ಬಾವು ಮಹಾರಾಜ ಕುಂಬಾರ್ರವರು ಸಾಯಿಯವರು ಹೆಚ್ಚಾಗಿ ಪ್ರೀತಿಸುತ್ತಿದ್ದ ಮಹಾಭಕ್ತರಲ್ಲಿ ಪ್ರಮುಖರು. ಇವರು ಸಾಯಿಯವರ ಕೊನೆಯ ದಿನಗಳಲ್ಲಿ ಅಂದರೆ 2-3 ವರ್ಷಗಳಿರುವಾಗ ಸಾಯಿಬಾಬಾರವರ ಬಳಿಗೆ ಬಂದರು. ಇವರ ಬಗ್ಗೆ ಶಿರಡಿಯ ಜನಗಳಿಗೆ ಬಹಳ ಒಳ್ಳೆಯ ಅಭಿಪ್ರಾಯವಿತ್ತು. ಅನೇಕ ಜನರು ಇವರನ್ನು ಅವಧೂತರೆಂದು ಗೌರವಿಸುತ್ತಿದ್ದರು. ಇವರು ಸದಾ ಮೌನವಾಗಿರುತ್ತಿದ್ದರು. ಆದರೆ ಇವರು ಎಲ್ಲಾ ಜನಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ತೋರಿಸುತ್ತಿದ್ದ ಅಪಾರವಾದ ಪ್ರೇಮ, ಮಮತೆ ಮತ್ತು ಸದಾ ಹಸನ್ಮುಖ ವ್ಯಕ್ತಿತ್ವ, ಶಿರಡಿಯ ಎಲ್ಲಾ ಜನರು ಇವರನ್ನು ಇಷ್ಟ ಪಡುವಂತೆ ಮಾಡಿತ್ತು. ಬಾವು ಮಹಾರಾಜ ಕುಂಬಾರ್ ರವರು ಶಿರಡಿಯ ಬೀದಿಗಳನ್ನು ಗುಡಿಸುತ್ತಿದ್ದರು ಮತ್ತು ತಮ್ಮ ಬಳಿಯಲ್ಲಿದ್ದ ಹಣವನ್ನು ಬೇರೆಯವರಿಗೋಸ್ಕರ ಖರ್ಚು ಮಾಡುತ್ತಿದ್ದರು. ಇವರು ಕೇವಲ ಕೌಪೀನವನ್ನು ಧರಿಸುತ್ತಿದ್ದರು. ಯಾರಾದರೂ ಇವರಿಗೆ ಹಾಕಿಕೊಳ್ಳಲು ಬಟ್ಟೆಗಳನ್ನು ನೀಡಿದರೆ ಇವರು ಅದನ್ನು ಮರದ ನೆರಳಿನಲ್ಲಿ ಆಶ್ರಯ ಪಡೆಯಲು ಬರುವ ಪ್ರಾಣಿಗಳಿಗೆ ನೆರಳಾಗಿರಲೆಂದು ಮರದ ಕೊಂಬೆಗಳ ಮೇಲೆ ತೂಗು ಹಾಕುತ್ತಿದ್ದರು. ಹಾಗೆಯೇ ಯಾರಾದರೂ ಇವರಿಗೆ ತಿನ್ನಲು ಆಹಾರವನ್ನು ನೀಡಿದರೆ ಅದನ್ನು ಬೇರೆಯವರಿಗೆ ಕೊಟ್ಟುಬಿಡುತ್ತಿದ್ದರು.
ಬಾವು ಮಹಾರಾಜ ಕುಂಬಾರ್ ರವರ ಸಮಾಧಿ
ಇವರ ಸಮಾಧಿಯು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಾಂಗಣದಲ್ಲಿ ನಾನಾವಲ್ಲಿಯವರ ಸಮಾಧಿಯ ಪಕ್ಕದಲ್ಲಿದೆ. ಇವರು 27ನೇ ಏಪ್ರಿಲ್ 1938 ರಲ್ಲಿ ಸಮಾಧಿ ಹೊಂದಿದರು. ಇಂದಿಗೂ ಇವರ ಭಕ್ತರು ಚೈತ್ರಮಾಸದಲ್ಲಿ ಇವರ ಪುಣ್ಯತಿಥಿಯನ್ನು ಆಚರಿಸಿ ಅನ್ನದಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಆಲ್ಲದೇ ಇವರ ಸಮಾಧಿಯ ಬಳಿಯ ಮಣ್ಣನ್ನು ತೆಗೆದುಕೊಂಡು ಅದನ್ನು ಹರಳೆಣ್ಣೆಯಲ್ಲಿ ಬೆರೆಸಿ ತಮ್ಮ ಮಕ್ಕಳಿಗೆ ಗುಣವಾಗಲೆಂದು ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ.
ಬಾವು ಮಹಾರಾಜ್ ಕುಂಬಾರ್ ರವರು ಚಿಕ್ಕಂದಿನಿಂದಲೇ ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿದ್ದರು. ಇವರ ಪೂರ್ವಜರು ಮಹಾರಾಷ್ಟ್ರದ ಸಂಗಮ್ನೇರ್ ಜಿಲ್ಲೆಯ ಕೈರಿ ನೀಮಗಾವ್ ನಲ್ಲಿ ಕುಂಬಾರ ವೃತ್ತಿಯನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅದಕ್ಕೆ ಇವರ ಹೆಸರಿನ ಮುಂದೆ ಕುಂಬಾರ್ ಎಂದು ಸೇರಿಕೊಂಡಿತ್ತು. ಬಾವು ಮಹಾರಾಜ್ ಕುಂಬಾರ್ ರವರು ತಮ್ಮ ಅತೀ ಸಣ್ಣ ವಯಸ್ಸಿನಲ್ಲೇ ಶಿರಡಿಗೆ ಬಂದವರು ಮತ್ತೆ ವಾಪಸ್ ತಮ್ಮ ಹಳ್ಳಿಗೆ ಹೋಗಲೇ ಇಲ್ಲ. ಬದಲಿಗೆ ಶಿರಡಿಯಲ್ಲೇ ಇದ್ದು ಬಿಟ್ಟರು.
ಶಿರಡಿಯಲ್ಲಿ ಇವರು ಶನಿ ದೇವಾಲಯದ ಹತ್ತಿರ ಇರುತ್ತಿದ್ದರು. ಕೆಲವೊಮ್ಮೆ ರಹತಾಗೆ ಹೋಗುವ ದಾರಿಯಲ್ಲಿ ಇದ್ದ ದೊಡ್ಡ ಆಲದ ಮರದ ಕೆಳಗೆ ಇರುತ್ತಿದ್ದರು. ಕೆಲವೊಮ್ಮೆ ಇವರು ರಹತಾ, ನೀಮಗಾವ್, ಸಾಕೋರಿ ಮತ್ತು ಇತರ ಸ್ಥಳಗಳಿಗೆ ಹೋಗುತ್ತಿದ್ದರು. ಆದರೆ ಅಲ್ಲಿ ತಂಗುತ್ತಿರಲಿಲ್ಲ. ಶಿರಡಿಗೆ ಆ ದಿನವೇ ವಾಪಸ್ ಬಂದುಬಿಡುತ್ತಿದ್ದರು.
ಬಾವು ಮಹಾರಾಜ್ ಕುಂಬಾರ್ ರವರು ಸಾಯಿಬಾಬಾರವರಿಗೆ ಅತಿ ಪ್ರೀತಿ ಪಾತ್ರರಾಗಿದ್ದರು.ಸಾಯಿಬಾಬಾರವರ ಜೀವಿತದ ಕೊನೆಯ ದಿನಗಳಲ್ಲಿ ಅಂದರೆ ಇನ್ನು 2-3 ವರ್ಷಗಳಿರುವಾಗ ಬಾವು ಮಹಾರಾಜ್ ಕುಂಬಾರ್ ರವರು ಶಿರಡಿಗೆ ಬಂದರು. ಬಾವು ಅವರನ್ನು ಶಿರಡಿಯ ಜನರೆಲ್ಲಾ ಬಹಳ ಗೌರವದಿಂದ ನೋಡುತ್ತಿದ್ದರು ಮತ್ತು ಅವಧೂತರೆಂದು ಪರಿಗಣಿಸಿದ್ದರು. ಅವರು ಸದಾಕಾಲ ಮೌನವಾಗಿರುತ್ತಿದ್ದರು. ಆದರೆ, ಅವರು ಎಲ್ಲರಲ್ಲೂ ತೋರುತ್ತಿದ್ದ ಪ್ರೀತಿ, ಸದಾ ಹಸನ್ಮುಖ ಸ್ವಭಾವ ಮತ್ತು ಎಲ್ಲ ಜೀವಿಗಳಲ್ಲೂ ಅವರು ತೋರುತ್ತಿದ್ದ ದಯೆಯನ್ನು ಕಂಡು ಶಿರಡಿಯ ಜನರೆಲ್ಲಾ ಅವರನ್ನು ಮೆಚ್ಚುವಂತೆ ಮಾಡಿದ್ದವು. ಬಾವುರವರು ಶಿರಡಿಯ ಬೀದಿಯನ್ನೆಲ್ಲ ಸ್ವತ: ತಾವೇ ಗುಡಿಸುತ್ತಿದ್ದರು ಮತ್ತು ತಮ್ಮಲ್ಲಿದ್ದ ಹಣವನ್ನೆಲ್ಲ ಬೇರೆಯವರಿಗೋಸ್ಕರ ಖರ್ಚು ಮಾಡುತ್ತಿದ್ದರು. ಬಾವುರವರ ಬಳಿ ಸದಾಕಾಲ ಒಂದು ಕೋಲು, ಒಂದು ಖಾದಿ ಧೋತಿ, ಖಾದಿ ಟೋಪಿ, ಒಂದು ಕಫ್ನಿ ಮತ್ತು ಇವರ ಭುಜದ ಮೇಲೆ ಕುರಿಯ ತುಪ್ಪಳದಿಂದ ಮಾಡಿದ ಹೊದಿಕೆ ಮಾತ್ರ ಇರುತ್ತಿತ್ತು. ಯಾರಾದರು ಹಾಕಿಕೊಳ್ಳಲು ಬಟ್ಟೆಯನ್ನು ಕೊಟ್ಟರೆ, ಅದನ್ನು ಪ್ರಾಣಿಗಳ ನೆರಳಿಗೊಸ್ಕರ ಮರಗಳಿಗೆ ನೇತು ಹಾಕಿಬಿಡುತ್ತಿದ್ದರು ಅಥವಾ ಮರಗಳ ಮೈ ಮುಚ್ಚಲು ಬಟ್ಟೆ ಹೊದಿಸುತ್ತಿದ್ದರು. ಅದೇ ರೀತಿ ಯಾರಾದರು ತಿನ್ನಲು ಆಹಾರವನ್ನು ನೀಡಿದರೆ ಅದನ್ನು ಬೇರೆಯವರಿಗೆ ಕೊಟ್ಟು ಬಿಡುತ್ತಿದ್ದರು.
ಬಾವು ಮಹಾರಾಜ್ ಕುಂಬಾರ್ ರವರು ಶಿರಡಿಯ ಬೀದಿಯನ್ನೆಲ್ಲಾ ಗುಡಿಸುವ ಕೆಲಸದಲ್ಲಿ ಸದಾ ನಿರತರಾಗಿರುತ್ತಿದ್ದರು. ಬೆಳಿಗ್ಗೆ 8 ಘಂಟೆಯಿಂದ ಮಧ್ಯಾನ್ಹ 2 ಘಂಟೆಯವರೆಗೆ ಶಿರಡಿಯ ಎಲ್ಲ ಬೀದಿಗಳನ್ನು ಗುಡಿಸಿ ಶುಭ್ರಗೊಳಿಸುತ್ತಿದ್ದರು. ಬೀದಿಯನ್ನು ಗುಡಿಸಲು ತಮ್ಮ ಬಳಿಯಿದ್ದ ಬಟ್ಟೆಯನ್ನೇ ಬಳಸುತ್ತಿದ್ದರು. ಅಲ್ಲದೆ, ಶಿರಡಿಯ ಮೋರಿಗಳನ್ನು ಮತ್ತು ಮಹಿಳೆಯರು ಬೀದಿಯಲ್ಲಿ ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಬಳಸುತ್ತಿದ್ದ ಜಾಗಗಳನ್ನು ಕೂಡ ಶುಭ್ರಗೊಳಿಸುತ್ತಿದ್ದರು. ಪುನಃ ಸಂಜೆಯ ವೇಳೆ ಶಿರಡಿಯ ಎಲ್ಲ ಬೀದಿಗಳನ್ನು ಗುಡಿಸಿ ಮೋರಿಗಳನ್ನು ಶುಭ್ರಗೊಳಿಸುತ್ತಿದ್ದರು. ಚಳಿಯಿರಲಿ, ಮಳೆಯಿರಲಿ ಅಥವಾ ಬಿಸಿಲಿರಲಿ, ತಮ್ಮ ಈ ಕಾಯಕ ಮಾಡುವುದನ್ನು ಒಂದು ದಿನವೂ ಕೂಡ ತಪ್ಪಿಸುತ್ತಿರಲಿಲ್ಲ.
ಬೆಳಗಿನ ಜಾವ 5 ಘಂಟೆಗೆ ಇವರು ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದರು. ಇದನ್ನು ಇವರು ಬಹಳ ಗುಪ್ತವಾಗಿ ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು. ಅಲ್ಲದೆ, ದಿನದಲ್ಲಿ ಅನೇಕ ಬಾರಿ ಸಾಯಿಯವರ ದರ್ಶನಕ್ಕೆ ಹೋಗುತ್ತಿದ್ದರು. ಆಗ ಬಾಬಾರವರು ಇವರ ಜೊತೆ ಸಂಜ್ಞೆಯ ಮುಖಾಂತರ ನಿಶ್ಯಬ್ದವಾಗಿ ಏನನ್ನೋ ಮಾತನಾಡುತ್ತಿದ್ದರು. ಶಿರಡಿಯ ಯಾವ ಜನರಿಗೂ ಬಾವು ಮಹಾರಾಜ್ ಕುಂಬಾರ್ ರವರು ಬಾಬಾರವರ ಬಳಿ ಏನು ಮಾತನಾಡಿದರೆಂದು ತಿಳಿಯುತ್ತಿರಲಿಲ್ಲ.
ಸಾಯಿಯವರು ಮಹಾಸಮಾಧಿ ಹೊಂದಿದ ಮೇಲೆ ದಿನದಲ್ಲಿ ಅನೇಕ ಬಾರಿ ಇವರು ಸಾಯಿಬಾಬಾರವರ ಸಮಾಧಿ ದರ್ಶನ ಮಾಡುತ್ತಿದ್ದರು. ಈ ಕೆಲಸವನ್ನು ಕೂಡ ಬಾವು ಮಹಾರಾಜ್ ಕುಂಬಾರ್ ರವರು ಅತ್ಯಂತ ಗುಪ್ತವಾಗಿ ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು. ಇವರ ಮತ್ತು ಬಾಬಾರವರ ನಡುವೆ ಯಾವುದೋ ಅವಿನಾಭಾವ ಸಂಬಂಧವಿತ್ತೆಂದು ಹೇಳಲಾಗುತ್ತದೆ.
ಬಾವು ಮಹಾರಾಜ್ ಕುಂಬಾರ್ ರವರು ತಾವು ಸಮಾಧಿ ಹೊಂದುವುದಕ್ಕೆ ಕೆಲವು ದಿನಗಳ ಮುಂಚೆ ಖಾಯಿಲೆಯಿಂದ ನರಳುತ್ತಿದ್ದರು. ಇವರಿಗೆ ಹಸಿವು ಆಗುತ್ತಿರಲಿಲ್ಲ ಮತ್ತು ಇವರು ಏನನ್ನೂ ತಿನ್ನುತ್ತಿರಲಿಲ್ಲ. ದಿನದಲ್ಲಿ ಅನೇಕ ಬಾರಿ ನೀರನ್ನು ಮಾತ್ರ ಕುಡಿಯುತ್ತಿದ್ದರು. ಇವರ ಖಾಯಿಲೆಯ ಲಕ್ಷಣಗಳು ಇವರಿಗೆ ಅತೀವ ಸಕ್ಕರೆ ಖಾಯಿಲೆಯಾಗಿದೆ ಎಂದು ಸೂಚಿಸುತ್ತಿತ್ತು. ರಘುವೀರ ಭಾಸ್ಕರ ಪುರಂದರೆ ಮತ್ತು ಸಗುಣ ಮೇರು ನಾಯಕ್ ರವರು ಇವರನ್ನು ಬಹಳ ಜೋಪಾನವಾಗಿ ನೋಡಿಕೊಂಡು ಇವರ ಆರೈಕೆಯನ್ನು ಮಾಡುತ್ತಿದ್ದರು. ಬಾವು ಮಹಾರಾಜ್ ಕುಂಬಾರ್ ರವರು ಚೈತ್ರ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯಂದು ಅಂದರೆ 12ನೇ ಶಕೆ 1860 ಅಂದರೆ ಇಂಗ್ಲೀಷ್ ಪಂಚಾಂಗದ ಪ್ರಕಾರ 27ನೇ ಏಪ್ರಿಲ್ 1937 ರಂದು ಸ್ವರ್ಗಸ್ಥರಾದರು. ಇವರ ಸಾವಿನ ಸುದ್ದಿ ಶಿರಡಿಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಶಿರಡಿಯ ಜನರೆಲ್ಲಾ ಸೇರಿ ಇವರ ಸಮಾಧಿಯನ್ನು ಲೇಂಡಿ ಬಾಗ್ ನಲ್ಲಿದ್ದ ಬೇವಿನ ಮರದ ಕೆಳಗೆ ಮಾಡಿದರು.
ಬಾವು ಮಹಾರಾಜ್ ಕುಂಬಾರ್ ರವರು ಸಮಾಧಿಯಾದ 12ನೇ ದಿನ ಅಂದರೆ 7ನೇ ಮೇ 1937 ರಂದು ಬಹಳ ದೊಡ್ಡ ರೀತಿಯಲ್ಲಿ ಶಿರಡಿಯ ಜನರಿಗೆಲ್ಲ ಅನ್ನದಾನವನ್ನು ಏರ್ಪಡಿಸಲಾಗಿತ್ತು. 13ನೇ ದಿನ ಕೂಡ ಬಹಳ ದೊಡ್ಡ ರೀತಿಯಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಶಿರಡಿಯ ಜನರೆಲ್ಲಾ ಈ ಅನ್ನ ಸಂತರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತೃಪ್ತಿಯಿಂದ ಭೋಜನವನ್ನು ಮಾಡಿದರು. ಅಲ್ಲದೇ, ಇದೇ ದಿನ ಶಿರಡಿಯ ಸಮಾಧಿ ಮಂದಿರದ ಫೋಟೋ ಗ್ಯಾಲರಿಯಲ್ಲಿ ಬಾವು ಮಹಾರಾಜ್ ಕುಂಬಾರ್ ರವರ ದೊಡ್ಡ ಭಾವಚಿತ್ರವನ್ನು ತೂಗುಹಾಕಲಾಯಿತು.
ಪ್ರತಿವರ್ಷ ಚೈತ್ರ ಮಾಸದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ಇವರ ಪುಣ್ಯ ತಿಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಶಿರಡಿಯ ಎಲ್ಲ ಜನರಿಗೆ ಅನ್ನದಾನವನ್ನು ಮಾಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇಂದಿಗೂ ಶಿರಡಿಯ ಹೆಂಗಸರು ಬಾವುರವರ ಸಮಾಧಿಯ ಬಳಿ ತಮ್ಮ ಮಕ್ಕಳನ್ನು ಕೂರಿಸಿ ಅಲ್ಲಿರುವ ಮಣ್ಣನ್ನು ತಮ್ಮ ಮಕ್ಕಳ ಹಣೆಯ ಮೇಲೆ ಹಚ್ಚುತ್ತಾರೆ ಮತ್ತು ತಮ್ಮ ಮಕ್ಕಳೂ ಕೂಡ ಬಾವು ಮಹಾರಾಜ್ ಕುಂಬಾರ್ ರಂತೆ ಆಗಲೆಂದು ಪ್ರಾರ್ಥಿಸುತ್ತಾರೆ.