ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ, ಸ್ಟೀಲು ಮುಂತಾದ ಪಾತ್ರೆಗಳನ್ನು ಮಡಕೆ ಅನ್ನೋದೆ ಇಲ್ಲವಾದ್ದರಿಮದ ಇನ್ನಿನ್ನು ‘ಮಡಕೆ’ ಯೂ ಮರೆತು ಹೋಗಲೂಬಹುದು. ಹಿಂದೆಲ್ಲ ಅಡುಗೆ ಮನೆಯಲ್ಲಿ ಒಲೆಗೆ ಎಸರಿಡುವುದಿತ್ತು. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಎಸರಿನ ಮಡಕೆ ಒಲೆಯ ಮೇಲೆ ಕುಳಿತುಕೊಳ್ಳುತಿತ್ತು. ಎಸರಿನಲ್ಲಿ ಅಕ್ಕಿ ಬೆಂದು ಅನ್ನವಾಗುತಿತ್ತು.ಎಸರಿನ ಮಡಕೆಯನ್ನು ಅಷ್ಟೇ ಜಾಗ್ರತೆಯಲ್ಲಿ ತೊಳೆಯುವುದು ನಿತ್ಯದ ಕಾಯಕವಾಗಿರುತಿತ್ತು.ಪ್ರತಿ ಮನೆಯಲ್ಲು ಕೂಡಾ ಎಸರಿನ ಮಡಕೆ ಎರಡು ಇದ್ದೇ ಇರಬೇಕು.ಬೆಳಿಗ್ಗೆಯ ಮಡಕೆ ಸಂಜೆಗೆ ಉಪಯೋಗಿಸುವಂತಿಲ್ಲ.ಅದನ್ನು ಸಂಜೆ ನಾಲ್ಕು ಗಂಟೆ ಹೊತ್ತಿಗೆ ಚೆನ್ನಾಗಿ ತೊಳೆದು ಅಂಗಳದಲ್ಲಿನ ಒಂದು ಮೂಲೆಯಲ್ಲಿ ಅಥವಾ ವಿಶಾಲವಾಗಿರುತಿದ್ದ ಒಲೆದಂಡೆಯ ಒಂದು ಮೂಲೆಯಲ್ಲಿ ಕೆಳಮುಖಮಾಡಿ ಗೋಡೆಗೆ ಒರಗಿಸಿಟ್ಟು ಇಡುವುದು. ನೀರಿಳಿದು ತೇವ ರಹಿತವಾಗಿ ಬೆಚ್ಚಗಾಗುವುದರಿಂದ ಮಣ್ಣಿನ ಮಡಕೆ ಬಾಳಿಕೆ ಬರುತ್ತದೆ ಮತ್ತು ಬೇಯಿಸಿದ ಅನ್ನ ಹಳಸುವುದಿಲ್ಲ.
ಈ ಮಡಕೆಯಲ್ಲಿ ಅನ್ನ ಹೊರತು ಬೇರೇನೂ ಬೇಯಿಸುವುದಿಲ್ಲ. ಅಂಥದ್ದಾದರೆ ಅನಿವಾರ್ಯವಾದಾಗ ಪಾಯಸ ಮಾಡುವುದುಂಟು. ಮಡಕೆಗಳು ಕೂಡಾ ಒಂದು ಸೇರು ಎರಡು ಸೇರು ಅಕ್ಕಿ ಬೇಯುವ ಗಾತ್ರದವುಗಳಾಗಿರುತಿತ್ತು. ಕೆಲಸದವರು ಊಟಕಿದ್ದರೆ ಅಥವಾ ನೆಂಟರಿಷ್ಟರು ಬರುವವರಿದ್ದಾರೆ ಎಂದಾದಾಗ ಎರಡು ಎರಡೂವರೆ ಸೇರು ಅಕ್ಕಿ ಬೇಯಿಸುವ ಅನ್ನದ ಮಡಕೆಯನ್ನೆ ಎಸರಿಗೆ ಇಡುವುದು.ಅದನ್ನು ಕೂಡಾ ಕೆಳಗೆ ಇಳಿಗಿಸಿ ಮರದ ಬೋಗುಣಿಗೆ ಬಸಿಯುತಿದ್ದರು ಅಮ್ಮಂದಿರು. ಆದರೆ ಈಗಿನ ಹೆಂಡಂದಿರಿಗೆ ಸಣ್ಣದಾದ ಕುಕ್ಕರ್ ಕೆಳಗಿಳಿಸಿಲಿಕ್ಕೂ ‘ ಇಲ್ಲಿ ಬನ್ನಿ ಪ್ಲೀಸ್..’ ಎಂಬ ಧ್ವನಿ ಕೂಗಿ ಬರುತ್ತದೆ !
ಅನ್ನಬೇಯಿಸುವುದಕ್ಕೆಂದು ಮಡಕೆಯಲ್ಲಿ ನೀರುಡುವುದಕ್ಕೆ ಎಸರು ಎಂದು ಯಾಕೆ ಹೇಳಬೇಕು? ಹೌದು. ಎಸರು ಎಂದರೆ ನೀರು ಎಂದರ್ಥ.ಅದು ಶುದ್ಧ ಕನ್ನಡ ಪದ . ಒಲೆಯ ಮೇಲೆ ಎಸರು ಮಡಕೆ ಇಟ್ಟಿದೆಯೆಂದಾದರೆ ಸಣ್ಣ ಪುಟ್ಟ ಮಕ್ಕಳು ಒಲೆ ಬಾಗಿಲ ಹತ್ತಿರ ಹೋಗಲಿಕ್ಕಿಲ್ಲ. ಮಣ್ಣಿನ ಮಡಕೆ ಬಿರುಕು ಬಿಟ್ಟಿದ್ದರೂ ಗೊತ್ತಾಗುವುದಿಲ್ಲ ಹಾಗಾಗಿ ಕೆಲವೊಮ್ಮೆ ಒಲೆ ಮೇಲಿದ್ದ ಮಡಕೆ ಬಿಚ್ಚಿಕೊಂಡು ಹೋಳಾಗುವುದುಂಟು.ಅಂಥದ್ದಾದರೆ ಹತ್ತಿರವಿದ್ದವರ ಪರಿಸ್ಥಿತಿ ಅಪಾಯಕಾರಿ.ಅಪರೂಪದಲ್ಲಿ ಸಾವಿರಕ್ಕೊಂದು ಘಟನೆ ಸಂಭವಿಸಿದ್ದೂ ಇದೆ. ಆ ಕಾರಣಕ್ಕಾಗಿ ಮಡಕೆಯನ್ನು ಚೆನ್ನಾಗಿ ಕಾಯಿಸುವುದು,ದಿನಾ ಎರಡು ಹೊತ್ತು ಒಂದೇ ಮಡಕೆಯಲ್ಲಿ ಎಸರಿಡದಿರುವುದು.ಒಟ್ಟಿನಲ್ಲಿ ಗೃಹಿಣಿಯರ,ತಾಯಂದಿರ ಮುಂಜಾಗ್ರತೆ.
ಬೆಳಿಗ್ಗೆ ಎಸರು ಮಡಕೆಯನ್ನು ಒಲೆಗಿಟ್ಟಾಗ ಅದಕ್ಕೆ ನಮಸ್ಕರಿಸುವ ಶೃದ್ಧಾ ಭಕ್ತಿಯಂತೂ ಅಪಾರ.ಅಕ್ಷಯ ಪಾತ್ರೆಯಾಗಿ ಉಳಿಯಲಿ ಎಂದೇ ಅವರ ಭಕ್ತಿ. ಇನ್ನು ಅಕ್ಕಿ ಬೆಂದ ಮೇಲೆ ಮಡಕೆಯನ್ನು ಒಲೆಯಿಂದ ಕೆಳಗಿಳಿಸುವುದಕ್ಕೆ ಮುಂಚೆಯೂ ಎರಡೂ ಕೈಗಳನ್ನು ಮಡಕೆಗೆ ಮುಟ್ಟಿಸಿ ನಂತರ ಹಣೆಗೊತ್ತಿ ಮಸಿವಸ್ತ್ರದಲ್ಲಿ ಮಡಕೆ ಹಿಡಿದು ಕೆಳಗಿಳಿಡುವುದು.ಇದೆಲ್ಲ ಯಾಕಮ್ಮಾ ಅಂಥ ಕೇಳುವುದಕ್ಕೇ ಇಲ್ಲ, ನೋಡುವಾಗಲೇ ಗೊತ್ತಾಗುತ್ತದೆ ಅನ್ನದ ಮಡಕೆ, ಒಂದು ಕುಟುಂಬದ ಹೊಟ್ಟೆಗೆ ಅನ್ನ ಉಣಿಸುವ ಜವಾಬ್ದಾರಿ ಎಂಬುದು. ಅನ್ನ ಬಸಿಯುವುದಕ್ಕೂ ಶಿಸ್ತು ಇತ್ತು.ಕುಳಿತುಕೊಂಡು ಬಸಿಯಬಾರದು. ನಿಂತಲ್ಲಿಂದಲೇ ಬಾಗಿಕೊಂಡು ಬಸಿಯಬೇಕು.ಇದೆಲ್ಲ ಮುಂಜಾಗ್ರತೆಯ ಕಾರಣಕ್ಕಾಗಿ. ಅದಕ್ಕೆಂತೆಲೇ ಹಿರಿಯರಲ್ಲಿ ಮಾತು ಇತ್ತು, ” ಒಬ್ಬಳು ಕೂತು ಅನ್ನ ಬಸಿದು ಎಲ್ಲಾ ಸುಟ್ಟುಕೊಂಡಿದ್ದಾಳಂತೆ ” .
.
ಎಸರಿಟ್ಟಮೇಲೆ ಅದು ಜಾಸ್ತಿ ಹೊತ್ತು ಕೊತಕೊತ ಕುದಿಯುತ್ತಿರಬಾರದು.ಒಂದು ಕುದಿ ಬಂದಾಗಲೇ ತೊಳೆದು ಗಾಳಿಸಿ ಇಟ್ಟಿದ್ದ ಅಕ್ಕಿಯನ್ನು ಮಡಕೆಗೆ ಸುರಿಯಬೇಕು.ಅದರಲ್ಲೂ ಸಂಜೆಯ ಎಸರಂತೂ ಕುದಿಯುತ್ತಲೇ ಇರಬಾರದು.ಎಸರಿಗೆ ಅಕ್ಕಿ ಸುರಿಯುವುದಕ್ಕೆ ಮೊದಲು ಅದರಿಂದ ಸುಮಾರು ಮೂರು ತಂಬಿಗೆಯಷ್ಟನ್ನು ನೀರು ತೆಗೆದು ಬೇರೆ ಮಡಕೆಯಲ್ಲಿ ತುಂಬಿಸಿಡಲಿಕ್ಕುಂಟು.ಅಕ್ಕಿ ಬೇಯುತ್ತ ಬಂದಂತೆ ತಿಳಿ ನೀರು ಕಡಿಮೆಯಾಗುತ್ತದೆ ಆಗ ಸ್ವಲ್ಪ ಸ್ವಲ್ಪನೆ ಹೊಯ್ಯಲಿಕ್ಕೆ ಇದು ಬೇಕು. ತಣ್ಣೀರನ್ನು ಸುರಿಯುವಂತಿಲ್ಲ,ಹಾಗೆ ಬೇಯಿಸಿದರೆ ಉಂಡವರಿಗೆ ಕೆಮ್ಮು, ಶೀತ ಬರುತ್ತದೆ.ಇನ್ನೊಂದು ಅರ್ಥದಲ್ಲಿ ಬೇಯುತ್ತಿರುವಾಗ ತಣ್ಣೀರನ್ನು ಸುರಿದರೆ ಕುದಿ ನಿಂತು ಬಿಡುತ್ತದೆ.
.
ಕೆಲವೊಮ್ಮೆ ಮನೆಯಲ್ಲಿ ಬೆಳಿಗ್ಗೆ ಯಾರಿಗಾದರೂ ಬೇಗನೆ ಊಟ ಮಾಡಬೇಕಾದಾಗ ಬೇಯುತ್ತಿರುವಲ್ಲಿಂದಲೇ ಕೌಲು ( ಸೌಟು) ಹಾಕಿ ಗಂಜಿ ತೆಗೆದರೂ ಅದನ್ನು ನೇರವಾಗಿ ಊಟದ ತಟ್ಟೆಗೆ ಹಾಕಿಕೊಳ್ಳುವಂತಿಲ್ಲ ಅಥವಾ ಹಾಕಿ ಕೊಡಲೂಬಾರದು. ಒಂದು ಬೋಗುಣಿಗೆ ಹಾಕಿ ನಂತರ ಊಟದ ತಟ್ಟೆಗೆ ಹಾಕಬೇಕು. ಗಂಡು ಮಕ್ಕಳಿಗೆ ಹೀಗೆ ಇದು ಕಡ್ಡಾಯ.ಯಾಕೆಂದರೆ ಹಾಗೆನೆ ನೇರವಾಗಿ ಹಾಕಿಕೊಂಡು ಊಟಮಾಡಿದರೆ ಎದೆಯಲ್ಲಿ ಪುಕ್ಕಲುತನದ ಬಡಿತ ಜಾಸ್ತಿಯಾಗುತ್ತದೆಯಂತೆ. ಅನ್ನ ಕುದಿಯುವಂತೆಯೆ ಎದೆ ಕೂಡಾ ಬಡಿದಾಡುವುದಂತೆ.ಗಂಡು ಮಕ್ಕಳು ಕೋರ್ಟು ಕಛೇರಿಗೆ ,ಸೇನೆಗೆ ಹೋಗುವವರಲ್ಲವೇ? ಎಂಬುದು ತಾಯಂದಿರ ಅಭಿಪ್ರಾಯ.
.
ಅನ್ನ ಬಸಿಯುವಾಗ ಮಡಕೆಯ ಬಾಯಿಗೆ ಇಡುವ ಮರದ ತಾಟು ಮತ್ತು ತಿಳಿ ಇಳಿಸುವ ಸಪೂರವಾದ ಬೀಳಲಿನಿಂದ ತಯಾರಿಸುವ ಸಿಬ್ಬಲವನ್ನುಮರದ ತಾಟಿನ ಅಡಿಯಲ್ಲಿಟ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದರೂ ಸಹ ಅದರ ಸುತ್ತಿಂದಲು ಹೊರ ಸೂಸುವ ಹಬೆ ಕೈಗೆ ಬಿಸಿಯಾಗುತ್ತದೆ. ಮಸಿವಸ್ತ್ರ( ಕೈ ವಸ್ತ್ರ) ವನ್ನುಮಡಕೆ ಬಾಯಿಗೆ ಸುತ್ತಿಟ್ಟು ಹಿಡಿದುಕೊಳ್ಳುವುದು ಸರಿಯಾಗಿಲ್ಲವಾದರೆ ಕೈ ಜಾರಿ ಗಂಜಿ ತಿಳಿ ಒಟ್ಟಿಗೇ ಎದುರು ಮೈಮೇಲೆ ಬೀಳುವ ಪರಿಸ್ಥಿತಿ. ನಿಂತು ಬಾಗಿಕೊಂಡು ಈ ಕೆಲಸ ಮಾಡಿದರೆ ಏನೇ ಹೆಚ್ಚು ಕಡಿಮೆಯಾದರೂ ಅದು ಕಾಲಿಗೇ ಸೀಮಿತವಾಗುತ್ತದೆ ಅಥವಾ ಫಕ್ಕನೆ ಕಾಲನ್ನು ಸರಿಸಿಕೊಳ್ಳಲಿಕ್ಕೂಆಗುತ್ತದೆ. ಕೂತರೆ ತಕ್ಷಣ ಏಳುವುದಕ್ಕಾಗಲಿ ಬದಿಗೆ ಸರಿದುಕೊಳ್ಳಲಿಕ್ಕೂ ಆಗುವುದಿಲ್ಲ, ಅಪಾಯ ಕಟ್ಟಿಟ್ಟ ಬುತ್ತಿ.
ಎಸರಿನ ಬಗ್ಗೆ ಇನ್ನು ಕೆಲವು ಶೃದ್ಧಾ ಭಕ್ತಿಯಿದೆ.ಒಲೆಗೆ ಎಸರಿಟ್ಟಾಗಿದೆ. ಏನೋ ಕಾರಣಕ್ಕಾಗಿ ಬೇರೆ ಹೊರಡಲಿಕ್ಕಿದೆ,ಮನೆಯಲ್ಲಿ ಊಟಮಾಡುವುದಕ್ಕಿಲ್ಲ ಎಂದು ಗೊತ್ತಾದರೆ ಅದನ್ನು ಹಾಗೆಯೇ ಇಳಿಸಿಡಲಿಕ್ಕಿಲ್ಲ.ನಾಲ್ಕು ಅಕ್ಕಿ ಕಾಳು ಹಾಕಿಯೇ ಕೆಳಗಿಡಬೇಕು.ಅದಲ್ಲದಿದ್ದರೆ ಅಲ್ಲಿಯೇ ಇರುವ ನಾಲ್ಕು ತಂಗಳನ್ನವಾದರೂ ಸೈ , ಒಟ್ಟಾರೆ ಎಸರನ್ನು ಹಾಗೇ ಇಳಿಸಬಾರದು.ಅದು ಅಕ್ಷಯ ಪಾತ್ರೆಯಲ್ಲವೇ?
ಆಗಿನದು ಬೆಳಗ್ಗೆ ಎದ್ದ ಕೂಡಲೆ ಗ್ಯಾಸ್ ಸ್ಟೌವ್ ಹಚ್ಚಿ ಬೆಡ್ ಕಾಫಿ ಕುಡಿಯುವ ಕಾಲವಲ್ಲವಾಗಿತ್ತು. ಎದ್ದವಳು ಒಲೆಯ ಬೂದಿ ತೆಗೆದು ಒಲೆದಂಡೆಯನ್ನು ಪೂರ್ತಿಯಾಗಿ ಒದ್ದೆ ಬಟ್ಟೆಯಿಂದ ಒರೆಸಿ ಸ್ವಚ್ಚ ಮಾಡಬೇಕು.ಹಾಗೆಯೇ ಅಡುಗೆ ಮನೆಯ ನೆಲವನ್ನು ಪೂರ್ತಿ ಒದ್ದೆ ಬಟ್ಟೆಯಿಂದ ಒರೆಸಬೇಕು.ನಂತರ ಒಲೆಗೆ ಎಸರು ಮಡಕೆ ಇಟ್ಟು ಬೆಂಕಿ ಉರಿಸಿವುದು ವಾಡಿಕೆ ಕ್ರಮ. ಕಾಫಿ, ಚಾ ಇತ್ಯಾದಿ ಏನೇ ಮಾಡುವುದಕ್ಕಿದ್ದರೂ ಇನ್ನೊಂದು ಒಲೆ ಇರುತಿತ್ತು, ಅಷ್ಟೇ ಅಲ್ಲ ಕೋಡು ಒಲೆ ಕೂಡಾ ಇರುತಿತ್ತು. ಶಿವನಿಗೆ ಹಣೆಯಲ್ಲಿ ಕಣ್ಣು ಇದ್ದ ಹಾಗೆ ವಿಶಾಲವಾದ ಒಲೆದಂಡೆಯಲ್ಲೊಂದು ಸಣ್ಣ ಒಲೆ.ಎರಡು ಒಲೆಗಳ ಸಮಾನ ರೇಖೆಯಲ್ಲಿರದೆ ಸ್ವಲ್ಪ ಹಿಂದೆ ಇರುತ್ತದೆ. ಈ ಒಲೆಗೆ ಬೆಂಕಿಯ ಕೆನ್ನಾಲಗೆ ಮಾತ್ರವಷ್ಟೇ ಒಂದು ಒಲೆಯಿಂದ ಅತ್ತ ಚಾಚುತ್ತಿರುತ್ತದೆ. ಒಂದು ಒಲೆಯ ಮೂಲೆಯಲ್ಲಿ ಅದಕ್ಕಾಗಿ ದ್ವಾರ ಕೊರೆದಿರುತ್ತದೆ. ಈ ಒಲೆಯ ಮೇಲೆ ನೀರು ಕಾಯಿಸಬಹುದು,ಪಲ್ಯ ಮುಂತಾದುವನ್ನು ಬೇಯಿಸಬಹುದು, ಬಿಸಿಗಿಡಬಹುದು. ಉಳಿದ ಸಮಯದಲ್ಲಿ ಚಿಕ್ಕ ಗಡಿಗೆಯಲ್ಲಿ ನೀರು ಇಟ್ಟರೆ ಬಿಸಿಯಾಗುತ್ತ ಇರುತ್ತದೆ.
ಈಗ ಎಲ್ಲಾ ಮನೆಗಳಲ್ಲಿ ಬೆಳಿಗ್ಗೆ ಎಸರು ಮಡಕೆ ಒಲೆಗೆ ಇಡುವ ಪದ್ಧತಿ ಮಾತ್ರ ಮಾಯವಾಗಿದೆ. ಅಂಥದ್ದಾದರೆ ನೂರಕ್ಕೆ ಒಂದೆರಡು ಮನೆಗಳಲ್ಲಿ ಇರಬಹುದು.ಅಲ್ಯೂಮಿನಿಯಂ ಚೆರಿಗೆಯಲ್ಲಿ ಇಷ್ಟ ಬಂದ ಹೊತ್ತಲ್ಲಿ ಬೇಯಿಸುವುದು. ಗಂಜಿಯಾದರೆ ಗಂಜಿ, ಅನ್ನ ಬೇಕಾದರೆ ಅದನ್ನು ತೂತುಗಳಿರುವ ಬೋಗುಣಿಗೆ ಹಾಕಿದರೆ ಮುಗಿಯಿತು.ಅನ್ನ ಬಸಿಯುವುದೇ ಗೊತ್ತಿಲ್ಲ.ನೂರಕ್ಕೆ ಕೆಲವೇ ಮನೆಗಳಲ್ಲಿ ಮಣ್ಣಿನ ಮಡಕೆಯನ್ನು/ಅಲ್ಯೂಮಿನಿಯಂ ಮಡಕೆಯನ್ನೊ ಮರದ ಮರಿಗೆಗೆ ಅಥವಾ ಅಗಲ ಬಾಯಿಯ ಪಾತ್ರೆಗಿಟ್ಟು ಬಸಿಯುತ್ತಾರೋ ಏನೋ. ಅನ್ನಕ್ಕೆ ಎಸರಿಡು ಎಂದು ಹೇಳುವವರೆಲ್ಲ ತೀರಿ ಹೋಗಿದ್ದಾರೆ. ಈಗಿರುವವರೆಲ್ಲ “ಚಾ ಮಾಡಿದ್ಯೆನೇ ಮಗಳೇ..” ಅಂತ ಮಂಚದಲ್ಲೇ ಮಲಗಿಕೊಂಡು ರಾಗ ಎಳೆಯುವವರು.
– ವಿ.ಕೆ.ವಾಲ್ಪಾಡಿ, ಮೂಡಬಿದ್ರೆ