ಮಂಗಲ್ಪಾಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಇದರ ಮಂಗಲ್ಪಾಡಿ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 24-05-2026ನೇ ರವಿವಾರ ಬೆಳಿಗ್ಗೆ 10 ಗಂಟೆಗೆ ಕುಬಣೂರು ಶ್ರೀ ರಾಮ ಎ.ಯು.ಪಿ.ಶಾಲಾ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹು ವಿಜೃಂಭಣೆಯಿಂದ ಜರುಗಿತು.
ಸಭಾ ಕಾರ್ಯಕ್ರಮವು ಪ್ರೇಮಲತಾ ಬೊಳ್ಳಾರು ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀ ಬಾಲಕೃಷ್ಣ ಪಯ್ಯಾರ್ ಅತಿಥಿಯವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಲ್ಪಾಡಿ ಶಾಖೆಯ ಅಧ್ಯಕ್ಷರಾದ ಶ್ರೀ ಸತೀಶ್ ಎಂ. ಹೇರೂರು ವಹಿಸಿದರು. ಶ್ರೀ ಶಂಕರ ಕುಂಜತ್ತೂರು ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಸಿದರು. ಶ್ರೀಮತಿ ವನಿತ ರಾಜೇಶ್ ಕೊಂಡೆವೂರು ಇವರು ಶಾಖೆಯ ಒಂದು ವರ್ಷದ ಕಾರ್ಯಕ್ರಮ ಚಟುವಟಿಕೆಯ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀ ಶ್ರೀನಿವಾಸ ಮೂಲ್ಯ ಮಯ್ಯರಮೂಲೆ ಮತ್ತು ಶ್ರೀ ಮುಂಡಪ್ಪ ಮೂಲ್ಯ ಮಯ್ಯರಮೂಲೆ ಇವರಿಗೆ ಕೃಷಿರತ್ನ ಬಿರುದು ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಶ್ರೀಮತಿ ಸುಮತಿ ಟೀಚರ್ ನೆರವೇರಿಸಿದರು. ನಂತರ SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೀಜೀತ.ಬಿ ಮತ್ತು ಪ್ರೀಯಶ್ರೀ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಅದರೊಂದಿಗೆ ಮಂಗಲ್ಪಾಡಿ ಶಾಖೆಯ ಕನಸಿನ ಯೋಜನೆಯಾದ ಬೆಳಕು (ಬದುಕಿಗೊಂದು ಭರವಸೆಯ ಬೆಳಕು) ಯೋಜನೆಯ ಮೂಲಕ ರಕ್ತವಾತದಿಂದ ಬಳಲುತ್ತಿರುವ ಶ್ರೀಮತಿ ವಾರಿಜ ಕುಲಾಲ್ ಬೇಕೂರು ಮತ್ತು ಶಾಖೆಯ ಸದಸ್ಯರಾಗಿದ್ದು ಅನಾರೋಗ್ಯದಿಂದ ನಿಧನರಾದ ಶ್ರೀ ಸೋಮನಾಥ ಬೊಳ್ಳಾರು ಬಡ ಕುಟುಂಬಕ್ಕೆ ಬೆಳಕು ಸಹಾಯಹಸ್ತವನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.

ಬಾಯಾರು ಗ್ರಾಮಾಧಿಕಾರಿ ಶ್ರೀ ಶಂಕರ ಕುಂಜತ್ತೂರು ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುಲಾಲರು ತಮ್ಮ ವೃತ್ತಿ ಹಾಗೂ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ನಮ್ಮ ಜೀವನಾವರ್ತ, ವಾರ್ಷಿಕ ಆವರ್ತನದ ಆಚರಣೆಗಳಲ್ಲಿ ದೈವಾರಾಧನೆಯಲ್ಲಿ ಬದಲಾವಣೆಗಳು ಆಗಿ ಹೊಸ ಕ್ರಮಗಳು ಆಡಂಬರಗಳು ಹೆಚ್ಚಾಗಿದೆ ಎಂದರು. ಕೇರಳ ಪೋಟರಿ ಕೋರ್ಪರೇಷನ್ ಮೂಲಕ ಕುಂಬಾರಿಕೆಗೆ ಸೌಲಭ್ಯ ಗಳು ಇದ್ದರೂ ಇಲ್ಲಿ ಕುಂಬಾರಿಕೆ ಪೂರ್ತಿ ನಿಂತು ಹೋಗಿ ಸೌಲಭ್ಯ ಸಿಗದ ಪರಿಸ್ಥಿತಿ ಇದೆ. ಸರಕಾರ ಕುಂಬಾರಿಕೆ ಕುರಿತು ಹಿಂದೆ ನಡೆಸಿದ ಅಧ್ಯಯನದಲ್ಲಿ ಈ ತುಳು ಪ್ರದೇಶದ ಕುಲಾಲರ ಅಂಕಿ ಅಂಶಗಳನ್ನು ಸರಿಯಾಗಿ ದಾಖಲು ಮಾಡಿಲ್ಲ. ಇದರಿಂದ ಕುಲಾಲರ ಜನಸಂಖ್ಯೆಯ ಕುರಿತು ಅಧಿಕೃತ ಲೆಕ್ಕ ಇಲ್ಲ. ಕುಲಾಲ ಸಂಘ ದ ಮೂಲಕ ಆಯಾ ಪ್ರದೇಶದ ಕುಲಾಲ ಜನಸಂಖ್ಯೆಯ ಮಾಹಿತಿ ಸಂಗ್ರಹ ನಡೆಯಬೇಕು. ಹಿಂದೆ ನಡೆದ ಸರಕಾರದ ಜನಗಣತಿ ಯೊಂದರಲ್ಲಿ ತುಳು ಭಾಷೆ ಯನ್ನು ಯಾರೂ ದಾಖಲಿಸದ ಕಾರಣ ಜನಗಣತಿಯ ಹ್ಯಾಂಡ್ ಬುಕ್ ನಲ್ಲಿ ತುಳು ಭಾಷೆ ಇರಲಿಲ್ಲ. ಹೀಗಾಗಿ ಮುಂದೆ ನಡೆಯಲಿರುವ ಸರಕಾರದ ಜನಗಣತಿಯಲ್ಲಿ ಕುಲಾಲರು ಮಾತೃಭಾಷೆ ಯಾಗಿ ತುಳುವನ್ನೆ ನಮೂದಿಸಬೇಕು.ಕುಲಾಲ ಸಂಘ ಕುಂಬಾರಿಕೆ ಮಾಡುವವರನ್ನು ಗುರುತಿಸಿ ಅವರಿಗೆ ಸವಲತ್ತುಗಳು ಸಿಗುವಂತೆ ಮಾಡಬೇಕು, ನಮ್ಮ ಮಾತೃ ಪ್ರಧಾನ ಕುಟುಂಬ ಪದ್ಧತಿ, ಸಂಪ್ರದಾಯ, ಆಚರಣೆ ಹಾಗೂ ಧೈವರಾದನೆಯ ಪರಂಪರೆಯ ಕುರಿತು ಯುವಜನತೆಗೆ ಅರಿವು, ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ಸಂಘದ ಮೂಲಕ ನಡೆಯಬೇಕು. ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ (ತುಳು ಸಾಹಿತಿ) ಇವರು ನಮ್ಮ ಅಪ್ಪೆ ಭಾಷೆ ತುಳು ಭಾಷೆಯಾಗಿದೆ. ತುಳು ಭಾಷೆಯನ್ನು ನಾವು ಮಾತನಾಡಬೇಕು ಹಾಗೂ ಬೆಳೆಸಬೇಕು, ಮಕ್ಕಳಲ್ಲಿ ಹೆಚ್ಚಾಗಿ ತುಳು ಭಾಷೆಯನ್ನೇ ಮಾತಾಡಿಸಬೇಕು. ಹಾಗೂ ಮಕ್ಕಳಲ್ಲಿ ನಮ್ಮ ಜಾತಿ ತುಳುನಾಡು ಮತ್ತು ಭಾಷೆಯ ಬಗ್ಗೆ ಪ್ರೀತಿ ಗೌರವ ಬೆಳೆಸಬೇಕು, ಅದರೊಂದಿಗೆ ಅದಷ್ಟು ಮಕ್ಕಳಿಗೆ ತುಳು ಲಿಪಿ ಕಲಿಸುವ ವ್ಯವಸ್ಥೆ ಮಾಡಬೇಕು ಎಂದರು. ಹಾಗೂ ಅವರೇ ಬರೆದ ಕುಂಬಾರಿಕೆಯ ಬಗ್ಗೆಗಿನ ಸುಂದರವಾದ ಕವನ ವಾಚಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು (ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ) ಇವರು ಸಂಘಟನೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಶ್ರೀ ಬಾಲಕೃಷ್ಣ ಶೆಟ್ಟಿ ಮೀನಾರು (ಶಾಲಾ ಟ್ರಸ್ಟಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀರಾಮ ಎ.ಯು.ಪಿ.ಶಾಲೆ ಕುಬಣೂರು) ಇವರು ಕುಲಾಲ ಸಮುದಾಯದ ಮೇಲೆ ಇರುವ ಅಭಿಮಾನ ಹಾಗೂ ಅವರೊಂದಿಗಿದ್ದ ಒಡನಾಟಗಳ ಬಗ್ಗೆ ಮಾತನಾಡಿದರು. ಕುಲಾಲ ಸಮುದಾಯ ಹಿಂದೂ ಧರ್ಮದ ಒಂದು ಭಾಗವಾಗಿದೆ. ಅದರಂತೆ ಎಲ್ಲಾ ಜಾತಿಗಳ ಅಭಿವೃದ್ಧಿಯಿಂದಲೇ ಹಿಂದೂ ಧರ್ಮವನ್ನು ಉಳಿಸಲು ಸಾದ್ಯ ಎಂದರು. ಕಾರ್ಯಕ್ರಮ ದಲ್ಲಿ ಮಂಗಲ್ಪಾಡಿ ಶಾಖೆಯ ಗೌರವ ಸಲಹೆಗಾರರಾದ ಶ್ರೀ ಸೇಸಪ್ಪ ಮೂಲ್ಯ ಬೊಳ್ಳಾರು, ಹಾಗೂ ಗೌರವಾಧ್ಯಕ್ಷರಾದ ಶ್ರೀ ವಾಸು ಕುಲಾಲ್ ಬೊಳ್ಳಾರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ನಾರಾಯಣ ಕುಲಾಲ ಕುಬಣೂರು ವಂದನಾರ್ಪಣೆಗೈದರು.ಶ್ರೀ ಎನ್.ಕೆ.ಕುಲಾಲ್ ಬೇಕೂರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಿತು. ನಂತರ 2 ಗಂಟೆಗೆ ಸಮುದಾಯದ ಪ್ರತಿಭಾನ್ವಿತರಿಂದ ಕುಲಾಲ ಕಲರವ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು. ಎಲ್ಲಾ ಪ್ರತಿಭೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

