ಪ್ರತಿಯೊಬ್ಬ ಮನುಷ್ಯನೂ ತನ್ನ ಭಾವನೆಗಳನ್ನು ವಿವಿಧ ಕಲಾ ಪ್ರೌಡಿಮೆಗಳ ಮುಖಾಂತರ ಅಭಿವ್ಯಕ್ತಿಸುವ ಚತುರತೆ ಹೊಂದಿರುತ್ತಾನೆ. ತನ್ನ ಮನಸ್ಸಿಗೆ ಹಿತವೆನಿಸುವ ಯಾವುದೇ ಕಲಾ ಕ್ಷೇತ್ರ ಇರಲಿ ತನ್ನನ್ನು ತಾನು ಅದರಲ್ಲಿ ತೊಡಗಿಸಿಕೊಳ್ಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯುತ್ತಾನೆ. ಇಂತಹದರಲ್ಲಿ ಚಿತ್ರಕಲೆ ಕೂಡಾ ಒಂದು. ಪ್ರಕೃತಿಯನ್ನು ಬಳಸಿಕೊಂಡು ವರ್ಣಗಳ ಮೂಲಕ ಭಾವನೆ ಬಿಂಬಿಸುವುದೇ ಚಿತ್ರಕಲೆ. ತನ್ನ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಅದನ್ನು ಚಿತ್ರಗಳ ಮೂಲಕ ಸೃಷ್ಟಿಸಿ ಅದ್ಭುತ ಚಿತ್ರಕಾರರೆಂದು ಪ್ರಸಿದ್ದಿ ಪಡೆದ ಅದೆಷ್ಟೋ ಮಂದಿ ಮಹಾನುಭಾವರು ನಮ್ಮಲ್ಲಿ ಇದ್ದಾರೆ.
ಇಂತಹ ಮಹಾನುಭಾವರ ಸಾಲಿಗೆ ಸೇರ್ಪಡೆಗೊಳ್ಳಬಹುದೆಂಬ ಆಶಾಭಾವನೆ ಮೂಡಿಸುತ್ತಾ, ತನ್ನ ಚಿಕ್ಕ ಪ್ರಾಯದಲ್ಲಿಯೇ ವರ್ಣಚಿತ್ರಕಲೆಯಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುತ್ತಿರುವ ಕುಲಾಲ ಸಮಾಜದ ಅರಳು ಪ್ರತಿಭೆ ರಾಷ್ಟ್ರಪತಿ ಬಂಗಾರದ ಪದಕ ಪುರಸ್ಕೃತೆ ದೀಕ್ಷಾ ಡಿ. ಮೂಲ್ಯ ಅವರು ಒಬ್ಬರು.
ತನ್ನ ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸಿ ವರ್ಣಚಿತ್ರಕಲೆಯ ಕಲಾಕುಂಚದಲ್ಲಿ ಅರಳುತ್ತಿಹ ಈಕೆ ಪೆರ್ಡೂರಿನ ದಿನೇಶ್ ಮೂಲ್ಯ ಮತ್ತು ಶಶಿಕಲಾ ಮೂಲ್ಯ ದಂಪತಿಯ ಪುತ್ರಿ. ಹೆಬ್ರಿಯ ಅಮೃತಾ ಭಾರತಿ ವಿದ್ಯಾಕೇಂದ್ರ ಶಾಲೆಯಲ್ಲಿ ಏಳನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಈಕೆ 2014ರಲ್ಲಿ ಲಲಿತಕಲಾ ಸೆಂಟರ್ ವತಿಯಿಂದ ಆಯೋಜಿಸಲ್ಪಟ್ಟ 9ನೇ ರಾಷ್ಟ್ರಮಟ್ಟದ ವಿದ್ಯಾರ್ಥಿ ಮತ್ತು ಶಿಕ್ಷಕರ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಂಗಾರದ ಪದಕ, 2013-14 ರಲ್ಲಿ ದೆಹಲಿಯಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ರವಿವರ್ಮ ಅಕಾಡಮಿ ಟ್ರಸ್ಟ್ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ಕರ್ನಾಟಕ ಪ್ರಗತಿಪರ ಸೇವಾ ಸಮಿತಿಯ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಲ್ಪಟ್ಟ ವರ್ಣ ಚಿತ್ರಕಲಾ ಸ್ಪರ್ಧೆಯಲ್ಲಿ 13ನೇ ಸ್ಥಾನ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಉಡುಪಿ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ, ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2009 ರಲ್ಲಿ ಉದಯವಾಣಿಯ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹೀಗೆ ಅರುವತ್ತಕ್ಕೂ ಮಿಕ್ಕಿ ತಾಲೂಕು, ರಾಜ್ಯ, ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ.
ಚಿತ್ರಕಲೆಯೊಂದಿಗೆ ನೃತ್ಯ, ಸಂಗೀತ, ಪ್ರಬಂಧ, ಕ್ರೀಡಾ ಕ್ಷೇತ್ರಗಳಲ್ಲಿಯೂ ಭಾಗವಹಿಸುತ್ತಾ, ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿ ತೇರ್ಗಡೆಗೊಳ್ಳುತ್ತಿರುವ ಈಕೆ ಸಕಲ ಕಲಾವಲ್ಲಭೆ. ಹಲವಾರು ಸಂಘ ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಮತ್ತು ವರ್ಣ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರರಾಗಿರುವ ದೀಕ್ಷಾ ಅವರನ್ನು ಇತ್ತೀಚಿಗೆ ಕುಲಾಲ ಒಕ್ಕೂಟ ನಾಸಿಕ್ನ ದಶಮಾನೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಸಮ್ಮಾನಿಸಲಾಯಿತು.
* ಶಶಿಕುಮಾರ್ ವಿ. ಕುಲಾಲ್



