ಬಾಲ್ಯದ ನೆನಪುಗಳೇ ಮಧುರ. ಅದನ್ನು ಬಣ್ಣಿಸಲು ಶಬ್ದಗಳೇ ಸಾಲದು, ಆ ಮೋಜಿನ ದಿನಗಳು ಮತ್ತೆ ಬಂದಾವೆ?.. ನೆನಪುಗಳು ಈಗಲೂ ಹಚ್ಚಹಸಿರು. ಆ ಸಂತಸದ ಕ್ಷಣಗಳ ಅಮರ ಮಧುರ ನೆನಪುಗಳ ಮೆಲುಕು ಹಾಕುವುದೆ ಒಂದು ಹಿತಕರ ಅನುಭವ. ನಮ್ಮ ಬಾಲ್ಯವನ್ನು ನಮ್ಮ ಮುಂದೆ ಹರವಿಕೊಂಡಾಗ ನಮಗೆ ಕಾಡುವ ನೆನಪುಗಳು ಹಲವಾರು. ಎಲ್ಲರೂ ತಮ್ಮ ಬಾಲ್ಯದ ಸವಿಯನ್ನು ಸವಿದವರೇ ಅಲ್ಲವೇ? ಯಾರಿಗಾದರೂ ಕೇಳಿ ನಿಮ್ಮ ಜೀವನದ ಅತಿ ಸಂತಸದ ದಿನಗಳು ಯಾವುವು? ಅಂತ, ಯಾರು ನನಗೆ ನೌಕರಿ ಸಿಕ್ಕಿದ ದಿನ, ಮದುವೆಯಾದ ದಿನ, ಪ್ರೀತಿ ಹುಟ್ಟಿದ ದಿನ ಅಂತ ಯಾರು ಹೇಳಲ್ಲ, ಎಲ್ಲರೂ ಹೇಳೋದು, ನೆನಪಿಸಿಕೊಳ್ಳೋದು ತಮ್ಮ ಬಾಲ್ಯದ ದಿನಗಳನ್ನು ತಾನೇ ?
ಹೌದು ಮನುಷ್ಯನ ಬದುಕಿನ ತುಂಬಾ ಸಂತಸದ, ಸುಖದ ದಿನಗಳು ಅಂದರೆ ಬಾಲ್ಯದ ದಿನಗಳು. ಆದರೆ ಎಲ್ಲಿ ಹೋದವು ಆ ದಿನಗಳು ಕಣ್ಣಿಗೆ ಕಾಣದಾದವು… ಕಾಲದ ತೊರೆಯಲ್ಲಿ ಮರೆಯಾಗಿ ಹೋದವೇ? ಏನೂ ತಿಳಿಯದ ಆ ಬಾಲ್ಯದಲ್ಲಿ ಆಡಿದ ತುಂಟಾಟ ಈಗ ನಮಗೆ ಮರೆತೆ ಹೋಗಿದೆ. ಯಾವಾಗಲೂ ಗಂಭೀರ ಮುಖ ಮುದ್ರೆ ಹಾಕಿ, ನಕ್ಕರೆ ಏನಾದರೂ ಆಸ್ತಿಯನ್ನು ಕಳೆದುಕೊಳ್ಳುತ್ತೇವೆ ಎಂಬ ಒಣ ಜಂಭ ನಮಗೆ. ಈ ಜಂಭದಿಂದ ನಮ್ಮವರನ್ನು, ನಮ್ಮತನವನ್ನು ದಿನೇ ದಿನೇ ಕಳೆದುಕೊಳ್ಳುತ್ತಿರುವ ಅರಿವು ನಮಗಾಗುತ್ತಿಲ್ಲ.
ನಾವು ಎಷ್ಟು ಸಾಧಿಸಿದ್ದೇವೆ, ಗಳಿಸಿದ್ದೇವೆ ಎಂದು ಬೀಗಿ ಹಿಂದೆ ತಿರುಗಿ ನೋಡಿದರೆ, ಅಲ್ಲಿ ನಮ್ಮ ಹೆಜ್ಜೆ ಗುರುತುಗಳು ಸಹ ಮೂಡಿರುವುದಿಲ್ಲ. ಕೊನೆಗೆ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸಗಳು ಅಲ್ಲವೇ? ಸಂತಸದಿಂದ ನಗುವ ಕ್ಷಣಗಳು ದೊರೆಯುವುದು ತುಂಬಾ ಕಡಿಮೆ. ಮುಖವನ್ನು ಮುಗುಮ್ಮಾಗಿ, ಗಂಭೀರವಾಗಿ ಇಟ್ಟುಕೊಂಡು ಸಾಧಿಸುವುದು ಏನು ಇಲ್ಲ. ಅದರ ಬದಲು ಖುಷಿಯಾಗಿದ್ದುಕೊಂಡು ನಮ್ಮ ಸುತ್ತಲೂ ಖುಷಿಯನ್ನು ಹಂಚಿದರೆ ಬದುಕು ಸಾರ್ಥಕವಾಗುತ್ತೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಈಗೆಲ್ಲೋ ಇದ್ದು ಜೀವನ ಸಾಗಿಸುತ್ತಿರುವ ನನಗೆ ತುಂಬಾ ನನ್ನಜ್ಜಿ ತುಂಬಾ ಉತ್ಸಾಹದಿಂದ ಮಾಡುತ್ತಿದ್ದ ವಿವಿಧ ಮಡಕೆಗಳು ಮತ್ತು ಅದನ್ನು ಮಾರಿ ಬದುಕು ಕಟ್ಟಿದ ರೀತಿ ಸ್ಮರಣೀಯ.
ನನ್ನ ಅಜ್ಜಿ ಹೆಸರು ಮರ್ಲಿ ಕುಲಾಲ್ತಿ. ಆಕೆ ಮಾಡಿದ ಮಡಕೆಯೆಂದರೆ ನಮ್ಮೂರಲ್ಲಿ ಮಾತ್ರ ಅಲ್ಲ, ಸುತ್ತ ಮುತ್ತಲ ಊರಿನಲ್ಲೂ ಪ್ರಸಿದ್ಧ. ಅವರ ಅವಿರತ ದುಡಿಮೆಯಿಂದಲೇ ಅವರ ಮೊಮ್ಮಕ್ಕಳಾದ ನಾವು ನೆಲೆಕಂಡಿದ್ದು. ಮಕ್ಕಳು ನಮ್ಮಂತೆ ಕಷ್ಟಪಡದಿರಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದ್ದರ ಫಲವಾಗಿ ಅಣ್ಣನೊಬ್ಬ ವಕೀಲಿಕೆ ಕಲಿತದ್ದು. ಇಬ್ಬರು ಅಣ್ಣಂದಿರು ಪೊಲೀಸ್ ಆಗಿದ್ದು.
ಕೋಳಿ ಕೂಗುವ ಹೊತ್ತಿಗೆದ್ದು ನನ್ನಜ್ಜಿ ಕಣ್ಣ ಚಹಾ ಕುಡಿದು ಕೊಜೆ ಮಣ್ಣನ್ನು ನೆನೆಸಿ ತುಳಿದು ಹದ ಮಾಡಿ ಅದರೊಂದಿಗೆ ಶೇಡಿ ಮಣ್ಣು ಬೆರೆಸಿ ಅದರಲ್ಲಿದ್ದ ಸಣ್ಣ ಸಣ್ಣ ಕಲ್ಜರಿಗಳನ್ನು ಆರಿಸಿ ತೆಗೆದು ಉಂಡೆ ಮಾಡಿಟ್ಟಲೆಂದರೆ ಅರ್ಧ ಕೆಲಸ ಮುಗಿದ ಹಾಗೆ. ಮುಂದಿನದು ನನ್ನ ಮಾವನ ಸರದಿ. ಎಲ್ಲಾ ಮಣ್ಣಿನ ಉಂಡೆಗಳನ್ನೆತ್ತಿ ಹಲಗೆಯಲ್ಲಿ ಜೋಡಿಸಿ ಅದರಿಂದ ಹದ ಮತ್ತು ನಯವಾದ ಮಣ್ಣನ್ನು ಕೋಲಿನಿಂದ ಆರಿಸುವುದು. ಆ ಹೊತ್ತಿಗೆ ಬೆಳಗ್ಗಿನ ಉಪಹಾರದ ಸಮಯ ಆಗಿರುತ್ತದೆ. ತಿಂಡಿ ತಿಂದ ಬಳಿಕ ನನ್ನಮ್ಮ ಶೌರಿ (ತಿಗರಿ,ಮಡಕೆ ಮಾಡುವ ಚಕ್ರ) ತಿರುಗಿಸಿದರೆ, ಅಜ್ಜಿ ಹದ ಮಾಡಿದ ಮಣ್ಣನ್ನು ಶೌರಿ ಮೇಲೆ ಹಾಕಿ ಮಡಿಕೆ ಮಾಡಲು ಕೂರುತ್ತಿದ್ದಳು. ಶೌರಿ ಬೀಸುವ ಅಮ್ಮ ಆಗೊಮ್ಮೆ ಈಗೊಮ್ಮೆ ಅನ್ನ ಬೆಂದಿದೆಯೆಂದೋ. ಭತ್ತ ತಿನ್ನುವ ಕೋಳಿಯನ್ನು ಓಡಿಸಲೆಂದೋ ಎದ್ದು ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದರೆ, ಅಜ್ಜಿ ಕುಳಿತಲ್ಲಿಂದ ಕದಲದೆ ತದೇಕಚಿತ್ತದಿಂದ ಮಡಕೆ ಮಾಡುವಲ್ಲಿ ತಲ್ಲೀನ. ಮೊಮ್ಮಕ್ಕಳಾದ ನಾವು ಅವರು ಹೇಳುವ ಮಾತು ಕೆಳುವವರಲ್ಲ. ಆದರೂ ಅಜ್ಜಿಯೆಂದರೆ ನಮಗೆ ಅದೇನೋ ಭಯ,ಭೀತಿ.
ಹೊಳು (ಹಸಿ ಮಡಕೆ) ಬಿಸಿಲಿಗೆ ಒಣಗಲು ಇಡುವಲ್ಲಿ ನಮ್ಮ ಸಹಾಯ ಅಜ್ಜಿಗೆ ಬೇಕೇ ಬೇಕು. ನಮಗಾದರೂ ಯಾಕಾಗಿ ಬೇಕಿತ್ತು ಈ ಕರ್ಮ ಎನ್ನುವ ಉದಾಸೀನತೆ. ಮಧ್ಯಾಹ್ನ ಊಟವಾದ ಬಳಿಕ ಹಿತ್ತಿಲಿನ ಮಾವಿನ ಮರದ ಕೆಳಗೆ ಆಟವಾಡಲು ಸೇರುತ್ತಿದ್ದ ನಮ್ಮ ಮಕ್ಕಳ ಬಳಗಕ್ಕೆ ಓದುವುದೆಂದರೆ ತುಂಬಾ ಅಲರ್ಜಿ. ಆದರೆ ಅಜ್ಜಿ ,ಅಮ್ಮ ಮಡಿಕೆ ಒಣಗಿಸಲು `ಸಹಾಯಕ್ಕೆ ಬನ್ರಪ್ಪ ‘ ಅಂದರೆ ಸಾಕು, ತಕ್ಷಣ ಮನೆಗೆ ಓಡಿ ಪುಸ್ತಕ ಕೈಗೆತ್ತಿಕೊಂಡು ಓದುವ `ನಾಟಕ ‘ ವಾಡುತ್ತಾ, `ನಾಳೆ ಪರೀಕ್ಷೆ ಇದೆ ಅಜ್ಜಿ’ ಎಂದು ಸುಳ್ಳು ಹೇಳುತ್ತಿದ್ದೆವು. ಆಗ ಅಜ್ಜಿ `ಮಗಾ…ಬೈಂದೂರಿನ ಶುಕ್ರವಾರದ ಸಂತೆಯಲ್ಲಿ ನಿಮಗೆ ಉಪ್ಪಿಟ್ಟು, ಶಂಕ್ರಪೋಳಿ ತೆಗ್ಸಿ ಕೊಡ್ತೆ’ ಎಂದು ಪುಸಲಾಯಿಸುತ್ತಿದ್ದಳು. ಆಗ ನಮ್ಮ ನಾಲಗೆಯಲ್ಲಿ ನೀರೂರಿ, ಕೆಲ್ಸಕ್ಕೆ ಮುಂದಾಗುತ್ತಿದ್ದೆವು. ಬಾಕಿ ಉಳಿದ ಮಣ್ಣಿನಿಂದ ನಾವೆಲ್ಲಾ ಚಿಕ್ಕ ಚಿಕ್ಕ ದೀಪ, ಗೊಂಬೆ ತಯಾರಿಸಿ ಕುಣಿದಾಡುತ್ತಿದ್ದೆವು.
ಒಣಗಿದ ಮಡಿಕೆಗಳನ್ನು ಬಡಿದು ಆಕಾರ ಮಾಡುವುದೂ ಅಜ್ಜಿ ಮತ್ತು ಅಮ್ಮನ ಕೆಲಸ. ಇಬ್ಬರೂ ಮಡಿಕೆ ಬಡಿಯಲು ಕುಳಿತರೆ ಕೆಲವೊಮ್ಮೆ ನಾವು ಶಾಲೆಯಿಂದ ಬರುವವರೆಗೂ ಕೆಲಸ ಮುಗಿಯದೆ ಮಧ್ಯಾಹ್ನ ಊಟಕ್ಕೆ ಪಲ್ಯವನ್ನೂ ಮಾಡಿರುವುದಿಲ್ಲ. ಮಾಡಿಟ್ಟ ಅಷ್ಟೂ ಮಡಿಕೆ ಬಡಿಯದೇ ಅವರಿಗೆ ಉಪಾಯವಿಲ್ಲ. ಬಡಿಯುವ ಮುನ್ನ ಅದು ಒಣಗಿದರಂತೂ ಉಪಯೋಗವಿಲ್ಲದೆ ಮಾಡಿದ ಕೆಲಸವೆಲ್ಲಾ ವ್ಯರ್ಥ. ಹೀಗಾಗಿ ಆಗೆಲ್ಲ ನಮಗೆ ಉಪ್ಪಿನಕಾಯಿಯೇ ಗತಿ. ಆಗೆಲ್ಲ ನಮಗೆ ಮಡಿಕೆ ಮೇಲೆ ಕೆಂಡದಂಥ ಕೋಪ ಬಂದು ಅಜ್ಜಿಯನ್ನೆಲ್ಲ ಶಪಿಸುತ್ತಿದ್ದೆವು. ಆದರೆ ಅದೇ ನಮ್ಮ ಬದುಕಿನ ಬಟ್ಟಲು ಎನ್ನುವುದು ಆಗ ನಮಗೆಲ್ಲಿ ಗೊತ್ತಿತ್ತು ?
ಹೀಗೆ ಅಜ್ಜಿ, ಅಮ್ಮ, ಮಾವನಿಗೆ ವಾರಪೂರ್ತಿ ನಿರಂತರ ಕೆಲಸ. ಪ್ರತಿ ಗುರುವಾರದಂದು ಮಡಿಕೆಯನ್ನು ಐಗೆ ಶಾಲೆ (ಮಡಿಕೆಯನ್ನು ಸುಡಲು ಮಾಡಿದ ಮನೆ )ಯಲ್ಲಿ ಇಟ್ಟು ಬೇಯಿಸುವ ಕಾರ್ಯ. ಮಡಿಕೆಗಳನ್ನು ಒಂದಕ್ಕೊಂದು ಜೋಡಿಸಿ ಅದರ ಮೇಲೆ ಕಲಸಿದ ಮಣ್ಣನ್ನು ಲೇಪಿಸಿ, ಒಲೆಗೆ ಬೆಂಕಿ ಹಚ್ಚುವುದು. ಅದು ಭಗ ಭಗನೆ ಉರಿದು ಆಗೊಮ್ಮೆ, ಈಗೊಮ್ಮೆ `ಪಟ್ ಫಟಾರ್’ ಎಂದು ಶಬ್ದ ಬರುವುದುಂಟು. ಆಗೆಲ್ಲ ನಮ್ ಮಾವ `ಅಕ್ಕಾ ..ಮಡ್ಕಿ ಓಡೀತ್’ ಎಂದು ರಾಗ ಎಳೆದರೆ, ಅಜ್ಜಿ-ಅಮ್ಮ ನಿಗೆ ಮನದೊಳಗೆ ಸಂಕಟ. ಆಗೆಲ್ಲ ಅದೇನೆಂದು ನಮಗೆ ಅರ್ಥವಾಗದಿದ್ದರೂ ಅವರ ನೋವಿನಲ್ಲಿ ನಮಗೂ ಪಾಲಿತ್ತು.
ಮರುದಿನ ಕೋಳಿ ಕೂಗುವ ಹೊತ್ತಿಗೆ ಎದ್ದು ಐಗೆ ಶಾಲೆಯಿಂದ ಮಡಿಕೆ ತೆಗೆಯುವ ಕೆಲಸ. ಆಗೆಲ್ಲ ಚಿಕ್ಕ ಮಕ್ಕಳಾದ ನಾವು ಹಿರಿಯರಿಗಿಂತಲೂ ಬೇಗನೆ ಎದ್ದು, ನಾಮುಂದೆ-ತಾಮುಂದು ಎಂದು ಓಡಿ ಐಗೆಯಲ್ಲಿ ನಾವಿಟ್ಟಿದ್ದ ಚಿಕ್ಕ ದೀಪ, ಗೊಂಬೆಗಳು ಬೆಂದಿದೆಯಾ ಎಂದು ನೋಡುವ ಕುತೂಹಲ.
ಶುಕ್ರವಾರ ಬಂತೆಂದರೆ ನಮಗೆ ಎಲ್ಲಿಲ್ಲದ ಖುಷಿ.. ಅಂದು ಶಾಲೆಗೆ ಚಕ್ಕರ್. ಅಜ್ಜಿ-ಅಮ್ಮನ ಜೊತೆ ಬೈಂದೂರಿನ ಸಂತೆಗೆ ನಡೆಯುವುದು. ನಮ್ಮನೆಯಿಂದ ಸಂತೆಗೆ ಸುಮಾರು ಹತ್ತು ಕಿ ಮೀ ದೂರ. ಅಲ್ಲಿವರೆಗೆ ಕಾಲ್ನಡಿಗೆಯಲ್ಲೇ ಮಡಿಕೆ ಹೊತ್ತು ಸಾಗಬೇಕು. ಆಗೆಲ್ಲ ನಮಗೆ ನಡೆಯುವುದೆಂದರೆ ಈಗಿನ ಥರ ಉದಾಸೀನತೆ ಇಲ್ಲದೆ ಏನೋ ಹುರುಪು. ಈಗೆಲ್ಲ ಮಾರು ದೂರ ನಡೆದಾಗಲೂ ಹಿಂದಿನದ್ದೆಲ್ಲ ನೆನೆದು `ಅಬ್ಭಾ’ ಎಂದೆನಿಸುತ್ತದೆ.
ದೂರದಲ್ಲಿ ಬೈಂದೂರಿನ ಸೇತುವೆ ಕಾಣಿಸುತ್ತಿದ್ದಂತೆ ನಮಗೆ ಸ್ವರ್ಗ ಸಿಕ್ಕಂಥಾಗುತ್ತಿತ್ತು. ಯಾಕೆಂದರೆ ಅದರ ಸ್ವಲ್ಪ ದೂರದಲ್ಲೇ ಸಂತೆ. ಮಡಿಕೆ ತಲೆಯಿಂದಿಳಿಸಿದ ಕೂಡಲೇ ಎರಡ್ಮೂರು ಮಡಿಕೆಯಾದರೂ ವ್ಯಾಪಾರ ಆಗಿರುತ್ತಿತ್ತು. ಆಗಲೇ ಅಜ್ಜಿಯ ಸೆರಗು ಹಿಡಿದು ಹಟಮಾಡಿ, ದುಡ್ಡು ಕಸಿದು ಪಕ್ಕದಲ್ಲಿರುವ ಭಟ್ಟರ ಹೋಟೆಲಿಗೆ ನುಗ್ಗಿ ಇಡ್ಲಿ-ಸಾಂಬಾರ್ ಮುಕ್ಕುತ್ತಿದ್ದೆವು. ಬೆಳಗ್ಗಿನಿಂದ ಸಂಜೆ ನಾಲ್ಕರವರೆಗೆ ಮಡಿಕೆ ವ್ಯಾಪಾರ.. ಆ ಬಳಿಕ ವ್ಯಾಪಾರವಾಗದೆ ಉಳಿದ ಮಡಿಕೆಯನ್ನು ಭಟ್ಟರ ಹೋಟೆಲಿನ ಮೂಲೆಯಲ್ಲಿಟ್ಟು, ಅಜ್ಜಿಯ ಚೀಲ ತುಂಬಾ ಹಸಿ ಮೀನು, ಒಣ ಮೀನು, ಮೆಣಸು, ತರಕಾರಿ ಹೀಗೆ ಮನೆಗೆ ವಾರಕ್ಕೆ ಬೇಕಾಗುವಷ್ಟು ಸಾಮಾನಿನೊಂದಿಗೆ ಊರಿನ ಬಸ್ ಹತ್ತುವುದು. ಅಜ್ಜಿಯ ಸಂಚಿಯಲ್ಲಿ `ಝಣ ಝಾಣ’ ಎಂದು ಸದ್ದು ಮಾಡುತ್ತಿದ್ದ ಚಿಲ್ಲರೆಯನ್ನು ನೋಡಿ ಮನೆ ಮಂದಿಗೆ ಸಾರ್ಥಕತೆಯ ಭಾವ.
ಸಂತೆಯಷ್ಟೇ ಅಲ್ಲದೆ ಅಕ್ಕಪಕ್ಕದ ಊರಿಗೆಲ್ಲಾ ನನ್ನಜ್ಜಿಯೇ ಮಣ್ಣಿನ ಪಾತ್ರೆಗಳ ಸರಬರಾಜುಗಾರ್ತಿ. `ಮರ್ಲಿಯ ಮಡಿಕೆ ತುಂಬಾ ನಾಜೂಕಾಗಿರುತ್ತೆ ‘ ಎಂಬ ವಿಶೇಷಣೆಯೂ ಅಜ್ಜಿಗೆ ಸಿಗುತ್ತಿತ್ತು. ಆದರೆ ಮಡಿಕೆ ಬದಲಿಗೆ ಸಿಗುತ್ತಿದ್ದುದು ಚೀಲ ತುಂಬಾ ತೆಂಗಿನಕಾಯಿ, ಒಣಮೀನು, ಉದ್ದು, ಅವಡೆ, ನೆಲಗಡಲೆ…(ಒಂಥರಾ..ಬಾರ್ಟರ್ ಸಿಸ್ಟಂ) ಅಜ್ಜಿ ಹಾಗೂ ಆಕೆ ಮಾಡುತ್ತಿದ್ದ ಮಡಿಕೆ ಇರುವಷ್ಟು ದಿನ ಮೂರ್ಹೊತ್ತಿನ ಊಟಕ್ಕೇನೂ ಮನೆಯಲ್ಲಿ ಬರ ಬರಲಿಲ್ಲ.
ನನ್ನಜ್ಜಿ ಗತಿಸಿ ಇಂದಿಗೆ ದಶಕಗಳೇ ಕಳೆದಿವೆ. ಈಗ ಮೊಮ್ಮಕ್ಕಳಾದ ನಾವು ಬೇರೆ ಬೇರೆ ಉದ್ಯೋಗ ಅರಸಿ ದೇಶ, ವಿದೇಶಗಳಿಗೆ ಬಂದಿದ್ದೇವೆ. ಆದರೆ ನನ್ನಜ್ಜಿ ಮತ್ತು ಅವರು ಮಾಡುತ್ತಿದ್ದ ಮಡಿಕೆಗಳು ನನ್ನ ಮನದಲ್ಲಿ ಇಂದಿಗೂ ಮನದಲ್ಲಿ ಹಚ್ಚ ಹಸುರಾಗಿದೆ. ನನ್ನಜ್ಜಿ ಒಂದು ಪುಸ್ತಕವೂ ಓದಲಿಲ್ಲ. ಆದರೆ ಅವಳು ಹೇಳಿ ಕೊಟ್ಟ ಜೀವನ ಪಾಠಗಳು ಯಾವ ಪುಸ್ತಕದಲ್ಲೂ ಸಿಗುವುದಿಲ್ಲ. ಅಂದು ಅಜ್ಜಿ ತೋರಿದ ಪ್ರೀತಿ, ಜೊತೆಗೆ ಅವರು ನಮ್ಮನ್ನು ತಿದ್ದಿದ ರೀತಿ ಚಿರಸ್ಮರಣೀಯ. ಇದನ್ನೆಲ್ಲಾ ಮರೆತೇನೆಂದರೆ ಮರೆಯಲಿ ಹೇಗೆ ? ಬರಬಾರದೆ ಮತ್ತೂಮ್ಮೆ ಆ ಬಾಲ್ಯ..?
ಬರಹ : ಜ್ಯೋತಿ ಡಿ. ಇರ್ವತ್ತೂರು