ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಗ್ರಾಮದ ನಡುಬೆಟ್ಟುವಿನ ರವಿ.ಎನ್. ಅವರ “ಪಂಜುರ್ಲಿ ದೈವದ ಪ್ರಾಧಾನ್ಯತೆ- ಪ್ರದರ್ಶನಾತ್ಮಕತೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ” ಎಂಬ ಸಂಶೋಧನೀಯ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಪುರಸ್ಕರಿಸಿದೆ. ಇವರಿಗೆ ಮಂಗಳೂರು ವಿ.ವಿ.ಯ ಹಿರಿಯ ಕನ್ನಡ ಪ್ರಾಧ್ಯಾಪಕ ಪ್ರೊ.ಸೋಮಣ್ಣ ಅವರು ಮಾರ್ಗನಿರ್ದೇಶನವಿತ್ತಿದ್ದರು.

ನಡುಬೆಟ್ಟು ಶ್ರೀ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ರವಿ ಅವರು ನಡುಬೆಟ್ಟುವಿನ ದಿ.ಚಿನ್ನಪ್ಪ ಮೂಲ್ಯ- ಚಂದ್ರಾವತಿ ದಂಪತಿಯರ ಪುತ್ರ. ಇದೀಗ ರವಿ ಅವರು ತುಳುನಾಡಿನಲ್ಲಿ ಪ್ರಖ್ಯಾತವಾದ “ಅಳಿಯ ಕಟ್ಟು ಮತ್ತು ಮಕ್ಕಳ ಕಟ್ಟಿನಲ್ಲಿ ಪಂಜುರ್ಲಿ ದೈವದ ಪ್ರಾಮುಖ್ಯತೆ ಕುರಿತು ಡಿ.ಲಿಟ್ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.
ದೈವಗಳು ಮತ್ತು ಆರಾಧನಾ ಪದ್ಧತಿಗಳು ಹಳಿ ತಪ್ಪುತ್ತಿರುವ ಕಾಲಕ್ಕೆ ಈ ಕುರಿತಾದ ಅಧ್ಯಯನ, ಸಂಶೋಧನೆಗಳಿಗೆ ಗೌರವದ ಮೌಲ್ಯಗಳಿವೆ. ಪಂಜುರ್ಲಿ ದೈವವು ವೈದಿಕ ಧರ್ಮಕ್ಕೂ ಪೂರ್ವದ ಪ್ರಾಚೀನ ಮಾನವ ಉಗಮಕಾಲದ ಬುಡಕಟ್ಟು ಜನಾಂಗದ ಮನಸ್ಸು, ವಿಕಾಸಗಳ ಆರಂಭಹಂತದ ಸಂಕೇತವಾಗಿದ್ದು, ಅಧ್ಯಯನವು ಪಂಜುರ್ಲಿ ದೈವದ ಪ್ರಾಧಾನ್ಯತೆ ಮತ್ತು ಪ್ರದರ್ಶನಕ್ಕೆ ಬೆಳಕು ಚೆಲ್ಲಿದೆ.
