ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕರ್ನಾಟಕ ಸರ್ಕಾರದ ನೂತನ ಕುಂಭ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ವೇಲು ಅವರು, ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ತಮ್ಮ ನೂತನ ಕರ್ತವ್ಯದ ಹೆಜ್ಜೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಇರಿಸಿದ್ದಾರೆ. ಕರಾವಳಿ ಪ್ರವಾಸದ ಈ ಸಂದರ್ಭದಲ್ಲಿ ಅವರು ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಾಣಿಲ, ಕಾರಣಿಕದ ಪಣೋಲಿಬೈಲು ಕ್ಷೇತ್ರಗಳಿಗೆ ಭೇಟಿ ನೀಡಿ ದೈವ ಕೃಪೆಗೆ ಪಾತ್ರರಾದರು. ಕೇವಲ ಧಾರ್ಮಿಕ ಕ್ಷೇತ್ರಗಳಿಗಷ್ಟೇ ಸೀಮಿತವಾಗದೆ, ಉಡುಪಿಯ ಕ್ಲೇಕಾರ್ಟ್ಸ್ ಹಾಗೂ ಕುಂದಾಪುರದ ಕುಲಾಲ ಸಂಘಗಳಿಗೆ ಭೇಟಿ ನೀಡಿದ ಅವರು, ಮಣ್ಣಿನ ಕಲೆಯನ್ನೇ ಜೀವವಾಗಿಸಿಕೊಂಡಿರುವ ಕುಲಾಲ ಬಾಂಧವರನ್ನು ಆಪ್ತವಾಗಿ ಭೇಟಿಯಾದರು.
ಈ ಪ್ರವಾಸದ ಸಂದರ್ಭದಲ್ಲಿ ಕುಲಾಲ ಸಮುದಾಯದ ಸಂಘಟನಾ ಶಕ್ತಿ, ಶೈಕ್ಷಣಿಕ ಪ್ರಗತಿ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ಸ್ಥಳೀಯ ಮುಖಂಡರೊಂದಿಗೆ ಸುದೀರ್ಘ ಹಾಗೂ ಆಳವಾದ ಅವಲೋಕನವನ್ನು ನಡೆಸಿದರು. ಸಮುದಾಯದ ಸಾಂಪ್ರದಾಯಿಕ ಕಲೆಗೆ ಆಧುನಿಕತೆಯ ಸ್ಪರ್ಶ ನೀಡುವ ಬಗ್ಗೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹರಿಗೂ ತಲುಪಿಸುವ ನಿಟ್ಟಿನಲ್ಲಿ ಈ ಭೇಟಿ ಹೊಸ ಭರವಸೆಯ ಬೆಳಕನ್ನು ಚೆಲ್ಲಿದೆ. ಮಣ್ಣನ್ನು ನಂಬಿ ಬದುಕುವ ಸಮುದಾಯದ ಸರ್ವತೋಮುಖ ಏಳಿಗೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ನಡೆದ ಡಾ. ವೇಲು ಅವರ ಈ ಕರಾವಳಿ ಸಂದರ್ಶನ ಸಮುದಾಯದ ಮುಖಂಡರಲ್ಲಿ ಹೊಸ ಚೈತನ್ಯ ಮೂಡಿಸಿದೆ.

