ಸುಮಾರು ಕ್ರಿ.ಪೂ ೧೮೭ರ ಹೊತ್ತಿಗೆ ಮೌರ್ಯ ಅರಸು ಮನೆತನದ ಆಳ್ವಿಕೆ ಕೊನೆಗೊಂಡಿತು. ನಂತರ ಕೆಲ ಕಾಲ ಆಳಿದ ಶುಂಗ ಅರಸು ಮನೆತನದ ಬಗೆಗೆ, ನಂತರ ಕಾಣ್ವ ವಂಶದ ಅರಸು ಮನೆತನಗಳ ಕಾಲದಲ್ಲಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಹೆಚ್ಚಿನ ಯಾವುದೇ ಆಕರಗಳಿಲ್ಲ. ಹೀಗಾಗಿ ಮೌರ್ಯ ವಂಶದ ಪತನದ ನಂತರ ಶಾತವಾಹನ ಅರಸರೇ ಪ್ರಮುಖರು. ಕರ್ನಾಟಕದ ಪ್ರಥಮ ಚಕ್ರವರ್ತಿ ಎಂದು ಮೊದಲನೆಯ ಶಾತವಾಹನ ಅರಸರನ್ನು ಕರೆಯಲಾಗುತ್ತದೆ. ಶಾತವಾಹನನಿಂದ ಈ ವಂಶಕ್ಕೆ ಶಾತವಾಹನರೆಂದು ಹೆಸರು ಬಂದಿದೆ. ಇವರೇ ಶಾತವಾಹನ ಶಕಕ್ಕೆ ಕಾರಣರಾದರು. ಶಾತವಾಹನರು ಕ್ರಿಪೂ ೨೨೦ರಿಂದ ಕ್ರಿ ಶ ೨೩೦ ರವರೆಗೆ ಅಂದರೆ ೪೫೦ ವರ್ಷಗಳ ಕಾಲ ಆಳಿರುವುದು ಕಂಡು ಬರುತ್ತದೆ.
ಶಾತವಾಹನರು ತಮ್ಮ ರಾಜಕೀಯ ಚಟುವಟಿಕೆಗಳನ್ನು ದಕ್ಖನ್ನಿನ ಪಶ್ಚಿಮ ಭಾಗದಲ್ಲಿ ಆರಂಭಿಸಿ ಪೂರ್ವ ಮತ್ತು ದಕ್ಷಿಣದ ಕಡೆಗೆ ವಿಸ್ತರಿಸಿ ರಾಜಕೀಯ ಪ್ರಭಾವವನ್ನು ಸ್ಥಾಪಿಸಿದರೆಂಬ ಅಭಿಪ್ರಾಯವಿದೆ. ಡಾ. ಸುಕುಂಥರ್ ಪ್ರಕಾರ ಶಾತವಾಹನರ ಕುಟುಂಬ ಕನ್ನಡ ಪ್ರದೇಶದಿಂದ ಬಂದಿದೆ. ಮ್ಯಾಕಡೋನಿ ಮತ್ತು ಹಿರೇಹಡಗಲಿ ತಾಮ್ರ ಶಾಸನಗಳಿಂದ ಮತ್ತು ಭಾರತದ ಕಾವ್ಯಗಳಲ್ಲಿ ಶಾತವಾಹನರು ಕರ್ನಾಟಕವನ್ನು ಆಳಿದ ಬಗ್ಗೆ ತಿಳಿದು ಬರುತ್ತದೆ. ಶಾತವಾಹನರನ್ನು ಮತ್ಸ್ಯ , ವಿಷ್ಣು , ವಾಯು , ಭಾಗವತ , ಬ್ರಹ್ಮಾಂಡ ಇತ್ಯಾದಿ ಪುರಾಣಗಳಲ್ಲಿ ಆಂಧ್ರ ಭೃತ್ಯರೆಂದು ಶಾಸನ ಸಾಹಿತ್ಯದಲ್ಲಿ ಶಾತವಾಹನ ಕುಲದವರೆಂದು, ಶಾತವಾಹನ, ಶಾಲಿವಾಹನ, ಸಡಕಣ, ಸಾತಕವರ್ಣಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಟ್ಟಿದ್ದಾರೆ. ಸಂಸ್ಕೃತ ಬೃಹತ್ ಕಥಾ ಮಂಜರಿ ಮತ್ತು ಕಥಾಸರಿತ್ಸಾಗರಗಳಲ್ಲಿ ಸಾತ ಎಂಬ ಸಿಂಹವನ್ನು ವಾಹನವನ್ನು ಉಳ್ಳವನು ಶಾತವಾಹನನೆಂದು ಕರೆಯಲ್ಪಟ್ಟಿದ್ದಾನೆ. ಆಂಧ್ರ ಪ್ರದೇಶದ ಸ್ವಲ್ಪ ಭಾಗವು ಸೇರಿದಂತೆ ಬಳ್ಳಾರಿ ಪ್ರದೇಶವನ್ನು ಶಾತವಾಹನೀ ರಾಷ್ಟ್ರವೆಂದು ಕರೆಯಲಾಗುತ್ತಿತ್ತು. ಹೀಗಾಗಿ ಇಲ್ಲಿಂದಲೇ ರಾಜಕೀಯ ಚಟುವಟಿಕೆಗಳು ಪ್ರಾರಂಭವಾದವು. ಶಾತವಾಹನ ಕುಲದ ಮೂಲ ಪುರುಷನನ್ನು ಪುರಾಣಗಳು ಶಿಶುಕ, ಸಿಂಧುಕ, ಸಿಪ್ರಕ, ವ್ರುಶಲ, ಶೂದ್ರಕ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಟ್ಟಿದ್ದರೂ ಶಿಶುಕ ಎನ್ನುವ ಹೆಸರೇ ಉಳಿದಿದೆ. ಶಿಶುಕ ಶಾತವಾಹನರ ಮೊದಲ ಸಾಮ್ರಾಟನಾದರೆ, ಪ್ರಲೋಮನೆಂಬ ರಾಜನೇ ಕೊನೆಯವನು. ಒಟ್ಟು ೧೯ಕ್ಕೂ ಹೆಚ್ಚು ಶಾತವಾಹನರ ರಾಜರು ಆಳ್ವಿಕೆ ನಡೆಸಿದ್ದಾರೆ. ಇವರ ಆಳ್ವಿಕೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ನೀಲಗಿರಿ, ಮಹಾರಾಷ್ಟ್ರ, ಗುಜರಾತ್ ವರೆಗೂ ಒಳಪಟ್ಟಿತ್ತೆಂದು ಕಂಡು ಬರುತ್ತದೆ.
ಕರ್ನಾಟಕದ ಪ್ರಥಮ ಚಕ್ರವರ್ತಿಯಾದ ಶಾತವಾಹನ ಮತ್ತು ಆಗಿನ ಕಾಲದಲ್ಲೇ ರಾಸಾಯನಿಕ ಸಿದ್ಧ ಔಷಧಗಳ ತಜ್ಞನೆಂದು ಪ್ರಖ್ಯಾತನಾಗಿದ್ದ ನಾಗಾರ್ಜುನನು ಅತ್ಯಂತ ನಿಕಟವರ್ತಿಯಾಗಿದನೆ೦ದೂ ಶಾತವಾಹನನನ್ನು ರಾಜಪದವಿಗೇರಿಸಿ ಅವರ ಬಾಲಿ ಮಂತ್ರಿಯಾಗಿದ್ದಂತೆ ತೋರುತ್ತದೆ.
ಶಾತವಾಹನರ ಕುಲ:
“ಶಾತವಾಹನರು ತಮ್ಮ ಕುಲದ ಮೂಲ ಪುರುಷ”ರೆಂದು ತೆಲುಗು ಕುಂಬಾರರು ಹೇಳಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಕುಂಬಾರರು ತಾವು ಶಾತವಾಹನರ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಪುಷ್ಟಿಯಾಗಿ ಇಂದಿಗೂ ಅಲ್ಲಿಯ ಕೆಲ ಕುಂಬಾರರ ಅಡ್ಡ ಹೆಸರು ಸಾಲವಿ ಎಂದೇ ಇದೆ. ಶಾತವಾಹನರ ಕುಲದ ಬಗ್ಗೆ ಸಾಕಷ್ಟು ಜಿಜ್ಞಾಸೆ ಇದೆ. ಕಾಕತಾಳೀಯ ಎಂಬಂತೆ ಸರ್ವಜ್ಞ ಮತ್ತು ಶಾತವಾಹನರಿಗೆ ಒಂದೇ ರೀತಿಯ ಕಳಂಕವನ್ನು ಹಚ್ಚಿದಂತೆ ತೋರುತ್ತದೆ. ಈ ಇಬ್ಬರು ಮಹಾನುಭಾವರು ಬ್ರಾಹ್ಮಣ ಪುರುಷ ಸಂಕರ್ಕದಿಂದ ಕುಂಬಾರ ಸ್ತ್ರೀಯರಲ್ಲಿ ಹುಟ್ಟಿದವರೆಂಬ ಕಟ್ಟು ಕಥೆಗಳಿವೆ. ಭಾರತದಲ್ಲಿ ಯಾವುದೇ ರೀತಿಯ ಬೇರೆ ಕುಲದಲ್ಲಿ ಹಿರಿಮೆ ಇದ್ದರೆ ಅದು ಬ್ರಾಹ್ಮಣ ಮೂಲ ಎನ್ನುವುದು ವಾಡಿಕೆಯಾಗಿ ಬಿಟ್ಟಿದೆ. ಈ ಕೆಟ್ಟ ಪದ್ಧತಿಯಿಂದ ಭಾರತೀಯರ ಜೀವನ ಕಲುಶಿತಗೊ೦ಡು ಬಿಟ್ಟಿದೆ.
ಶಾತವಾಹನರ ಕುಲದ ಬಗೆಗೆ ಕೂಡಲಿ ಜಗನ್ನಾಥ ಶಾಸ್ತ್ರಿಯರು ಸಂಗ್ರಹಿಸಿದ ಮತ್ತೊಂದು ಕಥೆಯು ಈ ರೀತಿ ಇದೆ. ಪ್ರಾಚೀನ ಕಾಲದಲ್ಲಿ ಒಂದು ಬ್ರಾಹ್ಮಣ ಕುಟುಂಬದ ಹಿರಿಯರೆಲ್ಲಾ ಸತ್ತು ಹೋಗಿ ಅನಾಥರಾದ ಅಣ್ಣ, ತಮ್ಮ ಮತ್ತು ಸುರೂಪ ಎಂಬ ತಂಗಿ, ಈ ಮೂವರನ್ನು ಒಬ್ಬ ಕುಂಬಾರನು ತನ್ನ ಮನೆಯಲ್ಲಿ ಸಲಹಿದನು. ಮುಂದೆ ಸುರೂಪಿಯು ಯುವತಿಯಾದಾಗ ನಾಗಪುರುಷನ ಸಂಪರ್ಕದಿಂದ ಗರ್ಭ ಧರಿಸಿದಳು. ಈ ಗರ್ಭದಿಂದ ಹೊರಬಂದ ಶಿಶುವೇ ಮುಂದೆ ಶಾತವಾಹನನೆಂಬ ಹೆಸರಿನಿಂದ ರಾಜನಾಗಿ ಮೆರೆದನು . ಈ ಕಥೆಯಲ್ಲಿ ಕೂಡ ಕುತ್ಸಿತ ಬುದ್ಧಿ ಎದ್ದು ಕಾಣುತ್ತದೆ. ಕುಂಬಾರನ ಮನೆಯಲ್ಲಿದ್ದ ಆಕೆ, ಕುಂಬಾರನ ಮನೆಯ ಯುವಕನೊಡನೆ ಯಾಕೆ ಕೂಡಿರಬಾರದು? ಅದರ ಬದಲು ನಾಗಪುರುಷನೊಡನೆ ಕೂಡಿದಳು ಎಂಬ ನಯ ವಂಚನೆಯ ಮಾತು ಬರುತ್ತದೆ. ಏನೇ ಇರಲಿ, ಶಾತವಾಹನರು ಕುಂಬಾರ ವಂಶದವರೆಂಬುದು ಸತ್ಯ. ಅವರು ಶೂರರಾಗಿ ದಕ್ಷಿಣ ಭಾರತವನ್ನು ಆಳಿರುವುದು ಈಗ ಇತಿಹಾಸ. ಶಾತವಾಹನರ ಕಾಲದಲ್ಲಿ ಕುಂಬಾರಿಕೆ ವಿಜ್ರಂಭಿಸಿರುವುದರ ಬಗ್ಗೆ ಅನೇಕ ಉತ್ಖನನಗಳ ಮೂಲಕ ತಿಳಿದುಬರುತ್ತದೆ. ಇದು ಅವರು ಕುಂಬಾರ ಜನಾಂಗಕ್ಕೆ ಸೇರಿದವರು ಎಂಬುದಕ್ಕೆ ಸ್ಪಷ್ಟ ಪುರಾವೆ ಕೂಡಾ.
ಶಾತವಾಹನರ ಕಾಲದಲ್ಲಿ ಮಣ್ಣಿನ ಗೊಂಬೆಗಳನ್ನು ಮಾಡುವುದು ಹೆಚ್ಚು ಪ್ರಚಲಿತವಾಗಿದ್ದು ಇವು ಹೆಚ್ಚಾಗಿ ಜನವಾಸ್ತವದ ನೆಲೆಗಳ ಉತ್ಖನನಗಳಲ್ಲಿ ದೊರೆತಿದೆ. ಮುಖ್ಯವಾಗಿ ಬನವಾಸಿ , ಸನ್ನತಿ , ಚಂದ್ರವಳ್ಳಿ, ವಡಗಾ೦ವ್, ಮಾಧವಪುರದ ಮಣ್ಣಿನ ಗೊ೦ಬೆಗಳು ವೈವಿಧ್ಯಮಯವಾಗಿರುತ್ತಿದ್ದವು. ಇದಲ್ಲದೆ ಗೃಹೋಪಯೋಗಿಯಾದ ಮಣ್ಣಿನ ಕೊಡಗಳು, ದಾಸ್ತಾನಿಡುವ ದಪ್ಪನೆಯ ಹೂಜಿಗಳು, ಬೋಗುಣಿಗಳು , ಲೋಟಗಳು ವಿವಿಧ ಬಗೆಯ ಮುಚ್ಚಳಗಳು ಬಳಕೆಯಲ್ಲಿದ್ದವು ಎಂಬುದು ತಿಳಿದುಬರುತ್ತದೆ.
ಭಾರತ ಸರಕಾರವು ೧೯೫೨ರಲ್ಲಿ ಮೇಘನಾಥಶಹಾ ಅವರ ಮುಖಂಡತ್ವದಲ್ಲಿ ತನ್ನದೇ ಆದ ರಾಷ್ಟ್ರೀಯ ಪಂಚಾಂಗ ಪ್ರಾರಂಭಿಸಿತು. ಇದಕ್ಕೆ ಶಾಲಿವಾಹನ ಶಕೆಯನ್ನೇ ಆಧಾರವಾಗಿ ಉಪಯೋಗಿಸಲಾಗಿದೆ. ೧೯೫೫ರಲ್ಲಿ ಇದು ಒಪ್ಪಿಗೆಯಾಗಿ ೨೨-೦೩-೧೯೫೭ರಲ್ಲಿ ಭಾರತೀಯ ಪಂಚಾ೦ಗ ಸ್ಥಾಪಿಸಿತು. ಶಾತವಾಹನ ಶಕೆ ಮತ್ತು ಮುಸ್ಲಿಮರ ಪಂಚಾಂಗಗಳಲ್ಲಿ ಚಾಂದ್ರಮಾನ ಪದ್ಧತಿಯನ್ನು ಬಳಸಲಾಗಿದೆ. ಆದರೆ ಸೌರಮಾನ ಪದ್ಧತಿ ಹೆಚ್ಚು ನಿಖರವೆಂದು ತಿಳಿದ ಕಾರಣ ಅದನ್ನು ಜಾರಿಗೆ ತರಲಾಗಿದೆ. ಒಟ್ಟಿನಲ್ಲಿ ಕುಂಬಾರ ಜನಾಂಗದ ವೀರನೊಬ್ಬ ಶಕಪುರುಷನಾದದ್ದು ಹೆಮ್ಮೆಯ ಸಂಗತಿ.
(kulalworld.com)