ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸಮಾನ ಮನಸ್ಕರು ಸೇರಿಕೊಂಡು ಪ್ರಾರಂಭಿಸಿದ ಕುಂಭಶ್ರೀ ವಿವಿಧೋದ್ದೇಶ ಸಹಕಾರಿ ಸಂಘವು ಇಂದು ಬಹಳ ಎತ್ತರಕ್ಕೆ ಬೆಳೆದಿದೆ. ಸಹಕಾರಿ ಚಳವಳಿಗೆ ಶತಮಾನದ ಇತಿಹಾಸವಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ತರವಾದುದು ಎಂದು ಶಾಸಕ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಫೆ. 9ರಂದು ಜೋಡುರಸ್ತೆಯ ಶ್ರೀನಿಧಿ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರವಾದ ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಬಳಿಕ ಮಾತನಾಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೂತನ ಕಚೇರಿ ಉದ್ಘಾಟಿಸಿ ಶುಭಹಾರೈಸಿದರು. ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ ಭದ್ರತಾ ಕೊಠಡಿ ಉದ್ಘಾಟಿಸಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕುಂಭಶ್ರೀ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಸದೃಢವಾಗಿ ಬೆಳೆದಿದೆ. ಸಹಕಾರಿ ಸಂಸ್ಥೆಗಳು ಕೇವಲ ಠೇವಣಿ, ಸಾಲದ ವಹಿವಾಟುಗಳಿಗೆ ಮಾತ್ರ ಗಮನ ನೀಡದೇ ಇನ್ನಿತರ ಕ್ಷೇತ್ರಗಳಲ್ಲೂ ಗಣನೀಯ ಕೊಡುಗೆ ಸಲ್ಲಿಸುತ್ತಿರುವುದು ಉತ್ತಮ ವಿಚಾರವೆಂದರು.

ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಕುಲಾಲ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್, ಕುಂಭಶ್ರೀ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಭೋಜ ಕುಲಾಲ್ ಬೇಳಂಜೆ, ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ರಾವ್, ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕುಶ ಆರ್. ಮೂಲ್ಯ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಕುಂಭಶ್ರೀ ಸಹಕಾರ ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೃದಯ್ ಕುಲಾಲ್ ಸ್ವಾಗತಿಸಿ, ಸನ್ನಿಧಿ ಪ್ರಾರ್ಥಿಸಿದರು. ಪ್ರಭಾಕರ್ ಇನ್ನ ಪ್ರಾಸ್ತವಿಕ ಮಾತುಗಳನ್ನಾಡಿದರು. ಮಂಜುನಾಥ ಹಿಲಿಯಾನ ನಿರೂಪಿಸಿದರು. ಸಂಘದ ನಿರ್ದೇಶಕ ದಿವಾಕರ್ ಕುಲಾಲ್ ವಂದಿಸಿದರು.

