ವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಬೇಕು: ಗುಣವಂತ ವಿ.ಗುಣಗಿ
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಭಾ(ರಿ)ಕರಾವಳಿ ವಿಭಾಗ ಮತ್ತು ದ.ಕ.ಜಿಲ್ಲಾ ಕುಲಾಲ- ಕುಂಬಾರರ ಯುವ ವೇದಿಕೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಇಂದು ಮಂಗಳೂರು ಬೋಂದೆಲ್ ಮಹಿಳಾ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ನಡೆಯಿತು.
ಬೆಳಿಗ್ಗೆ ಬೊಂದೆಲ್ ಸರ್ವಜ್ಞ ವೃತ್ತದಲ್ಲಿ ಸರ್ವಜ್ಞ ಪ್ರತಿಮೆಗೆ ಗಣ್ಯ ಅತಿಥಿಗಳು ಹಾರಾರ್ಪಣೆಗೈದು ಮಹಿಳಾ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಗುಣವಂತ ವಿ.ಗುನಗಿ ಉದ್ಘಾಟಿಸಿದರು.
ನಿವೃತ್ತ ಶಿಕ್ಷಕ ಮಹಾಬಲ ಕುಲಾಲ್ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಕುಲಾಲ ಕುಂಭಾರರ ಯುವ ವೇಧಿಕೆಯ ರಾಜ್ಯಾಧ್ಯಕ್ಷ ಸುಧಾಕರ ಸಾಲಿಯಾನ್ ಸುರತ್ಕಲ್ ಶುಭ ಹಾರೈಸಿ ವಿಧ್ಯಾರ್ಥಿಗಳಿಗೆ ಸರ್ವಜ್ಙನ ಬಗ್ಗೆ ಅರಿಯಲು ರೀಲ್ಸ್ನ ಟಾಸ್ಕ್ ನೀಡಿ ವಿಜೇತರಿಗೆ ಬಹುಮಾನದ ಭರವಸೆ ನೀಡಿದರು.
ಕುಲಾಲ ಕುಂಭಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಲ.ಅನಿಲ್ದಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಮಹಿಳಾ ಪಾಲಿಟೆಕ್ನಿಕ್ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿಧ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು ಹಾಗು ಕುಲಾಲ ಸಮುದಾಯದ ವಿಧ್ಯಾರ್ಥಿನಿಯರನ್ನು ಗೌರವಿಸಲಾಯಿತು.
ದ.ಕ. ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ.ಸ್ವಾಗತಿಸಿದರು. ಗಂಗಾಧರ ಬಂಜನ್ ವಂದಿಸಿದರು. ಅಶೋಕ್ ಕೂಳೂರು ಸಹಕರಿಸಿದರು. ಎಚ್ಕೆ ನಯನಾಡು ನಿರೂಪಿಸಿದರು.
ನಂತರ ವಿಧ್ಯಾರ್ಥಿನಿಯರಿಂದ ಸಾಂಸ್ಕ್ರತಿಕ ನೃತ್ಯ ಕಾರ್ಯಕ್ರಮಗಳು ನಡೆಯಿತು. ಜಿಲ್ಲಾ ಮತ್ತು ಸುರತ್ಕಲ್ ಕುಲಾಲ ಸಂಘ ಹಾಗೂ ಯುವ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

ಮೇರು ದಾರ್ಶನಿಕ, ಜ್ಞಾನದ ಮಹಾಸಾಗರ ಸರ್ವಜ್ಞ
ಕಲಬುರಗಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ಮಾತಿಲ್ಲ ಎಂಬ ನಾಣ್ಣುಡಿಯಂತೆ ಪ್ರತಿಯೊಂದು ವಿಷಯದ ಬಗ್ಗೆ ತಮ್ಮ ತ್ರಿಪದಿಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ವಿಶ್ವಕ್ಕೆ ಸಂದೇಶ ಸಾರಿದ ಸರ್ವಜ್ಞ ಅವರು ಜ್ಞಾನದ ಮಹಾಸಾಗರ, ಮೇರು ದಾರ್ಶನಿಕರಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸರ್ವಜ್ಞನವರ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಅವರು ಮಾತನಾಡಿದರು.
ಸರ್ವಜ್ಞ ಅವರು ಯಾವುದೇ ಒಂದುಜಾತಿ, ಧರ್ಮಕ್ಕೆ ಸೀಮಿತವಲ್ಲ. ಮತಾತೀತವಾದ ವಿಶಾಲ ದೃಷ್ಟಿ, ಮಾನವ ಜಾತಿ, ಅವರ ಮತದೇವ ಮತ, ಅವರ ಕಾಲ ಸರ್ವಕಾಲ ಎಂಬ ಬೇಂದ್ರೆಯವರ ಮಾತು ಅಕ್ಷರಶಃ ಸತ್ಯವಾಗಿದೆ. ಸರ್ವಜ್ಞನಲ್ಲಿರುª Àಅಗಾದವಾದ ಪಾಂಡಿತ್ಯ, ಅಪಾರ ಜೀವನಾನುಭವ, ಬಲು ತೀಕ್ಷಣವಾದ ಆದರೆ, ಅತಿ ಸರಳವಾದ ಭಾಷೆ, ಜಾನಪದ ಸತ್ವ, ಸಮಾಜದ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸುವ ಪ್ರಾಮಾಣಿಕತೆ ಇರುವ ಅವರ ತ್ರಿಪದಿಗಳು, ಕನ್ನಡದ ಅತ್ಯಂತ ಜನಪ್ರೀಯ ವಚನಗಳಾಗಿವೆ. ಸಮಾಜದ ಪ್ರತಿಯೊಂದು ಸಮಸ್ಯೆಗೆ ಸರ್ವಜ್ಞನವರ ವಚನಗಳಲ್ಲಿ ಪರಿಹಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಸಿದ್ದಾರ್ಥ ಹಾಗೂ ವಿದ್ಯಾರ್ಥಿಗಳಿದ್ದರು.

ಸಮ ಸಮಾಜದ ಕನಸು ಬಿತ್ತಿದ ಸಂತ ಕವಿ ಸರ್ವಜ್ಞ : ಬಿ.ಪಿ ಪ್ರಕಾಶ್
ಮಂಡ್ಯ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸಮ ಸಮಾಜದ ಕನಸು ಬಿತ್ತಿದರು ಸಂತ ಕವಿ ಸರ್ವಜ್ಞ ಅವರು. ಅವರ ಆದರ್ಶಗಳು ಮೌಲ್ಯಗಳನ್ನು ಯುವ ಜನತೆ ಅನುಸರಿಸಬೇಕು. ಸಮಾಜದಲ್ಲಿ ಸಮಾನ ಮನಸ್ಕರು ಹೆಚ್ಚಬೇಕು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್ ಹೇಳಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಎಲ್ ಸಂದೇಶ್ ಮಾತನಾಡಿ ಸಂತ ಕವಿ ಕೇವಲ ಒಂದು ಸಮುದಾಯದ ಅಸ್ಥಿಯಲ್ಲ ಕನ್ನಡದ ಆಸ್ತಿ. ಸರ್ವಜ್ಞ ವಚನಗಳು ಸಮಾಜವನ್ನು ಮಾಡಿತ್ತಿದೆ ಯುವ ಪೀಳಿಗೆ ಸರ್ವಜ್ಞರ ವಚನಗಳನ್ನು ಯುವ ಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಎಂ.ಪಿ ವರ್ಷ, ಸರ್ವಜ್ಞ ಎಂದರೆ ಸರ್ವವನ್ನೂ ತಿಳಿದವನು ಎಂದರ್ಥ ಅವರು ಹುಟ್ಟುತ್ತಲೇ ಎಲ್ಲವನ್ನೂ ತಿಳಿದವರಲ್ಲ. ಪ್ರತಿಯೊಬ್ಬರಿಂದ ಒಂದೊಂದು ಕಲಿತು ಸರ್ವಜ್ಞರಾದವರು. ಕಲಿಕೆಗೆ ಮಿತಿ ಇಲ್ಲ ಕಲಿಕೆ ನಿರಂತರ ಪ್ರಕ್ರಿಯೆ ಎಂದು ಸರ್ವಜ್ಞ ಸಾರಿದವರು ಎಂದು ಹೇಳಿದರು.
ನಿಜವಾದ ಮಣ್ಣಿನ ಮಗ ಸರ್ವಜ್ಞ ತಮ್ಮ ತತ್ವ ಆದರ್ಶ ಸಿದ್ಧಾಂತಿಗಳ ಮೂಲಕ ಸಮಾಜವನ್ನು ತಿದ್ದಿದ್ದವರು. ತಮಿಳರು ತಿರುವಳ್ಳುವರ್ ಹಾಗೂ ತೆಲುಗಿನವರು ವೇಮನ ಅವರಿಗೆ ದೇವರ ಸ್ಥಾನ ನೀಡಿದ್ದಾರೆ. 500 ವರ್ಷಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಇವತ್ತಿನ ಸಮಾಜದ ಕುರಿತು ಬರೆದಿದ್ದಾರೆ. ಅವರು ನಮ್ಮ ಕನ್ನಡಿಗರು ಎಂಬುದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಸರ್ವಜ್ಞ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಅವರು ಆದರ್ಶ ವಚನಗಳು ಎಲ್ಲರಿಗೂ ಸ್ವಂತ. ಸರ್ವಜ್ಞ ಸಮಾಜ ಪ್ರತಿ ಒಬ್ಬ ವ್ಯಕ್ತಿಗೂ ಆದರ್ಶ, 1520 ರಲ್ಲಿ ಹಾವೇರಿ ಜಿಲ್ಲೆಯ ಅಂಬಲುರು ಮಾಸುರಿನಲ್ಲಿ ಸಂತ ಕವಿ ಸರ್ವಜ್ಞ ಜನಿಸಿದರು. 2009 ರಲ್ಲಿ ತಮಿಳುನಾಡಿನಲ್ಲಿ ಸಂತ ಸರ್ವಜ್ಞರ ಪ್ರತಿಮೆಯನ್ನು ಅಧಿನ ಮುಖ್ಯಮಂತ್ರಿಗಳಾದ ಕರುಣಾನಿಧಿ ಹಾಗೂ ಯಡಿಯೂರಪ್ಪ ಅವರು ಸ್ಥಾಪಿಸಿದರು ಎಂದು ತಿಳಿಸಿದರು.
ಸರ್ವಜ್ಞ ಬದುಕಿದ್ದು ಅಲ್ಪ ಕಾಲ ಆದರೂ ಸುಮಾರು 7 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸರ್ವಜ್ಞ ಎಲ್ಲರನ್ನೂ ಸ್ನೇಹ ಪೂರ್ವಕವಾಗಿ ಕಾಣಬೇಕು ಪರಸ್ಪರ ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕುಂಬಾರರ ಜಾಗೃತಿ ಸಂಘದ ಅಧ್ಯಕ್ಷ ಕೃಷ್ಣ ಮಾತನಾಡಿ ಜಯಂತಿಗಳಲ್ಲಿ ಜನರ ಆಸಕ್ತಿ ಕಡಿಮೆಯಾಗಿದೆ. ಎಲ್ಲಾ ಸಂಘ ಸಂಸ್ಥೆಗಳ ಮುಖಂಡರುಗಳು ಒಗ್ಗೂಡಿ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸರ್ವಜ್ಞ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಸಮುದಾಯದ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವ ಕೆಲಸವಾಗಬೇಕು. ಸರ್ವಜ್ಞ ಅವರು ಕೇವಲ ಒಂದು ಸಮುದಾಯಕ್ಕೆ ಆದರ್ಶ ನೀಡಿಲ್ಲ ಜಗತ್ತಿನ ಜೀವ ಸಂಕುಲಕ್ಕೆ ವಚನಗಳ ಮೂಲಕ ಮೌಲ್ಯ ಆದರ್ಶಗಳನ್ನು ನೀಡಿದ್ದಾರೆ. ಅವರ ಕುರಿತಾಗಿ ನಾವು ತಿಳಿದುಕೊಂಡು ಮುಂದಿನ ಪೀಳಿಗೆಗೂ ತಲುಪಿಸಬೇಕು ಎಂದು ಹೇಳಿದರು.
ನಂತರ ವಿವಿಧ ಸಮುದಾಯಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಿ, ಪೌರಕಾರ್ಮಿಕರಿಗೆ ಸಮವಸ್ತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಎಂ ನಂದೀಶ್, ಜಿಲ್ಲಾ ಕುಂಬಾರರ ಜಾಗೃತಿ ಸಂಘದ ಅಧ್ಯಕ್ಷರು ಕೃಷ್ಣ ಎಂ, ಸಮುದಾಯದ ಪದಾಧಿಕಾರಿಗಳು, ಜೈ ಕರ್ನಾಟಕ ಪರಿಷತಿನ ಅಧ್ಯಕ್ಷ ನಾರಾಯಣ, ಮಂಡ್ಯ ಪಶ್ಚಿಮ ವಲಯದ ಆರಕ್ಷಕ ಉಪನಿರೀಕ್ಷಕ ರಂಗಪ್ಪ ಸಾಲಪೂರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನುಪಮಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಅಸಮಾನತೆ ನಿರ್ಮೂಲನೆ ಮಾಡಲು ಪಣತೊಟ್ಟ ಸರ್ವಜ್ಞ : ಸುಧೀರ್ ಕೆ.ಎನ್
ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಸರ್ವಜ್ಞ ಜಯಂತಿಯನ್ನು ಫೆ.20ರಂದು ಆಚರಿಸಲಾಯಿತು. ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪ್ರಧಾನ ಭಾಷಣಕಾರರಾಗಿ ವಾಣಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಕೆ.ಎನ್ ಮಾತನಾಡಿ, ಸಮಾಜದಲ್ಲಿರುವಂತ ಅಸಮಾನತೆ ಕೆಟ್ಟ ಪದ್ಧತಿ, ಮೂಢನಂಬಿಕೆ, ಜಾತಿ ತಾರತಮ್ಯತೆ ಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟ ಸರ್ವಜ್ಞರು ಕೇವಲ ಕವಿಯಾಗದೆ, ಸಮಾಜ ಸುಧಾರಕರಾಗಿದ್ದರು. 16ನೇ ಶತಮಾನದಲ್ಲಿಯೇ ಈಗಿನ ಸಮಾಜಕ್ಕೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿರುವ ಮಹಾಪುರುಷ ಸರ್ವಜ್ಞರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕಿದೆ ಎಂದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಗೌರವಾಧ್ಯಕ್ಷ ಹರೀಶ್ ಕಾರಿಂಜ, ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪದಾಧಿಕಾರಿಗಳು ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

