ಕುಣಿಗಲ್: ತಾಲ್ಲೂಕಿನಲ್ಲಿ ಕುಂಬಾರ ಗುಂಡಿಗಳು ಕಣ್ಮರೆಯಾಗುತ್ತಿವೆ. ಕುಂಬಾರ ಕುಟುಂಬಗಳು ಮಡಿಕೆ ಮಾಡುವ ಕಾಯಕವನ್ನು ಕೈಬಿಟ್ಟು ಇತರ ವೃತ್ತಿಯತ್ತ ಗಮನ ಹರಿಸುತ್ತಿವೆ. ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಈಗಲೂ ಕುಲಕಸುಬಾದ ಕುಂಬಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿವೆ.
ತಾಲ್ಲೂಕಿನ ಕೊತ್ತಗೆರೆ, ಜಾಣಗೆರೆ, ಸಂತೆಪೇಟೆ, ಜಲಧಿಗೆರೆ, ಕುಂಬಾರರಪಾಳ್ಯ, ಭೂದಾನಹಳ್ಳಿ, ಹೊನ್ನಮಾಚನಹಳ್ಳಿ, ಮಾದಿಗೋನಹಳ್ಳಿ, ಮುದುಗಿರಿಪಾಳ್ಯ, ಕಾಡುಮತ್ತೀಕೆರೆ, ಇಪ್ಪಾಡಿ, ಕೂತಾರಹಳ್ಳಿ, ಸೊಂದಲಗೆರೆ, ಕುಣಿಗಲ್,- ಹುಲಿಯೂರುದುರ್ಗ ಸೇರಿದಂತೆ ಅನೇಕ ಗ್ರಾಮ– ಪಟ್ಟಣಗಳಲ್ಲಿ ನೂರಾರು ಕುಂಬಾರ ಗುಂಡಿಗಳಿದ್ದವು.
ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು. ಕಚ್ಚಾ ವಸ್ತುವನ್ನಾಗಿ ಕೆರೆಯ ಗೋಡುಮಣ್ಣು ಬಳಸುತ್ತಿದ್ದ ಕಾರಣ ಕೆರೆಯಲ್ಲಿ ಅನಗತ್ಯವಾಗಿ ಸಂಗ್ರಹವಾಗುತ್ತಿದ್ದ ಹೂಳು ಖಾಲಿಯಾಗಿ ಜಲ ಸಂರಕ್ಷಣೆ ಸಾಧ್ಯವಾಗುತ್ತಿತ್ತು.
ಕುಟುಂಬದ ಎಲ್ಲ ಸದಸ್ಯರ ಸತತ ಶ್ರಮದ ನಂತರ ತಯಾರಾಗುತ್ತಿದ್ದ ವಿವಿಧ ಆಕೃತಿಯ ಮಡಿಕೆಗಳು ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಬಿಸಿ ದೋಸೆಯಂತೆ ಖಾಲಿಯಾಗುದ್ದವು.
ಹುತ್ರಿದುರ್ಗ ಹೋಬಳಿ ಸಂತೇಪೇಟೆ ಗ್ರಾಮದ ವಾರದ ಸಂತೆಯಲ್ಲಿ ಸರಾಸರಿ 10ರಿಂದ 15 ಗಾಡಿಯಷ್ಟು ಮಡಿಕೆಗಳು ಮಾರಾಟವಾಗುತ್ತಿದ್ದವು. ಕುಣಿಗಲ್- ಸಂತೆಯಲ್ಲಿ 20ರಿಂದ 30 ಗಾಡಿಗಳಷ್ಟು ಮಡಿಕೆ ಮಾರಾಟವಾಗುತ್ತಿತ್ತು. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿಶೇಷ ಅಳತೆಯ ಮಣ್ಣಿನ ಪಾತ್ರೆ ತಯಾರಿಸಲು ಕುಂಬಾರರು ಮುಂಗಡ ಬೇಡಿಕೆ, ಹಣ ಪಡೆಯುತ್ತಿದ್ದರು.
ಆದರೆ ನಾಗರಿಕತೆ ಬೆಳೆದಂತೆಲ್ಲ ಆಧುನಿಕತೆಯ ಪರಿಣಾಮ, ಜನರ ಜೀವನ ನಿರ್ವಹಣೆಯಲ್ಲೂ ಅಗಾಧ ಬದಲಾವಣೆಗಳಾಗಿವೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನಿಂದ ಮಡಿಕೆ ಮಾಡಿ ಜೀವನ ನಡೆಸುತ್ತಿದ್ದ ಪಾರಂಪರಿಕ ಕುಂಬಾರರ ಕಸುಬು ಇತಿಹಾಸದ ಪುಟ ಸೇರುವ ದಿನಗಳು ಹತ್ತಿರವಾಗುತ್ತಿವೆ ಎಂದು ಗ್ರಾಮಸ್ಥರಾದ ಚಿಕ್ಕರಾಮಯ್ಯ ಅಭಿಪ್ರಾಯಪಟ್ಟರು.
ಕಣ್ಣಿಗೆ ಬಿದ್ದ 2 ಕುಟುಂಬ: ಸಂತೆಪೇಟೆ, ಕೂತಾರಹಳ್ಳಿಯಲ್ಲಿ ಕೇವಲ ಎರಡು ಕುಟುಂಬಗಳು ವಿಧಿ ಇಲ್ಲದೆ ಕುಲಕಸುಬು ನಿರ್ವಹಿಸುತ್ತಿವೆ. ‘ಈಗಿನ ಜನಕ್ಕೆ ಒಳ್ಳೇದು ಬೇಕಾಗಿಲ್ಲ ಸ್ವಾಮಿ, ಮಡಿಕೆಯಲ್ಲಿ ಅಡುಗೆ ಮಾಡೋದು ಆರೋಗ್ಯಕ್ಕೆ ಒಳ್ಳೇದು. ಬಳಕೆ ಸ್ವಲ್ಪ ಕಷ್ಟ ಅನ್ನೋ ಕಾರಣಕ್ಕೆ ಜನ ಮಡಿಕೆ ಬಳಕೆ ಕೈಬಿಟ್ಟಿದ್ದಾರೆ’ ಎಂದು ಸಂತೆಪೇಟೆಯ ವೆಂಕಟೇಶಯ್ಯ ಪ್ರತಿಕ್ರಿಯಿಸಿದರು.
ಬದಲಿ ವೃತ್ತಿ: ಕುಂಬಾರಿಕೆಯಲ್ಲಿ ಹೊಟ್ಟೆ ಹೊರೆಯುವುದು ಕಷ್ಟವಾದ ಕಾರಣ ಕಸುಬು ಆಶ್ರಯಿಸಿದ್ದವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಅಕ್ಕಪಕ್ಕದ ಕಾರ್ಖಾನೆಗಳಿಗೆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕುಂಬಾರರಿಗೆ ಹೊಸ ತಲೆಮಾರನ್ನು ಆಕರ್ಷಿಸುವಂತೆ ಮಡಿಕೆ ತಯಾರಿಸುವ ತರಬೇತಿ ಕೊಡಬೇಕು. ಇಂಥ ಪ್ರಯತ್ನ ಈವರೆಗೆ ಆಗಿಲ್ಲ ಎಂದು ಜನಾಂಗದ ಮುಖಂಡ ರಮೇಶ್ ಹೇಳುತ್ತಾರೆ.
ಬದಲಾದ ಬದುಕು: ‘ಹಿಂದೆ ನಾನೇ ಮಡಿಕೆ, ಕುಡಿಕೆ, ಗಡಿಗೆ, ಒಲೆ ತಯಾರಿಸುತ್ತಿದ್ದೆ. ತಯಾರಿಕೆ ವೆಚ್ಚ ಹೆಚ್ಚಾದ ಕಾರಣ ತುರುವೇಕೆರೆಯಿಂದ ಮಡಿಕೆ, ಕುಡಿಕೆಗಳನ್ನು ಖರೀದಿಸಿ ಬುಧವಾರದ ಸಂತೆಯಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ’ ಎಂದು ಮದುಗಿರೆಪಾಳ್ಯದ ಯಲ್ಲಯ್ಯ ಹೇಳಿದರು.