊಂಬೆಯಲ್ಲೆ ಸೆಟ್ಲ್ ಆಗಿದ್ದ ಮಗ-ಮಗಳಿಗೆ ಪೋನ್ ಹಾಯಿಸಿದರು. ‘ಹೀಗಾಯ್ತು ಮಕ್ಕಳೆ.. ಗುತ್ತಿನ ಮನೆ ಅಂತ ಮರ್ಯಾದೆ ಕೊಡುವವರು ಈ ಊರಿನಲ್ಲಿ ಒಬ್ರೂ ಇಲ್ಲ. ಈ ಕೃಷಿ ಕೆಲಸಾನ ಇನ್ನು ಮಾಡ್ಸುವುದು ಹೇಗೆ? ನನ್ನಿಂದಂತೂ ಆಗಲ್ಲಪ್ಪ.. ಅಂತ ಹೇಳಿದ್ರೆ ‘ಪಪ್ಪ..ಅದೆಲ್ಲ ನಮಗೆ ಗೊತಾಗುತ್ತಾ? ನಮಗೀವಾಗ ಆಫಿಸೀಗ್ ಟೈಂ ಆಯ್ತು. ಸಂಜೆ ಕಾಲ್ ಮಾಡಿ’ ಅಂತೇಳಿ ಪೋನ್ ಕುಕ್ಕಿದರು. ಸಮಾಧಾನದ ಮಾತುಗಳ ನಿರೀಕ್ಷೆಯಲ್ಲಿ ಮಕ್ಕಳಿಗೆ ಕಾಲ್ ಮಾಡಿದ ಅಪ್ಪಣ್ಣ ಹೆಗ್ಗಡೆಗೆ ಮಕ್ಕಳ ಪ್ರತಿಕ್ರಿಯೆ ಕಂಡು ಇನ್ನಷ್ಟು ಕೋಪ ಬಂದಿತು. ಯಾವುದರ ಮೇಲೆ ತೀರಿಸುವುದೆಂದು ಗೊತ್ತಾಗದೇ ಕಟ-ಕಟನೆ ಹಲ್ಲು ಕಡಿಯುತ್ತಾ ನಿಂತಿದ್ದರು.
ಆ ಸಮಯಕ್ಕೆ ಸರಿಯಾಗಿ ಅಣ್ಣು ಅಲ್ಲಿ ಪ್ರತ್ಯಕ್ಷನಾದ. ದಂಟನ್ನು ಮುರಿದೆಳೆದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬೆಟ್ಟಡಿಕೆಯ ಹೊಳನ್ನಿಟ್ಟು, ಹೊಗೆಸೊಪ್ಪಿನ ತುಂಡನ್ನು ಸೇರಿಸಿಕೊಂಡು ಬಾಯಿಗಿಟ್ಟು ಜಗಿಯುತ್ತಾ ಬಂದವನು ‘ಒಡೇರೆ ಇವತ್ತೇನ್ಮಾಡ್ಲಿ’ ಅಂದ. ಅಪ್ಪಣ್ಣ ಹೆಗ್ಗಡೆಯ ಮೈ ಊರಿದೊಯ್ತು. ‘ದಿಕ್ಕಿಲ್ಲದ ಪರದೇಸಿ ನನ್ಮಗ.. ಇವನೊಬ್ಬ ಬಾಕಿ ಇದ್ದ ದೊಡ್ಮನೆಯನ್ನು ಉದ್ದಾರ ಮಾಡಹೊರಟ ಪುಣ್ಯಾತ್ಮ, ನಾಳೆಯೊ-ನಾಡಿದ್ದೊ ಸಾಯೋ ನನಗೆ-ಇವಳಿಗೆ ಈ ಕೃಷಿ ಬದುಕು ಕರ್ಮಕ್ಕಾ? ನೀನಿನ್ನು ದೊಡ್ಮನೆ ಕೆಲಸಕ್ಕೆ ಬರುವುದು ಬೇಡ. ಎಲ್ಲ ಮುಂಡಾಮಚ್ಚಿ ಹೊಗ್ಲಿ.ನೀ ಮನೆಗೆ ಹೋಗ್’ ಅನ್ನುತ್ತಲೇ ರೇಗಾಡಿದ್ದರು. ಕ್ಷಣ ಗಲಿ-ಬಿಲಿಗೊಂಡ ಅಣ್ಣು ಅಂಗಳದ ಮೂಲೆಗೆ ಹೋಗಿ ಬಾಯಲಿದ್ದ ವೀಳ್ಯದ ಕೆಂಪು ರಸವನ್ನು ಉಗಿದ. ಆಮೇಲೆ ಮೆಲ್ಲಗೆ ತಾನು ಸೊಂಟಕ್ಕೆ ಸುತ್ತಿದ್ದ ಪಾಣ ಪಂಚೆಯ ಹಿಂಬಂದಿಯಲ್ಲಿ ನೇತು ಹಾಕಿದ್ದ ಹಿಡಿ ಕತ್ತಿಯನ್ನು ತೆಗೆದು ‘ಕತ್ತಿ ಮಸೆಯುವ ಮಣೆ’ ಬಳಿಗೆ ಬಂದ. ಅದರ ಮೇಲೆ ಹೊಯಿಗೆಯನ್ನು ಚೆಲ್ಲಿ ಸರ-ಸರನೆ ಕತ್ತಿ ಮಸೆದ. ‘ನಿಮಗೆಂತ ಆಯ್ತು ಒಡೇರೆ..ಬೆಳಗ್ಗೆ ಬೆಳಗ್ಗೆಯೇ ‘ರಾಂಗ್’ ಆಗಿದೀರಿ..ಒಡ್ತಿಯರು ಬೈದ್ರ..ಹೆ..ಹೆಹೆ! ಎನು ಕೆಲಸ ಮಾಡುವುದು ಹೇಳಿ..ಬೋಗಿ ಮರ ಹತ್ತಿ ಸೊಪ್ಪು ಉದುರಿಸುವುದಾ..ಅಡಿಕೆ ಮರದ ಬುಡಕ್ಕೆ ಹಾಕಬಹುದು ಆಗದ..ಕೆಲಸಕ್ಕೆ ಜನ ಬತ್ರಾ..?’ ಎಂದ. ಅಪ್ಪಣ್ಣ ಹೆಗ್ಗಡೆಗೆ ಎಲ್ಲಿಂದ ಸಿಟ್ಟು ಬಂತೋ ಅವರಿಗೆ ತಿಳಿಯಾ. ತಾನು ಯಾವತ್ತು ಕೈ ಎತ್ತದ ಅಣ್ಣುವಿನ ಬಳಿಗೆ ಎರಡೇ ಎರಡು ಹೆಜ್ಜೆಯಲ್ಲಿ ಧಾವಿಸಿ ಬಂದು ‘ನಿಂಗೆ ಒಂದು ಸಾರಿ ಹೇಳಿದ್ದು ಗೊತ್ತಾಗಲ್ವೇನು ರಂಡೆಮಗನೆ.. ನನ್ನ ಲೇವಡಿ ಮಾಡ್ತಿಯಾ? ತೊಲಗಿಲ್ಲಿಂದ..’ಅನ್ನುತ್ತಲೇ ಮುಖ-ಮೂತಿ ನೋಡದೆ ರಪ-ರಪನೆ ಬಾರಿಸಿದರು. ಅವನ ರಟ್ಟೆಯನ್ನು ಹಿಡಿದು ಅಂಗಳದಾಚೆಗೆ ನೂಕಿಬಿಟ್ಟರು.
ಅಡಿಗೆ ಮನೆಯಲ್ಲಿ ದನ-ಕರುಗಳಿಗೆ ಕಲಗಜ್ಜು ರೆಡಿ ಮಾಡುತ್ತಿದ್ದ ಸುಬ್ಬಮ್ಮ ಹೆಗ್ಗಡಿತಿ ಹೊರ ಬಂದು ನೋಡುವುದರೊಳಗೆ ಎಲ್ಲವು ನಡೆದು ಹೋಗಿತ್ತು. ದಿಗ್ಬ್ರಾಂತ ಸ್ಥಿತಿಯಲ್ಲಿ ಸೋತ ಭಾವದಿಂದ ಅಣ್ಣು ದೊಡ್ಮನೆಗೆ ಬೆನ್ನು ಹಾಕಿ ಬಿರ-ಬಿರನೆ ಹೊರನಡೆದಿದ್ದವನು ಮತ್ತೆ ವಾಪಸ್ಸಾಗಲಿಲ್ಲ. ರಾತ್ರಿಯಿಡೀ ಇದೇ ಘಟನೆ ಸುಬ್ಬಮ್ಮ ಹೆಗ್ಗಡಿತಿಯ ಮನಪಟಲದಲ್ಲಿ ಸುತ್ತುತಿತ್ತು.
ಹಟ್ಟಿ ಮಾಳಿಗೆಯಿಂದ ಕೆಳಗಿಳಿದು ಹೆಂಟೆಯ ಜೊತೆಗೂಡಿ ಅಹಾರ ಅನ್ವೇಷಣೆಗೆ ಹೊರಟ ಪೈಟರ್ ಹುಂಜ ದಿಮಾಕಿನಿಂದ ಇನ್ನೊಂದು ಕೂಗು ಹಾಕಿರುವುವದು ಸುಬ್ಬಮ್ಮನಿಗೆ ಸ್ಪಷ್ಟವಾಗಿ ಕೇಳಿಸಿತು. ‘ಇಷ್ಟು ಬೇಗ ಬೆಳಗಾಯ್ತಲ್ಲಪ್ಪ..ಕಲ್ಕುಡ ನೀನೆ ಕಾಪಾಡು’ ಅನ್ನುತ್ತ ಸುಬ್ಬಮ್ಮ ಹೆಗ್ಗಡತಿ ಮಂಚದಿಂದೆದ್ದು ಅಡಿಗೆ ಮನೆ ಕಡೆಗೆ ಹೆಜ್ಜೆಯನ್ನಿಟ್ಟಳು.
—————–
ಅಧ್ಯಾಯ 2
—————–
ಮೂಡಣದಿ ಆಗಷ್ಟೆ ಮೂಡಿ ಬರುತ್ತಿದ್ದ ಬಾಲದಿನಮಣ ಯ ಮೊದಲ ಕಿರಣಗಳು ಅಣ್ಣುವಿನ ಹರಕು ಜೋಪಡಿಯ ಮೇಲೆ ಚೆಲ್ಲಿಕೊಂಡವು. ನಬದಲ್ಲಿ ಮೇಲೆ-ಮೇಲೆ ಸಾಗುತ್ತಿದ್ದಂತೆಯೇ ಅವನ ಪ್ರಭಾ ಕಿರಣಗಳು ಪ್ರಜ್ವಲನೆಗೊಂಡು ವರ್ಷ-ವರ್ಷವೂ ಹುಲ್ಲು ಹೊದೆಸದೆ ಬಿಟ್ಟ ಹರಕು ಮಾಡುವಿನ ‘ಚಡಿಗಳ’ ಮೂಲಕ ಒಳ ಪ್ರವೇಶವಿಟ್ಟವು.
ನಿನ್ನೆ ಬೆಳಗ್ಗೆ ಒಡೇರ ಮನೆಗೆ ಹೋಗುವಾಗ ಉಟ್ಟಿದ್ದ ಪಾಣ -ಪಂಚೆಯನ್ನು ಬಿಚ್ಚದೆ ಹರಕು ಕಂಬಳಿಯನ್ನು ಹೊದ್ದು ನೆಲದಲ್ಲೆ ಪವಡಿಸಿದ್ದ ಅಣ್ಣು. ಅವನಿಗೆ ಹತ್ತಿರದಲ್ಲೆ ಖಾಲಿಯಾಗಿ ಬಿದ್ದಿರುವ ಎರಡು ಶರಾಬು ಶೀಸೆಗಳು, ಪೂರ್ತಿಯಾಗಿ ತುಂಬಿಕೊಂಡಿರುವ ಇನ್ನೆರಡು ಶೀಶೆಗಳು ಮಲಗಿದ್ದವು; ಅವನಿಗೆ ಜೊತೆಯಾಗಿ. ಹರಕು ಮಾಡುವಿನ ಚಡಿಗಳಲಿ ತೂರಿ ಬಂದ ಬಾಲ ಬಾಸ್ಕರನ ತೇಜೊಗಳು ಅಣ್ಣುವಿನ ಬಾಯಿಯ ಜೊಲ್ಲು ಸುರಿದ ಕಪ್ಪು ಮುಖದ ಮೇಲೆ ಬಿದ್ದು ನೃತ್ಯ ಮಾಡಲಾರಂಭಿಸಿದವು. ‘ಮತ್ತಿನ ನಿದೆ’್ರಗೆ ಯಾರೋ ತೊಂದರೆ ಕೊಟ್ಟಂತಾಗಿ ಮಗ್ಗಲು ಬದಲಿಸಿ ನೋಡಿದ, ‘ತಥ್’..ಎನ್ನುವಂತೆ ಕೈಗಳನ್ನು ಒದರಿ ನೋಡಿದ. ಸೂರ್ಯ ಪ್ರಭೆಗಳು ಅವನಿಗೆ ಚೂರೂ ಕ್ಯಾರೆ ಎನ್ನದೆ ತಮ್ಮ ತೇಜೋಪುಂಜವನ್ನು ಇನ್ನೂ ಬಿಸಿಮಾಡಿಕೊಂಡು ಅವನಿಗೆ ಮುತ್ತಿಕ್ಕವು.
ಮುಖಕ್ಕೆ ಕೈಗಳನ್ನು ಅಡ್ಡ ಹಿಡಿದೇ ಕಣ್ಣುಗಳನ್ನು ತೆರೆದು ನೋಡಿದ ಅಣ್ಣು. ಸೂರ್ಯ ಅದಾಗಲೇ ನೆತ್ತಿ ಮೇಲೆ ಏರಿ ನಿಂತಿದ್ದರ ಅರಿವು ಸ್ಷಷ್ಟವಾಗಿ ಗೋಚರಿಸಿತು. ಇಷ್ಟು ದಿನ ಇಷ್ಟೂತ್ತಿಗೆ ಒಡೇರ ಮನೆ ಸೇರಿ ಬೆಳಗಿನ ಒಂದು ಸುತ್ತಿನ ಕೆಲಸ ಮುಗಿಸಿ ವೀಳ್ಯ ಬಾಯಿಗಿಡುವ ಸಮಯ ಇದು ಅನ್ನುವುದು ಗೊತ್ತಾಗಿ ಮೆಲ್ಲಗೆ ಚಾಪೆಯಿಂದ ಎದ್ದು ಕುಳಿತ. ರಾತ್ರಿ ಅದೆಷ್ಟೊತ್ತಿಗೊ ಸೊಂಟದಿಂದ ಜಾರಿ ಹೋಗಿ ಮೂಲೆ ಸೇರಿದ ಪಾಣ ಪಂಜೆಯನ್ನು ಹತ್ತಿರಕ್ಕೆಳೆದು ಕಟ್ಟಿಕೊಂಡ.
ಯಾವತ್ತು ತನ್ನ ಮೈ ಮುಟ್ಟದೆ,ಪ್ರೀತಿ ವಿಶ್ವಾಸದಿಂದ ಕಾಣುತಿದ್ದ ಅಪ್ಪಣ್ಣ ಹೆಗ್ಗಡೆ ನಿನ್ನೆ ಕಾರಣವೇ ಇಲ್ಲದೆ ಥಳಿಸಿದ್ದು ಅವನ ಮನಸ್ಸನ್ನು ವಿಪರೀತ ಘಾಸಿಗೊಳಿಸಿತ್ತು. ನಿನ್ನೆಯಿಂದ ತುತ್ತನ್ನವೂ ತಿನ್ನದೇ ಬರಿದೇ ಶರಾಬನ್ನು ಬಾಯಿಗೆ ಸುರಿದುಕೊಂಡು ಮಲಗಿ ಎದ್ದು ಕೂತವನಿಗೆ ತಲೆ ‘ದಿಂ’ ಎನ್ನುತಿತ್ತು. ಅಲ್ಲೆ ಕುಂಡೆಯನ್ನು ಜಾರಿಸಿ ಗೋಡೆಗೊರಗಿ ಕುಳಿತ. ಯೋಚನೆಗಳು ಮುತ್ತಿಕೊಂಡವು.
‘ನಿನ್ನೆ ಬೆಳಗಾತೇ ಸೂರ್ಯ ಮೂಡೋ ಮೊದಲೇ ಒಡೇರು ನನ್ನ ಹೊಡೆದು ಬಿಟ್ರಲ..ಇದು ಸರೀಯಾ? ಅಲ್ಲ ನಾನೇನು ತಪ್ಪು ಮಾಡಿದೀನಿ ಅಂತ ಗೊತ್ತಾಗ್ತಿಲ್ಲ..ಅಷ್ಟಕ್ಕೂ ನನ್ನ ಮತ್ತು ಒಡೇರ ಮನೆಯ ಸಂಬಂಧ ಇವತ್ತಿನದಾ..ನಿನ್ನೇದಾ?ನಂಗೆ ನೆನಪಿರದಷ್ಟೂ ಹಳೇದು.
ನನ್ನಪ್ಪ ಈರಾನೂ ದೊಡ್ಮನೆಯ ನಂಬುಗೆಯ ಆಳು..ನನ್ನಜ್ಜನು ಅಷ್ಟೆ. ನಾನು ಅವರ ತರಾನೇ ದೊಡ್ಮನೆಗಾಗಿ ದುಡಿತಿದ್ದೀನಲ್ಲ.. ದೊಡ್ಮನೆ ಹೆಗ್ಗಡೆಗಳ ಎಡ-ಬಲ ಅಂತಿದ್ದ ಆಳುಗಳೆಲ್ಲ ಕಾಂಗ್ರೆಸ್ನ ಕಾನೂನು ಬಂದಾಗ ಸ್ವಂತ ಭೂಮಿನ ಮಾಡ್ಕೊಂಡು ದೊಡ್ಮನೆಯ ಹಂಗನ್ನ ಹೇಗೆ ಕಡಿದುಕೊಂಡ್ರು. ನಾನು ಯಾವತ್ತಾದ್ರೂ ಹಾಗೇ ಮಾಡಿದ್ನ?..ಎಷ್ಟು ಜನ ನನ್ನ ತಲೆ ತಿರುಸೋ ಕೆಲಸ ಮಾಡ್ಲಿಲ್ಲ ಕಾಂಬ..ಆರೇ ನಾನು ಬದಲಾಯಿನ?ಇಲ್ಲ..ನಂಗೆ ದೊಡ್ಮನಿ ಗೌಡರ ಮೇಲೆ ಇರುವ ನಂಬಿಕೆ ಅಂತಹದ್ದು..
ಅಂತಹ ನಂಬಿಕೆಯೇ ನಿನ್ನೆ ಬೆಳಗಾತೇ ಹಾಳಾಯಿ ಹೋಯ್ತಲ್ಲ..ನನ್ನ ರಟ್ಟೇಲಿ ಈಗ ಮೊದಲಿನಷ್ಟು ಬಲ ಇಲ್ಲದಿರಬಹುದು..ಆದರೆ ನಂಗೆ ಒಡೇರ ಮನೆ ಮೇಲಿರೋ ಪ್ರಾಮಾಣಿಕತೆ,ಗೌರವಕ್ಕೆ ಎಂದೂ ಚ್ಯುತಿ ಬರಲಿಲ್ಲ..ಇಂತಹ ನನ್ನ ಮೇಲೆಯೇ ಒಡೇರು ಕೈ ಮಾಡುವುದ..ಛೇ..’ ಅಣ್ಣುವಿಗೆ ಅಪ್ಪಣ್ಣ ಹೆಗ್ಗಡೆ ಹೊಡೆದದ್ದು ಅವನ ಆಚಲ ಸ್ವಾಮಿನಿಷ್ಟೆ, ಪ್ರಾಮಾಣಿಕತೆಗೆ ಮಾಡಿದ ಗದಾ ಪ್ರಹಾರದಂತಾಗಿತ್ತು. ಅವನಿಗೆ ದೊಡ್ಮನೆಯ ಮೇಲಿದ್ದ ಅಗಾಧ ಅಭಿಮಾನ, ನಂಬುಗೆಗೆ ಚೂಪು ಚೂರಿಯನ್ನು ಚುಚ್ಚಿದಂತಾಯಿತು.
‘ಏನಾದರೂ ಆಗ್ಲಿ..ಬೇರೆ ಯಾರು ನಂಗೆ ಹೊಡೆದದ್ದಾ?ನಮ್ಮ ಒಡೇರು ಹೊಡೆದದ್ದಲ..ಒಂದು ಸಾರಿ ಎದ್ದು ದೊಡ್ಮನೆ ಕಡೆ ಹೋಗಿ ಬತ್ತೆ’ ಅಂತ ಅಣ್ಣು ನಿನ್ನೆಯಿಂದ ನೂರು ಸಾರಿ ಯೋಚನೆ ಮಾಡಿದ್ದ. ಆದರೂ ಅವನ ಹೃದಯಕ್ಕೆ ಉಂಟಾದ ಅಘಾದ ನೋವು ಅವನನ್ನು ಮತ್ತೆ-ಮತ್ತೆ ತಡೆ ಹಿಡಿಯುತಿತ್ತು.
ಇನ್ನೇನು ಮಾಡುವುದಪ್ಪ ಅನ್ನುವ ಯೋಚನೆಯಲ್ಲಿರುವಾಗಲೇ ತುಂಬಿರುವ ಶರಾಬು ಬಾಟಲಿ ಅವನ ಕಣ್ಣಿಗೆ ಬಿತ್ತು..ಎರಡು ಬಾಟಲಿಯನ್ನು ಹತ್ತಿರಕ್ಕೇಳೆದುಕೊಂಡು ಗಟ-ಗಟನೆ ಕುಡಿದು ಮುಗಿಸಿದ. ಹಾಗೇ ನೆಲದ ಮೇಲೆ ಒರಗಿಕೊಂಡ..ಮತ್ತಿನ ಮಾಯೆ ಅವನನ್ನು ಬೇರೆ ಪ್ರಪಂಚಕ್ಕೆ ಎಳೆಯಿತು.
———————
ಅಧ್ಯಾಯ 3
———————
ಶತ-ಶತಮಾನಗಳಿಂದಲೂ ಜಗವನ್ನು ಬೆಳಗುವ ತನ್ನ ಪುಣ್ಯ ಕಾಯಕಕ್ಕೆ ಎಂದೂ ಮೋಸಮಾಡದ ಸೂರ್ಯದೇವ ಆವತ್ತೂ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮುಗಿಸಿ ಪಡುವಣದಲ್ಲಿ ಕಂತಿದ.
‘ಮೇವು-ಬಳ್ಳಿ’ ಬಿಗಿದಿದ್ದ ದನ ಕರುಗಳನ್ನು ಹಟ್ಟಿಗೆ ಎಬ್ಬಿ,ಕಟ್ಟಿ ಮನೆಯೊಳಗೆ ಹೊಕ್ಕಳು ಸುಬ್ಬಮ್ಮ ಹೆಗ್ಗಡಿತಿ. ಪಡಸಾಲೆಯಲ್ಲಿ ಹಲ್ಲಿಗೆ ಕಡ್ಡಿಯನ್ನು ತುರುಕಿಸುತ್ತಾ ತಮ್ಮದೆ ಯೋಚನೇಲಿ ಮುಳುಗಿದ್ದ ಪತಿ ಅಪ್ಪಣ್ಣ ಹೆಗ್ಗಡೆಯನ್ನು ಕಂಡು ಯಾಕೋ ಮೈ ಉರಿದು ಹೋಯ್ತು.. ‘ನಾ ಮದುವೆಯಾದ ದಿನದಿಂದ ಹೇಳ್ಕಂಡು ಬಂದಿದೀನಿ.. ಎದುರು ಸಿಟ್ಟು ಒಳ್ಳೆಯದಲ್ಲ ಅಂತ..ನಿಮ್ಮ ಯಾರದ್ದೂ ಮೇಲಿನ ಸಿಟ್ಟನ್ನ ಆ ಪಾಪ ಜೀವಿ ಅಣ್ಣು ಮೇಲೆ ತೀರ್ಸಕಂಡ್ರಿಯಲ..ಮೊದಲೇ ಕೂಲಿ ಕೊಡ್ತೆ ಅಂದ್ರೂ ದೊಡ್ಮನೆ ಕೆಲ್ಸಕ್ಕೆ ಬರೋಕೆ ಒಂದ್ಜನವೂ ಈ ಉರಾಗಿಲ್ಲ..ಇನ್ನು ಅಣ್ಣುವೂ ಬರಲ್ಲ ಕಂಡ್ಕಣ ..ಸುಮ್ನೆ ಹಲ್ಲಿಗೆ ಕಡ್ಡಿ ಹಾಕ್ತಾ ಕೂರೋ ಬದಲು ಆ ಅಣ್ಣು ಮನೆ ಕಡೀಗಾದ್ರೂ ಹೋಗಿ ಬರ್ಬಾರ್ದ..’ ಹೀಗೆ ಒಂದೆ ಸಮನೆ ಕೂಗಾಡ್ತಾನೆ ಒಳ ನೆಡೆದಳು ಹೆಗ್ಗಡಿತಿ.
ಸಿಟ್ಟಿನ ಭರದಲ್ಲಿ ಅಣ್ಣುವಿಗೆ ಹೊಡೆಯುದೇನೋ ಹೊಡೆದು ಬಿಟ್ಟಿದ್ದರು ಅಪ್ಪಣ್ಣ ಹೆಗ್ಗಡೆ. ಆದರೆ ಆಮೇಲೆ ನಾನು ಹೀಗೆ ಮಾಡ್ಬಾರ್ದಿತ್ತು ಅಂತ ನೂರು ಸಾರಿ ಯೋಚಿಸಿದ್ದರು..ಈಗಲೂ ಅದೇ ಗುಂಗಿನಲ್ಲಿದ್ದರು. ಮತ್ತೆ ತಡಮಾಡಲಿಲ್ಲ. ಮೆಟ್ಟನ್ನು ಮೆಟ್ಟಿ ನಿಂತು ಅಣ್ಣುವಿನ ಗುಡಿಸಲ ತಾವ ಬಂದು ‘ಅಣ್ಣುವ..ಏ.. ಅಣ್ಣುವ..’ಅನ್ನುತ್ತಾ ಒಳಗಿಣುಕಿದರು.
ನಾತ ಬೀರು ಶರಾಬು ಶೀಶೆಗಳ ಜೊತೆಯಲ್ಲಿ ಅಣ್ಣು ಒಳಗೆ ಮಲಗಿರುವುದು ತೋರಿತು. ಒಳ ನಡೆದು ಕುಕ್ಕುರು ಗಾಲಿನಲ್ಲಿ ಅಣ್ಣುವಿನ ಎದುರು ಕುಳಿತು ಅವನನ್ನು ನೋಡಿದರು. ಯಾವುದೋ ಅನುಮಾನಸ್ಪದ ಸಂಶಯವೊಂದು ಅವರನ್ನು ಹೊಕ್ಕಿತು. ನಡುಗುವ ಕೈಗಳಿಂದ ಅವನ ದೇಹವನ್ನು ಸ್ಪರ್ಶಿಸಿ ಮೂಗಿನ ಮೇಲೆ ಬೆರಳನ್ನಿಟ್ಟರು.
ಪ್ರಾಣ-ಪಕ್ಷಿ ಹಾರಿಹೋಗಿ ಗಂಟೆಗಳೇ ಉರುಳಿದ್ದರಿಂದ ಅಣ್ಣುವಿನ ಜಡ ದೇಹ ತಣ್ಣಗಾಗಿ ನಿಪ್ಪಗಾಗಿತ್ತು. ಗೋಡೆಯ ಸಂದಿನಿಂದ ಸಹಸ್ರ ಸಂಖ್ಯೆಯಲ್ಲಿ ಹರಿದು ಹರಿದು ಬರುತ್ತಿರುವ ಕಚ್ಚಿರುವೆಗಳು ಉತ್ಸಾಹದಿಂದ ಹೆಣದ ಸುತ್ತ ಓಡಾಡುತಿದ್ದವು..
ರಚನೆ: ಮಂಜುನಾಥ್ ಕುಲಾಲ್ ಹಿಲಿಯಾಣ
ಮಣಿಪಾಲ್ ಸ್ಕೂಲ್ ಆಫ್ ಕಮ್ಯೂನಿಕೇಶನ್
ಮಣಿಪಾಲ ವಿಶ್ವವಿದ್ಯಾನಿಲಯ
ಮಣಿಪಾಲ