ಜಾಗತೀಕರಣದ ಬಿರುಗಾಳಿಗೆ ಕುಲಕಸುಬುಗಳು ಕಣ್ಮರೆಯಾಗಿವೆ. ಅವುಗಳನ್ನೇ ಅವಲಂಬಿಸಿದ್ದ ಕರಕುಶಲಕರ್ಮಿಗಳ ಬದುಕು ಈಗ ಸೂತ್ರ ಹರಿದ ಗಾಳಿಪಟ. ‘ಹೆಣ್ಣಾಗಿ ಹುಟ್ಟಬಾರದು , ಕುಂಬಾರನಾಗಿ ಬದುಕಬಾರದು ’ ಎಂಬ ಗಾದೆಯಂತೆ ಇಂದು ಕುಂಬಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಪ್ಲಾಸ್ಟಿಕ್ ಯುಗದಲ್ಲಿ ಮಣ್ಣಿನ ಮಡಕೆ ಅಕ್ಷರಶಃ ‘ಆ್ಯಂಟಿಕ್ ಪೀಸ್’ ಆಗಿದೆ. ಹರಪ್ಪ-ಮೊಹೆಂಜಾದಾರೊ ಕಾಲದಿಂದ ಪ್ರಾಚೀನ ಕಲೆಯಾಗಿ ರೂಪುಗೊಂಡಿದ್ದ ಕುಂಬಾರಿಕೆ ವೃತ್ತಿ ವಿನಾಶದ ಅಂಚಿಗೆ ತಲುಪಿದೆ. ಇಂಥ ಅಪರೂಪದ ವೃತ್ತಿ ಮತ್ತು ಜನಾಂಗದ ಬಗ್ಗೆ ಅಧ್ಯಯನ ಮಾಡಿದ್ದಾರೆ ಬಸವರಾಜ ಕುಂಚೂರು.
ಮೂಲತಃ ಹರಪನಹಳ್ಳಿ ತಾಲ್ಲೂಕು ಕುಂಚೂರು ಗ್ರಾಮದವರಾದ ಬಸವರಾಜ ಅವರು ದಿ. ನಿಂಗಪ್ಪ ಚಕ್ರಸಾಲಿ ಹಾಗೂ ದಿ. ಹೊಳೆಯವ್ವ ಚಕ್ರಸಾಲಿ ದಂಪತಿ ಪುತ್ರ. ಓದಿದ್ದು ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್. ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ವಿದ್ಯಾಲಯದಲ್ಲಿ ಸಹಾಯಕ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಅವರೀಗ ದಾವಣಗೆರೆಯಲ್ಲಿ ನೆಲೆ ನಿಂತಿದ್ದಾರೆ.
ರಾಜ್ಯಮಟ್ಟದ ಕುಂಬಾರರ ಸಂಘಟನೆಯಲ್ಲಿ ಮೂರು ದಶಕಗಳಿಂದಲೂ ಸಕ್ರಿಯ ಪಾತ್ರ ವಹಿಸಿರುವ ಅವರು. ಆ ಜನಾಂಗ ಕುರಿತು ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸ ಮಾಡಿದ್ದಾರೆ. ‘ಗೃಹ ಅಂದಾಜೀಕರಣ’ (ಬಿಲ್ಡಿಂಗ್ ಎಸ್ಟಿಮೇಟ್ ಕುರಿತ ಕನ್ನಡದ ಮೊದಲ ಕೃತಿ), ‘ಕಿಡಿಕಾರಿದ ಮೊರಬ ಗ್ರಾಮೀಣ ಸ್ವಾತಂತ್ರ್ಯ ಹೋರಾಟಗಾರರು’ (ಕಿರು ಕಾದಂಬರಿ), ‘ಸಾವಿರ ಹಾಡಿನ ಸರದಾರ-ಜಾನಪದ ರತ್ನ ಬಾಳಪ್ಪ ಹುಕ್ಕೇರಿ’, ‘ಕುಂಬಾರ ಜನಾಂಗ’ (‘ಪ್ರಜಾವಾಣಿ’ಯ 2008ರ ‘ವರ್ಷದ ಓದು’ ಕೃತಿಗೆ ಆಯ್ಕೆ) ‘ಕುಂಭಕಲೆ ಮಣ್ಣಿನಲ್ಲಿ ಅರಳಿದ ಕಾವ್ಯ’, ‘ಕುಂಭಕಲೆ ಕ್ವಿಜ್ ರೂಪಕ’, ‘ಕುಂಬಾರಿಕೆ ವೃತ್ತಿ ಪದಕೋಶ’, ಮಂಗಳಘಟ (ಸ್ಮರಣ ಸಂಚಿಕೆ) ಕೃತಿ ರಚನೆ ಸೇರಿದಂತೆ ಬಸವರಾಜ ಅವರ ವಿಜ್ಞಾನ, ಎಂಜಿನಿಯರಿಂಗ್, ಸಾಹಿತ್ಯ ಕುರಿತು 100ಕ್ಕೂ ಹೆಚ್ಚಿನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
‘ಕುಂಬಾರ ಜನಾಂಗ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ನ ದತ್ತಿನಿಧಿ ಪ್ರಶಸ್ತಿ, ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ. ‘ನಮ್ಮೂರ ಕೆರೆಗಳು; ಗ್ರಾಮೀಣ ಜಲದೇವತೆಗಳು’ ಕೃತಿ ಬಿಡುಗಡೆಗೆ ಸಿದ್ಧವಾಗಿದೆ. ‘ಗಡಿಗೆಯೊಳಗಣ ಅಡುಗೆ’ ಕುಂಬಾರಿಕೆ ಕುರಿತ ಗಾದೆ, ಸುಭಾಷಿತ ಸಂಗ್ರಹ ಕೃತಿ ಸಿದ್ಧಗೊಳುತ್ತಿದೆ. ದಾವಣಗೆರೆ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾಗಿರುವ ಬಸವರಾಜ ಕುಂಚೂರು ಅವರನ್ನು ಮಾತಿಗೆಳೆದಾಗ…
* ಕುಂಬಾರ ಜನಾಂಗೀಯ ಅಧ್ಯಯನ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ತಂದೆ ಕುಂಬಾರಿಕೆ ಮಾಡುತ್ತಿದ್ದರು. ಟೆರ್ರಾಕೋಟಾ ಕಲೆ ಕಲಿತು ಕಲಾ ಶಾಲೆಯಲ್ಲಿ ಮೇಷ್ಟ್ರಾಗಿದ್ರು. ಹಾಗಾಗಿ, ಜನಾಂಗೀಯ ಅಧ್ಯಯನದತ್ತ ಆಸಕ್ತಿ ಹೊರಳಿತು. ಮನೆಯಲ್ಲಿ ಸೋದರಮಾವ ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಸಾಹಿತ್ಯದತ್ತ ಗಮನ ಸೆಳೆಯಲು ಅವರೇ ಸ್ಫೂರ್ತಿ.
* ಜಾಗತೀಕರಣದ ಹಿನ್ನೆಲೆಯಲ್ಲಿ ಕುಂಬಾರಿಕೆ ವೃತ್ತಿ ಕಣ್ಮರೆಯಾಗುತ್ತಿದೆಯಲ್ಲ…?
ಹೌದು. ಕುಂಬಾರಿಕೆ ಕುಲಕಸುಬು ವಿನಾಶದಲ್ಲಿದೆ. ನಗರಿಕರಣದಿಂದ ಕೆರೆಗಳು ನಾಶವಾಗಿವೆ. ಹಾಗಾಗಿ, ಕುಂಬಾರಿಕೆಗೆ ಇಂದು ಮಣ್ಣೇ ಸಿಗುತ್ತಿಲ್ಲ. ಅಲ್ಲದೇ, ಜಾಗದ ಕೊರತೆ, ಪ್ಲಾಸ್ಟಿಕ್ ವಸ್ತು ಬಳಕೆ ಕೂಡ ಕುಲಕಸುಬು ನಾಶಕ್ಕೆ ಕಾರಣ.
* ಕುಂಬಾರಿಕೆ ಕುಲಕಸುಬು ಪುನಶ್ಚೇತನ ಬಗ್ಗೆ ಹೇಳಿ?
ಜನಾಂಗದವರು ಕುಲಕಸುಬಿನತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲ, ತೋರಿದರೂ ಇಂದಿಗೂ ಸಾಂಪ್ರದಾಯಿಕ ‘ತಿಗುರಿ’ಯನ್ನೇ ಬಳಸುತ್ತಿದ್ದಾರೆ. ಆಧುನಿಕತೆಗೆ ಒಡ್ಡಿಕೊಳ್ಳುತ್ತಿಲ್ಲ. ಹಾಗಾಗಿ, ಅವರ ಮನಃ ಪರಿವರ್ತನೆ ಮಾಡುವುದು ಕಷ್ಟ. ಆದರೆ, ಉಡುಪಿ, ಪುತ್ತೂರು, ರಾಮನಗರ ಕಡೆ ಕುಂಬಾರರು ಆಧುನಿಕ ಚಿಂತನೆ ಅಳವಡಿಸಿಕೊಂಡು ಲಾಭದ ಹಾದಿಯಲ್ಲಿದ್ದಾರೆ.
* ಜನಾಂಗದ ಸಾಮಾಜಿಕ, ಆರ್ಥಿಕ ಸ್ಥಿತಿ ಹೇಗಿದೆ?
ಕುಂಬಾರ ಜನಾಂಗದಲ್ಲಿ ಮೂಲತಃ 14 ಪ್ರಭೇದಗಳಿವೆ. ಆದರೆ, ರಾಜ್ಯದಲ್ಲಿ ಲಿಂಗಾಯತ ಕುಂಬಾರ ಪ್ರಭೇದ ಹೆಚ್ಚಿದೆ. ಜಿಲ್ಲೆಯಲ್ಲಿ ಜನಾಂಗದ 25 ಸಾವಿರ ಮಂದಿಯಿದ್ದಾರೆ. ಆರ್ಥಿಕ ಸ್ಥಿತಿ ದುರ್ಬಲವಾಗಿರುವುದರಿಂದ ಬಹುತೇಕರಿಗೆ ಶಿಕ್ಷಣ ದೊರೆಯುತ್ತಿಲ್ಲ. ಹಾಗಾಗಿ, ಜನಾಂಗದ ಅಭಿವೃದ್ಧಿಗೆ ನಿಗಮ ರಚನೆ ಅಗತ್ಯವಿದೆ. ಜನಾಂಗವನ್ನು ‘2ಬಿ’ಗೆ ಸೇರಿಸಬೇಕು. ಸರ್ಕಾರ ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಬೇಕು.