ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸಾಂಸ್ಕೃತಿಕ ವೈವಿಧ್ಯತೆಯ ಗಡಿನಾಡು ಕಾಸರಗೋಡಿನ ಹೆಮ್ಮೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಕಾಸರಗೋಡು ಮಣ್ಣಿನ ಹೆಮ್ಮೆಯ ಪುತ್ರ, ಮಂಜೇಶ್ವರದ ಸಮಾಜ ಸೇವಕ ಹಾಗೂ ಸಂಘಟಕರಾದ ದಿನೇಶ್ ಕೊಡಂಗೆ ಅವರು ಕೇರಳ ಉಚ್ಚ ನ್ಯಾಯಾಲಯದ (ಹೈಕೋರ್ಟ್) ಉಪ ನಿಬಂಧಕರಾಗಿ (ಡೆಪ್ಯುಟಿ ರಿಜಿಸ್ಟ್ರಾರ್) ನೇಮಕಗೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಈ ಅತ್ಯುನ್ನತ ಮತ್ತು ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ ಗಡಿನಾಡಿನ ಪ್ರಪ್ರಥಮ ಕನ್ನಡಿಗ ಎಂಬ ಐತಿಹಾಸಿಕ ಕೀರ್ತಿಗೂ ಇವರು ಭಾಜನರಾಗಿದ್ದಾರೆ. ಕೇವಲ ವೃತ್ತಿಪರತೆಗೆ ಮಾತ್ರ ಸೀಮಿತವಾಗದ ದಿನೇಶ್ ಕೊಡಂಗೆ ಅವರು, ಸಾಮಾಜಿಕ ಕಳಕಳಿಯಲ್ಲೂ ಮುಂಚೂಣಿಯಲ್ಲಿದ್ದವರು. ಪ್ರಸ್ತುತ ಅವರು ಮಂಜೇಶ್ವರದ ‘ಕುಲಾಲ ವೇದಿಕೆ’ಯ ಗೌರವ ಸಲಹೆಗಾರರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ, ಸಮಾಜದ ಏಳಿಗೆಗಾಗಿ ಹಾಗೂ ಕನ್ನಡ ನೆಲ-ಜಲ-ಭಾಷೆಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಉನ್ನತ ಸಾಧನೆಯು ಗಡಿನಾಡಿನ ಸಮಸ್ತ ಕನ್ನಡ ಜನತೆಗೆ ಅಪಾರ ಹೆಮ್ಮೆ ಮತ್ತು ಸೌಹಾರ್ದತೆಯ ಪ್ರೇರಣೆಯನ್ನು ನೀಡಿದ್ದು, ಅವರ ಮುಂದಿನ ವೃತ್ತಿಜೀವನ ಹಾಗೂ ಸಾಮಾಜಿಕ ಸೇವೆ ಇನ್ನಷ್ಟು ಯಶಸ್ವಿಯಾಗಲಿ ಎಂದು ನಾಡಿನ ಜನತೆ ಹಾರೈಸಿದ್ದಾರೆ.

