ಬೆಳಗಾವಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಇವರು ಹುಟ್ಟು ಅಂಗವಿಕಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಕಷ್ಟಪಟ್ಟು ಸ್ನಾತಕೋತ್ತರ, ಬಿಇಡ್ ಪದವಿ ಪಡೆದಿದ್ದಾರೆ. ಕಲಿತ ವಿದ್ಯೆಗೆ ಸರ್ಕಾರಿ ಶಿಕ್ಷಕ ನೌಕರಿ ಕೂಡ ಅರಸಿ ಬಂದಿತ್ತು. ಆದರೆ, ಅದನ್ನು ಧಿಕ್ಕರಿಸಿ ಕುಲಕಸಬು ಕುಂಬಾರಿಕೆಗೆ ಆಧುನಿಕ ಸ್ಪರ್ಶ ನೀಡಿ, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ 25ಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟು ಮಾದರಿ ಆಗಿದ್ದಾರೆ. ಇವರ ಸಾಧನೆಯಿಂದಾಗಿ ಕೇಂದ್ರ ಸರ್ಕಾರದ ರಾಷ್ಟ್ರಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ.
ಹೌದು, ನಾವು ಹೇಳಲು ಹೊರಟಿರುವುದು ಖಾನಾಪುರ ತಾಲೂಕಿನ ಡುಕ್ಕರವಾಡಿ ಗ್ರಾಮದ ಪುಂಡಲೀಕ ಕುಂಬಾರ ಎಂಬ ವಿಶೇಷ ಚೇತನ ಕುಶಲಕರ್ಮಿಯ ಯಶೋಗಾಥೆ. ತಂದೆ ಮನೋಹರ ಕುಂಬಾರ , ತಾಯಿ ವಿಮಲಾಬಾಯಿ. ಪುಂಡಲೀಕ ತಂದೆ ತಾಯಿಗೆ ಎರಡನೇ ಮಗ. ಅವರಿಗೆ ಓರ್ವ ಸಹೋದರಿ, ಇಬ್ಬರು ಸಹೋದರರು ಇದ್ದಾರೆ.
ಕುಂಬಾರಿಕೆ ಪುಂಡಲೀಕ ಅವರ ಪೂರ್ವಜರ ಕಾಯಕ. ಮೊದಲೆಲ್ಲಾ ಗಡಿಗೆ, ಹಣತೆ, ಕುಡಿಕೆ ಸೇರಿ ಸಾಂಪ್ರದಾಯಿಕ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದರು. ಅದು ಅವರ ಹೊಟ್ಟೆ-ಬಟ್ಟೆಗೆ ಮಾತ್ರ ಸಾಕಾಗುತ್ತಿತ್ತು. ಆದರೆ, ಮನೆಯಲ್ಲಿ ಬಡತನ ಮಾತ್ರ ನಿರ್ಮೂಲನೆ ಆಗಿರಲಿಲ್ಲ. ಅದರಲ್ಲೂ ಪುಂಡಲೀಕ ಹುಟ್ಟಿನಿಂದ ಅಂಗವಿಕಲ. ಆದರೂ, ಅವರ ತಂದೆ – ತಾಯಿ ಕಷ್ಟಪಟ್ಟು ಓದಿಸಿದರು. ಡಿಎಡ್, ಬಿಎ, ಬಿಇಡ್, ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಎಂಎ ಮರಾಠಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಳಿಕ 2020ರಲ್ಲಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೌಕರಿ ಕೂಡ ಬಂದಿತ್ತು. ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿದ ವೇಳೆ ಪುಂಡಲೀಕ ಅವರು ಹೋಗಲಿಲ್ಲ. ನಾನು ನೌಕರಿಗೆ ಹೋದರೆ ನಮ್ಮ ಪೂರ್ವಜರ ಕಸಬು, ಗ್ರಾಮೀಣ ಕಲೆ ನಶಿಸಿ ಹೋಗುತ್ತದೆ, ಅದನ್ನು ನಾನು ಮುಂದುವರಿಸಬೇಕು ಎಂದು ನಿರ್ಧರಿಸಿದರು. ಬರೀ ಗಡಿಗೆ, ಕುಡಿಕೆ ಮಾಡಿದರೆ ನಡೆಯೋದಿಲ್ಲ ಎಂಬುದನ್ನು ತಿಳಿದ ಅವರು ಅವುಗಳ ಜೊತೆಗೆ ಅತ್ಯಾಕರ್ಷಕ ಮಣ್ಣಿನ ಕಲಾಕೃತಿಗಳನ್ನು ಸಿದ್ಧಪಡಿಸಿ ಆದಾಯದ ಮೂಲ ಕಂಡುಕೊಂಡು ಯಶಸ್ವಿಯಾಗಿದ್ದಾರೆ.
ತಿಂಗಳಿಗೆ 3 ಲಕ್ಷ ವಹಿವಾಟು : ಪುಂಡಲೀಕ ಅವರಲ್ಲಿ ಕುಂಬಾರಿಕೆ ಕಲೆ ರಕ್ತಗತವಾಗಿಯೇ ಬಂದಿತ್ತು. ಆದರೆ, ಆಧುನಿಕತೆ ತಿಳಿದಿರಲಿಲ್ಲ. ಹಾಗಾಗಿ, ಆರಂಭದಲ್ಲಿ ಖಾನಾಪುರ ಕುಂಬಾರಿಕಾ ತರಬೇತಿ ಕೇಂದ್ರದಲ್ಲಿ ಬೇಸಿಕ್ ತರಬೇತಿ ಪಡೆದರು. ಬಳಿಕ ಬೆಂಗಳೂರಿನ ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕ ಕೇಂದ್ರದಲ್ಲಿ ಯಂತ್ರಗಳ ಮೂಲಕ ವಸ್ತುಗಳನ್ನು ತಯಾರಿಸುವುದು, ಟೆರಾಕೋಟ್, ಮೊರಲ್ ಆರ್ಟ್, ಕೈಯಲ್ಲಿ ಮಣ್ಣಿನ ಕಲಾಕೃತಿಗಳನ್ನು ಸುಲಭವಾಗಿ ತಯಾರಿಸುವ ಕೌಶಲ್ಯವನ್ನು ಬೆಳೆಸಿಕೊಂಡರು. ಆರಂಭದಲ್ಲಿ ಐದು ಜನರೊಂದಿಗೆ ಹೊಸದಾಗಿ ವೃತ್ತಿ ಆರಂಭಿಸಿದರು. ಮೊದಲ ತಿಂಗಳು 15 ಸಾವಿರ ರೂ. ಆದಾಯ ಸಿಕ್ಕಿತ್ತು. ಈಗ ತಿಂಗಳಿಗೆ 3 ಲಕ್ಷ ವಹಿವಾಟು ಆಗುತ್ತಿದ್ದು, ಗ್ರಾಮದ 25ಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಕನಿಷ್ಠ 15 ಸಾವಿರ ರೂ. ವರೆಗೆ ತಿಂಗಳಿಗೆ ಸಂಬಳ ಸಿಗುತ್ತಿದೆ ಎಂದು ಕುಶಲಕರ್ಮಿ ಪುಂಡಲೀಕ ಬಡಿಗೇರ ಅವರು ತಿಳಿಸಿದ್ದಾರೆ.
ಒಂದಕ್ಕಿಂತ ಒಂದು ಚೆಂದದ ಕಲಾಕೃತಿಗಳು: ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಮೂರ್ತಿಗಳು, ಪ್ರತಿಮೆಗಳು, ಆಟದ ವಸ್ತುಗಳು, ಪೂಜಾ ಸಲಕರಣೆಗಳು. ಹೀಗೆ.. ಆಧುನಿಕ ಜೀವನಶೈಲಿಗೆ ಬೇಕಾದ ವಸ್ತುಗಳನ್ನು ಮಣ್ಣಿನಿಂದಲೇ ತಯಾರಿಸುತ್ತಾರೆ. ಇಲ್ಲಿನ ಕಲಾಕೃತಿಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಕುಡಿಯುವ ನೀರಿನ ಹೂಜಿ, ಆಹಾರ ತಯಾರಿಸುವ ಮಡಿಕೆ, ಕುಡಿಕೆ, ಹಣತೆ, ಚಹಾ ಕುಡಿಯುವ ಲೋಟ, ತಟ್ಟೆ, ಅಲಂಕಾರಿಕ ಹೂಜಿ, ಹ್ಯಾಂಗಿಂಗ್ ಚೈನು, ಹೂಕುಂಡ, ಒಲೆ, ತತ್ರಾಣಿ, ಕಟಿಂಗ್ ಪಾಟ್, ಫ್ಲವರ್ ಪಾಟ್, ವಾಟರ್ಪಾಟ್, ಜಗ್, ಗ್ಲಾಸ್, ಕಪ್, ಚಹಾಕಿತ್ತಲಿ, ಗಂಟೆ, ಸಣ್ಣಮಿನಾರ್, ದೂಪದ ಪಾತ್ರೆ, ಗಣೇಶ ಪ್ಲಾಂಟರ್, ಆಮೆ, ಕ್ಯಾಟ್, ವಿವಿಧ ಪಕ್ಷಿ-ಪ್ರಾಣಿಗಳ ಮುಖಗಳ ಕಲಾಕೃತಿ, ವಾಲ್ ಫೀಸ್, ಸನ್ ಕುದುರೆ, ಆನೆ, ಲ್ಯಾಂಪ್, ಕಾರ್ತಿಕ ಲ್ಯಾಂಪ್ಸ್, ಪ್ಲಾಂಟರ್ಸ್, ತುಳಸಿಕಟ್ಟೆ, ಮೊಸರಿನ ಕುಡಿಕೆ ಸೇರಿ 400ಕ್ಕೂ ಅಧಿಕ ಮಣ್ಣಿನ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 15 ರೂಪಾಯಿಂದ 20 ಸಾವಿರ ರೂ. ವರೆಗಿನ ವಸ್ತುಗಳು ಇವರ ಬಳಿ ಇವೆ.
ಆದಿಯೋಗಿ ಶಿವ, ಗಣೇಶ, ಬುದ್ಧ, ಬಸವೇಶ್ವರ, ಸ್ವಾಮಿ ವಿವೇಕಾನಂದ, ಶಿವಾಜಿ ಸೇರಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ದೇವರ, ಮಹಾಪುರುಷರ ಸುಂದರ ಮೂರ್ತಿ ತಯಾರಿಸಿ ಕೊಡುತ್ತಾರೆ. ಹಂಪಿಯ ನರಸಿಂಹ, ಕಾಂತಾರ ದೈವದ ಮೂರ್ತಿ ಸೇರಿ ಅತ್ಯಾಕರ್ಷಕ ಕಲಾಕೃತಿಗಳು ಪುಂಡಲೀಕ ಅವರ ಕೈಯಲ್ಲಿ ಅರಳಿವೆ. ಇನ್ನು ಇಲ್ಲಿ ತಯಾರಾಗುವ ಬಣ್ಣ ಬಣ್ಣದ ಹಣತೆಗಳಿಗೂ ತುಂಬಾ ಬೇಡಿಕೆ ಇದೆ.
ದೇಶ-ವಿದೇಶಗಳಿಗೂ ಕಲಾಕೃತಿಗಳ ರವಾನೆ : ಹುಟ್ಟಿನಿಂದ ಪೋಲಿಯೊ ಸಮಸ್ಯೆಯಿಂದ ಅಂಗವಿಕಲಾಗಿರುವ ಪುಂಡಲೀಕ ಅವರು ಮನೆ ಹಿಡಿದು ಕೂರಲಿಲ್ಲ. ಅಂಗವೈಕಲ್ಯ ಮೆಟ್ಟಿ ನಿಂತು ತಮ್ಮಲ್ಲಿನ ಕಲೆಯನ್ನು ಬಂಡವಾಳ ಮಾಡಿಕೊಂಡರು. ಕಲಾಕೃತಿಗಳನ್ನು ತಯಾರಿಸುವ ಜೊತೆಗೆ ವ್ಯಾಪಾರಿ ಗುಣವನ್ನು ಮೈಗೂಡಿಸಿಕೊಂಡರು. ಡುಕ್ಕರವಾಡಿಯ ಅವರ ಮನೆಗೆ ಬಂದು ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಕೇರಳ ಸೇರಿ ಮತ್ತಿತ್ತರ ರಾಜ್ಯಗಳಿಂದಲೂ ಆರ್ಡರ್ ಬರುತ್ತವೆ. ಇದಷ್ಟೇ ಅಲ್ಲದೇ ಕಳೆದ ನಾಲ್ಕು ವರ್ಷಗಳಿಂದ ಯುಎಸ್ಎ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್ ದೇಶಗಳಿಗೆ ಅಂತಾರಾಷ್ಟ್ರೀಯ ಕೋರಿಯರ್ ಮೂಲಕ ಮಣ್ಣಿನ ಕಲಾಕೃತಿಗಳನ್ನು ಕಳಿಸಿ ಕೊಡುವ ಮೂಲಕ ಸಪ್ತಸಾಗರದಾಚೆಗೂ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಿದ್ದಾರೆ.
ಯಾವ್ಯಾವ ಪ್ರಶಸ್ತಿಗಳು ಸಿಕ್ಕಿವೆ..? : ಪುಂಡಲೀಕ ಅವರ ಕಲೆ ಗುರುತಿಸಿ 2019ರಲ್ಲಿ ಕಾರ್ಮಿಕ ಇಲಾಖೆಯಿಂದ ಬೆಳಗಾವಿ ಜಿಲ್ಲಾ ಮಟ್ಟದ ಶ್ರಮ ಸಮ್ಮಾನ್, 2024ರಲ್ಲಿ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾದಿಂದ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ ರಾಜ್ಯಮಟ್ಟದ ಪ್ರಶಸ್ತಿ, 2022ರಲ್ಲಿ ಬೆಳಗಾವಿಯ ರೋಟರಿ ಇ ಕ್ಲಬ್ ವತಿಯಿಂದ ರೋಟರಿ ವೋಕೇಶನಲ್ ಎಕ್ಸಲನ್ಸ್ ಅವಾರ್ಡ್, 2023 ಕ್ರಾಫ್ಟ್ ಕೌನ್ಸಿಲ್ ಆಫ್ ತೆಲಂಗಾಣ ಪ್ರಶಸ್ತಿ, 2023ರಲ್ಲಿ ಮಹಾರಾಷ್ಟ್ರದ ಕ್ಯಾಪ್ಟನ್ ಅಬಾ ಪಾಟೀಲ ಫೌಂಡೇಶನ್ ದಿವ್ಯಾಂಗ್ ವೊಕೇಶನಲ್ ಅವಾರ್ಡ್, 2025ರ ಬೆಳಗಾವಿಯ ಲೋಕಪ್ರಿಯ ಜನಸೇವಾ ಸಂಸ್ಥೆಯ ಪಿಸಿಕಲ್ ಚಾಲೆಂಜಡ್ ಅವಾರ್ಡ್ ಸೇರಿ ಮತ್ತಿತರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪುಂಡಲೀಕರ ಅವರು ತಯಾರಿಸಿದ “ನರಸಿಂಹ ಮೂರ್ತಿ”2024ರ ಕೇಂದ್ರದ ಹ್ಯಾಂಡಿಕ್ರಾಫ್ಟ್ಸ್ ಸ್ಪೆಷಲ್ ಮೆನ್ಸಂಡ್ ನ್ಯಾಷನಲ್ ಅವಾರ್ಡ್ಗೆ ಆಯ್ಕೆ ಆಗಿದ್ದು, ಇದೇ ಡಿಸೆಂಬರ್ 8ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
500ಕ್ಕೂ ಅಧಿಕ ಜನರಿಗೆ ಕೆಲಸ ಕೊಡುವ ಗುರಿ : ಮೊದಲೆಲ್ಲ ಊಟಕ್ಕೂ ಪರದಾಡುವ ಸ್ಥಿತಿಯಿತ್ತು. ತಂದೆ-ತಾಯಿ ಕಷ್ಟಪಟ್ಟು ನಮ್ಮನ್ನು ಬೆಳೆಸಿದರು. ಈಗ ನಾನು ಆರ್ಥಿಕವಾಗಿ ಸ್ವಾವಲಂಬಿ ಆಗುವ ಜೊತೆಗೆ ಇತರರಿಗೂ ನೆರವಾಗಿದ್ದೇನೆ. ಪ್ರಶಸ್ತಿಗಳಿಗೆ ಆಸೆಪಟ್ಟು ನಾನು ಈ ಕೆಲಸ ಮಾಡುತ್ತಿಲ್ಲ. ಕುಂಬಾರ ಸಮಾಜವನ್ನು ಮತ್ತಷ್ಟು ಆರ್ಥಿಕವಾಗಿ ಸದೃಢ ಮಾಡುವುದು ನನ್ನ ಗುರಿ. ಹೊಸ ಹೊಸ ಡಿಸೈನ್ ಮೂಲಕ ಅತ್ಯಾಕರ್ಷಕ ವಸ್ತುಗಳನ್ನು ತಯಾರಿಸಿ ಇಡೀ ದೇಶಾದ್ಯಂತ ನಮ್ಮ ವ್ಯಾಪಾರ ವಿಸ್ತರಿಸುವ ಮಹದಾಸೆ ಇದೆ. 500ಕ್ಕೂ ಅಧಿಕ ಜನರಿಗೆ ಕೆಲಸ ಕೊಡುತ್ತೇನೆ. ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನನಗೆ ಅಗತ್ಯ ನೆರವು ನೀಡಿದರೆ ಪ್ರಧಾನಿ ಮೋದಿಯವರ “ಮೇಕ್ ಇನ್ ಇಂಡಿಯಾ” ಕನಸು ಸಾಕಾರಗೊಳಿಸಲು ನನ್ನದೇ ಕಾಣಿಕೆ ನೀಡುತ್ತೇನೆ ಎಂದು ಪುಂಡಲೀಕ ಕುಂಬಾರ ವಿಶ್ವಾಸ ವ್ಯಕ್ತಪಡಿಸಿದರು.
ಯುವಕರು ತಮ್ಮ ಕಲೆ ಸದ್ಬಳಕೆ ಮಾಡಿಕೊಳ್ಳಿ : ಪ್ರತಿಯೊಬ್ಬರಿಗೂ ದೇವರು ಒಂದೊಂದು ಕಲೆ ಕೊಟ್ಟಿರುತ್ತಾನೆ. ಅದನ್ನು ಹೊರಗೆ ತರಬೇಕು. ನಾನು ದಿವ್ಯಾಂಗ, ನನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತಿದ್ದರೆ ಇಂದು ನಾನು ಮುಂದೆ ಬರಲು ಆಗುತ್ತಿರಲಿಲ್ಲ. ಹಾಗಾಗಿ, ಇಂದಿನ ಯುವ ಜನಾಂಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಮೂಲ್ಯ ಸಮಯ ಹಾಳು ಮಾಡದೇ ದುಡಿಯಬೇಕು. ಒಳ್ಳೆಯ ಭವಿಷ್ಯ ರೂಪಿಸಿಕೊಂಡು ತಂದೆ-ತಾಯಿಯನ್ನು ಚನ್ನಾಗಿ ನೋಡಿಕೊಳ್ಳಬೇಕು ಎನ್ನುತ್ತಾರೆ ಪುಂಡಲೀಕ ಕುಂಬಾರ.
ಇಂಥ ಕುಶಲಕರ್ಮಿಗಳಿಗೆ ಬೇಕಿದೆ ಸರ್ಕಾರದ ನೆರವು : ಕಲಾಕೃತಿಗಳ ಖರೀದಿಗೆ ಬೆಳಗಾವಿಯಿಂದ ಆಗಮಿಸಿದ್ದ ಪಿ. ಆರ್. ಜಾಧವ ಎಂಬವರು ಮಾತನಾಡಿ, ‘ಪುಂಡಲೀಕ ಕುಂಬಾರ ಅವರು ಅಂಗವಿಕಲ. ಆದರೂ ಅವರಲ್ಲಿ ಅದ್ಭುತ ಕಲೆ ಇದೆ. ತಾವು ಆರ್ಥಿಕ ಸದೃಢ ಆಗುವ ಜೊತೆಗೆ ಸ್ಥಳೀಯರಿಗೂ ಕೆಲಸ ಕೊಡುವ ಮೂಲಕ ನಾನು ಅಶಕ್ತನಲ್ಲ ಮತ್ತು ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಭಾರತ ದೇಶಕ್ಕೆ ಇಂಥ ಉದ್ಯೋಗಪತಿಗಳ ಅವಶ್ಯಕತೆ ಇದೆ. ಇವರಿಗೆ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಿದರೆ, ಹೆಚ್ಚೆಚ್ಚು ಯುವಕರಿಗೆ ಉದ್ಯೋಗ ಸಿಗುತ್ತದೆ’ ಎಂದು ಹೇಳಿದರು.
10 ಸಾವಿರ ಸಂಬಳ ಸಿಗುತ್ತೆ : ‘‘ನಾನು ಒಂದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಗೆಲಸ ಮಾಡುತ್ತಾ ಇಲ್ಲಿಯೂ ಮಾಡುತ್ತೇನೆ. ನಮ್ಮ ಪೂರ್ವಜರು ಗಡಿಗೆ, ಕುಡಿಕೆ, ಮಡಿಕೆ ಅಷ್ಟೇ ಮಾಡುತ್ತಿದ್ದರು. ಈಗ ಆಧುನಿಕ ಕಾಲದಲ್ಲಿ ನಮಗೆ ಪುಂಡಲೀಕ ಅವರು ವಿವಿಧ ಅಲಂಕಾರಿಕ ಕಲಾಕೃತಿಗಳನ್ನು ತಯಾರಿಸುವುದನ್ನು ಕಲಿಸಿದ್ದಾರೆ. ತಿಂಗಳಿಗೆ 10 ಸಾವಿರ ರೂ. ಸಂಬಳ ಸಿಗುತ್ತದೆ” ಎನ್ನುತ್ತಾರೆ ಪ್ರಮೀಳಾ ಗಣಪತಿ ಕುಂಬಾರ.
ಪುಂಡಲೀಕ ಎಲ್ಲರಿಗೂ ಸ್ಫೂರ್ತಿ : ಗೋವಾದಿಂದ ಆಗಮಿಸಿದ್ದ ವ್ಯಾಪಾರಿ ಆಂಡಿನೋ ಲೋಬೋ ಮಾತನಾಡಿ, ”ಪುಂಡಲೀಕ ಅವರು ತಮ್ಮ ಪ್ರತಿಭೆ, ಕಠಿಣ ಪರಿಶ್ರಮ, ಕೌಶಲ್ಯದಿಂದ ನಮಗೆಲ್ಲಾ ಸ್ಫೂರ್ತಿ ಆಗಿದ್ದಾರೆ. ನಾನು ಇವರಿಂದ ಮಣ್ಣಿನ ಕಲಾಕೃತಿಗಳನ್ನು ಖರೀದಿಸಿ ಗೋವಾದಲ್ಲಿ ಮಾರಾಟ ಮಾಡುತ್ತೇನೆ. ವಿದೇಶಿಗರು ಇವರ ಕಲೆಯನ್ನು ಮೆಚ್ಚಿಕೊಳ್ಳುತ್ತಾರೆ” ಎಂದಿದ್ದಾರೆ.
ಖಾನಾಪುರ ಮಣ್ಣು ದೇಶದಲ್ಲಿ ಎಲ್ಲೂ ಸಿಗಲ್ಲ : ಖಾನಾಪುರ ತಾಲೂಕಿನಲ್ಲಿ ಸಿಗುವ ಮಣ್ಣು ಇಡೀ ದೇಶದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಇಲ್ಲಿ ಹಳದಿ ಮಣ್ಣು ಹೇರಳವಾಗಿ ಸಿಗುತ್ತದೆ. ಇದು ಹೆಚ್ಚು ಜಿಗುಟಿನ ಅಂಶ ಹೊಂದಿದೆ. ಹಳದಿ ಮಣ್ಣಿನ ಜತೆಗೆ ಬಿಳಿ ಹಾಗೂ ಕಪ್ಪು ಮಣ್ಣನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸಿಕೊಳ್ಳುತ್ತಾರೆ. ಅದರಿಂದ ವರ್ಣಮಯ ಕಲಾಕೃತಿಗಳನ್ನು ಸಿದ್ಧಪಡಿಸುತ್ತಾರೆ. ವರ್ಷವಿಡೀ ಬೇಕಾಗುವಷ್ಟು ಮಣ್ಣನ್ನು ಬೇಸಿಗೆ ಕಾಲದಲ್ಲಿ ತಯಾರಿಸಿ ಇಟ್ಟುಕೊಳ್ಳುತ್ತಾರೆ.
ಚಿತ್ರ ಸುದ್ದಿ ಕೃಪೆ : https://www.etvbharat.com/


