`ವೀಕೆಂಡ್ ವಿದ್ ರಮೇಶ್’ ಕಾರ್ಯಕ್ರಮ ನೋಡುತ್ತಿದ್ದೆ. ನಟ ದೇವರಾಜ್ ಅವರ ಜೀವನದ ಮೆಲುಕುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವಾಗ ಅವರ ಹಾಗೂ ಹೆಚ್ಎಂಟಿ ಕಂಪನಿಯ ಒಡನಾಟದ ಬಗ್ಗೆ ಹೇಳಿದರು. ಅವಾಗ ನೆನಪಾಗಿದ್ದು ನಾನು ಹೆಚ್ಎಂಟಿ ವಾಚ್ ಖರೀದಿ ಮಾಡಿದ ಬಗ್ಗೆ…..
ಅದು ನಾನು ಪ್ರಾಥಮಿಕ ಶಾಲೆ ಬಿಟ್ಟು ನಮ್ಮನೆಯಿಂದ 8 ಕಿಮೀ ದೂರದಲ್ಲಿದ್ದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಸೇರಿದ್ದೆ. ಮೊದಲ ದಿನ ಜೂನ್ ಒಂದರಂದು ನನ್ನ ಸಹಪಾಠಿಯಾಗಿದ್ದ ಮಹೇಶ್ ಗಟ್ಟಿ(ಬಾಲವಾಡಿಯಿಂದ ಜತೆಗಿದ್ದ ನಾವು ಪ್ರೌಢಶಾಲೆಯನ್ನು ಮೂರು ವರ್ಷಗಳ ಕಾಲ ಆ ಎಂಟು ಕಿ.ಮೀಯನ್ನು ನಡೆದುಕೊಂಡು ಜತೆಯಾಗಿ ಹೋಗಿ ಕಳೆದಿದ್ದೆವು. ಆದರೆ ಇಂದು ಈತ ನಮ್ಮ ಜತೆಗಿಲ್ಲ. ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ನಮ್ಮನ್ನಗಲಿದ. ಈತನ ಹಾಗೂ ನನ್ನ ಒಡನಾಟದ ಬಗ್ಗೆ ಬರೆಯಬೇಕೆಂದು ಎರಡು ವರ್ಷಗಳಿಂದ ಯೋಚಿಸುತ್ತಿದ್ದೇನೆ ಹೊರತು ಸಾಧ್ಯವಾಗುತ್ತಿಲ್ಲ. ಮುಂದೆ ಬರೆಯುತ್ತೇನೆ)
ಮೊದಲ ದಿನ ನಮ್ಮೆಲ್ಲರನ್ನೂ ಶಾಲೆಯ ಮೊದಲ ಮಹಡಿಯಲ್ಲಿದ್ದ ತರಗತಿಯಲ್ಲಿ ಕೂರಲು ಹೇಳಿದರು. ಅವಾಗ ನಮ್ಮ ಜತೆಗೆ ಮೊದಲು ಬಂದು ಮಾತನಾಡಿಸಿದ್ದು ಒಂದು ಬಿಳಿ ಡಯಲ್ ಹಾಗೂ ಸ್ಟೀಲ್ ಚೈನ್ ಹೊಂದಿದ್ದ ಹೆಚ್ ಎಂಟಿ ವಾಚ್ ಕಟ್ಟಿದ್ದ ಹುಡುಗ…ನನಗೆ ಆತನಿಗಿಂತಲೂ ಆತನ ಕೈಯಲ್ಲಿದ್ದ ವಾಚೇ ಹೆಚ್ಚಿನ ಆಕರ್ಷಣೆಯ ವಸ್ತುವಾಗಿತ್ತು. ಅಂದೇ ಮನಸಲ್ಲಿ ಅಂದುಕೊಂಡಿದ್ದೆ ನಾನೂ ಈ ಹೆಚ್ ಎಂಟಿ ವಾಚ್ ಖರೀದಿಸಬೇಕೆಂದು. ಅಂದಿನಿಂದ ಆ ಹುಡುಗ ನನ್ನ ಸ್ನೇಹಿತನಾದ ಇಂದಿಗೂ ನಾವಿಬ್ಬರು ಆತ್ಮೀಯ ಸ್ನೇಹಿತರು. ಅವನ ಹೆಸರು ಗುಣಪಾಲ್ ನನ್ನ ಆಪ್ತ ಸ್ನೇಹಿತರ ಕೂಟದಲ್ಲಿ ಈತನೂ ಒಬ್ಬ. ಅದಕ್ಕಿಂತಲೂ ನಾವಿಬ್ಬರು ಸ್ನೇಹಿತರು ಎನ್ನುವುದಕ್ಕಿಂತಲೂ ಅಣ್ಣ ತಮ್ಮಂದಿರಂತಿದ್ದೇವೆ. ನಮ್ಮಿಬ್ಬರ ಮನೆಯವರಿಗೂ ಅಷ್ಟೇ ನಮ್ಮನೆಯಲ್ಲಿ ಯಾವುದೆ ಕಾರ್ಯಕ್ರಮವಾದರೂ ಆತನಿರಬೇಕು. ಇಲ್ಲದಿದ್ದರೆ ನಮ್ಮನೆ ಮಗನಿಲ್ಲದಂತಾಗುತ್ತದೆ. ಇದೇ ಅನುಭವ ಆತನ ಮನೆಯವರಿಗೆ. ಹೀಗಿರುವ ನಮ್ಮಿಬ್ಬರನ್ನು ಬೆಸೆದಿದ್ದು ಅಂದು ಆತ ಕಟ್ಟಿದ್ದ ಅದೇ ಹೆಚ್ ಎಂಟಿ ವಾಚ್. ಮೊದಲ ದಿನ ಆತನ ಕೈಯಲ್ಲಿ ವಾಚ್ ಕಂಡೊಡನೆ ಅಂದುಕೊಂಡಿದ್ದೆನಲ್ಲ ನನಗೂ ವಾಚ್ ಬೇಕೆಂದು…ಆದರೆ ಮನೆಯಲ್ಲಿ ಕೇಳಲು ಏಕೋ ಇಷ್ಟವಿರಲಿಲ್ಲ(ನಮ್ಮನೆಯಲ್ಲಿನ ಪರಿಸ್ಥಿತಿಯ ಅರಿವಿತ್ತು) ಆದರೂ ವಾಚ್ ನನಗೆ ಬೇಕು…ವಾಚ್ ಖರೀದಿಸಬೇಕಾದರೆ ಮುನ್ನೂರು ರೂಪಾಯಿಯ ಅಗತ್ತವಿತ್ತು. ಅವಾಗಲೇ ಹೊಳೆದಿದ್ದು ಆದಿತ್ಯಾವಾರದ ರಜಾ ದಿನದಂದು ಕೆಲಸಕ್ಕೆ ಹೋಗಿ ದುಡಿಯುವ ಯೋಚನೆ.
ನನ್ನ ದೊಡ್ಡಪ್ಪನ ಮಗನೊಂದಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಕಟ್ಟಡದ ಪಾಯ ತೆಗೆಯುವ ಕೆಲಸಕ್ಕೆ ಭಾನುವಾರದಂದು ಹೋಗುತ್ತಿದ್ದೆ(ಭಾನುವಾರದಂದು ದುಡಿದರೆ ಕೂಲಿಯಾಳುಗಳಿಗೆ ಒಂದೂವರೆ ಪಟ್ಟು ಕೂಲಿ ಕೊಡುತ್ತಿದ್ದರಿಂದ ನನ್ನಣ್ಣ ಭಾನುವಾರುವೂ ತಮ್ಮ ಸ್ನೇಹಿತರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದರು.)ಅಲ್ಲಿ ಐವತ್ತು ರೂಪಾಯಿ ಕೊಡುತ್ತಿದ್ದರು. ನಾಲ್ಕು ವಾರ ಹೋದ ನಂತರ ನನ್ನಣ್ಣ ಅಲ್ಲಿ ಕೆಲಸ ಬಿಟ್ಟು ಮಂಗಳೂರಿಗೆ ಬೇರೆ ಕೆಲಸಕ್ಕೆ ತೆರಳಿದರು. ಇದರಿಂದಾಗಿ ನನಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇನ್ನೂರು ರೂಪಾಯಿ ದುಡಿದಿದ್ದೆ. ಆದರೆ ಇನ್ನೂ ನೂರು ರೂಪಾಯಿ ಬೇಕು. ಏನು ಮಾಡೋದು ಗೊತ್ತಾಗಲಿಲ್ಲ. ಈ ಇನ್ನೂರು ರೂಪಾಯಿಯನ್ನು ತಂದೆ ತಂದು ಕೊಟ್ಟಿದ್ದ ಡಬ್ಬಿಯಲ್ಲಿ ಹಾಕಿ ಜೋಪಾನ ಮಾಡಿದ್ದೆ. ಆದರೆ ಯಾವುದೋ ಒಂದು ತುರ್ತು ಕೆಲಸಕ್ಕೆ ತಂದೆಗೆ ಹಣದ ಅಗತ್ಯ ಬಿದ್ದಿದ್ದರಿಂದ ಆ ಡಬ್ಬವನ್ನು ಒಡೆಯಬೇಕಾಗಿ ಬಂತು. ಒಡೆದು ಅವರು ಹಾಗೂ ನಾನು ಇಬ್ಬರೂ ಕೂಡಿಟ್ಟಿದ್ದ ಆರು ನೂರು ರೂಪಾಯಿಯನ್ನು ಹೊಂದಿಸಿ ಆ ಕಷ್ಟದಿಂದ ತಂದೆ ಹೊರ ಬಂದಿದ್ದರು. ಆದರೆ ನನ್ನ ವಾಚ್ ನ ಕನಸು ಹಾಗೇ ಇತ್ತು.
ಈ ಮಧ್ಯದಲ್ಲಿ ನಾನು ಚೆನ್ನಾಗಿ ಓದುತ್ತಿದ್ದುರಿಂದ ಹಾಗೂ ನನ್ನ ತಾಯಿ ಬೀಡಿ ಕಟ್ಟೋ ಕೆಲಸ ಮಾಡುತ್ತಿದ್ದರಿಂದ ಬೀಡಿ ಸ್ಕಾಲರ್ಶಿಪ್ ನನಗೆ ಪ್ರಾಥಮಿಕ ಶಾಲೆಯಿಂದಲೇ ಸಿಗುತ್ತಿತ್ತು. ಎಂಟನೇ ಕ್ಲಾಸ್ ಪಾಸಾಗಿ ಒಂಬತ್ತಕ್ಕೆ ಬಂದವರಿಗೆ ಮುನ್ನೂರು ರೂಪಾಯಿ ಸಿಗುತ್ತೆ ಎಂದು ಸ್ನೇಹಿತರ ಮೂಲಕ ತಿಳಿದ ನಾನು ಅವತ್ತೇ ಮನೆಗೆ ಬಂದು ತಾಯಿಯಲ್ಲಿ. ಅಮ್ಮ ಮುಂದಿನ ಸಲ ಸ್ಕಾಲರ್ಶಿಪ್ ಬಂದ್ರೆ ನನಗೆ ಹೆಚ್ ಎಂಟಿ ವಾಚ್ ತಗೋಬೇಕು ಅಂದಿದ್ದೆ. ಆ ವಾಚ್ ಗಾಗಿಯೇ ನಾನು ಎಂಟನೇ ಕ್ಲಾಸಲ್ಲಿ ಸ್ವಲ್ಪ ಹೆಚ್ಚೇ ಓದಿನ ಕಡೆಗೆ ಗಮನವಹಿಸದ್ದೆ ಕೂಡ. ಎಂಟನೇ ಕ್ಲಾಸ್ ಪಾಸಾಗಿ ಒಂಬತ್ತನೆ ಕ್ಲಾಸ್ ನ ತರಗತಿಗಳು ಪ್ರಾರಂಭವಾದ ಒಂದು ತಿಂಗಳಿನ ನಂತರ ಅಂದರೆ ಜುಲೈ ತಿಂಗಳಿನಲ್ಲಿ ಬೀಡಿ ಸ್ಕಾಲರ್ಶಿಪ್ ಬಂದಿರುವುದರ ಬಗ್ಗೆ ಮೇಷ್ಟ್ರು ತಿಳಿಸಿದರು. ಅದರಲ್ಲಿ ನನ್ನ ಹೆಸರೂ ಇತ್ತು. ನಾನು ಹಾಗೂ ತಾಯಿ ಮುಖ್ಯೋಪಾಧ್ಯಾಯರ ಕಛೇರಿಗೆ ತೆರಳಿ ಸಹಿ ಹಾಕಿ ಹಣವನ್ನು ಪಡೆದಿದ್ದೆವು.
ಮನೆಗೆ ಬಂದು ತಂದೆಯ ಬಳಿ ಹಣ ಕೊಟ್ಟು ಮರುದಿನ ಶಾಲೆಗೆ ತೆರಳಿದ್ದ ನನಗೆ ಹೆಚ್ಎಂಟಿ ವಾಚ್ ನ ಯೋಚನೆಯೇ ಇಡೀ ದಿನವನ್ನು ಕಳೆಯುವಂತೆ ಮಾಡಿತ್ತು. ಮನೆಗೆ ಬಂದವನೇ ತಂದೆ ಆ ಹಣಕ್ಕೆ ಹತ್ತು ರೂಪಾಯಿ ಸೇರಿಸಿ(ವಾಚ್ ಗೆ 310 ರೂ) ತಂದಿದ್ದ ಹೆಚ್ಎಂಟಿ ವಾಚ್ ನ್ನು ನನ್ನ ಎಡ ಕೈಗೆ ಕಟ್ಟಿ ಸಂಭ್ರಮಿಸಿದ್ದೆ. ಮರುದಿನ ವಾಚನ್ನು ಶಾಲೆಗೆ ಕಟ್ಟಿಕೊಂಡು ಹೋಗಲು ಪ್ರಾರಂಭಿಸಿದ್ದೆ ಅಂದಿನಿಂದ ಇಂದಿನವರೆಗೂ ಆ ವಾಚು ನನ್ನ ಕೈಯನ್ನು ಅಲಂಕರಿಸುತ್ತಿದ್ದೆ ಮೂರು ಬಾರಿ ವಾಚಿನ ಚೈನ್ ಬದಲಿಸಿದ್ದೇನೆ. ಒಮ್ಮೆ ಸರ್ವಿಸ್ ಮಾಡಿಸಿದ್ದೇನೆ. ಇಂದಿಗೂ ಯಾವುದೆ ತೊಂದರೆಯಿಲ್ಲದೆ ನಡೆಯುತ್ತಿದೆ ನನ್ನ ಮೊದಲ ಹೆಚ್ಎಂಟಿ (ಕೀ ಕೊಡುವ) ವಾಚ್…..ಆ ನಂತರ ನಾಲ್ಕೈದು ವಾಚ್ ಗಳನ್ನು ಕೊಂಡರೂ ಇದರಷ್ಟು ಮೆಚ್ಚಿನ ವಾಚ್ ನನ್ನ ಬಳಿ ಬೇರೊಂದಿಲ್ಲ.
ರಾಕೇಶ್ ಕೊಣಾಜೆ, ಮಂಗಳೂರು