ಈ ಪ್ರಕೃತಿ ನಿಜ ಸೌಂದರ್ಯದ ಗಣಿ
ನಲ್ಲೆಯ ಸೌಂದರ್ಯಕ್ಕೆ ಹೋಲಿಕೆ ಇಲ್ಲ ಬಿಡಿ
ತುಂತುರು ಮಳೆ ಸುರಿದಂತೆ ಅವಳ ನಗೆಯ ಸೊಬಗು
ಆ ಮಂದ ಮಳೆಯಲ್ಲಿ ನೆನೆಯುತ ಇರಲು ಏನೋ ಬೆರಗು
ಕಾಮನಬಿಲ್ಲು ಅವಳ ಹುಬ್ಬಲ್ಲಿ ಕಂಡಂತೆ
ಕಂಡೆ ಏಳು ಬಣ್ಣಗಳ ಕಾಂತಿಯ ಬೆಳಕಂತೆ
ಮನ್ಮಥನ ಹೂ ಬಾಣಕ್ಕೆ ಪುಳಕಿತಗೊಂಡ ಭಾಮಿನಿ
ನನ್ನ ಮನಸೊಳಗೆ ಮಧುರ ಭಾವನೆ ಸೃಷ್ಠಿಸಿದ ರಮಣಿ
ಆ ರತಿದೇವಿಯ ಮಗಳೇನ ಈ ಭುವನ ಸುಂದರಿ
ಅವಳಂದಕ್ಕೆ ಸರಿಸಾಟಿ ಯಾರು ಇಲ್ಲ ಮದನಾರಿ
ನನಗೊಳಿದ ಸೌಂದರ್ಯ ದೇವತೆ ನೀನು
ನಿನ್ನ ಪ್ರೇಮ ಪೂಜೆ ಮಾಡುವ ಪೂಜಾರಿ ನಾನು
_______________________________________
ನನ್ನೆದೆಯಲ್ಲಿ ಪ್ರೇಮದ ಮಳೆ ಸಿಂಚನಗೈದ ನಲ್ಲೆ
ಪರರಿಗಾಗಿ ನನ್ನ ಹೃದಯ ಸಾಮ್ರಾಜ್ಯವ ಖಾಲಿ ಮಾಡಲೊಲ್ಲೆ
ಹೃದಯ ಸಿಂಹಾಸನದಿ ಸದಾ ವಿರಾಜಮಾನಳಾಗಿರು
ಪ್ರತಿ ಬಡಿತವ ಹತ್ತಿರದಿಂದ ಕಿವಿಗೊಟ್ಟು ಆಲಿಸುತ್ತಿರು
ಪ್ರತಿ ಬಡಿತವು ಮಾಡುತಿದೆ ನಿನ್ನದೇ ಜಪ
ತಿಳಿಯಲಾರೆಯ ನಲ್ಲೆ ನನ್ನ ಪ್ರೇಮದ ತಾಪ
ನೀ ಕುಳಿತ ಸಿಂಹಾಸನವ ಬರಿದು ಮಾಡಿ ಹೋಗದಿರು
ನೀ ದೂರ ಹೋದರೆ ಸಿಂಹಾಸನಕ್ಕೆ ಗತಿಯಾರು
ಬರಿದು ಮಾಡಿ ಹೋಗದಿರು ಅರಮನೆಯ ಹೂದೋಟವ
ಸುಂದರ ವನ ಬಾಡಿದೆ ಇಲ್ಲದೆ ನಿನ್ನ ಒಡನಾಟವ
ನೆರಳಾಗಿ ಬಂದೆ ನನ್ನ ತಾರುಣ್ಯದ ಬಿರುಬಿಸಿಲಿಗೆ
ಸರಿವೆಯಾ ಒಲವೇ ನನ್ನ ನೂಕಿ ವಿರಹವೇದನೆಗೆ
_______________________________________
ಮುಂಗಾರಿನ ಮಳೆ ಹನಿಯ ಸಿಂಚನ,
ಇಳೆಗೆ ಆಗಮಿಸಿದ ಮಳೆರಾಯನ ಪಯಣ
ಭುವಿಯೆಲ್ಲಾ ತಂಪಾದ ವಾತವರಣ
ಯುವ ಮನಸ್ಸುಗಳಿಗೆ ರೊಮಾಂಚನ
ಇಳೆಯಲ್ಲಿ ಮಳೆ ಹನಿಯ ಸೊಗಸಾದ ನರ್ತನ
ಪ್ರಣಯಿಗಳ ಮನಸ್ಸೊಳಗೆ ಏನೋ ತನ ನ ನ
ಮಳೆರಾಯ ಹಾಡಿದ ಮೋಹನ ಗಾನ
ಮಳೆಯಲ್ಲಿ ಮಿಂದ ಮನಸ್ಸುಗಳ ಸಮ್ಮಿಲನ
ತಲೆದೂಗಿದ ಮರ ಬಳ್ಳಿಯ ತೋರಣ
ಪ್ರಿಯೆಗೆ ಪ್ರಿಯತಮನ ಮಧುರ ಆಲಿಂಗನ
ಅಂಗಳದಲ್ಲಿ ನೀರ ಗುಳ್ಳೆಗಳ ಚನ್ನಾಟ
ನಲ್ಲ ನಲ್ಲೆಯರ ಜೊತೆ ಪ್ರೇಮದಾಟ
ಮಳೆಗೂ ಪ್ರೇಮಿಗಳಿಗೂ ಏನೋ ನಂಟು
ಇದಕ್ಕೆ ಸೊಗಸಾದ ಭಾಂದವ್ಯದ ಹೆಸರುಂಟು
ರಚನೆ : ಸಿ.ಎಸ್. ಕುಲಾಲ್, ಬಂಟ್ವಾಳ