ಹೂಗುಚ್ಛ ಹಿಡಿದು ನನ್ನ ಸಮಾಧಿಗೆ ಬರಬೇಡ
ಅಂದ ಪ್ರೇಮಿಗಳ ಸಾಲಿಗೆ ಸೇರಿಸದಿರು ನನ್ನ
ಆ ಮಾವಿನ ಮರದ ಟೊಂಗೆಯ ತುದಿಯಲ್ಲೇ
ಕಾಯುತ್ತಿರುತ್ತೇನೆ
ಸುದ್ದಿ ಸತ್ಯವೇ ಎಂಬ ನಿಕ್ಕಿಗಾದರೂ ಬಂದುಬಿಡು
ಯಾವ ಭಾವವೂ ಬೇಡ
ಸುಮ್ಮನೆ ಒಮ್ಮೆ ದೃಷ್ಟಿ ಹರಿಸಿಬಿಡು ಸಾಕು
ನಿನ್ನ ಕಣ್ಣೊಳಗೆ ಯಾತನೆ ಇದೆ
ಎಂಬೊಂದು ಹೊಸ ಭ್ರಮೆಯನ್ನು
ಕೂಡಲೇ ಹಡೆದುಬಿಡುತ್ತೇನೆ
ನಿನ್ನನ್ನು ಸಂತೈಸುವ ಹೊರೆಯನ್ನೂ
ನಾನೇ ಹೊರುತ್ತೇನೆ
ನಿನ್ನ ರೆಪ್ಪೆಗಳ ಮೇಲೆ ಬಿಸಿ ಮುತ್ತೆರಡು ಒತ್ತಿ
ಬಳಿಕ ಹೊರಡುತ್ತೇನೆ…
ನಿನ್ನ ಮೋಹಕ್ಕೆ ಬಿದ್ದ
ಮಹಾಪರಾಧಕ್ಕೆ ಸಿಗಲಿರುವ
ನರಕದ ಆ ಮಹಾಮಹಾ ಶಿಕ್ಷೆಗಳನ್ನೆಲ್ಲ
ಮಹಾಪ್ರಸಾದದಂತೆ ಧರಿಸಿಕೊಳ್ಳಲು
ನನಗೆಂಥ ಕಾತರವಿದೆ ಗೊತ್ತಾ?
ಈ ತಪ್ಪನ್ನು ಮತ್ತೆ ಮತ್ತೆ ಮಾಡಿಯೇ ತೀರುತ್ತೇನೆ
ಅಂತ ರಚ್ಚೆ ಹಿಡಿದು ದಂಡಿಸಿಕೊಳ್ಳುತ್ತೇನೆ
ನನ್ನ ಚಿತೆಗೆ ನೀನು ಬಂದಿದ್ದೆ
ಎಂಬುದೇನು ಸಣ್ಣ ಪುರಾವೆಯೇ ಹೇಳು?
ನನ್ನ ತುಟಿಗಳ ನಗು ಕೊಂಕದಂತೆ ಕಾಪಿಡಲು
ಅಷ್ಟೊಂದು ದಯೆಯೂ ಸಾಕು ಗಾಲಿಬ್!
ಕವಿತೆ
story and poems
1 Min Read