ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬಿಸಿರೋಡ್ ಸ್ಪರ್ಶ ಕಲಾಮಂದಿರದಲ್ಲಿ ಮಾರ್ಚ್ 27ಮತ್ತು 28 ರಂದು ನಡೆಯುವ 28 ನೆಯ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದ. ಕ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಎಂಪಿ ಶ್ರೀನಾಥ ತಿಳಿಸಿದ್ದಾರೆ.
ಪತ್ರಕರ್ತ, ಲೇಖಕರಾದ ಚಿದಂಬರ ಬೈಕಂಪಾಡಿಯವರು ಮುಂಗಾರು, ಕನ್ನಡಪ್ರಭಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಮಹತ್ವದ ಕವಿಯಾಗಿ ಗುರುತಿಸಿಕೊಂಡಿರುವ ಇವರು ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
‘ಇದು ಮುಂಗಾರು’ ಕೃತಿ ಪತ್ರಿಕೋದ್ಯಮದ ಬಗ್ಗೆಗಿನ ಕೃತಿ. ಹಿರಿಯ ಪತ್ರಕರ್ತರಾದ ವಡ್ಡರ್ಸೆಯವರ ಒಡನಾಡಿಯಾಗಿ ಹತ್ತು ವರ್ಷ ಮುಂಗಾರು ಪತ್ರಿಕೆಯಲ್ಲಿ ಕಾಲ ಸೇವೆ ಸಲ್ಲಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು. ಮುಂಗಾರು ಎನ್ನುವ ಪತ್ರಿಕೋದ್ಯಮದ ಕುರಿತ ಪುಸ್ತಕ, ಪ.ಗೋ ಪ್ರಪಂಚ – ಪತ್ರಿಕೋದ್ಯಮ ಕುರಿತ ಪುಸ್ತಕ, ರಾಜಕೀಯ ಒಳಸುಳಿಗಳು ಲೇಖನಗಳು ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹಲವು ಕೃತಿ ಹೊರತಂದಿದ್ದಾರೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕಾರಗೊಂಡ ಬೈಕಂಪಾಡಿಯವರು ಕರ್ನಾಟಕ ಪತ್ರಕರ್ತರ ಸಂಘದ ಅತ್ಯುತ್ತಮ ತನಿಖಾ ಪತ್ರಕರ್ತ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಪ್ರಶಸ್ತಿ ಬೈಕಂಪಾಡಿಯವರ ‘ಬೆಂಗರೆ’ ಬಾನುಲಿ ಸಾಕ್ಷರೂಪಕಕ್ಕೆ ಒಲಿದು ಬಂದಿದೆ. ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿ ಪತ್ರಿಕೋದ್ಯಮ ಕ್ಷೇತ್ರದ ಇನ್ ಲ್ಯಾಂಡ್ ಅವಾರ್ಡ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅವಾರ್ಡ್, ಡಾ. ಕೋಟ ಶಿವರಾಮ ಕಾರಂತ ಪ್ರಶಸ್ತಿ ಮುಂತಾದ ಗೌರವಕ್ಕೆ ಪಾತ್ರರಾದ ಬೈಕಂಪಾಡಿಯವರು 2025ನೇ ಸಾಲಿನ ಪತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದಿದ್ದಾರೆ.

