ಅಂದು ಸಂಜೆ ಆಫೀಸಿನಿಂದ ಹೊರಡುವಾಗಲೇ ತಡವಾಗಿತ್ತು.. ಹಾಗೂ ಹೀಗೂ ಎಕ್ಸ್ಪ್ರೆಸ್ ಬಸ್ಸು ಜ್ಯೋತಿ(ಬಲ್ಮಠ)ಗೆ ತಲುಪುವಾಗ 7.15 ಗಂಟೆಯಾಗಿತ್ತು.. ಇನ್ನೇನು ವೃಷಭ ಬಸ್ಸು ಬರುತ್ತದೆ ಎಂದು ಕಾಯುತ್ತಾ ನಿಂತಿದ್ದಾಗ ಪರಿಚಯಸ್ಥರೊಬ್ಬರು ಹತ್ತಿರ ಬಂದು “ಮುಗೇರ್ ಸಂಕಡ್ ಬಯ್ಯ 5 ಗಂಟೆರ್ದ್ ಬೊಕ್ಕ ಫುಲ್ ಬ್ಲಾಕ್’ಗೆ.. ದೇವಿದಾಯೆ ತೊಕ್ಕೋಟ್ಟುರ್ದೇ ತಿರ್ಗಾವೊಂದು ಪೋತೆಗೆ. ವೃಷಭದಾಯೆ ಪಂಪ್’ವೆಲ್ ಡೇ ತಿರ್ಗಾದ್ ಸೀದ ಬಿ.ಸಿರೋಡ್ ಗು ಪೋಯೆಗೆ. ಇತ್ತೆ ನಂಕ್ ಬಸ್ಸ್ ತಿಕುನ ಡೌಟು” (ನೇತ್ರಾವತಿ ಸೇತುವೆಯಲ್ಲಿ 5 ಗಂಟೆಯಿಂದ ಟ್ರಾಫಿಕ್ ಜ್ಯಾಮ್ ಆಗಿದೆ. ಬಸ್ಸುಗಳೆಲ್ಲಾ ಈ ಕಡೆ ಬರಲೇ ಇಲ್ಲ) ಎಂದು ಹೇಳಿದರು.. ಇಬ್ಬರೂ ಯಾವುದಾದರೂ ಬಸ್ಸು ಬರಬಹುದೇನೋ ಎಂದು ಕಾಯುತ್ತಾ ಅಲ್ಲೇ ನಿಂತೆವು. ಹದಿನೈದು ನಿಮಿಷ ಕಳೆದರೂ ಯಾವುದೇ ಬಸ್ಸು ಬರುತ್ತಿಲ್ಲ. ಜೊತೆಗೆ ಮಂಗಳೂರಿನಲ್ಲಿ ಕೆಲಸ ಮಾಡುವ ನಮ್ಮೂರಿನ ಇನ್ನೂ ಕೆಲವರು ಒಟ್ಟು ಸೇರಿದರು. ಯಾವುದು ಇಲ್ಲದಿದ್ದರೂ ಕೊನೆಯ ಬಸ್ಸು ಗೋಲ್ಡನ್ ಲೈನ್ ಇದ್ದೇ ಇರುತ್ತದೆ ಎಂಬ ನಂಬಿಕೆಯಿತ್ತು.
ಕೊನೆಗೆ 7.45ಕ್ಕೆ ಕೊಣಾಜೆಯ ಬಸ್ಸು ಮಹೇಶ್ ಬಂತು. ಮೊದಲೇ ಬಸ್ಸು ಇಲ್ಲದ ಹೊತ್ತು.. ಸ್ಟೇಟ್ ಬ್ಯಾಂಕಿನಿಂದ ಬರುವಾಗಲೇ ಜ್ಯಾಮ್ ಟೈಟ್ ಆಗಿತ್ತು. ಆದದ್ದಾಯಿತು. ಹೇಗಾದರೂ ನಾಟೆಕಲ್ಲಿನವರೆಗೆ ಹೋಗೋಣ. ಆಮೇಲೆ ಯಾರನ್ನಾದರೂ ಕರೆದರಾಯಿತು ಎಂದುಕೊಳ್ಳುತ್ತಾ ಬಸ್ಸನ್ನು ಹತ್ತಿದೆ. ಟಿಕೆಟ್ ಕೊಡಲು ಬಂದ ಕಂಡೆಕ್ಟರ್ ಬಳಿ ನಾಟೆಕಲ್ ಅಂದೆ. “ಅಣ್ಣಾ ಉಂದು ಎಕ್ಸ್ ಪ್ರೆಸ್. ನಾಟೆಕಲ್’ಡು stop ಇಜ್ಜಿ”(ಅಣ್ಣಾ ಇದು ಎಕ್ಸ್ಪ್ರೆಸ್ ಬಸ್ಸು
ನಾಟೆಕಲ್ ನಲ್ಲಿ ಸ್ಟಾಪ್ ಇಲ್ಲ) ಎಂದು ಹೇಳಿದರು. ಸರಿ ದೇರಳಕಟ್ಟೆಗ್ ಕೊರ್ಲೆ ಅಂದೆ ಬಸ್ಸು ಜೇಂಕುತ್ತಾ ಜೇಂಕುತ್ತಾ ನೇತ್ರಾವತಿ ಸೇತುವೆಯ ಸಮೀಪದ ನಡು ಜಪ್ಪಿನ ಮೊಗರುವಿನ ತನಕ ಬಂದು ತಲುಪಿ ಅಲ್ಲೇ ಜಂಡಾ ಊರಿತು..
ಮೊದಲೇ ಜ್ಯಾಮ್ ಟೈಟ್ ಆಗಿದ್ದ ಬಸ್ಸು. ಕಾಲು ಅಲುಗಾಡಿಸಲು ಬಿಡಿ, ತಲೆ ಅಲಿಗಾಡಿಸಲೂ ಸಾಧ್ಯವಿಲ್ಲದಂತ ಪರಿಸ್ಥಿತಿ. ಬಸ್ಸು ಸ್ವಲ್ಪ ಮುಂದೆ ಹೋಗುತ್ತೆ. ಅಲ್ಲೇ ನಿಲ್ಲುತ್ತೆ. ಸಮಯ 8.30 ಆಯಿತು; 9.00 ಆಯಿತು. ಬಸ್ಸು ನೇತ್ರಾವತಿ ಸೇತುವೆಯ ಬಳಿಯೂ ತಲುಪಿಲ್ಲ. ಒಂದು ಕಡೆಯಲ್ಲಿ ಬಸ್ಸು ಹೊರಡುತ್ತಿಲ್ಲ ಎಂಬ ಚಿಂತೆಯಾದರೆ, ಇನ್ನೊಂದು ಕಡೆಯಲ್ಲಿ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು.. ಕೆಲವರು ಯು.ಟಿ.ಖಾದರ್’ಗೆ, ಇನ್ನೂ ಕೆಲವರು ನಳಿನ್ ಕುಮಾರ್’ಗೆ ಹಿಡಿಶಾಪ ಹಾಕುತ್ತಿದ್ದರು. ಸಮಯ 9.30 ಆಯಿತು; ಆದರೂ ಬಸ್ಸಿನ ಚಕ್ರಗಳು ಮುಂದೆ ಸಾಗುತ್ತಲೇ ಇರಲಿಲ್ಲ.. ಬಸ್ಸಿನಲ್ಲಿರುವವರ ಉಸಿರಾಟದ ಉಷ್ಣತೆಯು ಕಾವೇರುತ್ತಿತ್ತು.. ಅಷ್ಟರಲ್ಲಿ ನನ್ನ ಎದುರಿಗೆ ನಿಂತಿದ್ದ ನನ್ನದೇ ವಯಸ್ಸಿನ ಯುವಕನೋರ್ವ ತನ್ನ ಪ್ಯಾಂಟಿನ ಜೇಬಿನಿಂದ ಸ್ಮಾರ್ಟ್ ಫೋನ್ ಅನ್ನು ಕಷ್ಟಪಟ್ಟು ಹೊರತೆಗೆದ.. ನಾನು ಸ್ವಲ್ಪ ಎತ್ತರದ ಮನುಷ್ಯ ಆಗಿದ್ದರಿಂದ ಎಲ್ಲವೂ ನನಗೆ ಕಾಣುತ್ತಿತ್ತು. ಹೀಗೆ ಹೊರತೆಗೆದು ಮೊಬೈಲ್’ನಿಂದ ಮನೆಯವರಿಗೆ ಫೋನ್ ಮಾಡಿ ವಿಷಯ ಹೇಳಬಹುದೆಂದು ನಾನಂದು ಕೊಂಡಿರುವಾಗಲೇ ಅವನು Candy Crush ಆಡೋಕೆ ಶುರುಮಾಡಿದ.. ಜೀವನದಲ್ಲಿ ಇವನಿಗಿಂತ ಪರಮಸುಖಿ ಬೇರಾರೂ ಇಲ್ಲ ಎಂದು ಆ ಕ್ಷಣವೇ ಅನ್ನಿಸಿಬಿಟ್ಟಿತು…
ಈ ಘಟನೆಯಿಂದ ನಾನು ಕಲಿತ ನೀತಿಪಾಠ: Candy Crush ಆಡಿ.. ಜಗದ ಪರಿವೆಯನ್ನು ಮರೆತು ಬಿಡಿ..
(ವಿ.ಸೂ.ಇದು ಕಾಲ್ಪನಿಕ ಕಥೆಯಲ್ಲ. ಇತ್ತೀಚೆಗೆ ನನ್ನ ಜೀವನದಲ್ಲೇ ನಡೆದ ಘಟನೆ..)
* ರಾಜೇಶ್ ನರಿಂಗಾನ (ಫೇಸ್ ಬುಕ್ ಪೋಸ್ಟ್ ) ಸಾಂದರ್ಭಿಕ ಚಿತ್ರ