ಹಳೆಯ ನೆನಪುಗಳನ್ನು ಬಹಳ ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಆದರೆ ಬಹಳ ಜನ ಹೇಳುತ್ತಾರೆ ಹಳೆಯದನ್ನು ಮರೆಯುವುದು ಕಷ್ಟವಲ್ಲವೆಂದು. ಇರಬಹುದು ಕೆಲವರಿಗೆ ಅದು ಸುಲಭವಾಗಿರಬಹುದು. ಏರಿದ ಏಣಿಯನ್ನು ಏರಬೇಕಾದ ಗುರಿಮುಟ್ಟಿದ ಮೇಲೆ ಒದ್ದು ಬೀಳಿಸಿಬಿಡಬಹುದು. ಯಾಕೆಂದರೆ ಅದರ ಅವಶ್ಯಕತೆ ಎತ್ತರಕ್ಕೇರಿದ ಮೇಲೆ ಇರಲಾರದು. ಆದರೆ ಏರಿದ ಏಣಿಯ ನೆನಪು ಮಾಸಿಹೋಗಲು ಸಾಧ್ಯವೇ?, ವೈಯಕ್ತಿಕವಾಗಿ ಸಾಧ್ಯವಿಲ್ಲವೆಂದು ನಂಬಿದವನು, ಏರಿದ ಏಣಿಯನ್ನು ಮರೆಯಬಾರದು ಎನ್ನುವವನು.
ಒಂದು ಅಂಗಿ, ಒಂದು ಚೆಡ್ಡಿಯನ್ನು ಅವಶ್ಯಕತೆ ಬಂದಾಗ ಹಾಕಿಕೊಳ್ಳಲೆಂದೇ ತಲೆದಿಂಬಿನ ಕೆಳಗೆ ಇಟ್ಟು ಮರುದಿನ ಅದು ಇಸ್ತ್ರಿ ಹಾಕಿದಂತೆ ಗರಿಗರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಖುಷಿಪಡುತ್ತಿದ್ದ ನನಗೆ ಈಗ ದಿನವೂ ಡ್ರೆಸ್ ಗೆ ಇಸ್ತ್ರಿ ಹಾಕಿಸಿ ಧರಿಸುತ್ತಿದ್ದರೂ ಆ ದಿನಗಳನ್ನು ಮರೆಯುವುದಕ್ಕೆ ಸಾಧ್ಯವಾಗಿಲ್ಲ, ಅದು ನನ್ನ ದೌರ್ಬಲ್ಯವೂ ಇರಬಹುದು. ಅಂತೆಯೇ ಬೈಕಂಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಬರೆಯಲು ಮೂರು ನಾಲ್ಕು ತಿಂಗಳು ರಾತ್ರಿ ಶಾಲೆಯಲ್ಲೇ ಓದಿ ಬರೆದು ಮಧ್ಯರಾತ್ರಿ ಮಲಗಿ ಮರು ದಿನ ಬೆಳ್ಳಂಬೆಳಗ್ಗೆ ಎದ್ದು ಮನೆಗೆ ಹೋಗಿ ಸ್ನಾನ ಮಾಡಿ ಮತ್ತೆ ಶಾಲೆಗೆ ಬರುತ್ತಿದ್ದ ನೆನಪೂ ಕೂಡಾ ಮರೆಯಲು ಸಾಧ್ಯವಿಲ್ಲ.
ಯಾಕೆಂದರೆ ಆ ದಿನಗಳೇ ಆಗಿದ್ದವು. ಒಂದಷ್ಟು ಹುಡುಗರನ್ನು ಮೇಷ್ಟ್ರು ಕರೆದು ನೀವು ಪಾಸಾಗಬೇಕೆಂದಿದ್ದರೆ ರಾತ್ರಿ ಶಾಲೆಗೆ ಬನ್ನಿ, ಇಲ್ಲೇ ಓದಿ ಮಲಗಿ, ನಿಮಗೆ ಗೊತ್ತಾಗದ ಪ್ರಶ್ನೆಯಿದ್ದರೆ ನಾವೂ ಇರುತ್ತೇವೆ ಹೇಳಿಕೊಡುತ್ತೇವೆ ಎಂದಾಗ ಆ ಗುಂಪಿನಲ್ಲಿ ನಾನೂ ಸೇರಿಕೊಂಡೆ.
ಗೌಡ ಮೇಷ್ಟ್ರು ಮತ್ತು ಗಂಗಾಧರ ಮೇಷ್ಟ್ರು ಶಾಲೆಯಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಅವರು ಹಾಯಾಗಿ ನಿದ್ದೆ ಮಾಡುವ ಬದಲು ರಾತ್ರಿಯೂ ಮಕ್ಕಳಿಗೆ ಕಲಿಸುತ್ತೇವೆ ಎನ್ನುವುದನ್ನು ಆಗ ಅರ್ಥಮಾಡಿಕೊಂಡಿರಲಿಲ್ಲ. ಈಗ ಅರ್ಥವಾಗುತ್ತಿದೆ. ಮೇಷ್ಟ್ರು ಹೇಳಿದ್ದೇ ತಡ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗಿ ಮನೆಯವರಿಗೆ ವಿಷಯ ತಿಳಿಸಿದಾಗ ಅವರಿಗೂ ಖುಷಿ, ಯಾಕೆಂದರೆ ಪಬ್ಲಿಕ್ ಪರೀಕ್ಷೆಯಲ್ಲಿ ಮಗ ಗ್ಯಾರಂಟಿ ಪಾಸಾಗುತ್ತಾನೆನ್ನುವ ಸಂತಸ.
ಮುಸ್ಸಂಜೆಯೇ ಊಟ ಮುಗಿಸಿ ಚಿಮಿಣಿ ದೀಪಕ್ಕೆ ಫುಲ್ ಎಣ್ಣೆ ತುಂಬಿಸಿ ಅದನ್ನು ಕೈಯ್ಯಲ್ಲಿ ಹಿಡಿದುಕೊಂಡು ಶಾಲೆಗೆ ಬಂದಿದ್ದೆವು. ಜೊತೆಗೆ ರಾತ್ರಿ ಮಲಗಲು ಚಾಪೆ, ಹೊದಿಯಲು ಬಟ್ಟೆ, ತಲೆದಿಂಬು ತಂದಿಟ್ಟಿದ್ದೆವು.
ಹತ್ತು ಹದಿನೈದು ಜನ ತರಗತಿ ಕೋಣೆಯಲ್ಲಿ ನೆಲದ ಮೇಲೆ ದೂರ ದೂರ ಕುಳಿತು ಚಿಮಿಣಿ ದೀಪದ ಬೆಳಕಲ್ಲಿ ಓದುತ್ತಿದ್ದೆವು. ಕೆಲವರು ಬಾಯಿಬಿಟ್ಟು ಜೋರಾಗಿ ಓದಿದರೆ ಮಾತ್ರ ಅವರ ತಲೆಗೆ ಹಿಡಿಯುತ್ತದಂತೆ, ಕೆಲವರು ಮನಸ್ಸಿನಲ್ಲೇ ಓದಿಕೊಳ್ಳುವುದು. ಈ ಸಮಸ್ಯೆಗೂ ಮೇಷ್ಟ್ರು ಪರಿಹಾರ ಹುಡುಕಿದರು. ಜೋರಾಗಿ ಓದುವವರು ಬೇರೆ ತರಗತಿಯಲ್ಲಿ ಓದಿಕೊಳ್ಳಬೇಕು, ಮನಸ್ಸಿನಲಿ ಓದುವವರು ಒಂದು ತರಗತಿಯಲ್ಲಿ.
ಹೀಗೆ ರಾತ್ರಿ ಸುಮಾರು 12 ಗಂಟೆ ತನಕ ಓದುತ್ತಿದ್ದೆವು. ಆಗ ಇಬ್ಬರು ಮೇಷ್ಟ್ರೂ ನಮ್ಮ ಸುತ್ತಲೂ ತಿರುಗಾಡಿಕೊಂಡು ಏನಾದರೂ ಕೇಳಿದರೆ ಹೇಳಿಕೊಡುತ್ತಿದ್ದರು. ನಾವು ಮಲಗಿದ ಮೇಲೆ ಅವರು ಮಲಗುತ್ತಿದ್ದರು.
ನಾನು ಹೇಳುತ್ತಿರುವ ಕಾಲಘಟ್ಟ 1972. ಹೀಗೆ ಓದಿ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆದು ಪಾಸಾಗಿದ್ದೆವು. ಒಂದು ವೇಳೆ ಶಾಲೆಯಲ್ಲಿ ಚಿಮಿಣಿ ದೀಪದ ಬೆಳಕಲ್ಲಿ ಓದದೆ ಇದ್ದಿದ್ದರೆ ಫೈಲ್ ಆಗುತ್ತಿರಲಿಲ್ಲ ಎನ್ನುವುದು ಬೇರೆ ಮಾತು. ಆದರೆ ನನಗೆ ಹೇಳಬೇಕಾದ ಅತೀ ಮುಖ್ಯ ವಿಷಯ ಅಂದಿನ ಮೇಷ್ಟ್ರುಗಳ ಬದ್ಧತೆ ಮತ್ತು ವಿದ್ಯಾರ್ಥಿಗಳ ಮೇಲೆ ಅವರಿಗಿದ್ದ ಕಾಳಜಿ.
ನಮಗೆ ರಾತ್ರಿಯೂ ಕಣ್ಣಲ್ಲಿ ಕಣ್ಣಿಟ್ಟು ಕಲಿಸಿದ ಆ ಮೇಷ್ಟ್ರುಗಳು ನಿಜಕ್ಕೂ ಆದರ್ಶವೆನ್ನುವುದು ಈಗ ಚೆನ್ನಾಗಿ ಅರ್ಥವಾಗುತ್ತಿದೆ. ನಾವು ಎಷ್ಟೇ ದೊಡ್ಡ ಮನುಷ್ಯರಾಗಿದ್ದರೂ ಯಾವುದೇ ದೊಡ್ಡ ಹುದ್ದೆಯಲ್ಲಿದ್ದರೂ, ಕೋಟಿ ಕೋಟಿ ಸಂಪಾದಿಸಿ ಕೂಡಿಟ್ಟಿದ್ದರೂ ಆ ಮೇಷ್ಟ್ರು ಅಂದು ತಮ್ಮ ಸಮಯ ತ್ಯಾಗ ಮಾಡಿದ್ದರು, ವೈಯಕ್ತಿಕ ಆರಾಮವನ್ನು ತ್ಯಾಗಮಾಡಿದ್ದರು, ನಿದ್ದೆ ಬಿಟ್ಟು ನಮಗೆ ಕಲಿಸಿದರು, ಆದರೆ ಅವರು ನಮ್ಮಿಂದ ಯಾವುದೇ ಫಲಾಪೇಕ್ಷೆ ನಿರೀಕ್ಷಿಸಿರಲಿಲ್ಲ ನಾವೂ ಕೊಟ್ಟಿಲ್ಲ.
ಅವರ ವಿದ್ಯಾದಾನದ ಋಣ ನಮ್ಮ ಮೇಲಿದೆ. ಗುರುವಿನ ಋಣ ತೀರಿಸುವುದು ಸಾಧ್ಯವೆಂದು ನಾನು ನಂಬಿದವನಲ್ಲ, ಆದರೆ ನಾನು ಅವರ ಶಿಷ್ಯ ಎಂದು ಹೇಳಿಕೊಳ್ಳಲು ಮತ್ತು ಅವರು ಅವನು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವಂತೆ ನಾವು ಈ ಸಮಾಜದಲ್ಲಿ ಗುರುತಿಸಿಕೊಂಡರೆ ಅಷ್ಟೇ ಸಾಕು ಅಂದುಕೊಂಡಿದ್ದೇನೆ.