ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಜೀವ ಸದಸ್ಯ, ಹಳೆಯಂಗಡಿ ಸುತ್ತಮುತ್ತ ಪರಿಸರದಲ್ಲಿ ಯಾವುದೇ ಆಕಸ್ಮಿಕ ಆವಘಡ ಸಂಭವಿಸಿದಾಗ, ತನಗೆ ಸುದ್ದಿ ಬಂದ ತಕ್ಷಣ ತನ್ನ ಪ್ರಾಣವನ್ನು ಲೆಕ್ಕಿಸದೇ ಆವಘಡಕ್ಕೆ ಒಳಗಾದವರನ್ನು ರಕ್ಷಿಸುವ ಕಾಯ೯ವನ್ನು ನಿರಂತರ ಮಾಡಿಕೊಂಡು ಬಂದಿರುವ ತುಕಾರಾಮ ಹಳೆಯಂಗಡಿಯವರಿಗೆ `ಆಪತ್ಬಾಂಧವ ಸಮಾಜ ಸೇವಕ’ ಬಿರುದು ನೀಡಿ ಸನ್ಮಾನಿಸಲಾಯಿತು.

2019 ರಲ್ಲಿ ಹಳೆಯಂಗಡಿ ರಾಮನಗರದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯೋವ೯ರನ್ನು ಮೇಲಕ್ಕೆತ್ತಿ ಅವರ ಜೀವರಕ್ಷಕರಾಗಿರುವ ತುಕಾರಾಮ ಅವರು, 2020 ರಲ್ಲಿ ಹಳೆಯಂಗಡಿ ಪೇಟೆಯ ಮನೆಯೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ತನ್ನದೇ ನೀರು ಸರಬರಾಜು ವಾಹನದಿಂದ ನೀರು ಹಾಯಿಸಿ,ಅಗ್ನಿ ಶಾಮಕದಂತೆ ಕತ೯ವ್ಯ ಮಾಡಿದ್ದಾರೆ. 2024ಜನವರಿಯಲ್ಲಿ ಹೆಜ್ಜೇನು ಕಡಿತಕ್ಕೊಳಗಾದ ವ್ಯಕ್ತಿಯನ್ನು ಸೂಕ್ತ ಸಮಯದಲ್ಲಿ ತನ್ನದೇ ವಾಹನದಲ್ಲಿ ಆಸ್ವತ್ರೆಗೆ ಸಾಗಿಸಿ ಅವರ ಪ್ರಾಣವನ್ನು ಉಳಿಸಿರುತ್ತಾರೆ.

2024 ಫೆಬ್ರವರಿಯಲ್ಲಿ ಚೇಳ್ಳಾರು ಅಣೆಕಟ್ಟು ಬಳಿ 4 ವಿದ್ಯಾಥಿ೯ಗಳು ನೀರಿಗೆ ಬಿದ್ದು ಕಾಣೆಯಾದಾಗ ಮಧ್ಯರಾತ್ರಿಯ ವೇಳೆ ತಾನೊಬ್ಬನೇ 4 ವಿದ್ಯಾಥಿ೯ಗಳ ಶವವನ್ನು ಮೇಲಕ್ಕೆ ಎತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಅಲ್ಲದೇ ಯಾರದ್ದೇ ಬಾವಿಯಲ್ಲಿ ಪ್ರಾಣಿ ಪಕ್ಷಿಗಳು ಬಿದ್ದಾಗ ಅವುಗಳನ್ನು ಸೂಕ್ತ ಸಮಯದಲ್ಲಿ ರಕ್ಷಣೆ ಮಾಡಿದ್ದಾರೆ. ರಸ್ತೆ ಅಪಘಾತ ಸಂದಭ೯ದಲ್ಲಿ ಗಾಯಾಳುಗಳನ್ನು ಆಸ್ವತ್ರೆಗೆ ಸಾಗಿಸಿ ಕರುಣಾಮಯಿಯಾಗಿದ್ದಾರೆ. ಇವರ ನಿಸ್ವಾಥ೯ ಸೇವೆಯನ್ನು ಗುರುತಿಸಿ, ಇತ್ತೀಚೆಗೆ ನಡೆದ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ವಾಷಿ೯ಕೋತ್ಸವ ಸಮಾರಂಭದಲ್ಲಿ ಇವರಿಗೆ `ಅಪತ್ಬಾಂಧವ ಸಮಾಜ ಸೇವಕ’ ಬಿರುದು ನೀಡಿ ಸನ್ಮಾನಿಸಲಾಯಿತು. ಹಳೆಯಂಗಡಿಯ ದಿವಂಗತ ಪೂವಪ್ಪ ಬಂಜನ್ ಮತ್ತು ಶ್ರೀಮತಿ ವಾಕಮ್ಮ ದಂಪತಿಯ ಸುಪುತ್ರರಾದ ತುಕಾರಾಮ ಅವರು ಹಳೆಯಂಗಡಿಯಲ್ಲಿ ನೀರು ಸರಬರಾಜು ಮತ್ತು ಕಟ್ಟಿಗೆ ಡಿಪೋ ಹೊಂದಿದ್ದಾರೆ.

