ಬೆಳಗಾವಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಭಕ್ತಿ, ಗೌರವ ಮತ್ತು ನಂಬಿಕೆಯ ಪವಿತ್ರ ಕೇಂದ್ರವಾಗಬೇಕಿದ್ದ ಮಠವೊಂದು ಸದ್ಯ ಭಿನ್ನಮತ ಮತ್ತು ಆಕ್ರೋಶದ ವೇದಿಕೆಯಾಗಿ ಮಾರ್ಪಟ್ಟಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಕಟು ವಾಸ್ತವಕ್ಕೆ ಕನ್ನಡಿ ಹಿಡಿದಿದೆ. ಇತ್ತೀಚೆಗಷ್ಟೇ ನಡೆದ ಪಂಚಮಸಾಲಿ ಸಮಾಜದ ಗುರುಪೀಠದ ಟ್ರಸ್ಟ್ ವಿವಾದದ ಬಿಸಿ ಆರುವ ಮುನ್ನವೇ, ಇದೀಗ ರಾಜ್ಯದ ಹೆಮ್ಮೆಯ ಪ್ರಥಮ ಕುಂಬಾರ ಸಮಾಜದ ಗುರುಪೀಠದಲ್ಲೂ ಭಿನ್ನಮತ ಸ್ಫೋಟಗೊಂಡಿರುವುದು ಭಕ್ತರ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಕುಂಬಾರ ಗುರುಪೀಠದಲ್ಲಿ ಟ್ರಸ್ಟ್ ವಿಚಾರವಾಗಿ ಮುಖಂಡರು ಎರಡು ಗುಂಪುಗಳಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆಯಾದರೂ, ಮಠದ ಆಂತರಿಕ ಕಲಹ ಮಾತ್ರ ಸಮಾಜದ ಬಾಂಧವರ ನೆಮ್ಮದಿ ಕೆಡಿಸಿದೆ.
ಮೇ 24 ರಂದು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿರುವ ನೂತನ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವೇ ಈ ಎಲ್ಲಾ ಕಹಿಗೆ ಕಾರಣವಾಗಿದೆ. ಸಮಾಜದ ಒಂದು ಗುಂಪು ಇಂದು ಪತ್ರಿಕಾಗೋಷ್ಠಿ ನಡೆಸಿ, “ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮವನ್ನು ಸಮಾಜದ ಎಲ್ಲರಿಗೂ ತಿಳಿಸದೇ ಏಕಪಕ್ಷೀಯವಾಗಿ ಹಮ್ಮಿಕೊಳ್ಳಲಾಗಿದೆ. ಮಠದ ಆಡಳಿತಕ್ಕಾಗಿ ಎಷ್ಟು ಬಾರಿ ಒತ್ತಾಯಿಸಿದರೂ ಸಮಿತಿ ರಚನೆ ಮಾಡುತ್ತಿಲ್ಲ. ಮಠದ ಬೈಲಾದಲ್ಲಿ ಶ್ರೀಮಠದ ಉತ್ತರಾಧಿಕಾರಿಯು ಕಡ್ಡಾಯವಾಗಿ ಕುಂಬಾರ ಸಮಾಜಕ್ಕೆ ಸೇರಿದವರೇ ಆಗಿರಬೇಕು ಎಂಬ ನಿಯಮವನ್ನು ಸೇರಿಸಬೇಕು” ಎಂದು ಆಗ್ರಹಿಸಿತು. ಅಷ್ಟೇ ಅಲ್ಲದೆ, ಶ್ರೀಮಠದಲ್ಲಿ ಪೂಜೆ ಪುನಸ್ಕಾರಗಳಿಗೆ ನಿಷೇಧ ಹೇರಲಾಗಿದೆ ಹಾಗೂ ಮಠದ ಕಲ್ಯಾಣ ಮಂಟಪದ ದ್ವಾರಬಾಗಿಲ ಮೇಲಿದ್ದ ಗಣಪತಿಯ ಚಿತ್ರವನ್ನು ಕೆತ್ತಿ ತೆಗೆಸಲಾಗಿದೆ ಎಂದು ಅತ್ಯಂತ ನೋವಿನಿಂದ ಆರೋಪಿಸಿತು.
ಒಂದು ಗುಂಪು ಈ ಗಂಭೀರ ಆರೋಪಗಳನ್ನು ಮಾಡುತ್ತಿದ್ದಂತೆಯೇ, ಕುಂಬಾರ ಗುರುಪೀಠದ ಪೂಜ್ಯರಾದ ಬಸವ ಗುಂಡಯ್ಯ ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ನೇರವಾಗಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ವೇದಿಕೆಯ ಮೇಲೆ ಆಸೀನರಾದರು. ಈ ವೇಳೆ ಎರಡೂ ಗುಂಪುಗಳ ನಡುವೆ ಜೋರು ವಾಗ್ವಾದ ನಡೆದು, ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಸ್ಥಳದಲ್ಲಿದ್ದ ಐಗಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ, ಜಗಳವಾಡುತ್ತಿದ್ದ ಎರಡೂ ಗುಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಇದರ ನಡುವೆ, ಮಠದ ಕೆಲಸ ಕಾರ್ಯಗಳು ಹಾಗೂ ಊಟದ ವ್ಯವಸ್ಥೆಯನ್ನು ನಾನೊಬ್ಬನೇ ಮಾಡಿದ್ದೇನೆ, ನೀವ್ಯಾರೂ ಬಂದಿಲ್ಲ ಎಂಬ ಶ್ರೀ ಬಸವ ಗುಂಡಯ್ಯ ಸ್ವಾಮೀಜಿಯವರ ಆರೋಪ ಭಕ್ತರ ಹೃದಯಕ್ಕೆ ತಟ್ಟಿತು. ಇದಕ್ಕೆ ತೆಲಸಂಗ ಗ್ರಾಮದ ಮುಖಂಡರು ವೇದಿಕೆಯ ಮೇಲೆಯೇ ತೀವ್ರವಾಗಿ ತಳ್ಳಿಹಾಕಿ, “ಮಠದ ಪ್ರತಿ ಹಂತದಲ್ಲೂ ನಾವು ನಿಮಗೆ ಸಹಾಯ ಮಾಡುತ್ತಲೇ ಬಂದಿದ್ದೇವೆ. ಭಕ್ತರು ಪ್ರತಿ ಮನೆಯಿಂದ ಪ್ರೀತಿಯಿಂದ ಊಟ ತಂದುಕೊಟ್ಟಿದ್ದಾರೆ. ಆದರೆ ಇಂದು ಅದೇ ಊಟದ ವಿಚಾರದಲ್ಲಿ ‘ಉಂಡಮನೆಯ ಜಂತಿ ಎಣಿಸುವ’ ಹೀಯಾಳಿಸುವ ಕೆಲಸ ಮಾಡಿದ್ದು ನಮಗೆ ತೀವ್ರ ಬೇಸರ ತಂದಿದೆ. ನಿಮ್ಮ ಇಂತಹ ಏಕಪಕ್ಷೀಯ ನಿರ್ಧಾರಗಳು ಮತ್ತು ಮುಂದೂಡುವ ತಂತ್ರಗಳು ಸಮಾಜವನ್ನು ಕಟ್ಟುವ ಬದಲಾಗಿ ಒಡೆಯುತ್ತವೆ” ಎಂದು ಶ್ರೀಗಳ ಎದುರೇ ಕಣ್ಣೀರಿನ ಆಕ್ರೋಶ ಹೊರಹಾಕಿದರು.
ದೊಡ್ಡ ಮಟ್ಟದ ಗದ್ದಲದ ನಂತರ ಕೊನೆಗೆ ಪೂಜ್ಯ ಬಸವ ಗುಂಡಯ್ಯ ಸ್ವಾಮೀಜಿಯವರು ಮಹತ್ವದ ಭರವಸೆಯೊಂದನ್ನು ನೀಡಿದರು. ಮೇ 24ರ ಉದ್ಘಾಟನಾ ಸಮಾರಂಭ ಮುಗಿದ ತಕ್ಷಣವೇ ಶ್ರೀಮಠಕ್ಕೆ ನೂತನ ಕಮಿಟಿ ರಚನೆ ಮಾಡಲಾಗುವುದು ಹಾಗೂ ಕುಂಬಾರ ಸಮಾಜದವರನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಸ್ವಾಮೀಜಿಯವರ ಈ ಮಾತಿಗೆ ಭಿನ್ನಮತ ಹೊಂದಿದ್ದ ಇನ್ನೊಂದು ಗುಂಪು ಸಮ್ಮತಿ ಸೂಚಿಸಿದ್ದರಿಂದ ಸದ್ಯಕ್ಕೆ ವಿವಾದ ಸುಖಾಂತ್ಯಗೊಂಡಂತಾಗಿದೆ.
“ನಾವು ಇರುವುದು ಚಿಕ್ಕ ಸಮುದಾಯ. ರಾಜ್ಯದಲ್ಲಿರುವುದು ನಮಗಾಗಿ ಇರುವುದು ಇದೊಂದೇ ಕುಂಬಾರ ಗುರುಪೀಠ. ಹೀಗಿರುವಾಗ ನಮ್ಮ ನಮ್ಮಲ್ಲಿಯೇ ಕಚ್ಚಾಟ ಬೇಡ” ಎಂಬ ಮುಖಂಡರ ಮರುಕದ ನುಡಿಗೆ ಎಲ್ಲರೂ ತಲೆಬಾಗಿ ಸಭೆ ಶಾಂತಗೊಂಡಿತು. ಸಭೆಯಲ್ಲಿ ನಿವೃತ್ತ ಡಿವೈಎಸ್ಪಿ ಸೋಮಲಿಂಗ, ಬಿ.ಜಿ.ನಾಗೂರ, ಬಸವರಾಜ ಕುಂಬಾರ, ಗುರುರಾಜ ಕುಂಬಾರ, ಜಡೆಪ್ಪಾ ಕುಂಬಾರ, ಸದಾನಂದ ಕುಂಬಾರ, ರಮೇಶ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಶಶಿಧರ ಕುಂಬಾರ, ಡಾ.ಎಸ್.ಪಿ.ಕುಂಬಾರ, ಸಿ.ಜಿ.ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ, ಮೇ 24ರ ಕಾರ್ಯಕ್ರಮದ ನಂತರ ಶ್ರೀಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಎಂಬುದರ ಮೇಲೆ ಇಡೀ ಸಮಾಜದ ಕಣ್ಣು ನೆಟ್ಟಿದೆ.

