ತನ್ನ ಪೂರ್ವಜರಿದ್ದ ಮನೆಯ ಬಾಗಿಲ ಬಳಿಗೆ ತಾನು ಬರುವುದಕ್ಕೂ ತನ್ನ ದಾಯಾದಿಗಳು ಅದೇ ಬಾಗಿಲ ಮೂಲಕ ಹೊರಗೆ ಹೋಗುವುದಕ್ಕೂ ಸರಿ ಹೋಯಿತು. ಅವರೆಲ್ಲರ ಬೆನ್ನುಗಳನ್ನು ನೋಡಿ ನಿಟ್ಟುಸಿರುಬಿಡುತ್ತ ಮನೆಯನ್ನು ಪ್ರವೇಶಿಸಿದ. ಭಣಗುಡುತ್ತಿದ್ದ ಪಡಸಾಲೆಯಲ್ಲಿ ಕೂತಿದ್ದ ಹಿರಿಯ ವ್ಯಕ್ತಿ ಬಾರಯ್ಯಾ ಬಾ ಎಂದು ಸ್ವಾಗತಿಸಿದ. ಆತ ಸೂಚಿಸಿದ ಕುರ್ಚಿಯಲ್ಲಿ ಕೂತಾದ ಬಳಿಕ ತನ್ನ ಬಾಲ್ಯ ಪೂರೈಸಿದ ಮನೆಯನ್ನು ತುಂಬಿಕೊಂಡ ಕಣ್ಣುಗಳು ಒದ್ದೆಯಾದವು. ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ಪಾಲು ಏನು ಉಳಿದಿರುವುದೋ! ಸಂದೇಹವನ್ನು ಅರ್ಥಮಾಡಿಕೊಂಡ ಹಿರಿಯ ಒಂದು ತಾಸು ಮುಂಚಿತವಾಗಿ ಬರಬಾರದಾಗಿತ್ತಾ ಎಂದು ತಾನು ನಿಡುಸುಯ್ದ. ಮಾತಿನ ಒಳಮರ್ಮ ಅರ್ಥವಾಗದೆ ಇರಲಿಲ್ಲ ತನಗೆ, ಆದರೂ ಕೇಳಿದ ಅಜ್ಜನ ಆಸ್ತಿಯಲ್ಲಿ ನನ್ನ ಪಾಲು ಏನೂ ಇಲ್ವೇನು?
ಯಾಕಿಲ್ಲ. ಆಗೋ ಅಲ್ಲಿದೆಯಲ್ಲ ಎಂದು ಬೆರಳು ಚಾಚಿ ತೋರಿಸಿದ ವ್ಯಕ್ತಿ ತನ್ನ ಚಿಕ್ಕಪ್ಪನೇ ಆಗಿದ್ದ.
ಬೆರಳು ಮೂಡಿಸಿದ ಅಗೋಚರ ರೇಖೆ ಮೂಲಕ ಕಣ್ಣರಳಿಸಿ ನೋಡಿದ, ಮೂಲೆಯಲ್ಲಿ ಅಜ್ಜನ ಕೋಲು ಗೋಡೆಗಾತು ನಿಶ್ಚಲ ಸ್ಥಿತಿಯಲ್ಲಿ ನಿಂತಿತ್ತು. ಬಾಲ್ಯಾವಸ್ಥೆಯಲ್ಲಿದ್ದ ತನಗೂ ತನ್ನಂಥವರಿಗೂ ನಡೆಯುವುದನ್ನು ಕಲಿಸಿದ್ದು ಅದೇ ಕೋಲು, ಕಾಲುಗಳಿರದಿದ್ದರೂ ತಮ್ಮನ್ನು ಬೆನ್ನ ಮೇಲೆ ಕೂಡ್ರಿಸಿಕೊಳ್ಳುತ್ತಿದ್ದುದು ಅದೇ ಕೋಲು, ಪುಟ್ಟ ಮನೆಯೊಳಗೇ ಪ್ರಪಂಚವನ್ನು ಸೃಷ್ಠಿಸಿ ಪರಿಚಯಿಸುತ್ತಿದ್ದುದು ಅದೇ ಕೋಲು, ತಮ್ಮೆಲ್ಲರ ಬಾಲ್ಯವನ್ನು ಆಹ್ಲಾದಗೊಳಿಸುತ್ತಿದ್ದುದು ಅದೇ ಕೋಲು. ತಮ್ಮೆಲ್ಲರ ಪ್ರೀತಿಯ ಅಜ್ಜನ ಪ್ರತಿಬಿಂಬವನ್ನು ಕಾಷ್ಠದಲ್ಲಿ ಪ್ರತಿಬಿಂಬಿಸುತ್ತಿರುವುದು ಅದೇ ಕೋಲು, ಮರಣೋತ್ತರ ಸ್ಥಿತಿಯಲ್ಲಿರುವ ನನ್ನನ್ನು ತೆಗೆದುಕೊಂಡೋಯ್ದು ಮನೆ ತುಂಬಿಸಿಕೋ ಪುಟ್ಟ ಎಂದು ಅಂಗಲಾಚುತ್ತಿರುವ ಅಜ್ಜ ಅಗೋಚರ ಸ್ಥಿತಿಯಲ್ಲಿರುವುದು ಅದೇ ಕೋಲಿನಲ್ಲಿ! ಚರಸ್ಥಿರ ಆಸ್ತಿ ಒಂದು ತೂಕವಾದರೆ ಆ ಕೋಲೇ ಅವೆಲ್ಲಕ್ಕಿಂತ ಮಿಗಿಲಾದ ತೂಕವೆಂದು ಭಾವಿಸಿದ. ಸೂಜಿಗಲ್ಲಿನಂತೆ ಆಕರ್ಷಿಸಿತು.
ಅಂಬೆಗಾಲಿಡುವ ಮಗುವಿನಂತೆ ಮೆಲ್ಲಗೆ ಸಮೀಪಿಸಿದ. ಒಂದೆರಡು ಅಂಗಲ ದಪ್ಪ, ಚಂದ್ರಾಕಾರದ ಹಿಡಿಕೆ. ಅದರ ಪಾರದರ್ಶಕ ಮೈಯಲ್ಲಿ ತನ್ನ ಪ್ರತಿಬಿಂಬ ಪುಟ್ಟಮಗುವಿನಾಕಾರ ತಳೆಯಿತು. ನೋಡು ನೋಡುತ್ತಿದ್ದಂತೆ ಆ ಪುಟ್ಟ ಮಗು ಬೆಳೆದೂ ಬೆಳೆದು ತಾತನಾಕಾರ ಪಡೆದುಕೊಂಡಂತೆ, ಎತ್ತಿಕೊಳ್ಳಲೆಂದು ತನ್ನತ್ತ ಕೈಗಳನ್ನು ಚಾಚುತ್ತಿರುವಂತೆ, ಗಂಡಸಾದರೆ ತನ್ನನ್ನು ಎತ್ತಿಕೋ ಎಂದು ಸವಾಲೆಸೆದಂತೆ ಭಾಸವಾಯಿತು. ಗರಿಗರಿ ಪಂಚೆ, ರೇಶ್ಮೆ ಅಂಗಿ ಧರಿಸಿ ಕೋಲನ್ನು ಹಿಡಿದು ಠೀವಿಯಿಂದ ನಡೆದಾಡುತ್ತಿದ್ದ ತನ್ನ ತಾತನನ್ನು ನೆನಪಿಸಿಕೊಳ್ಳದೆ ಇರಲಿಲ್ಲ ತಾನು. ಶಿವಧನಸ್ಸಿನಂತಿದ್ದ ಅದನ್ನು ಹಿಡಿದು ಗಾಂಡೀವಿಯಂತೆ ಮರಳಿ ಚಿಕ್ಕಪ್ಪನಿರುವಲ್ಲಿಗೆ ಬಂದು ತಲುಪಿದ.
ಚಿಕ್ಕಪ್ಪ ನನಗಿದೇ ಸಾಕು ಎಂದ. ಕೇಳಿಸಿಕೊಂಡ ಆ ಹಿರಿಯ ವ್ಯಕ್ತಿ ನಕ್ಕರು.
ಅದಕ್ಕೆ ಗತಿ ಕಾಣಿಸುವ ಕುರಿತು ಯೋಚಿಸುತ್ತಿದ್ದೆ ಮಹರಾಯ. ಒಯ್ಯುವಾಗ ಮರೆಮಾಚುವುದನ್ನು ಮರೆಯದಿರು, ನೋಡಿದವರು ನಕ್ಕಾರು ಎಂದು ಅದೇ ಚಿಕ್ಕಪ್ಪ ಹೇಳುವುದನ್ನು ಮರೆಯಲಿಲ್ಲ.
ಅದನ್ನು ಅಡಗಿಸಿಟ್ಟುಕೊಳ್ಳದೆ ಪ್ರಯಾಣಿಸಿ ಊರನ್ನೂ ಮನೆಯನ್ನೂ ತಲುಪಿದ. ನೋಡಿದ ಪತ್ನಿ ತನ್ನ ವ್ಯವಹಾರ ಜ್ಞಾನವನ್ನು ಹಳಿಯುತ್ತ ಸ್ವಾಗತಿಸಿದಳು. ಆಕೆ ನೋಡಿರದ ತನ್ನ ತಾತನನ್ನೂ ಆತನೊಂದಿಗೆ ಒಡನಾಡಿದ ತನ್ನ ಬಾಲ್ಯವನ್ನೂ ಹೇಳಿಕೊಂಡ, ಅಜ್ಜನ ಕೋಲಿದು ನನ್ನಯ ಕುದುರೆ ಎಂಬ ಹಾಡು ಬಾಯಿಪಾಠ ಮಾಡಿದಿ ಎಂದರೆ ಈ ಕೋಲಿನ ಮಹತ್ವ ತಿಳಿಯುವುದು ಎಂದು ಹೇಳುವುದನ್ನು ಮರೆಯಲಿಲ್ಲ. ನೆರೆಹೊರೆಯವರಾಗಲೀ ಹತ್ತಿರದ ಗೆಳೆಯರಾಗಲೀ ಕೋಲು ಕುರಿತಂತೆ ಕುತೂಹಲ ವ್ಯಕ್ತಪಡಿಸಲಿಲ್ಲ, ಕಾರಣ ಅವರೆಲ್ಲರ ದೃಷ್ಟಿಯಲ್ಲಿ ತಾನು ವ್ಯವಹಾರಜ್ಞಾನವಿಲ್ಲದ ಬುದ್ದಿಹೀನ.
ಹೀಗೆಯೇ ನಾಲ್ಕಾರು ದಿವಸಗಳುರುಳಿದವು. ಅದನ್ನು ಏನು ಮಾಡುವುದೆಂದು ಯೋಚಿಸೀ ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದ, ಅದು ಅದೇ ಆಗಿತ್ತು. ಮೊಳೆಯುವ ಶಕ್ತಿ ಇನ್ನೂ ಜೀವಂತವಿರುವ ಅಜ್ಜನ ಕೋಲನ್ನು ಮನೆ ಮುಂದಿನ ಕೈತೋಟದಲ್ಲಿ ನೆಟ್ಟರೆ ಹೇಗೆ ಎಂದು ಯೋಚಿಸಿದ. ಹೇಳಿದ್ದಕ್ಕೆ ಪತ್ನಿಯೂ ಮೊದಲು ಆ ಕೆಲಸ ಮಾಡಿ ಎಂದು ಸಿಡುಕಿದಳು. ತಡಮಾಡದೆ ತೋಡುವ ಅಗೆಯುವ ಪರಿಕರಗಳನ್ನು ಹಿಡಿದು ತೋಟವನ್ನು ಪ್ರವೇಶಿಸಿದ, ಪ್ರಶಸ್ತ ಸ್ಥಳವನ್ನು ಗುರುತಿಸಿದ, ಬಗೆದು ಅಗೆದು ಸಜ್ಜುಗೊಳಿಸಿದ, ಬಳಿಕ ಅದನ್ನು ಊಧ್ರ್ವಮುಖವಾಗಿ ನೆಟ್ಟು ನೀರೆರೆದು ಮರಳಿದ.
ಕೆಲವು ದಿವಸಗಳ ಬಳಿಕ ಕೋಲಿನ ತುದಿಯಲ್ಲಿ ಒಂದೆರಡು ಚಿಗುರುಗಳು ಕಾಣಿಸಿಕೊಂಡು ಎಳೆವಿಸಲನ್ನು ಪ್ರತಿಫಲಿಸಲಾರಂಭಿಸಿದವು. ದಿನಗಳೆಂದಂತೆ ಚಿಗುರು ಟಿಸಿಲಾಯಿತು, ಟಿಸಿಲು ಗಿಡವಾಯಿತು, ಗಿಡ ವೃಕ್ಷಾಕಾರ ಪಡೆದುಕೊಂಡಿತು. ವಿಚಿತ್ರ ಸತ್ಯವೆಂದರೆ ವೃಕ್ಷದ ತುಂಬೆಲ್ಲ ಅಸಂಖ್ಯಾತ ಅಜ್ಜನ ಕೋಲುಗಳು. ಈ ಸುದ್ದಿ ಮನೆಯಿಂದ ಮನೆಗೆ, ಬಡಾವಣೆಯಿಂದ ಬಡಾವಣೆಗೆ, ಊರಿಂದ ಊರಿಗೆ ಹರಡಿದ ಪರಿಣಾಮವಾಗಿ ಆ ವೃಕ್ಷ ಪ್ರೇಕ್ಷಣೀಯವಾಯಿತು, ಆ ವೃಕ್ಷವಿರುವ ಮನೆ ತೋಟ ಯಾತ್ರಾಸ್ಥಳವಾಯಿತು. ಅಲ್ಲದೆ ಕೋಲುಗಳ ಬೇಡಿಕೆಯೂ ಹೆಚ್ಚದೆ ಇರಲಿಲ್ಲ.
ಅಂಬೆಗಾಲಿಡುವ ತಮ್ಮ ಮಕ್ಕಳಿಗೆ ನಡೆಯುವುದನ್ನು ಕಲಿಸಲೆಂದು ತಾಯಂದಿರೂ, ನಡೆಯುವ ಹೆಜ್ಜೆ ತಡವರಿಸದಿರಲೆಂದು ವೃದ್ದರೂ, ವಿದ್ಯಾರ್ಥಿಗಳ ನಡೆನುಡಿ ನಿಯಂತ್ರಿಸಲೆಂದು ಶಿಕ್ಷಕರೂ, ಆಶೀರ್ವದಿಸುವ ತಮ್ಮ ಕೈಗಳಲ್ಲಿ ಲಾಂಛನಪ್ರಾಯವಾಗಿರಲೆಂದು ಸಾಧುಸಂತರು, ತಮ್ಮ ಕೈಯಲ್ಲಿ ಭೂಷಣಪ್ರಾಯವಾಗಿರಲೆಂದು ಸ್ಥಳೀಯ ರಾಜಕಾರಣಿಗಳು! ಜೊತೆಜೊತೆಗೆ ಅಜ್ಜನ ಕೋಲಿದು ನನ್ನಯ ಕುದುರೆ ಎಂಬ ಶಿಶು ಗೀತೆಯ ಜನಪ್ರಿಯತೆ ಹೆಚ್ಚಿದ ಪರಿಣಾಮವಾಗಿ..
ಹೀಗೆ ಎಲ್ಲಿ ನೋಡಿದರೂ ಯಾರ ಕೈಯಲ್ಲಿ ನೋಡಿದರೂ ತನ್ನ ಅಜ್ಜನ ಕೋಲುಗಳೇ ಕೋಲುಗಳು! ಶ್ರೀಮಂತಿಕೆ ಸಾರ್ಥಕತೆ ಅಂದರೆ ಇದೇ ತಾನೆ! ಆತ ನೆಮ್ಮದಿಯಿಂದ ಜೀವನ ಮುಂದುವರೆಸಿದ.
ವರ್ತಮಾನವನ್ನು ಭೂತದ ವಸ್ತುಸಂಗ್ರಹಾಲಯಕ್ಕೆ ಜಮಾ ಮಾಡುತ್ತಲೇ ಸಾಗುವುದು ಕಾಲದ ಜಾಯಮಾನ ತಾನೆ! ಮುಂದೆ ತನಗೂ ತನ್ನ ಪತ್ನಿಗೂ ಅದೇ ವೃಕ್ಷ ಕೋಲುಗಳನ್ನು ವಿತರಿಸಿ ತಮ್ಮೀರ್ವರ ವ್ಯದ್ಯಾಪ್ಯಕ್ಕೆ ಆಸರೆಯನ್ನು ನೀಡಿತು.
* ಕುಂಬಾರ ವೀರಭದ್ರಪ್ಪ (ಕೃಪೆ : ಅವಧಿ)