ಅಸಮಾಧಾನ ಇದ್ದಲ್ಲಿ ಮಾತುಕತೆಗೆ ಸಿದ್ಧ – ಮಯೂರ್ ಉಳ್ಳಾಲ್
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಆಯ್ಕೆಯನ್ನು ಅಸಿಂಧು ಎಂದು ಹೈಕೋರ್ಟ್ ಸೂಚನೆಯ ಮೇರೆಗೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರವರಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿತ್ತು. ಅದರಂತೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಸೂಕ್ತವಾದ ತನಿಖೆ ನಡೆಸಿ ಮರು ಚುನಾವಣೆಗೆ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು , ಅಕ್ರಮ ನಡೆದಿದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಬಹುದು ಎಂದು ಹೇಳಿದೆ.

2024-26ನೇ ಸಾಲಿನ ಕುಲಾಲ ಮಾತೃ ಸಂಘದ ಚುನಾವಣೆಯು ನವೆಂಬರ್ 10ರಂದು ನಡೆದಿದ್ದು, ಸಂಘದ ಅಧ್ಯಕ್ಷರಾಗಿ ಉದ್ಯಮಿ ಮಯೂರ್ ಉಳ್ಳಾಲ ಸಹಿತ ಕಾರ್ಯಕಾರಿ ಸಮಿತಿಗೆ ಹಲವರು ಆಯ್ಕೆಗೊಂಡಿದ್ದರು. ಈ ಚುನಾವಣೆ ವಿಧಿವತ್ತಾಗಿ ನಡೆದಿಲ್ಲ, ಇಲ್ಲಿ ಚುನಾವಣಾ ಅಧಿಕಾರಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಮಂಗಳೂರಿನ ಪುರುಷೋತ್ತಮ್ ಕುಲಾಲ್, ದಯಾನಂದ ಅಡ್ಯಾರ್ ಮತ್ತು ಇತರ ಹದಿಮೂರು ಸದಸ್ಯರು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿರುವ ಹೈಕೋರ್ಟ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಅದರಂತೆ ತನಿಖೆ ನಡೆಸಿದ ಸಹಕಾರ ಸಂಘಗಳ ಉಪನಿಬಂಧಕರು ಈ ಚುನಾವಣೆಯು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಮತ್ತು ಅಕ್ರಮವಾದುದು ಎಂದು ಘೋಷಿಸಿ ಮುಂದಿನ 45 ದಿನಗಳೊಳಗೆ ಮರು ಚುನಾವಣೆ ನಡೆಸುವಂತೆ ಆದೇಶಿಸಿದ್ದರು. ಇದರ ವಿರುದ್ಧ ಮಯೂರ್ ಉಳ್ಳಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಹಕಾರ ಸಂಘಗಳ ಉಪನಿಬಂಧಕರಿಗೆ ಈ ವಿಚಾರದಲ್ಲಿ ತನಿಖೆ ನಡೆಸುವ ಮತ್ತು ಮರು ಚುನಾವಣೆ ನಡೆಸುವಂತೆ ಆದೇಶಿಸುವ ಅಧಿಕಾರ ಇಲ್ಲ, ಈ ಆದೇಶ ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿದು ಎಂದು ಮಯೂರ್ ಉಳ್ಳಾಲ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಘದ ಚುನಾವಣೆಯಲ್ಲಿ ಅಧಿಕಾರಿಗಳಾಗಿ ಸಮುದಾಯದ ಹಿರಿಯ ವಕೀಲರು ಕಾರ್ಯ ನಿರ್ವಹಿಸಿದ್ದರು. ಇಲ್ಲಿ ಸಣ್ಣಪುಟ್ಟ ಕಾನೂನಾತ್ಮಕ ಲೋಪಗಳು ಆಗಿದ್ದಲ್ಲಿ ಅದನ್ನು ಮಾತುಕತೆ ಮೂಲಕ ಪರಿಹರಿಸಲು ಸಿದ್ಧ. ಅಸಮಾಧಾನ ಇರುವವರು ಕೋರ್ಟ್ ಕಚೇರಿ ಎಂದು ಅಲೆದಾಡುವ ಬದಲು ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕಾಗಿದೆ. ಇಲ್ಲಿ ಕೋರ್ಟ್ ಗೆಲುವಿನ ಬಗ್ಗೆ ಸಂಭ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.

