ಬ್ರಹ್ಮಾವರ: ಆರೂರು ಕೀರ್ತಿ ನಗರದಲ್ಲಿ ತಯಾರಾದ ಮಣ್ಣಿನ ಕಲಾಕೃತಿಗಳು ವಿದೇಶವನ್ನೂ ತಲುಪಿವೆ. ಕೀರ್ತಿನಗರದ ಕುಮಾರ್ ಕುಲಾಲ್ ಅವರ ಕೈ ಚಳಕದಲ್ಲಿ ಮೂಡಿದ ವಸ್ತುಗಳು ಬಿಸಿ ದೋಸೆಯಂತೆ ಖಾಲಿಯಾಗುತ್ತಿವೆ.
ವಿಭಿನ್ನ ಆಕೃತಿಯ ಮಣ್ಣಿನ ಪಾತ್ರೆಗಳು, ಹೂಜಿ, ಫಿಲ್ಟರ್, ಚಟ್ಟಿಗಳು ತಯಾರುಗೊಳ್ಳುತ್ತಿವೆ. ಜೊತೆಗೆ ಹಣತೆ, ಐಸ್ಕ್ರೀಮ್ ತಟ್ಟೆ, ಹೂದಾನಿಗಳೂ ಇಲ್ಲಿ ರೆಡಿ. ಉಡುಪಿಯ ಪ್ರಸಿದ್ಧ ಹೊಟೇಲ್ಗಳಲ್ಲಿ ದೊರೆಯುವ ಬಿರಿಯಾನಿ ಮಡಕೆಗೆ ಕೀರ್ತಿನಗರದ ಕುಮಾರ್ ಕುಲಾಲ್ ಅವರಿಂದಲೇ ಮಡಕೆ ಪೂರೈಕೆ. ವಿಭಿನ್ನ ಕಲಾಕೃತಿಗಳನ್ನು ವಿದೇಶಕ್ಕೂ ಕಳುಹಿಸಿದ್ದಾರೆ.
ಶ್ರಮ ಜೀವಿ
ತಂದೆಯ ಬಳುವಳಿಯಂತೆ ತನ್ನ16ನೇ ವಯಸ್ಸಿನಲ್ಲೇ ಕುಲಕುಸುಬನ್ನು ನೆಚ್ಚಿಕೊಂಡ ಕುಮಾರ್ ಕುಲಾಲ್ ಅವರು ಸಾಧಕ ಜೀವಿ. ಮೊದಲು ಮಡಕೆಗಳನ್ನು ಹೊತ್ತುಕೊಂಡೇ ಸಂತೆಗಳಿಗೆ ತೆರಳುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ನಂತರ ವಾಹನಗಳ ನೆರವು ಸಿಕ್ಕಿತು. ಪ್ರಸ್ತುತ 5 ಮಂದಿ ಕೆಲಸಗಾರರನ್ನು ಹಾಕಿಕೊಂಡು, ಪತ್ನಿಯ ಸಹಾಯವನ್ನೂ ಪಡೆದು ಮನೆಯಲ್ಲೇ ಕಾಯಕದಲ್ಲಿ ತೊಡಗಿದರೂ ಬಂದ ಬೇಡಿಕೆಯನ್ನು ಪೂರೈಸಿಕೊಳ್ಳಲಾಗುತ್ತಿಲ್ಲ.
ಪ್ರೋತ್ಸಾಹ ಹೆಚ್ಚಲಿ
ಮಡಕೆ ತಯಾರಿಕೆ ಒಂದು ಅದ್ಭುತ ಕಲೆ. ಈ ಗುಡಿಕೈಗಾರಿಕೆಗೆ ಸರಕಾರದಿಂದ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ಸಾಕಷ್ಟು ಶ್ರಮದ ಅವಶ್ಯವಿರುವ ಈ ಕಾಯಕಕ್ಕೆ ಇನ್ನಷ್ಟು ಯಂತ್ರಗಳ ಅಳವಡಿಕೆ ಅನಿವಾರ್ಯವಿದ್ದು, ನಿಗಮಗಳ ನೆರವು, ಗ್ರಾಹಕರ ಸಹಕಾರ ದೊರೆಯಲಿ ಎನ್ನುವುದೇ ನಮ್ಮ ಆಶಯ.