ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಉಡುಪಿ ನಗರಸಭೆಗೆ ನೂತನವಾಗಿ ಐದು ಮಂದಿಯನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಸರಕಾರ ಅಧಿಸೂಚನೆ ಹೊರಡಿಸಿದ್ದು, ಇವರಲ್ಲಿ ಕುಲಾಲ ಸಮುದಾಯದ ಮೊಟ್ಟ ಮೊದಲ ನಗರಸಭಾ ಸದಸ್ಯರಾಗಿ ಕಡ್ತಲ ಸದಾನಂದ ಮೂಲ್ಯ ಆಯ್ಕೆಯಾಗಿದ್ದಾರೆ.
ಮಣಿಪಾಲದ ಸ್ಪಂದನ ಸಾರಿಗೆ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಹುಡ್ಕೋ ಪ್ರೆಂಡ್ಸ್ (ರಿ) ಇದರ ಸ್ಥಾಪಕ ಅಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡ ಕುಲಾಲ ಸಮುದಾಯದ ಮುಂದಾಳು ಕಡ್ತಲ ಸದಾನಂದ ಮೂಲ್ಯ ಅವರು ಕಡ್ತಲ ಗ್ರಾಮದ ಪೋಂಕ್ರ ಹಾಂಡ – ಕಲ್ಯಾಣಿ ಸಾಮಾನ್ಯ ರೈತ ದಂಪತಿಗಳ ಮೊದಲೆನೆ ಮಗನಾಗಿ ಜನಿಸಿದರು.

ತಮ್ಮ ಆರಂಭಿಕ ಶಿಕ್ಷಣವನ್ನು ಮುಲ್ಕಡು ಶಾಲೆಯಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಮುನಿಯಾಲು ಶಾಲೆಯಲ್ಲಿ ಪೂರೈಸಿ, ಬಡತನದ ಕಾರಣದಿಂದ ಶಿಕ್ಷಣ ಮೊಟಕುಗೊಳಿಸಿ ಮಣಿಪಾಲ ಲೇಕ್ ವ್ಯೂ ಹೋಟೆಲ್ ನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಆರಂಭಿಸಿದರು. ಆ ನಂತರ ಉತ್ತಮ ಭವಿಷ್ಯ ಅರಸಿ ಮುಂಬಯಿ ಬಸ್ಸು ಹತ್ತಿದ ಅವರು ಅಲ್ಲಿಯ ಹೋಟೆಲಿನಲ್ಲಿ ದುಡಿದರು. ಅಲ್ಲಿ ಪಡೆದ ಅನುಭವದಿಂದ ಕೆಲ ವರ್ಷಗಳ ಬಳಿಕ ತನ್ನ ಊರಿಗೆ ಮರಳಿದ ಅವರು ತನ್ನ ಉಳಿಕೆ ಹಣದಲ್ಲಿ ಮಣಿಪಾಲ ಹುಡ್ಕೋ ಕಾಲೋನಿಯಲ್ಲಿ ಅಂಗಡಿಯೊಂದನ್ನು ತೆರೆದರು. ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಸದಾನಂದ ಮೂಲ್ಯರು 2003ರಿಂದ ಶಬರಿಮಲೆ ಯಾತ್ರೆ ಆರಂಭಿಸಿದ್ದು, ಆ ಮೂಲಕ ಪ್ರವರ್ಧಮಾನಕ್ಕೆ ಬಂದು 2012ರಲ್ಲಿ `ಹುಡ್ಕೋ ಫ್ರೆಂಡ್ಸ್’ ಎಂಬ ಯುವಕ ಸಂಘ ಕಟ್ಟಿ ಅದರ ಆರಂಭಿಕ ಅಧ್ಯಕ್ಷರಾಗಿ ಜನಪರ ಕಾರ್ಯ ನಡೆಸಿ ಸ್ಥಳೀಯವಾಗಿ ಪ್ರಸಿದ್ಧಿ ಪಡೆದರು. ಇತ್ತೀಚೆಗಷ್ಟೇ ಇದರ ೧೩ನೇ ವರ್ಷದ ಅದ್ಧೂರಿ ಕಾರ್ಯಕ್ರಮ ಮಾಡಿರುವ ಅವರು, ತಮ್ಮ ಭಕ್ತಿ ಪರ ಕಾರ್ಯಗಳಿಂದ ಅಯ್ಯಪ್ಪ ಸ್ವಾಮಿಯ ಹಲವು ಭಕ್ತರ ಮೆಚ್ಚುಗೆ ಗಳಿಸಿದ್ದಾರೆ. ಈ ನಂಟಿನಿಂದ ಹಲವು ಸಂಘಟನೆಯಲ್ಲಿ ಸದಸ್ಯರಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಸಹಕಾರಿ ರಂಗದಲ್ಲೂ ಗುರುತಿಸಿಕೊಂಡ ಅವರು 2015ರಲ್ಲಿ ಸಾರಿಗೆ ಸಹಕಾರಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ತಾನು ಓದಿದ ಶಾಲೆ ಮತ್ತು ಸ್ನೇಹಿತರನ್ನು ಎಂದೂ ಮರೆಯಬಾರದು ಎಂಬ ಉದ್ದೇಶದಿಂದ 1994-95 ರ ಸಾಲಿನಲ್ಲಿ ತಾನು ಕಲಿತ ಹೈಸ್ಕೂಲ್ ಬ್ಯಾಚ್ ನಲ್ಲಿ ಓದಿದ ಸಹಪಾಠಿಗಳನ್ನು ಕೊರೋನ ಸಮಯದಲ್ಲಿಒಟ್ಟುಗೂಡಿಸಿ ”ಸ್ನೇಹ ಸಂಗಮ 1994-95′ ಬ್ಯಾಚ್ ಎಂಬ ಸಂಘ ರಚನೆ ಮಾಡಿ, ಪ್ರಸ್ತುತ ಅದರ ಉಪಾಧ್ಯಕ್ಷರಾಗಿರುವ ಮೂಲ್ಯರು, ತಮ್ಮ ಸಹಪಾಠಿಗಳಿಗಲ್ಲದೇ ಶಿಕ್ಷಣ ವಂಚಿತ ಇತರರಿಗೂ ನೆರವಾಗುವ ಯೋಜನೆ ಹಾಕಿಕೊಂಡಿದ್ದಾರೆ. ಕಡ್ತಲ ಚೆನ್ನಿಬೆಟ್ಟು ಎಂಬಲ್ಲಿ ” ಕಲ್ಯಾಣಿ ಪೌಲ್ಟ್ರಿ ಫಾರ್ಮ್ ‘, ‘ ಮಣಿಪಾಲ ದಲ್ಲಿ “ಅನಂತ ಪದ್ಮನಾಭ ಸ್ಟೋರ್ಸ್ ಗ್ರೋಸೆರಿ ಶಾಪ್” ಜೊತೆಗೆ ಲ್ಯಾಂಡ್ ಲಿಂಕ್ಸ್ ವ್ಯವಹಾರ ಮಾಡುತ್ತಾ ಪತ್ನಿಸುನೀತಾ ಮತ್ತು ಮಕ್ಕಳಾದ ಭೂಮಿಕಾ ಮತ್ತು ಸ್ಫೂರ್ತಿಕಾ ಜೊತೆ ಸುಖೀ ಜೀವನ ನಡೆಸುತ್ತಾ ಇದ್ದಾರೆ.

