ಬೊಂಬಾಯಿಗೆ ಪ್ರತೀ ಬಾರಿ ಹೋದಾಗಲೂ ನನ್ನ ಮಟ್ಟಿಗೆ ಒಂದಲ್ಲಾ ಒಂದು ಘಟನೆಗಳು ಮನಸ್ಸಿನಲ್ಲಿ ಉಳಿಯುತ್ತಿದ್ದವು. ಅಂಥವುಗಳಲ್ಲಿ ಬಹಳವಾಗಿ ಬೊಂಬಾಯಿಯನ್ನು ಅರ್ಥಮಾಡಿಕೊಳ್ಳಲು ನೆರವಾದ ಈ ಘಟನೆಯೂ ಒಂದು.
ಬೊಂಬಾಯಿಯೆಂದರೆ ಅದೊಂದು ಬ್ರಹ್ಮಾಂಡ ಕೌತುಕದ ಗಣಿ. ಎಲ್ಲಿನ ಘಟನೆಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ವ್ಯಾಖ್ಯಾನಿಸಬಹುದು. ಬಹಳ ಮಂದಿ ಹೇಳುವುದನ್ನು ಕೇಳಿದ್ದೆ, ಬೊಂಬಾಯಿಯಲ್ಲಿ ಡ್ಯಾನ್ಸ್ ಬಾರ್ ನೋಡುವುದೇ ಅದ್ಭುತವೆಂದು. ಆ ಅದ್ಭುತ ಎನ್ನುವ ಪದವನ್ನು ಯಾವ ಅರ್ಥದಲ್ಲಿ ಬಳಸುತ್ತಾರೆ ಎನ್ನುವುದು ನನಗೂ ಗೊತಿರಲಿಲ್ಲ. ಡ್ಯಾನ್ಸ್ ಬಾರ್ ನೋಡಿರದ ನನಗೂ ಒಮ್ಮೆ ಯಾಕೆ ನೋಡಬಾರದು ಅನ್ನಿಸಿತು. ಡ್ಯಾನ್ಸ್ ಬಾರ್ ಪ್ರವೇಶಕ್ಕೆ ಕಿಸೆಯಲ್ಲಿ ತುಂಬಾ ಹಣ ಇರಬೇಕು ಅಂದರೆ ಮಾತ್ರ ಒಳಗೆ ಬಿಡುತ್ತಾರೆ ಇತ್ಯಾದಿ..ಇತ್ಯಾದಿ ಮಾತುಗಳನ್ನು ಕೇಳಿದ್ದೆ. ಡ್ಯಾನ್ಸ್ ಬಾರ್ ಗೆ ಒಂದು ಸಲ ಹೋಗಿ ಬಂದರೆ ಅದೇ ಅಭ್ಯಾಸವಾಗುತ್ತದೆ ಎನ್ನುವುದನ್ನು ಕೇಳಿದ್ದೆ. ಎಲ್ಲವೂ ಸರಿ, ಆದರೆ ಕಿಸೆಯಲ್ಲಿ ಹಣವಿದ್ದರೆ ಮಾತ್ರ ಪ್ರವೇಶ ಎನ್ನುವ ಮಾತಿನಿಂದಾಗಿ ಡ್ಯಾನ್ಸ್ ಬಾರ್ ನೋಡುವಂಥ ಸಾಹಸಕ್ಕೆ ಮುಂದಾಗಿರಲಿಲ್ಲ.
ಮಂಗಳೂರಲ್ಲಿ ಆ ಹೊತ್ತಿಗೆ ಡ್ಯಾನ್ಸ್ ಬಾರ್ ಗಳಿರಲಿಲ್ಲ. ಸುಮಾರು 40 ವರ್ಷಕ್ಕೆ ಹಿಂದೆ ಮಂಗಳೂರಲ್ಲಿ ಕೂಡಾ ಡ್ಯಾನ್ಸ್ ಬಾರ್ ಇತ್ತೆನ್ನುವುದನ್ನು ಕೇಳಿದ್ದೆ. ಈಗ ಸಿಟಿಸೆಂಟರ್ ಇರುವ ಉಡ್ ಸೈಡ್ ಹೊಟೇಲ್ ನಲ್ಲಿ ಡ್ಯಾನ್ಸ್ ಬಾರ್ ಇತ್ತಂತೆ. ಆಕಾಲಕ್ಕೆ ಆ ಹೊಟೇಲ್ ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಅನಿಸಿಕೊಂಡಿತ್ತು. ಆಗ ಚಲನಚಿತ್ರ ನಟರು ಮಂಗಳೂರಿಗೆ ಬಂದರೆ ಅದೇ ಹೋಟೇಲ್ ನಲ್ಲಿ ಅವರು ವಾಸ್ತವ್ಯ ಮಾಡುತ್ತಿದ್ದರಂತೆ.
ಕಾರ್ಯನಿಮಿತ್ತ ಬೊಂಬಾಯಿಗೆ ಹೋಗುವ ಮತ್ತೊಂದು ಅವಕಾಶ ಸಿಕ್ಕಿತ್ತು. ಬೊಂಬಾಯಿಯಲ್ಲಿ ಕರ್ನಾಟಕ ಸಂಘ ಮಾಟುಂಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮವನ್ನು ನೋಡಲು ಜಯರಾಮ ಆಳ್ವರೂ ಬಂದಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಜಯರಾಮ ಆಳ್ವರು ನನ್ನೊಂದಿಗೆ ಮಾತನಾಡುತ್ತಾ ರಾತ್ರಿ ಊಟಕ್ಕೆ ನಮ್ಮ ಹೊಟೇಲ್ ಗೇ ಬನ್ನಿ ಎನ್ನುವ ಆಹ್ವಾನ ಕೊಟ್ಟರು. ಅವರು ಹೋಟೇಲ್ ನಡೆಸುತ್ತಿರುವುದು ನನಗೂ ಗೊತ್ತಿರಲಿಲ್ಲ. ಸಹಜವಾಗಿಯೇ ಸಾಹಿತ್ಯದ ಜೊತೆಗೆ ಹೊಟೇಲ್ ಉದ್ಯಮವನ್ನೂ ಮುನ್ನಡೆಸುತ್ತಿದ್ದೀರಿ ಎಂದೆ. ಇದೂ ಪ್ರಯತ್ನ ಅಂಥ ಮಾಡುತ್ತಿದ್ದೇನೆ. ಆದರೆ ಡ್ಯಾನ್ಸ್ ಗರ್ಲ್ಸ್ ಜವಾಬ್ದಾರಿ ಕೆಲಸ ಎಂದರು.
ನನಗಂತೂ ಅಚ್ಚರಿಯಾಯಿತು. ಡ್ಯಾನ್ಸ್ ಬಾರ್ ನಡೆಸುತ್ತಿರುವುದು ಗೊತ್ತೇ ಇರಲಿಲ್ಲ ಎನ್ನುವುದು ಒಂದು ಕಾರಣವಾದರೆ ನನಗೂ ಡ್ಯಾನ್ಸ್ ಬಾರ್ ಅದೂ ಬೊಂಬಾಯಿಯಲ್ಲಿ ನೋಡಬೇಕು ಎನ್ನುವ ಬಹಳ ವರ್ಷಗಳ ಬಯಕೆ ಈಡೇರುತ್ತಿದೆಯಲ್ಲ ಎಂದು. ಡ್ಯಾನ್ಸ್ ಬಾರ್ ಪ್ರವೇಶಕ್ಕೆ ಕಿಸೆಯಲ್ಲಿ ತುಂಬಾ ಹಣವಿರಬೇಕು ಎನ್ನುವ ಕಾರಣಕ್ಕೆ ಬೊಂಬಾಯಿಗೆ ಹೋದಾಗಲೆಲ್ಲ ಅಂಥ ಸಾಹಸಕ್ಕೆ ಮುಂದಾಗಿರಲಿಲ್ಲ. ಈಗ ಜಯರಾಮ ಆಳ್ವರೇ ನಡೆಸುತ್ತಿರುವುದು ಡ್ಯಾನ್ಸ್ ಬಾರ್ ಆಗಿರುವುದರಿಂದ ಪ್ರವೇಶ ಶುಲ್ಕವೂ ಇಲ್ಲದೆ ಪ್ರವೇಶ ಪಡೆಯುವಂಥ ಅವಕಾಶವಾಯಿತಲ್ಲ ಅಂದುಕೊಂಡೆ.
ನಿಮ್ಮ ಡ್ಯಾನ್ಸ್ ಬಾರ್ ಎಲ್ಲಿದೆ ಕೇಳಿದೆ. ಬಾಂದ್ರಾದಲ್ಲಿದೆ ನಿಮ್ಮನ್ನು ನಾನೇ ಕರೆದುಕೊಂಡೂ ಹೋಗುತ್ತೇನೆ ಎಂದರು. ಈ ಮಾತುಕತೆಯಾಗುವಾಗ ಸಂಜೆ ಸುಮಾರು ಏಳುಗಂಟೆಯ ಹೊತ್ತು.
ಅವರ ಕಾರಿನಲ್ಲೇ ಸ್ವಲ್ಪ ಹೊತ್ತಲ್ಲಿ ಬಾಂದ್ರಾದ ಅವರ ಡ್ಯಾನ್ಸ್ ಬಾರ್ ನತ್ತ ಹೊರಟೆ. ಇದೇ ಮೊದಲ ಬಾರಿಗೆ ಡ್ಯಾನ್ಸ್ ಬಾರ್ ಪ್ರವೇಶ ಮಾಡುತ್ತಿದ್ದೇನೆ. ಹೇಗಿರಬಹುದು ಎನ್ನುವ ಕುತೂಹಲ. ಸಿನಿಮಾಗಳಲ್ಲಿ ಡ್ಯಾನ್ಸ್ ಬಾರ್ ನೊಡಿದ್ದೆ. ಬಿಯರ್, ವಿಸ್ಕಿ ಕುಡಿಯುವವರು ಕುಡಿಯುತ್ತಿರುತ್ತಾರೆ, ಅವರ ಮಧ್ಯದಲ್ಲೇ ಹೆಣ್ಣು ಡ್ಯಾನ್ಸ್ ಮಾಡುತ್ತಾಳೆ. ಕೆಲವರು ಭಕ್ಷೀಸು ರೂಪದಲ್ಲಿ ನೋಟುಗಳನ್ನು ಅವಳ ಮೇಲೆ ಎಸೆಯುತ್ತಾರೆ. ಆದರೆ ರಿಯಲ್ ಆಗಿ ಡ್ಯಾನ್ ಬಾರ್ ಪ್ರವೇಶಿಸುತ್ತಿದ್ದ ಕಾರಣ ಒಂಥರಾ ಭಯವೂ ಇತ್ತು. ಜಯರಾಮ ಆಳ್ವರದ್ದೇ ಬಾರ್ ಆಗಿರುವ ಕಾರಣಕ್ಕೋ ಏನೋ ಏನೇ ಆದರೂ ಭಯಪಡುವ ಅಗತ್ಯವಿಲ್ಲ ಎನ್ನುವ ಧೈರ್ಯವೂ ಬಂದಿತ್ತು.
ಜಯರಾಮ ಆಳ್ವರ ಡ್ಯಾನ್ಸ್ ಬಾರ್ ಬಂತು. ಕಾರ್ ಪಾರ್ಕ್ ಮಾಡಿ ಡ್ಯಾನ್ಸ್ ಬಾರ್ ಪ್ರವೇಶ ಮಾಡಿದೆವು. ಡ್ಯಾನ್ಸ್ ಬಾರ್ ಮಾಲೀಕರು ಅಂತಾದ ಕೂಡಲೇ ಅಲ್ಲಿದ್ದವರೆಲ್ಲರೂ ಅಲರ್ಟ್ ಆದರು. ಸೆಕ್ಯೂರಿಟಿ ಬಾಗಿಲು ತೆಗೆದು ಸೆಲ್ಯೂಟ್ ಹೊಡೆದ, ಜೊತೆಗೆ ನನಗೂ ಒಂದು ಸೆಲ್ಯೂಟ್. ಇದಪ್ಪಾ ಮಜಾ ಅಂದುಕೊಂಡು ಭರ್ಜರಿಯಾದ ಬಾರ್ ಪ್ರವೇಶ ಮಾಡಿದೆ. ಅದಾಗಲೇ ಡ್ಯಾನ್ಸ್ ಶುರುವಾಗಿತ್ತು. ಏಳೆಂಟು ಜನ ಮಾತ್ರ ಪ್ರೇಕ್ಷಕರಿದ್ದರು. ಒಬ್ಬಳೇ ನೃತ್ಯಗಾತಿ ನೃತ್ಯ ಮಾಡುತ್ತಿದ್ದಳು. ಜೋರಾದ ಸಂಗೀತ, ಡ್ರಮ್ ಬೀಟ್ಸ್, ಹಿಂದಿ ಹಾಡು.
ಜಯರಾಮ ಆಳ್ವರು ನನ್ನನ್ನು ಆ ಬಾರ್ ನೊಳಗೆ ಸುತ್ತಾಡಿಸಿದ ಮೇಲೆ ನನ್ನನ್ನು ನೃತ್ಯದ ವೃತ್ತದ ಮೊದಲ ಸಾಲಿನ ಟೇಬಲ್ ನಲ್ಲಿ ಕುಳಿತುಕೊಳ್ಳಲು ಹೇಳಿ ಬಾರ್ ಸೇವಕರನ್ನು ಕರೆದು ನನ್ನನ್ನು ಪರಿಚಯಿಸಿ ನಿಮಗೇನು ಬೇಕು ತೆಗೆದುಕೊಳ್ಳಿ ನೋ ಫಾರ್ಮಾಲಿಟಿ ಜಸ್ಟ್ ರಿಲ್ಯಾಕ್ಸ್ ಮಾಡಿ, ನಾನು ಒಳಗಿರುತ್ತೇನೆ ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದವರೇ ಅಲ್ಲಿಂದ ನಿರ್ಗಮಿಸಿದರು.
ಈಗ ನಾನು ಆ ನಾಲ್ಕು ಜನರು ಕುಳಿತುಕೊಳ್ಳುವ ಟೇಬಲ್ ನಲ್ಲಿ ಏಕಾಂಗಿ. ಬೊಂಬಾಯಿ ಮಹಾನಗರಿಯ ಮಾಯಾಲೋಕದೊಳಗೆ ನಾನಿದ್ದೆ. ಅದೇ ಮೊದಲ ಬಾರಿಗೆ ಡ್ಯಾನ್ಸ್ ಬಾರ್ ಪ್ರವೇಶ ಮಾಡಿದ್ದ ಕಾರಣಕ್ಕೆ ಅಲ್ಲಿನ ಪ್ರತಿಯೊಂದು ನನಗೆ ಹೊಸತು. ನೃತ್ಯಗಾತಿಯನ್ನು ಅಲ್ಲಿ ಕುಳಿತವರು ಹುರಿದುಂಬಿಸುತ್ತಿದ್ದರು, ಆಗ ಆಕೆಯೂ ಅವರತ್ತ ನೋಟ ಬೀರಿ ಮುದಗೊಳಿಸುತ್ತಿದ್ದಳು. ಮಂದ ಬೆಳಕಿನಲ್ಲಿ ಕುಳಿತವರು ಪಾನಸೇವೆಯ ಜೊತೆಗೆ ನೃತ್ಯದ ಆಸ್ವಾದಮಾಡುತ್ತಿದ್ದರು. ಕಿವಿಗೆ ಬಡಿದಪ್ಪಳಿಸುತ್ತಿದ್ದ ಸಂಗೀತದಿಂದಾಗಿ ಅಲ್ಲಿ ಕಾಣಿಸುತ್ತಿದ್ದವಳು ನೃತ್ಯಗಾತಿ ಮಾತ್ರ. ಆಕೆಯ ಮೇಲೆ ಬಣ್ಣ ಬಣ್ಣದ ಬೆಳಕು ಬೀಳುವಂಥ ವ್ಯವಸ್ಥೆ ಮಾಡಿದ್ದ ಕಾರಣ ಆಕೆಯ ಡ್ರೆಸ್ ಬೆಳಕಿನಲ್ಲಿ ಹೊಳೆಯುತ್ತಿತ್ತು, ನಕ್ಷತ್ರದಂತೆ ಆಗಾಗ ಮಿನುಗುವುದು ಕಾಣಿಸುತ್ತಿತ್ತು. ಯಾವ ಕ್ಷಣದಲ್ಲಿ ಯಾವ ಬೆಳಕು ಬೀಳುತ್ತದೆ ಎನ್ನಲಾಗದು, ಅಷ್ಟೊಂದು ಬೆಳಕಿನ ವೈವಿದ್ಯತೆ. ಆಕೆಯ ಮೇಲೆ ಬೀಳುತ್ತಿದ್ದ ಪ್ರಖರ ಬೆಳಕಿನಿಂದಾಗಿ ಆಕೆಯ ಮುಖದ ಮೇಲೆ ಬೆವರ ಹನಿಗಳು ಕೂಡಾ ಹೊಳೆಯುತ್ತಿದ್ದವು. ಬಣ್ಣಗಳ ಹೊಳೆಯಲ್ಲಿ ಆಕೆಯ ನೃತ್ಯ ಭಂಗಿಗಳು ಕೂಡಾ ಆಕರ್ಷಕವಾಗಿತ್ತು. ಸಿನಿಮಾಗಳಲ್ಲಿ ನೋಡುತ್ತಿದ್ದ ಇಂಥ ಡ್ಯಾನ್ ಗಳನ್ನು ಖುದ್ದು ಅಲ್ಲೆ ಕುಳಿತು ನೋಡುತ್ತಿದ್ದೆ.
ಜಯರಾಮ ಆಳ್ವರ ಸೂಚನೆಯ ಕಾರಣಕ್ಕೆ ನನ್ನ ಮುಂದೆ ಕೋಲ್ಡ್ ಬಿಸಿಲೆರಿ ನೀರು ತಂದಿಟ್ಟು ಸಾರ್ ಏನು ಕೊಡಲಿ. ಸ್ಕ್ವಾಚ್, ರಮ್ , ಬಿಯರ್ ಎನ್ನುತ್ತಾ ಮೆನೂ ಮುಂದಿಟ್ಟ. ನನ್ನೊಂದಿಗೆ ಮತ್ತೊಬ್ಬರಿದ್ದಿದ್ದರೆ ನಮ್ಮೊಳಗೇ ಚರ್ಚೆ ಮಾಡಿ ನಮಗೆ ಬೇಕಾದ್ದನ್ನು ಹೇಳಬಹುದಿತ್ತು. ನಾನೊಬ್ಬನೇ ಆದ ಕಾರಣ ಏನು ಹೇಳುವುದು ಎನ್ನುವ ಗೊಂದಲ. ಮತ್ತೆ ಹೇಳ್ತೇನೆ ಎಂದು ಅವನನ್ನು ಕಳುಹಿಸಿ, ಆ ಮೆನುವನ್ನೊಮ್ಮೆ ಪುಟ ತಿರುಗಿಸಿ ಕಣ್ಣಾಡಿಸಿದೆ. ನಾನು ಹೆಸರು ಕೇಳದಿದ್ದ ಸ್ಕ್ವಾಚ್ ವಿಸ್ಕಿಯ ಹತ್ತಾರು ಹೆಸರುಗಳಿದ್ದವು. ಕುತೂಹಲಕ್ಕಾಗಿ ಪ್ರತಿಯೊಂದನ್ನೂ ಓದುತ್ತಾ ಅದರ ರೇಟ್ ನೋಡಿದೆ. ಸಹಜವಾಗಿಯೆ ಅನ್ನಿಸಿತು ಈ ಡ್ಯಾನ್ಸ್ ಬಾರ್ ಪ್ರವೇಶಿಸಬೇಕಾದರೆ ಕಿಸೆಯಲ್ಲಿ ಗಂಟು ದೊಡ್ಡದಿರಬೇಕೆಂದು ಕೇಳಿಸಿಕೊಂಡಿದ್ದ ಮಾತುಗಳು ನಿಜಕ್ಕೂ ಸತ್ಯ ಅಂದುಕೊಂಡೆ. ಆ ಸ್ಕ್ವಾಚ್ ವಿಸ್ಕಿ ಒಂದು ಪೆಗ್ ಕುಡಿಯುವ ಬದಲು ಅದೇ ಹಣದಲ್ಲಿ ಎರಡು ದಿನ ಸ್ವದೇಶಿ ಮಾಲನ್ನು ಕಂಠಪೂರ್ತಿ ಕುಡಿಯಬಹುದಾಗಿತ್ತು. ಆದರೂ ಅಂಥ ಹೊಟೇಲ್ ನೊಳಗೆ ಕುಳಿತು ಮಾಮೂಲಿ ಮಾಲು ಕೇಳಿದರೆ ತಂದುಕೊಡುವವನೂ ನಗಬಹುದು ಅಥವಾ ಕ್ಷಮಿಸಿ ನಮ್ಮಲ್ಲಿ ನೀವು ಕೇಳುವ ಮಾಲು ಇಲ್ಲವೆನ್ನಬಹುದು. ಒಂಥರಾ ಡಿಗ್ನಿಟಿಗಾಗಿಯೇ ದುಬಾರಿ ಹಣಕೊಟ್ಟು ಕುಡಿಯಬೇಕೇ ಹೊರತು ನಿಜವಾಗಿಯೂ ಕುಡಿಯುವ ಅಭ್ಯಾಸವಿದ್ದವರು ಅಷ್ಟು ಹಣಕೊಟ್ಟು ಕುಡಿಯುವುದು ಕುಡಿತದಷ್ಟೇ ವೇಸ್ಟ್ ಅನ್ನಿಸಿತು. ಆದರೆ ಕುಡಿಯದವನು ಅಲ್ಲಿಗೆ ಬಂದರೆ ಬರೇ ಡ್ಯಾನ್ಸ್ ನೋಡಲೆಂದೇ ಬಂದವನು ಎನ್ನಬೇಕಾಗುತ್ತದೇನೋ. ಹೀಗಾದರೆ ಅಂಥವನು ಡ್ಯಾನ್ಸ್ ಗೀಳಿನವನು ಅನ್ನಿಸಿಕೊಳ್ಳುವ ಅಪಾಯವೂ ಇದೆ ಅನ್ನಿಸಿತು.
ಮತ್ತೆ ನನ್ನ ಬಳಿಗೆ ಬಂದ ಸೇವಕ ಮಹಾಶಯ ಸಾರ್ ಏನು ಕೊಡಲಿ ಕೇಳಿದ. ಹೇಗೂ ಬಂದದ್ದಾಗಿದೆ ಮತ್ತೊಮ್ಮೆಯಂತೂ ಖಂಡಿತಾ ಇಂಥ ಅವಕಾಶ ಸಿಗಲಾರದು. ನಾನು ಒಂದು ವೇಳೆ ಕಡಿಮೆ ರೇಟಿನ ಮಾಲು ಕೇಳಿದರೆ ಮಾಲೀಕರ ಗೆಸ್ಟ್ ಆಗಿ ಬಂದವರು ಚೀಪ್ ರೇಟ್ ಮಾಲು ಕುಡಿಯುತ್ತಾರೆ ಅಂದುಕೊಳ್ಳಬಹುದು, ಅದು ಜಯರಾಮ ಆಳ್ವರ ಡಿಗ್ನಿಟಿಗೂ ಕೊರತೆಯಾಗಬಹುದು ಅಂದುಕೊಂಡು ಸ್ಕ್ವಾಚ್ ಪೆಗ್ ತರಲು ಹೇಳಿದೆ. ವಡ್ಡರ್ಸೆ ರಘುರಾಮ ಶೆಟ್ರು ಕುಡಿಯುವುದನ್ನು ಕೂಡಾ ಎಂಜಾಯ್ ಮಾಡಿ ಕುಡಿಯಲು ಕಲಿತಿರಬೇಕು ಎಂದಿದ್ದದು ನೆನಪಾಯಿತು. ವಡ್ಡರ್ಸೆಯವರು ಒಂದು ಬಿಯರ್ ಕುಡಿಯಲು ಕನಿಷ್ಠವೆಂದರೂ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದರು. ಅವಸರವಾಗಿ ಕುಡಿದರೆ ಹೆಂಡ ಕುಡಿತಿದ್ದೀಯೋ, ವಿಸ್ಕಿ ಕುಡಿಯುತ್ತಿದ್ದೀಯೋ ಎನ್ನುತ್ತಿದ್ದ ಮಾತು ಕಿವಿಯಲ್ಲಿ ಗುಂಯ್ ಗುಟ್ಟಿತು.
ಪೆಗ್ ಬಂತು. ಅವನೇ ಐಸ್ ಕ್ಯೂಬ್ಸ್ ಹಾಕಿ, ಸೋಡಾ, ನೀರು ಬೆರಸಿ ಹದಗೊಳಿಸಿ ಕೊಟ್ಟ. ಸೈಡ್ಸ್ ರೋಸ್ಟ್ ಪಾಪಡ್ ನಂತರ ಚಿಕ್ಕನ್ ಚಿಲ್ಲಿ ಬಂತು. ಇದು ಸುಮಾರು ರಾತ್ರಿ 9 ಗಂಟೆ ಹೊತ್ತಿಗೆ. ಆಗಲೂ ಈಗಿನಂತೆ ಮೊಬೈಲ್ ಫೋನ್ ಹಾವಳಿ ಇರಲಿಲ್ಲ. ಬೊಂಬಾಯಿಯ ಬಾಂದ್ರಾ ಡ್ಯಾನ್ಸ್ ಬಾರ್ ನಲ್ಲಿ ಸುರಾಪಾನದ ಜೊತೆಗೆ ಬೆಳಕಿನ ಲಾಸ್ಯದಲ್ಲಿ ನೃತ್ಯ ವಿಲಾಸವನ್ನು ನೋಡುತ್ತಾ ನೋಡುತ್ತಾ ಮಂದ ಬೆಳಕಿನಲ್ಲಿ ನಾನೂ ಉಳಿದವರಲ್ಲಿ ಒಬ್ಬನಾಗಿದ್ದೆ.
ಈ ಹೊತ್ತಿಗೆ ಮತ್ತೂ ಹತ್ತಾರು ಮಂದಿ ಹೆಚ್ಚಾಗಿದ್ದರು. ಜಯರಾಮ ಆಳ್ವರು ಬಂದು ಮಾತನಾಡಿಸಿ ಅವಸರವಿಲ್ಲ ಏನು ಬೇಕು ತೆಗೆದುಕೊಳ್ಳಿ ಎಂದವರೇ ಮತ್ತೆ ಸೇವಕನಿಗೆ ಸೂಚನೆ ಕೊಟ್ಟು ನಿರ್ಗಮಿಸಿದರು. ಮಾಲೀಕರ ಗೆಸ್ಟ್ ಆಗಿದ್ದ ಕಾರಣಕ್ಕೇ ಅಲ್ಲಿದ್ದ ಸೇವಕರೆಲ್ಲರೂ ಆಗಾಗ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಅವರು ಮತ್ತೆ ಮತ್ತೆ ಬರತೊಡಗಿದಾಗ ಅನ್ನಿಸಿತು ಬಹುಷ ಇವರಿಗೆ ನನ್ನ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಾರಲ್ಲ ನಾನೇನಾದರೂ ಕುಡಿದು ಚಿತ್ ಆಗಿಬಿಟ್ಟರೆ ಎನ್ನುವ ಭಯವಿರಬಹುದೇ?
ಹೊತ್ತು ಕಳೆದಂತೆ ನೃತ್ಯಗಾರ್ತಿಯರು ಗುಂಪು ಗುಂಪಾಗಿ ಬಂದು ನೃತ್ಯ ಮಾಡಲು ಶುರು ಮಾಡಿದರು. ಒಬ್ಬಳು ಆದ ನಂತರ ಮತ್ತೊಬಳು ಸರದಿಯಲ್ಲಿ, ಇವರೊಳಗೇ ಪೈಪೋಟಿಯಲ್ಲ ನೋಡುತ್ತಾ ಕುಳಿತವರೊಳಗೇ ಸ್ಪರ್ಧೆಯಂತೆ. ಒಂದು ಟೇಬಲ್ ನಲ್ಲಿದ್ದವರಲ್ಲಿ ಒಬ್ಬ ಒಬ್ಬಳನ್ನು ಡ್ಯಾನ್ಸ್ ಮಾಡಲು ಹೇಳೀದರೆ, ಅದೇ ಟೇಬಲ್ ನಲ್ಲಿದ್ದ ಮತೊಬ್ಬ ಮತ್ತೊಬ್ಬಳನ್ನು ಡ್ಯಾನ್ಸ್ ಮಾಡಲು ಹೇಳತೊಡಗಿದರು. ಆರಂಭದಲ್ಲಿ ಹತ್ತು ರೂಪಾಯಿ ನೋಟುಗಳನ್ನು ಆ ನೃತ್ಯಗಾತಿಯರ ಮೇಲೆ ಚೆಲ್ಲುತ್ತಿದ್ದವರು ಹೊತ್ತು ಏರಿದಂತೆಲ್ಲಾ ಐವತ್ತು, ನೂರರ ನೋಟುಗಳು ಅವರ ಮೇಲೆ ತರಗೆಲೆಗಳಂತೆ ಚೆಲ್ಲತೊಡಗಿದರು. ಹಾಗೆ ಬಿದ್ದ ನೋಟುಗಳನ್ನು ಆಕೆಯೇ ಹೆಕ್ಕಿ ಹೆಕ್ಕಿ ತುಂಬಿಸಿಕೊಂಡು ನೃತ್ಯದೊಂದಿಗೆ ದೇಹವನ್ನೂ ಬಳುಕಿಸಿ ಹಣ ಚೆಲ್ಲಿದವರ ಮೇಲೆ ಕುಡಿನೋಟ ಹರಿಸಿ ಮರೆಯಾಗುತ್ತಿದ್ದರು.
ಅವರು ಚೆಲ್ಲುತ್ತಿದ್ದ ನೋಟುಗಳನ್ನು ಕಂಡು ಬೆಕ್ಕಸಬೆರಗಾಗಿ ಬಿಟ್ಟೆ. ನೋಟುಗಳನ್ನು ಇಸ್ಪೀಟ್ ಎಲೆಗಳಂತೆ ಮಾಡಿ ಕುಡಿಯುತ್ತಾ ನೃತ್ಯಗಾರ್ತಿಯರ ಮೇಲೆ ಎಸೆಯುವುದನ್ನು ಕಂಡು ಇವರಿಗೆ ದಿನಕ್ಕೆಷ್ಟಿರಬಹುದು ಸಂಪಾದನೆ ಅಂದುಕೊಂಡೇ. ಒಂದು ಸಾವಿರವಾಗಿದ್ದರೆ ಇದರೊಳಗೆ ಬರುವ ದುಸ್ಸಾಹಸವನ್ನೇ ಮಾಡುತ್ತಿರಲಿಲ್ಲ ಅನ್ನಿಸಿತು. ಎರಡು ಸಾವಿರವೂ ಆಗಿರಲಾರದು. ಯಾಕೆಂದರೆ ಅವರು ಚೆಲ್ಲಿದ ಹಣವೇ ತಿಂಗಳಾನುಗಟ್ಟಲೆ ಸಂಪಾದನೆಯಾಗಬಹುದು. ಆಗ ಅಂದುಕೊಂಡೆ ಸ್ಕ್ವಾಚ್ ದರ ಇವರು ಎಸೆಯುವ ನೋಟಿಗೆ ಸರಿಸಾಟಿಯೇ ಅಲ್ಲವೆಂದು. ಇದು ನಾನು ಬದುಕಿನಲ್ಲಿ ನೋಡಿರದಿದ್ದ ಅಪರೂಪದ ಸನ್ನಿವೇಶವೆನಿಸಿತು. ಹೀಗೆ ಹಣವನ್ನು ಪೋಲು ಮಾಡುತ್ತಿರುವವರಿಂದಾಗಿಯೇ ಬಹುಷ ಹಣದ ಬೆಲೆ ದುಡಿಯುವವನಿಗೆ ಮಾತ್ರ ಗೊತ್ತು ಎನ್ನುವ ಮಾತು ಬಂದಿರುವುದು ಅನ್ನಿಸಿತು. ಅದಾಗಲೇ ಗಂಟೆ ಹತ್ತೂವರೆಯಾಗಿತ್ತು. ಸಂಗೀತ, ನೃತ್ಯದ ಪರಾಕಾಷ್ಟೆ ಎನ್ನುವಂತಿತ್ತು. ಸೇವಕ ಮತೆ ಮತ್ತೆ ಬಂದು ನನ್ನನ್ನು ಕೇಳುತ್ತಿದ್ದ. ಏಕಾಂಗಿಯಾಗಿ ಆ ದೃಶ್ಯಗಳನ್ನು ಕಣ್ಣಿನಲ್ಲಿ ಸೆರೆ ಹಿಡಿಯುತ್ತಾ ಪೆಗ್ ಇಳಿಸುತ್ತಾ ಹೊತ್ತು ಕಳೆದ್ದದ್ದೇ ಗೊತ್ತಾಗಲಿಲ್ಲ ಅಥವಾ ಏಕಾಂಗಿ ಎನ್ನುವ ಆತಂಕವೂ ಕಾಡಲಿಲ್ಲ.
ಜಯರಾಮ ಆಳ್ವರು ಬಂದು ಹೇಗನ್ನಿಸುತ್ತಿದೆ ಕೇಳಿದರು. ಇದು ನಾನೋಡಿರದ ಹೊಸಲೋಕ ಅನ್ನಿಸುತ್ತಿದೆ. ಇವರು ಹೀಗೆ ನೋಟುಗಳನು ಎಸೆದು ಖುಷಿ ಪಡುತ್ತಾರಲ್ಲ ಎಂಥಾ ಮನುಷ್ಯರು ಎಂದವನೇ ನನ್ನನು ಡ್ರಾಪ್ ಮಾಡಲು ಕೇಳಿದೆ.
ಇಷ್ಟು ಬೇಗ ಯಾಕೆ. ನೀವು ಇಷ್ಟರವರೆಗೆ ನೋಡಿದ್ದೆಲ್ಲವೂ ಟ್ರಯಲ್, ಇನ್ನು ಶುರುವಾಗಲಿದೆ ರಿಯಲ್ ಗೇಮ್ ಎಂದರು. ಆಗ ಅರ್ಥವಾಗಲಿಲ್ಲ ಎಂದೆ. ನೀವು ಹತ್ತರಿಂದ ಆರಂಭವಾಗಿ ನೂರರ ನೋಟು ಎಸೆಯುವುದನ್ನು ಮಾತ್ರ ನೋಡಿದ್ದು ಇನ್ನು ಮುಂದೆ ಐನೂರರಿಂದ ಒಂದು ಸಾವಿರದ ನೋಟುಗಳ ಮಳೆ ಸುರಿಸುತ್ತಾರೆ ಅದನ್ನು ನೋಡದಿದ್ದರೆ ಹೇಗೆ ? ಕೇಳಿದರು.
ಐನೂರರ, ಸಾವಿರದ ನೋಟು ಎಸೆಯುತ್ತಾರೆನ್ನುವುದನ್ನು ಕೇಳಿಯೇ ಬೆಚ್ಚಿದೆ. ಒಂದು ನೋಟು ಸಂಪಾದಿಸಲು ಅದೆಷ್ಟು ಬೆವರು ಸುರಿಸಿ ದುಡಿಯುತ್ತಾರೆ ಜನರು. ಆದರೆ ಈ ಜನ ಇಲ್ಲಿಗೆ ಬಂದು ನೂರಾರು ನೋಟುಗಳನ್ನು ಒಂದು ದಿನ ಎಸೆಯುತ್ತಾರಲ್ಲಾ ಏನಾಗಿದೆ ಇವರಿಗೆ ಅನ್ನಿಸಿತು, ಆಳ್ವರು ಕುತೂಹಲ ಹುಟ್ಟಿಸಿದ ಕಾರಣಕ್ಕೆ ಆ ಕ್ಲೈಮ್ಯಾಕ್ಸ್ ಕೂಡಾ ನೋಡಿ ಬಿಡೋಣವೆಂದು ಕುಳಿತೆ. ನಿಜ ಆಳ್ವರು ಹೇಳಿದಂತೆಯೇ ಅತ್ತೆ ಮನೆಗೆ ಅಳಿಯಂದಿರು ಬರುವಂತೆ ಗರಿಗರಿಯಾದ ಡ್ರೆಸ್ ತೊಟ್ಟು ದಢೂತಿಗಳು, ನರಪೇತಲರು ಬರತೊಡಗಿದರು. ಈಗ ಅವರಿಗೆ ಕುಳಿತುಕೊಳ್ಳುವ ಟೇಬಲ್ ಸಮಸ್ಯೆ. ಮುಂದಿನ ಸಾಲಿನ ಸೀಟುಗಳೇ ಬೇಕೆಂದು ಕೇಳತೊಡಗಿದರು. ಆದರೆ ಮುಂದಿನ ಸಾಲಿನ ಸೀಟು ಖಾಲಿ ಇರಲಿಲ್ಲ, ಆದರೆ ಹಿಂದಕ್ಕೆ ಹೋಗಲು ಅವರು ತಯಾರಿಲ್ಲ. ನಾನೂ ಏಕಾಂಗಿಯಾಗಿದ್ದ ಕಾರಣಕ್ಕೆ ಹೊಸದಾಗಿ ಬಂದವರಿಗೆ ನನ್ನ ಟೇಬಲ್ ಮೇಲೆ ಕಣ್ಣು. ಬಂದವರೆಲ್ಲರೂ ಸಮಾನ ವ್ಯಸನಿಗಳಾಗಿದ್ದ ಕಾರಣ ಅಡ್ಜೆಸ್ಟ್ ಮಾಡಿಕೊಂಡೂ ಕುಳಿತುಕೊಂಡರು.
ತೀರಾ ಪರಿಚಿತರು ಕಾಣದಿದ್ದಾಗ ಹುಡುಕಾಡುವಂತೆ ಕುಳಿತಲ್ಲೇ ಡ್ಯಾನ್ಸ್ ಮಾಡುವವರನ್ನು ಕಣ್ಣೋಟದಲ್ಲಿ ತಡಕುವುದನ್ನು ಬಣ್ಣಿಸಲಾಗದು, ಬಣ್ನನೆಗೂ ಆ ಹುಡುಕಾಟ ನಿಲುಕದು. ಹಾಗೆ ಹುಡುಕುವವರನ್ನು ಆ ನೃತ್ಯಗಾರ್ತಿಯರು ತಮ್ಮನ್ನೇ ತೋರಿಸಿಕೊಂಡು ಕಿಚಾಯಿಸುತ್ತಿದ್ದರು. ನೃತ್ಯ ಮಾಡಲು ಅವರೊಳಗೇ ಸ್ಪರ್ಧೆಹುಟ್ಟಿಕೊಂಡಿತು. ಅಷ್ಟು ಹೊತ್ತೂ ತೋರಿಸದಿದ್ದ ನೃತ್ಯಭಂಗಿಯನ್ನು ಆ ನೃತ್ಯಗಾರ್ತಿಯರು ಈಗ ತೋರಿಸಿ ಗಮನ ಸೆಳೆಯುತ್ತಿದ್ದರು. ಅದೇನು ಸೆಳೆತವೋ ಗೊತ್ತಿಲ್ಲ ಐನೂರರ ನೋಟುಗಳು ಅವಳ ಮೈಮೇಲೆ ಮಲ್ಲಿಗೆ ಹೂ ಚೆಲ್ಲಿದಂತೆ ಚೆಲ್ಲಿ ಖುಷಿಪಟ್ಟವನನ್ನು ಕ್ಷಣ ನೋಡಿದೆ. ಇವನಿಗೆ ಹಣಕ್ಕೆ ಬರವಿಲ್ಲ ಮನಸ್ಸಿನ ಸುಖಕ್ಕೆ ಬರ ಅನಿಸಿತು. ಈಗ ನೋಟು ಚೆಲ್ಲುವವರೊಳಗೂ ಸ್ಪರ್ಧೆ. ಐನೂರು, ಸಾವಿರದ ನೋಟುಗಳು ನೃತ್ಯಗಾರ್ತಿಯರ ಮೈಮೇಲೆ ಮಳೆಗರೆದವು.
ಆ ಬಾರ್ ನಲ್ಲಿ ಹತ್ತು ಹದಿನೈದು ಮಂದಿ ನೃತ್ಯಗಾರ್ತಿಯರಿರಬಹುದು. ಆ ಹೊತ್ತಲ್ಲಿ ಎಲ್ಲರಿಗೂ ನೃತ್ಯಮಾಡುವ ಸೆಳೆತ, ಧಾವಂತ. ಐನೂರು, ಸಾವಿರದ ನೋಟುಗಳನ್ನು ಬಾಚಿಕೊಂಡು ಸಂತೃಪ್ತರಾಗುತ್ತಿದ್ದರು, ಇತ್ತ ನೋಟುಗಳನ್ನು ಎಸೆದು ನೃತ್ಯಗಾರ್ತಿಯರ ಮಿಂಚಿನ ಕಿರುನಗೆಯನ್ನು ಪ್ಲೈಯಿಂಗ್ ಕಿಸ್ ಕೊಟ್ಟು ತಮ್ಮದಾಗಿಸಿಕೊಳ್ಳುತ್ತಿದ್ದರು. ಆ ನೀರವ ರಾತ್ರಿಯಲ್ಲಿ ಆ ಡ್ಯಾನ್ಸ್ ಬಾರ್ ನೊಳಗೆ ಕಂಡ ದೃಶ್ಯಗಳನ್ನು ಸ್ಮೃತಿಪಟಲದಿಂದ ಅಳಿಸಿ ಹಾಕಲು ಸಾಧ್ಯವೇ ಇಲ್ಲವೆಂದು ಆಗ ಅನ್ನಿಸಿತು ಈಗಲೂ ಕೂಡಾ. ಬಹಳ ಹೊತ್ತಿನತನಕವೂ ಅಲ್ಲಿದ್ದು ನೋಡಿದ ಮೇಲೆ ರೂಮಿಗೆ ಬರುವಾಗ ಆಳ್ವರನ್ನು ಕೇಳಿದೆ ಐನೂರು, ಸಾವಿರದ ನೋಟು ಚೆಲ್ಲುತ್ತಿದ್ದವರು ಯಾರೆಂದು?.
ಅವರೆಲ್ಲರೂ ಗೋಲ್ಡ್, ಡೈಮಂಡ್ ವ್ಯಾಪಾರಿಗಳು. ರಾತ್ರಿ ವ್ಯವಹಾರ ಮುಗಿಸಿ ಅಂಗಡಿ ಬಂದ್ ಮಾಡಿದ ಮೇಲೆ ತಡವಾಗಿ ಬರುತ್ತಾರೆ, ಬಂದು ನೃತ್ಯಗಾರ್ತಿಯರನ್ನು ಖುಷಿಪಡಿಸಿ ತಾವೂ ಖುಷಿಪಡುತ್ತಾರೆಂದರು.
ಆಗ ನನಗನ್ನಿಸಿತು ಇವರೇ ಬೊಂಬಾಯಿ ಡ್ಯಾನ್ಸ್ ಬಾರ್ ಗಳ ಜೀವಸೆಲೆಯೆಂದು. ಕೆಲ ಗಂಟೆಗಳ ಮನಸ್ಸಿನ ಸುಖಕ್ಕಾಗಿ ದುಡಿಮೆಯ ಗಳಿಕೆಯನ್ನು ಸುರಿದು ಹೋಗುತ್ತಾರೆ. ಒಂದೊಂದು ರೂಪಾಯಿಗೂ ಕ್ಷಣ ಕ್ಷ್ಣಣಕ್ಕೂ ರಕ್ತ ಬಸಿಯುವವರ ಮಧ್ಯೆ ಲಕ್ಷೋಪಲಕ್ಷ ರೂಪಾಯಿಯನ್ನು ಒಂದು ಗಂಟೆಯಲ್ಲಿ ಎಸೆದುಹೋಗುವ ಈ ಜನರನ್ನು ಮುಂದಿನ ಜನುಮದಲ್ಲಿ ಬಡವರಾಗಿ ಜನಿಸುವಂಥ ವರವಕೊಡು ಎನಬೇಕೇ? ಗೊಂದಲವಾಯಿತು. ಆ ಗೊಂದಲದಲ್ಲೇ ಆ ರಾತ್ರಿ ನಿದ್ದೆ ಮಾಡದೆ ಯೋಚಿಸಿದೆ ಬೊಂಬಾಯಿ ನಿಜಕ್ಕೂ ಬೊಂಬಾಯಿ ಅಂದುಕೊಂಡೆ. ಅದು ಅಕ್ಷರಗಳಿಗೆ ನಿಲುಕದ ಸಾಮ್ರಾಜ್ಯ ಓದಿ ಮರೆತುಬಿಡಿ.
ಚಿದಂಬರ ಬೈಕಂಪಾಡಿ