ಮಸ್ಕತ್ (ಕುಲಾಲ ವರ್ಲ್ಡ್ ಡಾಟ್ ಕಾಮ್): ತಂದೆ-ತಾಯಿ ಇಲ್ಲದೇ ದೊಡ್ಡಮ್ಮನ ಆಸರೆಯಲ್ಲಿ ಬೆಳೆದ ಯುವಕನೊಬ್ಬ ಗಲ್ಫ್ ರಾಷ್ಟ್ರವಾದ ಒಮಾನ್ ದೇಶದಲ್ಲಿ ನಡೆ ಸರಣಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಫೆ.೮ರಂದು ನಡೆದಿದೆ.
ಕಾಪು ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿ ಕಳತ್ತೂರು ನಿವಾಸಿ ಚೇತನ್ ಕುಲಾಲ್ (೨೩) ಮೃತಪಟ್ಟ ದುರ್ದೈವಿ. ಶಿಕ್ಷಣ ಮುಗಿಸಿ ಎರಡು ವರ್ಷದ ಹಿಂದೆ ಉದ್ಯೋಗ ಅರಸಿ ಒಮಾನ್ ದೇಶಕ್ಕೆ ತೆರಳಿದ್ದ ಚೇತನ್ ಅಲ್ಲಿಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ನಿನ್ನೆ ಬೆಳಿಗ್ಗೆ ಅವರು ಚಲಿಸುತ್ತಿದ್ದ ಕಾರಿಗೆ ಯಮದೂತನಂತೆ ಬಂದೆರಗಿದ ಟ್ರಕ್ ಒಂದು ಡಿಕ್ಕಿ ಹೊಡೆದಿದ್ದು ಚೇತನ್ ಸೇರಿದಂತೆ ಇತರ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸರಣಿ ಅಪಘಾತದಲ್ಲಿ ಇತರ ಮೂವರು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತನ್ ಅವರ ತಾಯಿ ಮೃತಪಟ್ಟಿದ್ದು, ತಂದೆ ಬೇರೆ ವಿವಾಹವಾಗಿದ್ದರೆಂದು ತಿಳಿದುಬಂದಿದೆ. ತಮ್ಮ ದೊಡ್ಡಮ್ಮ ಯಶೋಧ ಕುಲಾಲ್ ಅವರ ಆಸರೆಯಲ್ಲಿ ಬೆಳೆದಿದ್ದ ಚೇತನ್ ಅವರಿಗೆ ಒಬ್ಬಳು ತಂಗಿಯಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಪಾರ್ಥಿವ ಶರೀರ ಎರಡು ದಿನಗಳಲ್ಲಿ ಕಳತ್ತೂರು ಮನೆಗೆ ಬರುವ ನಿರೀಕ್ಷೆಯಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.


