ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕೆರ್ವಾಶೆಯ ಪಾಲ್ದಾಕ್ಯಾರ್ ಎಂಬಲ್ಲಿ ವಾಸವಾಗಿರುವ ನಾರಾಯಣ ಮೂಲ್ಯರ ಪತ್ನಿ ಶ್ರೀಮತಿ ಲಲಿತಾರವರು ಗರ್ಭದ ಕ್ಯಾನ್ಸರ್ ಸಮಸ್ಯೆಗೆ ತುತ್ತಾಗಿದ್ದು ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಕಿಮೋಥೆರಪಿ ನಂತರ ಒಂದು ಶಸ್ತ್ರ ಚಿಕಿತ್ಸೆ ಕೂಡ ನಡೆದಿದ್ದು ಬಳಿಕ ಮೂರು ಕಿಮೋಥೆರಪಿ ಮಾಡಲಾಗಿದೆ. ಇನ್ನು ಮೂರು ಕಿಮೋಥೆರಪಿ ಆಗಬೇಕು ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ಸದ್ಯಕ್ಕೆ ಲಲಿತಾರವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು ಸಂತಸದ ಸಂಗತಿ. ಆದರೆ ಆ ದಂಪತಿಗಳ ಬದುಕಿನಲ್ಲಿ ಧೀರ್ಘ ನೆಮ್ಮದಿಯ ನಿಟ್ಟುಸಿರಿಗೆ ಕಾಲವೇ ಉತ್ತರ ನೀಡಬೇಕಾಗಿರುವುದು ದುರಾದೃಷ್ಟ.
ಲಲಿತಾ ಮತ್ತು ನಾರಾಯಣ ಮೂಲ್ಯರಿಗೆ ಮದುವೆಯಾಗಿ ಹತ್ತಾರು ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗಲಿಲ್ಲ. ಪೂಜೆ ಪುನಸ್ಕಾರ, ನೂರೊಂದು ಹರಕೆಗಳು ನಿಷ್ಫಲಗೊಂಡಾಗ ದೈವ ಚಿತ್ತಕ್ಕೆ ತಲೆಬಾಗಿ ನನಗೆ ನೀನು ನಿನಗೆ ನಾನು ಎಂಬ ಅನ್ಯೋನ್ಯತೆಯಲ್ಲಿ ಸಾಮರಸ್ಯದ ಬದುಕಿನಲ್ಲಿ ದಾಂಪತ್ಯ ಜೀವನಕ್ಕೆ ನೈಜ ಅರ್ಥ ಕಲ್ಪಿಸಿದ್ದ ಈ ದಂಪತಿಗಳಿಗೆ ಬಾಳಿಗೆ ವಿಧಿಯ ವಕ್ರನೋಟ ಬಿರು ಬೇಸಿಗೆಯಲ್ಲಿ ಬಡಿದ ಬರ ಸಿಡಿಲಿನಂತೆ.
ಜೀವಕ್ಕೆ ಜೀವವಾಗಿದ್ದ ಅರ್ಧಾಂಗಿಯು ಜೀವಶ್ಚವವಾಗಿ ಪಡುವ ವೇದನೆಯನ್ನು ಕಂಡು ಸಹಿಸಲಾಗದ ನಾರಾಯಣ ಮೂಲ್ಯರು ಸುಮಾರು ಎಂಟು ಲಕ್ಷದಷ್ಟು ಹಣವನ್ನು ಸಾಲ ಸೋಲ ಮಾಡಿ ಮಡದಿಯ ಚಿಕಿತ್ಸೆಗಾಗಿ ಶಕ್ತಿ ಮೀರಿ ವ್ಯಯಿಸಿದರು. ಇನ್ನೂ ಚಿಕಿತ್ಸೆ ಮುಂದುವರಿಯ ಬೇಕಾದ ಕಾರಣ ಒಂದಷ್ಟು ಸಹೃದಯರಲ್ಲಿ ತಮ್ಮ ನೋವನ್ನು ತೋಡಿಕೊಂಡು ಕುಲಾಲ ಚಾವಡಿಗೂ ಮನವಿ ಸಲ್ಲಿಸಿದ್ದರು.

ನಾರಾಯಣ ಮೂಲ್ಯರ ಮನವಿಗೆ ಸ್ಪಂದಿಸಿದ ಚಾವಡಿ ಬಂಧುಗಳು ತಮ್ಮ ಶಕ್ತ್ಯಾನುಸಾರ ಆರ್ಥಿಕ ನೆರವು ನೀಡಿದಾಗ ಒಟ್ಟು ಕ್ರೋಡೀಕರಣ ಗೊಂಡ ಮೊತ್ತ ₹40000/-ವನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೆರ್ವಾಶೆ ಕುಲಾಲ ಸಂಘದ ಗೌರವಾಧ್ಯಕ್ಷರಾದ ಜಯರಾಮ್ ಬಂಗೇರ, ಕಾರ್ಯಾಧ್ಯಕ್ಷರಾದ ಸುಧೀರ್ ಬಿ ಬಂಗೇರ ಉಪಾಧ್ಯಕ್ಷರಾದ ಡಿ.ಕೆ ಕುಮಾರ್ ಕಾರ್ಯದರ್ಶಿ ಸತೀಶ್ ಕಜ್ಜೋಡಿ ಮತ್ತು ಸಂಘಟನಾ ಕಾರ್ಯದರ್ಶಿ ಗಣೇಶ್ ಅದ್ರೋಟ್ಟು, ಜನಾರ್ದನ ಬಂಗೇರ, ಜಯ ಮೂಲ್ಯ, ಶೇಖರ್ ಮೂಲ್ಯ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ವಿಮಲಾ ಜಯ ಮೂಲ್ಯ ಉಪಸ್ಥಿತರಿದ್ದರು.
ವಿಶೇಷವಾಗಿ ರಾತ್ರಿಯಾದರೂ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಾರ್ಕಳದಿಂದ ಆಗಮಿಸಿದ್ದ ಕುಲಾಲ ಚಾವಡಿಯ ನಿರ್ವಾಹಕರಾದ ಸಂತೋಷ್ ಕುಲಾಲ್ ಪದವು ಸಹ ನಿರ್ವಾಹಕರಾದ ಸಂದೇಶ್ ಕುಲಾಲ್ ಮತ್ತು ದೇವಪ್ಪ ಕುಲಾಲರಿಗೆ ಈ ಸಂದರ್ಭದಲ್ಲಿ ಜಯರಾಮ್ ಬಂಗೇರರು ಕೃತಜ್ಞತೆ ಸಲ್ಲಿಸಿದರು. ಮತ್ತು ನಾರಾಯಣ ಮೂಲ್ಯ ದಂಪತಿಗಳು ಆರ್ಥಿಕ ನೆರವು ನೀಡಿ ಸಹಕರಿಸಿದ ಎಲ್ಲಾ ಮಹನೀಯರಿಗೂ ಧನ್ಯವಾದ ಸಲ್ಲಿಸಿದರು.
