ನೀ ನುಡಿವ ಮಾತಿಗೆ ಏನರ್ಥ ಹೇಳು
ಕಲಹಬೇಡ ಕಾಡಬೇಡ ನಾ ನುಡಿವೆ ಕೇಳು
ಅದೆಷ್ಟೇ ಹೂವಿದ್ದರೇನು ಮುಡಿವ ಮುಡಿಯಿಲ್ಲದಿರೆ
ಬಾನೆತ್ತರ ಬೆಳೆದರೇನು ಮಾಮರ ಫಲಬಿಡದೆ
ಮರೆಯಬಲ್ಲೆವೆ ನಾವು ಮರೆವಂತೆ ಸಾವು
ಕೂಡಿಬಾಳಲೆಂದೇ ಪಟ್ಟ ಇಷ್ಷೆಲಾ ನೋವ
ಗೂಡು ಕಟ್ಟಿ ಬದುಕುವ ಹಕ್ಕಿಗಳೆರಡು
ಹೆಕ್ಕಿ ತಂದ ಹಣ್ಣ ತಿಂದು ನಗುವುದ ಕೇಳು
ಅಷ್ಟಿದ್ದರೂ ಕಲಿತೆವೇನು ಹಂಚಿ ತಿನ್ನಲು
ನಮ್ಮೂಳಗಿನ ಪ್ರೀತಿಯ ಗಿಡದ ಹಣ್ಣನು
ಕಾಲಮಿಂಚಿದ ಮೇಲೆ ಮಾಡಿದರೇನು ಚಿಂತೆ
ಜಗವಿದು ಬದುಕಲೆಂದೇ ಹುಟ್ಟಿದವರ ಸಂತೆ
ಕಾಯುತ್ತಿರುವೆ ಹುತ್ತುಬಿತ್ತಿ ಕಾಯುವಂತೆ ಎಲ್ಲರು
ಮೂಡುವ ಮೊಳಕೆಗಾಗಿ ಚಿಗುರುವ ಚಿಗುರಿಗಾಗಿ
ಸುರಿದೆಲ್ಲಾ ನೀರ ಹೀರಿದರು ಭೂಮಿ
ಮತ್ತೆ ಸುರಿಯಬೇಡ ಎನುವುದೆ ಮಳೆಗೆ
ಹಾಸಿ ಹೊದೆವಷ್ಟು ನೋವಿದ್ದರೂ ಜೀವದೊಳಗೆ
ಪ್ರೀತಿಗೆಲ್ಲಿಯ ಕೊರತೆ ನಾವು ಒಂದಾದರೆ
ನೀನರದ ಬಾಳು ಸವಿಯಿರದ ಜೇನು
ಹುಣ್ಣಿಮೆ ಇರುಳಲಿ ಚಂದ್ರನಿರದ ಬಾನು
ನೀನಿರದ ಬಾಳು ಭಾವವಿರದ ಹಾಡು
ನಾವಿಕನಿರದ ನಾವೆಯಂಥ ಪಾಡು
-ಚಿದಂಬರ ಬೈಕಂಪಾಡಿ