ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲಾ ಕುಲಾಲ ಮಾತೃ ಸಂಘದ ಚುನಾವಣೆ ಅಕ್ರಮ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದ್ದು, ಸಾರ್ವಜನಿಕರಲ್ಲಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಕುಲಾಲ ಸಮಾಜದ ಪ್ರಮುಖರೂ ನಿವೃತ್ತ ಹಿರಿಯ ಮಿಲಿಟರಿ ಅಧಿಕಾರಿಯೂ ಆಗಿರುವ ಚಂದಪ್ಪ ಮೂಲ್ಯ ಅವರ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿಓಡಾಡುತ್ತಿದೆ. ಆ ಪತ್ರದ ಸಾರಾಂಶವೇನೆಂದರೆ
ಸಂಘದ ಚುನಾವಣೆಯಲ್ಲಿ ನಾಮಪತ್ರ ತಿರಸ್ಕಾರಗೊಂಡ 15 ಮಂದಿ ಜಿಲ್ಲಾ ಚುನಾವಣಾ ಅಧಿಕಾರಿಯಲ್ಲಿ ದೂರು ನೀಡಿದ್ದು, ಚುನಾವಣಾ ಅಧಿಕಾರಿಯಾದ ಸಹಕಾರ ಸಂಘದ ಉಪನಿಬಂಧಕರು ಚುನಾವಣಾ ಪ್ರಕ್ರಿಯೆಯಲ್ಲಿ ಆಕ್ರಮ ನಡೆದಿದೆ ಎಂದು ಕೂಡಲೇ 45 ದಿನದೊಳಗೆ ಮರು ಚುನಾವಣೆ ನಡೆಸಬೇಕೆಂದು ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ, ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಸಮಾಜದಲ್ಲಿ ನಡೆಯುತ್ತಿರುವ ಗೊಂದಲವನ್ನು ಸರಿಪಡಿಸುವ ಉದ್ದೇಶದಿಂದ ಕುಲಾಲ ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸಬೇಕೆಂಬ ಉದ್ದೇಶವನ್ನು ಮನಗಂಡು ಎರಡೂ ಕಡೆಯವರನ್ನು ಸೇರಿಸಿ ಮಾಣಿಲ ಶ್ರೀ ಮೋಹನ್ ದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಹಲವು ಮುಖಂಡರ ಸಮಿತಿಯು ಮಯೂರ್ ಉಳ್ಳಾಲ್ ಮತ್ತು ದಯಾನಂದ ಅಡ್ಯಾರ್ ಈ ಎರಡೂ ತಂಡಗಳನ್ನು ಒಟ್ಟಿಗೆ ಸೇರಿಸಿ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಸಂಧಾನ ಸಭೆ ನಡೆಯಿತು. ನಾಮಪತ್ರ ತಿರಸ್ಕರಿಸಲ್ಪಟ್ಟ 18 ಜನರ ಪೈಕಿ 5 ಜನರನ್ನು ಜಿಲ್ಲಾ ಮಾತೃ ಸಂಘ ಕಾರ್ಯಕಾರಿ ಸಮಿತಿಗೆ ಸೇರಿಸುವುದು, ಅದರಲ್ಲಿ ಒಬ್ಬರಿಗೆ ಪ್ರಧಾನ ಕಾರ್ಯದರ್ಶಿ ಮತ್ತು ಒಬ್ಬರಿಗೆ ಉಪಾಧ್ಯಕ್ಷ ಮತ್ತು ಮೂರು ಜನರಿಗೆ ನಿರ್ದೇಶಕರಾಗಿ ತೆಗೆದುಕೊಳ್ಳುವುದೆಂದು ತೀರ್ಮಾನಿಸಲಾಗಿ, ಕೋರ್ಟ್ ನಲ್ಲಿರುವ ಎಲ್ಲಾ ಕೇಸ್ಗಳನ್ನು ಹಿಂತೆಗೆಯಲು ತೀರ್ಮಾನಿಸಲಾಗಿತ್ತು. ಅದರಂತೆ ಎಲ್ಲವೂ ಈ ಸಂಧಾನ ಸಭೆಯ ತೀರ್ಮಾನದಂತೆ ನಡೆದಿದ್ದು ಕೋರ್ಟ್ ಕೇಸನ್ನು ಹಿಂಪಡೆದಿದ್ದರು. ಆದರೆ ಆ ಬಳಿಕ ಮಯೂರ್ ಉಳ್ಳಾಲ್ ಸಭೆಯಲ್ಲಿ ಒಪ್ಪಿಕೊಂಡಂತೆ ನಡೆದುಕೊಳ್ಳಲಿಲ್ಲ. ಈ ಬಗ್ಗೆ ಸಂಘದ ಮುಂದೆ ಧರಣಿ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಲು ತೀರ್ಮಾನಿಸಿದ್ದಾರೆ. ಪ್ರಸ್ತುತ ಅದನ್ನು ತಾನು ತಡೆದಿದ್ದು ಸಂಧಾನ ಪ್ರಕ್ರಿಯೆಯನ್ನು ಜಾರಿಗೆ ತರಬೇಕು ಎಂಬುದು ಪತ್ರದ ಸಾರಾಂಶ (ಚಂದಪ್ಪ ಮೂಲ್ಯರ ಪೂರ್ತಿ ಪತ್ರವನ್ನು ಕೆಳಗೆ ನೀಡಲಾಗಿದೆ).

ಈ ಬಗ್ಗೆ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರನ್ನು `ಕುಲಾಲ ವರ್ಲ್ಡ್ ಡಾಟ್ ಕಾಮ್’ ಮಾತನಾಡಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಓಡಾಡುವ ಪತ್ರಕ್ಕೆ ಉತ್ತರಕೊಡಬೇಕಾದ ಅನಿವಾರ್ಯತೆ ನನಗೆ ಇಲ್ಲ. ಯಾರು ನೇರವಾಗಿ ನಮ್ಮಲ್ಲಿ ಕೇಳುತ್ತಾರೋ ಅವರಿಗೆ ಉತ್ತರ ನೀಡುವ ಸಾಮರ್ಥ್ಯ ನಮಗೆ ಇದೆ. ಸಭೆಯಲ್ಲಿ ತೀರ್ಮಾನಿಸಿದಂತೆ ಅವರ ಬೇಡಿಕೆಗೆ ಒಪ್ಪಿಕೊಂಡಿದ್ದು ನಿಜ. ಆದರೆ ಅವರು ಹೇಳಿದಂತೆ ತಕ್ಕ ಸಮಯಕ್ಕೆ ನಡೆದುಕೊಂಡಿಲ್ಲ. ಅವರು ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡಾಗ ಸಾಕಷ್ಟು ವಿಳಂಬವಾಗಿದೆ. ನನ್ನ ಅವಧಿ ಇನ್ನು ಮೂರ್ನಾಲ್ಕು ತಿಂಗಳು ಮಾತ್ರ ಇದ್ದು, ಈ ಸಣ್ಣ ಅವಧಿಗೆ ಹೊಸ ಆಡಳಿತ ಮಂಡಳಿ ರಚಿಸುವ ಅಗತ್ಯವೇನಿದೆ ? ಬಹಳ ಹಿಂದೆ ನಡೆದ ರಾಜಿ ಮಾತುಕತೆಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಅಥವಾ ನಿಲುವು ತೆಗೆದುಕೊಳ್ಳಲು ಇಷ್ಟು ವಿಳಂಬವಾಗಲು ಕಾರಣವೇನು ? ಅಲ್ಲದೇ ಅವರು ಇದುವರೆಗೆ ಸಹಕಾರ ಬ್ಯಾಂಕಿಗೆ ರಾಜಿ ಸಂಧಾನವಾದ ಬಗ್ಗೆ ಯಾವ ಪತ್ರವನ್ನೂ ನೀಡಿಲ್ಲ. ಈಗಾಗಲೇ ಪತ್ರ ನೀಡಿದ್ದರೆ ಅದರ ದಾಖಲೆ ತೋರಿಸಲಿ. ಆಗ ನಮ್ಮ ತೀರ್ಮಾನವನ್ನು ಮರುಪರಿಶೀಲನೆ ಮಾಡುತ್ತೇವೆ. ಇನ್ನು ಹೇಳಿದಂತೆ ನಡೆದುಕೊಳ್ಳದೇ ಇರುವುದು ಅವರೇ ಹೊರತು ನಾವಲ್ಲ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಗೊಡ್ಡು ಬೆದರಿಕೆ ಹಾಕಿ ಯಾರನ್ನೂ ಹೆದರಿಸಲು ಅಥವಾ ಬಗ್ಗಿಸಲು ಸಾಧ್ಯವಿಲ್ಲ . ಇನ್ನು ಧರಣಿ-ಪತ್ರಿಕಾಗೋಷ್ಠಿ ಅದೇನು ಬೇಕಿದ್ದರೂ ನಡೆಸಲಿ ಎಲ್ಲದಕ್ಕೂ ಉತ್ತರ ಕೊಡುವ ಶಕ್ತಿ ಸಾಮರ್ಥ್ಯ ನಮಗಿದೆ . ಮಾತೃ ಸಂಘದ ಅಧ್ಯಕ್ಷನಾಗಿ ಇದುವರೆಗೆ ಯಾರೂ ಮಾಡದ ಅತ್ಯುನ್ನತ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ಇನ್ನು ಭಿನ್ನಾಭಿಪ್ರಾಯ -ಅಸಮಾಧಾನಗಳು ಎಲ್ಲಾ ಸಂಘ ಸಂಸ್ಥೆಯಲ್ಲಿ ಇದ್ದದ್ದೇ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ನಮ್ಮಿಂದಾದ ಒಳ್ಳೆ ಕಾರ್ಯಗಳನ್ನು ಮಾಡುತ್ತಾ ಮುಂದುವರಿಯುವುದಾಗಿ ತಿಳಿಸಿದ್ದಾರೆ.



